ರಾಯನ ದಿನಚರಿ - ಮನೆಯಲ್ಲಿ ಕೂತು ವಿಶ್ವ ದರ್ಶನ!

ರಾಯನ ದಿನಚರಿ - ಮನೆಯಲ್ಲಿ ಕೂತು ವಿಶ್ವ ದರ್ಶನ!

ಬಹಳ ದಿನಗಳ ಮೇಲೆ ರಾಯ ಸಿಕ್ಕಿದ್ದ. ಅವನು ಲಾಕ್ಡೌನ್   ಕಾರಣದಿಂದಾಗಿ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ - ನಮ್ಮ ನಿಮ್ಮ ತರಹ. ಏನಪ್ಪಾ ಮಾಡುತ್ತಿದ್ದೀಯಾ ಅಂತ ಕೇಳಿದೆ. ಭಾರತ ದರ್ಶನ ಅಂತ ನಕ್ಕುಬಿಟ್ಟ. "ಭಾರತ ದರ್ಶನವೆ? ಅದು ಹೇಗೆ ಸಾಧ್ಯ ? ಮನೆ ಬಿಟ್ಟು ಎಲ್ಲಿಯೂ ಹೋಗುವ ಹಾಗೆ ಇಲ್ವಲ್ಲ?" ಅಂತ ಕೇಳಿದ. 'ಅಯ್ಯೋ ಅದಕ್ಕೇನು ? ಮನಸ್ಸಿದ್ದಲ್ಲಿ ಮಾರ್ಗವಿದೆ " ಅಂದ .  ಅದು ಹೇಗೆ ಅಂತ  ವಿವರಿಸಿದ. ಮನೆಯಲ್ಲಿ ಹಾಕಿಕೊಂಡಿರುವ ಡಿಶ್ ಟೀವಿಯಲ್ಲಿ ಸರ್ಕಾರದ ನಿಯಮಗಳ ಪ್ರಕಾರ ಎಲ್ಲಾ ದೂರದರ್ಶನ ಚಾನೆಲ್ ಗಳನ್ನು ಪುಕ್ಕಟೆ ಕೊಡಬೇಕು ತಾನೇ? ಅವುಗಳನ್ನೆಲ್ಲ ಪಟ್ಟಿಮಾಡಿ ಇಟ್ಟುಕೊಂಡಿದ್ದಾನೆ.  ತಾನು ಖಾಲಿ ಇದ್ದಾಗ - ( ಇವನು ಖಾಲಿ ಇದ್ದಾಗ ಎಂದರೇನು ? ಇವನು ಈಗ ನಿವೃತ್ತ ನು, ಯಾವಾಗಲೂ ಖಾಲಿಯೇ !)  ದೂರದರ್ಶನದ ಚಾನೆಲ್ ಗಳನ್ನು ತಡಕಾಡುತ್ತಾನಂತೆ.  ಆ ಚಾನೆಲ್ಗಳ ಮೂಲಕ ಆಯಾ ರಾಜ್ಯಗಳ ಜನ ನೋಡಲು ಹೇಗಿದ್ದಾರೆ, ಅವರ ಮನೆ ಮಂದಿರಗಳು ಹೇಗಿವೆ , ವೇಷಭೂಷಣಗಳು ಹೇಗೆ , ಅಲ್ಲಿನ ಗುಡ್ಡ ಬೆಟ್ಟಗಳು ನದಿ ಕಣಿವೆಗಳು ಹೇಗಿವೆ , ಅಲ್ಲಿನ ಸಂಗೀತ ಹೇಗೆ , ನೃತ್ಯ ಹೇಗೆ , ಜನಪದ ಸಂಸ್ಕೃತಿ ಹೇಗೆ, ನಾಟಕ ಹೇಗೆ, ಸಿನಿಮಾ ಹೇಗೆ ಎಂದೆಲ್ಲ ನೋಡುತ್ತ ಕೂಡುತ್ತಾನಂತೆ.  ಸಾಂಸ್ಕೃತಿಕ ಧಾರವಾಹಿಗಳು ಉದಾಹರಣೆಗೆ -ಉಪನಿಷತ್ ಗಂಗಾ, ನದಿಯಾ ಗಾತೀ ಹೈಂ ಇತ್ಯಾದಿ. ಮತ್ತೆ ಕರ್ನಾಟಕಕ್ಕೆ ಚಂದನ ಒಂದೇ ಚಾನಲ್ ಇದೆಯಲ್ಲಾ , ಕರ್ನಾಟಕದರ್ಶನ ಮಾಡಿ ಮುಗಿದಿದೆಯೇ ಅಂದರೆ ಏನನ್ನಬೇಕು ಈ ಮಹಾಶಯ ? ಅದಕ್ಕೆ ನ್ಯೂಸ್ ಆನ್ ಏರ್  ಆ್ಯಪ್ ಇದೆಯಲ್ಲೋ, ಮೊಬೈಲ್ ಗೆ  ಹಾಕಿಕೊಂಡು ಕರ್ನಾಟಕದ ಸುಮಾರು 20 ರೇಡಿಯೋ ಸ್ಟೇಷನ್ ಗಳನ್ನು ತಿರುಗಿಸುತ್ತಿರುತ್ತೇನೆ ಅನ್ನಬೇಕೆ?

 

ಕರ್ನಾಟಕ ದರ್ಶನ, ಭಾರತ ದರ್ಶನ ಅಷ್ಟೇ ಸಾಕೆ, ವಿಶ್ವಪರ್ಯಟನೆ ಬೇಡವೇ? ಅಂತ ಕೇಳಿದೆ. ಅದಕ್ಕೆ  "ಟ್ರಾವೆಲ್ ಎಕ್ಸ್ ಪಿ ಚಾನೆಲ್  , ಮತ್ತೆ ಯೂಟ್ಯೂಬ್  ನೋಡಿದರಾಯಿತು "  ಅಂದ! 

 

"ಆಗಲಿ, ಹಾಗೆ ಮಾಡಯ್ಯ, ಈ ಎಲ್ಲ ಕರ್ನಾಟಕ ದರ್ಶನ, ಭಾರತ ದರ್ಶನ , ಪ್ರಪಂಚ ದರ್ಶನ ಗಳಿಂದ ನಿನಗೇನಾದರೂ ಒಳನೋಟ / ದರ್ಶನ / ಕಾಣ್ಕೆ ದಕ್ಕಿದರೆ  ನನಗೂ ಅಷ್ಟು ಕರುಣಿಸಯ್ಯ  "  ಅಂತ ಬೇಡಿಕೊಂಡೆ. ಅವನು ನಕ್ಕು ಬಿಟ್ಟನು !

Rating
Average: 4 (1 vote)