ರಾಯನ ದಿನಚರಿ - ದಿನ ಮೂರು

ರಾಯನ ದಿನಚರಿ - ದಿನ ಮೂರು

ಈ ರಾಯನ ಅನುದಿನದ ದಿನಚರಿ ನನಗೆ ಹೀಗೆ ಗೊತ್ತಾಗುತ್ತದೆ ಎಂದಿರೋ ? ಈ ರಾಯ ನನ್ನ ಇತ್ತೀಚಿನ ಹೊಸ ಸ್ನೇಹಿತ. ಇವನ ಬಗ್ಗೆ ನನಗೆ ಗೌರವ, ಕುತೂಹಲ. ಆದರೆ ಕೆದಕುವ ಪ್ರಶ್ನೆಗಳನ್ನು ಕೇಳುವುದು ತರವಲ್ಲ ಎ೦ದು ಅವನ ಖಾಸಗಿ ವಿಷಯ ಕೇಳಿಲ್ಲ, ಅದು ನನ್ನ ಜಾಯಮಾನವೂ ಅಲ್ಲ. (ನನಗೆ ಪುರಸೊತ್ತೂ ಇಲ್ಲ ಅನ್ನಿ). ಅನಗತ್ಯವಾಗಿ ಯಾರ ಜೀವನದಲ್ಲಿಯೂ ತಲೆ ಹಾಕಬಾರದಂತೆ , ತಾನಾಗಿ ನಮಗೆ ಏನು ದಕ್ಕುವುದೋ , ಏನು ತಿಳಿದು ಬರುವುದೋ ಅಷ್ಟರಿಂದ ತೃಪ್ತಿ ಪಡಬೇಕಂತೆ . ಈ ಮನುಷ್ಯ ನನಗೆ ದಿನಾಲೂ ಸಿಗುತ್ತಾನೆ. ತನ್ನ ದಿನದ ವರದಿಯನ್ನು ನನ್ನಲ್ಲಿ ಒಪ್ಪಿಸುತ್ತಾನೆ - ನನ್ನ ಮಾಮೂಲು ಕುಶಲೋಪರಿಯ ಪ್ರಶ್ನೆಗೆ . ಈತ ತೀರಾ ವೈಯಕ್ತಿಕವಲ್ಲದ ಆದರೆ ನನಗೆ ಆಸಕ್ತಿಯ ವಿಷಯಗಳಾದ ಸಾಹಿತ್ಯ ಸಿನಿಮಾ ಮುಂತಾದವುಗಳ ಬಗೆಗೆ ಮಾತಾಡುತ್ತಾನೆ . ನಮಗೆ ನಿಮಗೆ ಎಲ್ಲಿ ಇಂತಹದಕ್ಕೆ ಪುರುಸೊತ್ತಿದೆ ?ಹೇಳಿ. ನಮ್ಮ ಜೀವನದ ಜಂಜಡಗಳಲ್ಲಿ ಯಾತಕ್ಕೂ ಪುರುಸೊತ್ತಿಲ್ಲದ ಹಾಗೆ ಸಮಯ ಸರಿದು ಹೋಗುತ್ತಿದೆ. ಸಾಹಿತ್ಯ ಸಂಗೀತದ ಬಗೆಗೆ ಈತ ಏನೋ ಒಂದಿಷ್ಟು ಹೇಳಿಬಿಡುವುದರಿಂದ ನನಗೆ ಏನೋ ಒಂದಿಷ್ಟು ಉಪಕಾರವೇ ಅನ್ನಿ . ನಿಮಗೂ ಹಾಗೆಯೇ ಆಸಕ್ತಿ ಇರಬಹುದು. ಪುರುಸೊತ್ತು ಇರಲಿಕ್ಕಿಲ್ಲ ಅಂದುಕೊಂಡು ಈ ವಿಷಯ ನಿಮ್ಮ ಜತೆಗೆ ಹಂಚಿಕೊಳ್ಳುತ್ತಿದ್ದೀನಿ, ಅಷ್ಟೇ. 

 

ಇವನೇ ಸ್ವಲ್ಪ ಆಸಕ್ತಿ ವಹಿಸಿದರೆ ಇನ್ನೂ ಚೆನ್ನಾಗಿ ವಿವರವಾಗಿ ಒಂದು ಒಳ್ಳೆಯ ಬ್ಲಾಗ್ ಬರೆಯಬಹುದು. ಅಥವಾ Facebook ಮುಂತಾದ ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯಬಹುದು. ಆದರೆ ಇವನಿಗೆ ಆ ಬಗ್ಗೆ ಆಸಕ್ತಿಯೇ ಇಲ್ಲ. ಹೋಗಲಿ ಬಿಡಿ. ಅವನ ಇಷ್ಟ . ಅವನಿಗೆ ನಾವು ಯಾರು ಹೇಳಲಿಕ್ಕೆ?

 

ಇರಲಿ . ಇದನ್ನೆಲ್ಲ ಏಕೆ ಬರೆದೆ ? ಇದು ಮುಂದೆ ಗೊತ್ತಾಗುತ್ತದೆ. ಈ ದಿನ ಸಿಕ್ಕಾಗ - ನನಗೆ ಅವನು ಹೇಳಿದ್ದು ಕೇಳಿ ಪರಮಾಶ್ಚರ್ಯ ! - ಅವನಿಗೆ ಈ ದಿನ ಪುರುಸೊತ್ತೇ ಇಲ್ಲವಂತೆ, ಭಾರೀ ಬಿಝಿಯಂತೆ . ಟೀವಿ ಆನ್ ಕೂಡ ಮಾಡಲಿಲ್ಲವಂತೆ . ಯಾಕೆ ಬಿಝಿ , ಹೇಗೆ ಬಿಝಿ ಎಂಬುದನ್ನೆಲ್ಲ ಅವಸರದಲ್ಲೇ ಬಣ್ಣಿಸಿದನಾದರೂ ಆ ಗೋಳನ್ನೆಲ್ಲ ಕಟ್ಟಿಕೊಂಡು ನಮಗೆ ನಿಮಗೆ ಏನಾಗಬೇಕಿದೆ ಅಲ್ಲವೆ? 

 

ಅಷ್ಟೆಲ್ಲದರ ಮಧ್ಯೆಯೂ ತುಷಾರದಲ್ಲಿ ಎರಡು ತಿಂಗಳಿಂದ ಜಯಂತ್ ಕಾಯ್ಕಿಣಿ ಅವರ ಒಂದು ಲೇಖನ ಮಾಲೆ ಬರುತ್ತಿದೆ- ಓದಲು ಮರೆಯದಿರಿ -ತುಂಬಾ ಚೆನ್ನಾಗಿದೆ ಅಂತಲೂ ಹೇಳಿದ. 2 -3 ಪುಟ ಅಷ್ಟೇ ಅಂತೆ . ನಾಳೆ ತುಷಾರ ಸಿಗುವುದೇನೋ ನೋಡಬೇಕು. ನೀವೂ ನೋಡಿ. ಹತ್ತೋ ಹದಿನೈದೋ ರೂಪಾಯಿ ಇರಬೇಕು. ಏತೇತಕ್ಕೋ ಎಷ್ಟೆಷ್ಟೋ ಖರ್ಚು ಮಾಡುತ್ತೇವೆ ಅಲ್ಲವೆ ? ಕನ್ನಡ ಪತ್ರಿಕೆ ಪುಸ್ತಕ ನಾವು ಕೊಂಡು ಓದಿ ಪ್ರೋತ್ಸಾಹಿಸಬೇಕಲ್ಲವೆ?

Rating
Average: 4 (1 vote)