ರಾಮಾಯಣ ತಿದ್ದುಪಡಿ

ರಾಮಾಯಣ ತಿದ್ದುಪಡಿ

(ಸಂಪಾದಕೀಯ-೨)

ರಾಮನ ಬಗ್ಗೆ ನಿಮಗೆ ಗೌರವ ಇದ್ದರೆ ದೆಹಲಿ ವಿಶ್ವವಿದ್ಯಾಲಯದ ಪಠ್ಯಪುಸ್ತಕವನ್ನು ನೀವು ಖಂಡಿಸಬೇಕಾಗುತ್ತದೆ. ಅಲ್ಲಿಯ ಪದವಿ ಕೋರ್ಸ್‌‌ನ ಇತಿಹಾಸ ಪುಸ್ತಕದಲ್ಲಿ ರಾಮನನ್ನು ಸ್ತ್ರೀವಿರೋಧಿ ಎಂದು ಬಿಂಬಿಸಲಾಗಿದೆಯಂತೆ. ರಾಮ ಬಂಟ ಹನುಮಂತ ಸ್ತ್ರೀಲೋಲ ಎಂದು ಚಿತ್ರಿಸಲಾಗಿದೆಯಂತೆ. ಈ ಕುರಿತು ದೆಹಲಿಯ ಕೆಲ ಚಿಂತಕರು ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರಂತೆ. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಈ ಕುರಿತು ತನಿಖಾ ಸಮಿತಿ ರಚಿಸಿ ವರದಿ ನೀಡುವಂತೆ ಆದೇಶಿಸಿದೆಯಂತೆ. (ಇಲ್ಲಿ ನೋಡಿ: http://www.kannadaprabha.com/NewsItems.asp?ID=KPN20080919130200&Title=National+Page&lTitle=%C1%DB%CFo%F1%DE%BE%DA%DF%D1%DA%DF%A6%A7&Topic=0&ndate=9/20/2008&Dist=0)

ರಾಮಾಯಣಕ್ಕೂ ವಿರೋಧಗಳಿಗೂ ಹತ್ತಿರದ ನಂಟು ಎಂದು ಕಾಣುತ್ತದೆ. ಆತ ಸೀತೆಯನ್ನು ಕಾಡಿಗಟ್ಟಿದ್ದೇ ಮಹಾಪರಾಧ ಎಂದು ಈಗಲೂ ವಾದಿಸಲಾಗುತ್ತದೆ. ಹೆಂಡತಿಯನ್ನು ರಕ್ಷಿಸಲಾಗದ ಗಂಡ ಎಂಬ ಹೀಯಾಳಿಕೆಗಳು ಎಲ್ಲಾ ಕಾಲಕ್ಕೂ ಕೇಳಿ ಬಂದಿವೆ. ವಾನರರ ಸಂಗ ಮಾಡಿ ಕೆಟ್ಟ ಎಂಬ ವಾದಗಳೂ ಉಂಟು. ತಮಿಳುನಾಡಿನ ರಾಜಕಾರಣಿಗಳಂತೂ ಅವಕಾಶ ಸಿಕ್ಕಾಗೆಲ್ಲ, ಅಥವಾ ಅವಕಾಶ ಮಾಡಿಕೊಂಡು ರಾಮಾಯಣದ ಮೇಲೆ, ಅದರ ಪಾತ್ರಗಳ ಮೇಲೆ ಟೀಕೆ ಮಾಡಿದ್ದಾರೆ. ಬಾಯಿಗೆ ಬಂದ ಹೇಳಿಕೆಗಳನ್ನು ನೀಡಿದ್ದಾರೆ.

ಇದಕ್ಕೆ ಕಾರಣಗಳು ಇಲ್ಲದಿಲ್ಲ. ತಮ್ಮ ರಾಜ್ಯದ ಮೂಲಕವೇ ರಾಮ ಸಿಂಹಳಕ್ಕೆ ಹೋದ ಎಂಬ ಸಿಟ್ಟು ಅವರಿಗೆ ಇರುವ ಸಾಧ್ಯತೆಗಳಿವೆ. ಅದರಿಂದಾಗಿ ಸಿಂಹಳಕ್ಕೂ ತಮಿಳುನಾಡಿಗೂ ನಡುವೆ ಸೇತುವೆ ಎದ್ದು ನಿಂತಿತು. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಜನ ಬಂದು ಹೋಗತೊಡಗಿದರು. ಮುಂದೆ ಎಲ್‌ಟಿಟಿಇ ಸಂಘಟನೆ ಬೆಳೆಯಲು ಅವಕಾಶವಾಯಿತು. ನಮ್ಮ ಇಮೇಜು ಕೆಟ್ಟಿತು ಎಂಬ ಸಿಟ್ಟು ತಮಿಳರಿಗೆ ಇರಲಿಕ್ಕೆ ಸಾಕು.

ಅಲ್ಲದೇ ನಮ್ಮ ಕನ್ನಡದವರೇ ಆದ ಪೋಲಂಕಿ ರಾಮಮೂರ್ತಿಗಳು ರಾಮಾಯಣವನ್ನು ಇನ್ನಿಲ್ಲದಂತೆ ಟೀಕಿಸಿ ಸಂಶೋಧನಾತ್ಮಕ ಗ್ರಂಥ ಬರೆದರು. ಆದರೆ, ಕರ್ನಾಟಕದಲ್ಲಿ ಇಂಥ ವಿವಾದಗಳಿಗೆ ಅಷ್ಟಾಗಿ ಬೆಲೆ ಇಲ್ಲ ಎಂದು ಹೇಳಬಹುದು. ಇಲ್ಲೇನಿದ್ದರೂ ಜಾತಿ ವಿಷಯ ಕೆದಕಬಾರದು. ಅಂಕಿತನಾಮಗಳನ್ನು ಬದಲಾಯಿಸಬಾರದು. ಹೀಗಾಗಿ, ಕರ್ನಾಟಕದವರು ಶಾಂತಿಪ್ರಿಯರು ಎಂದು ಹೇಳಲು ಅಡ್ಡಿ ಇಲ್ಲ.

ರಾಮಾಯಣ ಪದೇ ಪದೇ ಇಂತಹ ವಿವಾದಗಳಿಗೆ ತುತ್ತಾಗುವುದನ್ನು ನೋಡಿದರೆ, ನಮ್ಮ ಸಂವಿಧಾನಕ್ಕೆ ಮಾಡಿದಂತೆ ಅದಕ್ಕೂ ಕೆಲವು ತಿದ್ದುಪಡಿಗಳನ್ನು ಮಾಡುವ ಅವಶ್ಯಕತೆಯಿದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿವಾದ ಹುಟ್ಟಿಸಿದ ಅಂಶಗಳನ್ನು ತೆಗೆದುಹಾಕುವುದು ಅಥವಾ ಸೂಕ್ತವಾಗಿ ಬದಲಾಯಿಸುವುದು ಆ ಸಲಹೆಗಳ ಮುಖ್ಯ ಸಾರಾಂಶ. ಸೀತೆಯನ್ನು ರಾಮ ಕಾಡಿಗೆ ಅಟ್ಟದೇ ಪಿಕ್ನಿಕ್‌ ಕಳಿಸಿದ್ದ. ಕಾಡಿನ ಸೌಂದರ್ಯಕ್ಕೆ ಮನಸೋತು ಹಾಗೇ ವಾಕಿಂಗ್‌ ಮಾಡುತ್ತ ಸೀತೆ ದಾರಿ ತಪ್ಪಿಸಿಕೊಂಡಳು ಎಂಬ ತಿದ್ದುಪಡಿಯನ್ನು ತಜ್ಞರು ಸೂಚಿಸಿದ್ದಾರಂತೆ. ಅದೇ ರೀತಿ ದಶರಥ ಮಹಾರಾಜ ರಾಮನನ್ನು ಕಾಡಿಗೆ ಕಳಿಸಲಿಲ್ಲ. ಬದಲಾಗಿ, ಕಾಡಿನಲ್ಲಿದ್ದ ರೆಸಾರ್ಟ್‌‌ನಲ್ಲಿ ಕೆಲ ದಿನಗಳ ಕಾಲ ತಂಗುವಂತೆ ಸೂಚಿಸಿದ್ದ ಎಂಬ ತಿದ್ದುಪಡಿಯೂ ಪ್ರಸ್ತಾಪಗಳಲ್ಲಿ ಇದೆಯಂತೆ.

ಈಗ ಎದ್ದಿರುವ ವಿವಾದವನ್ನು ನೋಡಿದರೆ ಇಂತಹ ತಿದ್ದುಪಡಿಗಳು ಬಲುಬೇಗ ಕಾರ್ಯರೂಪಕ್ಕೆ ಬರುವ ಅವಶ್ಯಕತೆ ಇದೆ. ಇಲ್ಲದಿದ್ದರೆ, ದೆಹಲಿಯಲ್ಲಿ ಉಂಟಾಗಿರುವ ವಿವಾದ ದೇಶಾದ್ಯಂತ ಹರಡುವ ಸಂಭವವಿದೆ. ಇದನ್ನು ಮನಗಂಡಿರುವ ಮಾತೆ ಮಹಾದೇವಿ, ತಮಗೆ ತಿದ್ದುಪಡಿಯಲ್ಲಿ ಅಪಾರ ಅನುಭವ ಇರುವುದರಿಂದ, ರಾಮಾಯಣ ತಿದ್ದುವ ಜವಾಬ್ದಾರಿಯನ್ನು ತಮಗೇ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರಂತೆ. ಜನರ ಭಾವನೆಗಳು ಏನೇ ಇದ್ದರೂ, ಅದಕ್ಕೆ ಸೊಪ್ಪು ಹಾಕದೇ, ತಮಗೆ ತಿಳಿದಂತೆ ತಿದ್ದುಪಡಿ ಮಾಡಿ, ಅದನ್ನು ಸಮರ್ಥಿಸಿಕೊಳ್ಳುವ ಭಂಡತನ, ಅಲ್ಲಲ್ಲ, ಅನುಭವ ತಮಗಿರುವುದರಿಂದ, ಈ ಕೆಲಸಕ್ಕೆ ತಾವೇ ಸಮರ್ಥರು ಎಂದು ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರಂತೆ.

ಇದು ನಿಜಕ್ಕೂ ಸ್ತುತ್ಯಾರ್ಹ ಎನ್ನದೇ ವಿಧಿಯಿಲ್ಲ. ಮಾತೆ ಮಹಾದೇವಿಯವರು ಬಸವಣ್ಣನವರನ್ನು ಅರಗಿಸಿಕೊಂಡು, ಅಕ್ಕಮಹಾದೇವಿಯ ಬೆನ್ನು ಹತ್ತಿದ್ದಾರೆ. ಇನ್ನು ಸ್ವಲ್ಪ ದಿನಗಳಲ್ಲಿ ಅಕ್ಕನನ್ನೂ ಈ ಮಾತೆ ಜೀರ್ಣಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯ ಇರಲಾರದು. ಇಂಥ ಅನುಭವಿ ವ್ಯಕ್ತಿಗೆ ರಾಮಾಯಣ ತಿದ್ದುಪಡಿ ಜವಾಬ್ದಾರಿಯನ್ನು ವಹಿಸಿ ಕೊಟ್ಟಿದ್ದೇ ಆದರೆ ಮಾತೆ ಮಹಾದೇವಿಯವರ ಹೆಸರು ದೇಶಾದ್ಯಂತ ಮನೆಮಾತಾಗುತ್ತದೆ. ಅವರೊಂದಿಗೆ ಕರ್ನಾಟಕದ ಕೀರ್ತಿಯೂ ರಾಮಾಯಣದಲ್ಲಿ ದಾಖಲಾಗುತ್ತದೆ.

ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಇವರ ಮನವಿಯನ್ನು ಪುರಸ್ಕರಿಸಿ ಅಶಾಂತಿ ಉಂಟಾಗದಂತೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರ ಕೂಡ ಮಾತೆ ಮಹಾದೇವಿಯರ ಮನವಿಯನ್ನು ಸ್ವೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಐಕೋಟಿ ಕನ್ನಡಿಗರು ಪತ್ರ, ಎಸ್ಸೆಮ್ಮೆಸ್‌, ಈ ಮೇಲ್‌ ಹಾಗೂ ನಿಯೋಗಗಳ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದರೆ, ರಾಮಾಯಣ ತಿದ್ದುಪಡಿಯ ಗೌರವವೂ ರಾಜ್ಯಕ್ಕೆ ದಕ್ಕುತ್ತದೆ. ಜೊತೆಗೆ, ಪಕ್ಕದ ತಮಿಳುನಾಡಿಗೆ ಬುದ್ಧಿ ಕಲಿಸಿದಂತೆಯೂ ಆಗುತ್ತದೆ.

- ಚಾಮರಾಜ ಸವಡಿ

Rating
No votes yet