ರುಚಿ
ಎಲ್ಲ ಅಂಗಡಿಗಳು ಬಾಗಿಲು ಹಾಕುತ್ತಿವೆ. ಆಲ್ಲಿಂದ ಮೆಜೆಸ್ಟಿಕ್ಕಿಗೆ ಹೊರಡುವ ಕೊನೆಯ ಬಸ್ಸಿಗೆ, ರಾತ್ರಿ ಊರಿಗೆ ಹೊರಟ ಜನರೆಲ್ಲ ದೀಪದ ಕೆಳಗೆ ನಿಂತು ಕಾಯುತ್ತಿದ್ದಾರೆ.
ಸೊಪ್ಪು ಮಾರುವ ಹೆಂಗಸು, ಉಳಿದ ಕೊತ್ತಂಬರಿ ಕಟ್ಟನ್ನು ಬಾಳೆಯೆಲೆಯಲ್ಲಿ ಜೋಪಾನವಾಗಿ ಸುತ್ತಿಟ್ಟು, ಉಳಿದ ಸೊಪ್ಪನ್ನ ಹಾಗೆ ಒದ್ದೆಯ ಗೊಣಿಬಟ್ಟೆಯಲ್ಲಿ ಮುಚ್ಚಿ ಮಂಕರಿಗೆ ತುಂಬಿ, ನೋಟು ಚಿಲ್ಲರೆಗಳನ್ನು ಎಣಿಸಿ, ತನ್ನ ಪುಟ್ಟ ಪರ್ಸಿಗೆ ತುಂಬಿ, ಮತ್ತೊಂದ್ಸಲ ಆ ಜಾಗವನ್ನೆಲ್ಲ ನೋಡಿ, ಮನೆಗೆ ಹೊರಟಿದ್ದಾಳೆ.
ತಳ್ಳು ಗಾಡಿಯ ತರಕಾರಿ ಸಾಬರಿಗೆ ತುಂಬ ಖುಶಿ, ಇವತ್ತು ತಂದ ಟೊಮೆಟೊ ಎಲ್ಲ ಖಾಲಿ. ಉಳಿದ ಕೆಲವು ಕೊಳೆತ ಟೊಮೆಟೊಗಳನ್ನು ಅಲ್ಲಿ ಚರಂಡಿಯ ಬದಿಗಿದ್ದ ಅಗಲ ಕಲ್ಲಿನ ಮೇಲೆ ಸುರಿದು, ಖಾಲಿಯಾಗಿ ಹಗುರಾದ ಗಾಡಿಯನ್ನು, ತುಂಬಿಕೊಂಡು ಭಾರವಾದ ಜೋಬಿನ ಹಿತದಲ್ಲಿ ತಳ್ಳುತ್ತಿದ್ದಾರೆ.. ಬೀಬಿ ಏನಡಿಗೆ ಮಾಡಿರಬಹುದು ಅನ್ನುವ ಯೋಚನೆ ಈಗ ಗಾಡಿ ಖಾಲಿಯಾದ ಮೇಲೆ ಬಂತು. ಈವತ್ತು ಶುಕ್ರವಾರ, ಸುರಮಾ ಹಚ್ಚಿದ ಅವಳ ಕಣ್ಣುಗಳು ಪರದೆಯೊಳಗಿಂದ ಎಂದಿಗಿಂತ ಹೆಚ್ಚು ಪ್ರೀತಿಯಿಂದ ಮಿನುಗುವುದನ್ನು ನೆನಪಿಸಿಕೊಂಡು ಮನಸ್ಸು ನವಿರೆದ್ದಿತು. ಅಲ್ಲೆ ಬರುತ್ತಿದ್ದ ನನಗೆ ಅದು ಅವರ ಮಿರುಗುವ ಕಪ್ಪು ಗಡ್ಡದಲ್ಲಿ, ತುಟಿಯ ಹತ್ತಿರ ಕೊಂಚವೆ ಅರಳಿದ್ದ ಹೂನಗುವಿನಲ್ಲಿ ಇಣುಕಿ ಕಾಣುತ್ತಿತ್ತು.
ಅಲ್ಲಿ ತಿರುವಿನಲ್ಲಿ ಮಲ್ಲಿಗೆ ಹೂ, ಬಾಳೆಹಣ್ಣು ಮಾರುವ ಅಜ್ಜಿ, ದಿನದ ವ್ಯಾಪಾರ ಮುಗಿದ ಸಮಾಧಾನದಲ್ಲಿ, ರಸ್ತೆಯಾಚೆಗಿನ ಗಾಡಿಯಿಂದ ಮಸಾಲಪುರಿ ತಗೊಂಡು ಸವಿಯುತ್ತ ಕೂತಿದ್ದಳು. ಸವಿದದ್ದು ಅವಳ ನಾಲಗೆ, ರುಚಿ ಕಂಡದ್ದು ನನ್ನ ಕಣ್ಣು..
ಪುಟ್ಟ ಮೆಲಮೈನ್ ತಟ್ಟೆಯಿಂದ ಹಬೆಯಾಡುತ್ತಿರುವ ಮಸಾಲೆಯಲ್ಲಿ ಅವಳ ದಿನದ ದಣಿವು ಆವಿಯಾಗುತ್ತಿತ್ತು. ಗಾಢವಾಗಿ ಬರುವ ಮಸಾಲೆ ಪರಿಮಳದಲ್ಲಿ, ಮಲ್ಲಿಗೆ ಮೊಗ್ಗು ಪೋಣಿಸಿದ ಬೆರಳ ಘಮ ಉಯ್ಯಾಲೆಯಾಡುತ್ತಿತ್ತು. ಅಲ್ಲಿ ಗಾಡಿಯ ಬದಿಯಲ್ಲಿ ಬಾಲ ಮಡಚಿ, ಅವಳನ್ನೆ ನೋಡುತ್ತ ಕೂತಿದ್ದ ಬೀದಿನಾಯಿಯ ಬಾಯಿಗೆ ಸಿಗುವಂತೆ ಒಂದು ಪುರಿ ತುಂದನ್ನು ಎಸೆಯುತ್ತ, ಲೋಕದ ಹಣ್ಣೆಲ್ಲವನ್ನು ಸವಿದವರ ಭಾವದಲ್ಲಿ ಅಜ್ಜಿ ಅ ತಿಂಡಿಯನ್ನು ಸವಿಯುತ್ತಿದ್ದಳು.
ಆ ಮಸಾಲ ಪುರಿ ಎಷ್ಟು ರುಚಿಯಾಗಿತ್ತಂದರೆ, ಅವನ ಜೊತೆ ಇನ್ನೇನು ಮಳೆ ಬೀಳಲಿದೆ ಅನ್ನುವ ಸಂಜೆಯಲ್ಲಿ ಗಾಂಧಿಬಜಾರಿನ ಫ್ಲೈ ಓವರಿನ ಪಕ್ಕದ ಕಟ್ಟೆಯಲ್ಲಿ ಕೂತು ತಿನ್ನುವ ಸ್ಪೆಶಲ್ ಮಸಾಲಪುರಿಗಿಂತ ರುಚಿಯಾಗಿ, ಮಳೆ ಹನಿಯುವಾಗ ಬ್ಯೂಗಲ್ ರಾಕಿನ ಮಂಟಪದ ನೆರಳಲ್ಲಿ ಜೊತೆಯಾಗಿ ಕೂತು ತಿನ್ನುವ ಚುರುಮುರಿಗಿಂತ ಹಿತವಾಗಿ, ಬೇಸಗೆಯ ಸಂಜೆಯಲ್ಲಿ ಮೆಚ್ಚಿನ ಹೋಟೆಲಿನಲ್ಲಿ ತಿನ್ನುವ ಮಸಾಲೆ ದೋಸೆಗಿಂತಲು ಸ್ವಾದಿಷ್ಟವಾಗಿ ಇತ್ತು.. ಅವಳ ತೃಪ್ತಿ ತುಂಬಿದ ಮುಖ, ಸಂತುಷ್ಟಗೊಂಡ ಕಣ್ಣು, ಕೊರಳ ಶಂಖದಿಂದ ಬಂದ ಪುಟ್ಟ ತೇಗಿನಲ್ಲಿ ದಾಟಿ ಹೊರಹೋದ ದಿನದ ಸುಸ್ತು, ಎಲ್ಲವೂ ಆ ರುಚಿಯನ್ನ ನನಗೆ ದಾಟಿಸಿ ಹೇಳಿದವು.
ಅವಳು ಮಸಾಲೆ ಪುರಿ ಗಾಡಿಯವನಿಗೆ ದುಡ್ಡು ಕೊಡಲು ಹೋದಾಗ ಎರಡು ಪುಟ್ಟ ಪೂರಿಯನ್ನು ಇಸಿದು, ತನ್ನ ಪುಟ್ಟ ಪರ್ಸಿನೊಳಗಿಟ್ಟುಕೊಂಡಳು. ಮತ್ತೆ ಗಡಿಬಿಡಿಯಲ್ಲಿ ಬಂದು ಎಲ್ಲ ಸೇರಿಸಿಕೊಂಡು, ಗಾಡಿ ದೂಡುತ್ತ ಮನೆ ಕಡೆ ಹೊರಟಳು.
ಸೊಸೆ ಬಯ್ಯುತ್ತಾಳೆ ಅಂತ ಗೊತ್ತಿದ್ರೂ ಬಾಗಿಲಲ್ಲಿ ಪುಟ್ಟ ಜಮಖಾನೆಯಲ್ಲಿ ಕೂತು ಆಡುತ್ತ ಕಾದಿರುವ ಮೊಮ್ಮಗನಿಗೆ ಈ ಪೂರಿ ಮುರಿದು ತಿನ್ನಿಸದೆ ಹೋದರೆ ಅವಳು ಹೇಗೆ ಅಜ್ಜಿಯಾಗುತ್ತಾಳೆ, ನೀವೆ ಹೇಳಿ. ಅದು ಹೇಗೆ ಅಜ್ಜಿ ಇಷ್ಟು ಪ್ರೀತಿಯಿಂದ ನೆನಪಿಟ್ಟು ತಗೊಂಡು ಹೋಗುವ ಪುಟ್ಟ ಪೂರಿಯಲ್ಲಿ ರೋಗಾಣುವಿರುತ್ತದೆ? ಅಮ್ಮ ಎಷ್ಟೆ ಬೈದರೂ ಅಜ್ಜ ನನಗೆ ತಂದುಕೊಟ್ಟ ಗಟರ್ ಪಕ್ಕದ ಅಯ್ಯಂಗಾರ್ ಬೇಕ್ರಿ ರೊಟ್ಟಿಯಿಂದ ನನಗೆ ಹೇಗೆ ಯಾವತ್ತೂ ಅನಾರೋಗ್ಯವಾಗಲಿಲ್ಲವೋ ಹಾಗೆ. ಅಜ್ಜಿ ಎತ್ತಿಟ್ಟುಕೊಂಡ ಪುಟ್ಟ ಪೂರಿಗಳು ಅಪ್ತವಾಗಿ, ಮನದಲ್ಲಿ ರುಚಿಯಾದ ಪರಿಮಳ ನೆನಪುಗಳು ಹಬೆಯಾಡಿದವು..
ಇಲ್ಲಿ ರಸ್ತೆಯ ಪಕ್ಕ, ನಾರುವ ಊರಿನ ಗಬ್ಬು ನಾಳಗಳ ಮಧ್ಯೆ, ಚಂದ್ರನಿರದ ರಾತ್ರಿಯಲ್ಲಿ, ಪುಟ್ಟದಾಗಿ ಮಿನುಗಿದ ಅಜ್ಜಿ, ನಿನಗೆ ಪ್ರೀತಿಯ ನಮನ.
Comments
ಉ: ರುಚಿ
In reply to ಉ: ರುಚಿ by kavitha
ಉ: ರುಚಿ