ರಾಯನ ದಿನಚರಿ - ದಿನ ಐದು

ರಾಯನ ದಿನಚರಿ - ದಿನ ಐದು

ರಾಯನು ಅದು ಹೇಗೋ kannadapustaka.org ಎಂಬ ತಾಣದವರ ಸಂಪರ್ಕಕ್ಕೆ ಬಂದಿದ್ದನು. ಅವರು ಕಣ್ಣಿನ ತೊಂದರೆ ಇರುವ ಶಾಲಾಮಕ್ಕಳಿಗೆಂದು ಒಂದು ಆ್ಯಪ್ ಮಾಡಿ ಪಠ್ಯ ಪುಸ್ತಕಗಳನ್ನು ಅದರ ಮೂಲಕ ಧ್ವನಿ ಕಡತಗಳನ್ನು ಮಾಡಿ ಹಂಚಲಿದ್ದಾರಂತೆ . ಅವರು ಆಗೀಗ ಶಾಲಾ ಪುಸ್ತಕದ ಫೋಟೋ ಪ್ರತಿಯನ್ನು, ಜತೆಗೆ ಅದರ ಪಠ್ಯಪ್ರತಿಯನ್ನು ರಾಯನಂಥ ಕೆಲವು ಸ್ವಯಂ ಸೇವಕರಿಗೆ ಈ ಮೇಲ್ ಮೂಲಕ ಕಳಿಸುತ್ತಾರಂತೆ. ಅಂಥದೊಂದು ೪ ಪುಟಗಳ ಪಾಠವನ್ನು ಇವನು ಒಂದು ಗಂಟೆಯ ಸಮಯ ಖರ್ಚು ಮಾಡಿ ಪ್ರೂಫ್ ರೀಡಿಂಗ್ ಮಾಡಿ ಕಳಿಸಿದನಂತೆ. ಇದು ಅವನ ಅಳಿಲು ಸೇವೆಯಂತೆ. ಪರವಾಗಿಲ್ವೇ , ಈತನಿಂದ ಯಾರಿಗೋ ಒಂಚೂರು ಉಪಯೋಗ ಇದೆ, ಹಾಗಾದರೆ !

 

ಅವನಿಗೆ ತಿಳಿದು ಬಂದ ಒಂದು ಹೊಸ ವಿಷಯ ಹೇಳಿದ. ಇದು ನನಗೂ ಹೊಸ ವಿಷಯವೇ. ನಿಮಗೆ ಹೊಸತೋ ಹಳತೋ ತಿಳಿಸಿ . ಅವನು ಮನೆಯಲ್ಲಿ TVಗೆ ಟಾಟಾ ಸ್ಕೈ ಸಂಪರ್ಕ ಹೊಂದಿದ್ದಾನೆ. ಯಾವುದೇ ಚಾನೆಲ್ ಗೆ ಸಂಪರ್ಕ ಪಡೆಯುವದು, ಕಡಿಯುವದು ಮತ್ತೆ ಅದಕ್ಕೆ ಆಗಾಗ ಹಣ ಕೊಡಲು ಅವರದೊಂದು ಆ್ಯಪ್ ಇದೆ ಅಲ್ಲವೆ? ಆ ಆ್ಯಪ್ ಮೂಲಕವೂ ಚಂದಾದಾರಿಕೆ ಪಡೆದ ಚಾನೆಲ್ ಗಳನ್ನು ನೋಡಬಹುದಂತೆ! ಇದು ನನಗೆ ಗೊತ್ತಿರಲಿಲ್ಲ. ಇದರ ಉಪಯೋಗ ಏನು ಹೇಳಿ? ಈಗ ನಿಮ್ಮ ಮನೆಯಲ್ಲಿ ಇಬ್ಬರು ಅದೇ ಸಮಯಕ್ಕೆ ಮನೆಯ ಟಿವಿಯಲ್ಲಿ ಎರಡು ಬೇರೆ ಬೇರೆ ಚಾನೆಲ್ ನೋಡಬೇಕು ಎ೦ದು ಬಯಸುತ್ತಾರೆ ಅನ್ನಿ. ಇದು ಮಾಮೂಲು ಸಂಗತಿ ಅಲ್ಲವೆ, ಆಗ ಟೀವಿಯಲ್ಲಿ ಒಬ್ಬರು , ಟಾಟಾ ಸ್ಕೈ ಆ್ಯಪ್ ನ ಮೂಲಕ ಒಬ್ಬರು ಟೀವಿಯಲ್ಲಿ ನೋಡಬಹುದು ! ಈ ಸಂಗತಿ ಹೇಳಿ ನನಗೆ ಉಪಕಾರವನ್ನೇ ಮಾಡಿದ್ದಾನೆ. ! ಬಹುಶಃ ಇದೇ ರೀತಿ Airtel ಮುಂತಾದವುಗಳಲ್ಲೂ ಇರಬಹುದೇನೋ.

 

ಇವತ್ತು ಅವನು the kung fu hustle ಚಿತ್ರವನ್ನು - ಕನ್ನಡದಲ್ಲಿ ನೋಡಿದನಂತೆ . Colors ಕನ್ನಡ ಸಿನಿಮಾ ಚಾನೆಲ್ ನಲ್ಲಿ ಅನೇಕ ಇಂಗ್ಲಿಷ್ ಸಿನಿಮಾಗಳು ಕನ್ನಡ ಭಾಷೆಯಲ್ಲಿ ಡಬ್ ಆಗಿ ಬರುತ್ತವಂತೆ. ಯಾವುದೋ ಸ್ಪೈಡರ್ ಮ್ಯಾನ್ ಸಿನಿಮಾದಲ್ಲಿ - ಜಗತ್ತು ಬದಲಾಗ್ತಾ ಇದೆ. ನಾವೂನೂ ಬದಲಾಗಬೇಕು ಅಂತ ಕನ್ನಡದಲ್ಲೇ ಡೈಲಾಗ್ ಇದೆ ಅಂತೆ !

 

the kung fu hustle - ಕನ್ನಡದಲ್ಲಿ ಸಂಭಾಷಣೆ ಕೇಳಿ ಇವನಿಗೆ ಆಶ್ಚರ್ಯ ಆಯಿತಂತೆ. ಚೀನಾ ಮನುಷ್ಯ ನು ಇನ್ನೊಬ್ಬನಿಗೆ ಕೇಳುತ್ತಾನಂತೆ - ಯಾಕೆ? ನಿನಗೆ ಕನ್ನಡದಲ್ಲಿ ಹೇಳಿದರೆ ತಿಳಿಯುವದಿಲ್ಲವೋ ? - ಅಂತ !

ಅದರಲ್ಲಿನ ಇನ್ನೊಂದು ಡೈಲಾಗ್ ಹೇಳಿದ. ಗ್ಯಾಂಗ್‌ಸ್ಟರ್ ಆಗಬೇಕೆಂದು ಪ್ರಯತ್ನ ಪಡುತ್ತಿರುವಾತ ಕೇಳುತ್ತಾನಂತೆ - ನಾವು ಕಳ್ತನ ಮಾಡಿಲ್ಲ , ಕೊಲೆ ಮಾಡಿಲ್ಲ , ಸುಲಿಗೆ ಮಾಡಿಲ್ಲ , ಕಡೇ ಪಕ್ಷ ರೇಪ್ ಕೂಡ ಮಾಡಿಲ್ಲ. ನಿನಗೆ ಅನಿಸುತ್ತಾ - ನಮಗೆ ಜನರಿಂದ ಮರ್ಯಾದೆ ಸಿಗುತ್ತೆ ಅಂತ ?

😀

Rating
Average: 4 (1 vote)