ಲಗ್ನ ಪತ್ರಿಕೆ! (1)
ಅದಾಗಲೇ ಮೇ ತಿಂಗಳು ಪ್ರಾರಂಭವಾಗಿ ಒಂದು ವಾರ ಕಳೆದಿತ್ತು. ಬೆಸಿಗೆಯ ಸಖೆ ಎಲ್ಲೆಲ್ಲೂ ಆವರಿಸಿಕೊಂಡು ಸಿಕ್ಕ ಸಿಕ್ಕವರನ್ನೆಲ್ಲ ಸತಾಯಿಸುತಿತ್ತು. ಅದು ಮನುಷ್ಯರೇ ಅಂತಲ್ಲ, ದನ ಕರುಗಳನ್ನು, ನಾಯಿ ಬೆಕ್ಕುಗಳನ್ನು ಬಿಟ್ಟಿರಲಿಲ್ಲ. ಅರೆ ಮಲೆನಾಡಾದ ಹಿಲ್ಲೂರಿನಲ್ಲಿ ಕರಾವಳಿಯ ತೀರದಷ್ಟು ಸಖೆ ಇಲ್ಲದಿದ್ದರೂ, ಅಲ್ಲಿಯೇ ಹುಟ್ಟಿ ಬೆಳೆದವರಿಗೆ ಅದು ತೀರಾ ಸಖೆಯೇ ಅನಿಸುತಿತ್ತು.ಮನೆ ಕೆಲಸಗಳೆಲ್ಲವನ್ನು ಹೊತ್ತು ಏರುವ ಮುನ್ನವೇ ಮುಗಿಸಿ, ಮಧ್ಯಾಹ್ನ ಹೆಂಡತಿ ಮಾಡಿದ ಗಂಜಿ- ಬೆರಕೆ ಹಾಕಿದ ಬಸಲೆ ಸೊಪ್ಪಿನ ಸಾರು ತಿಂದು, ಮನೆಯ ಹೊರಗಿನ ಚಿಟ್ಟೆಯಮೇಲೆ, ಹೊರಗೆ ಬೀಸುವ ಗಾಳಿಗೆ ಮೈಯೊಡ್ಡಿ ಮಲಗಿದ ಸಾತಣ್ಣನಿಗೆ, ಅದೇನೋ ನಿದ್ದೆ ಹತ್ತಿತ್ತೋ. ಆ ಗಾಢ ನಿದ್ದೆಯಲ್ಲಿ ಹೆಂಡತಿ ತಿಮಕ್ಕ ಬಂದು ಒಂದೆರಡು ಬಾರಿ ಎಚ್ಚರಿಸಿದಾಗಲೂ ನೆನಪಾಗಲಿಲ್ಲ. ಮಲಗುವ ಮೊದಲು ತಿಮ್ಮಕ್ಕನಿಗೆ " ಏನೆ ನಾಲ್ಕಗಂಟಿ ಅಷ್ಟೊತ್ತಿಗೆ ಏಳ್ಸ, ಹಿಲ್ಲೂರಬೈಲ್ ರ್ರಾಮಚಂದ್ರಣ್ಣನ ಅಂಗ್ಡಿಗೆ ಹೋಗ್ಬೇಕ" ಎಂದು ಹೇಳಿ ಮಲಗಿದ್ದರಿಂದ ಹೆಂಡತಿ ಮೂರುವರೆಯಿಂದ ನಾಲ್ಕು ಗಂಟೆಯಾಗುವುದನ್ನೇ ಕಾಯುತ್ತಾ ಕುಳಿತವಳು, ನಾಲ್ಕು ಗಂಟೆಯಾಗುತಿದ್ದ ಹಾಗೆ ಒಂದೆರಡು ಬಾರಿ, ಮನೆಯ ಎದುರಿನ ಜಗಲಿಗೆ ಬಂದು, " ಏನ್ರೆ, ಏಳ್ರೆ," ಅಂದು ಹೇಳಿ ಹೋದಳು.
ಒಂದೆರಡು ಬಾರಿ ಹೀಗೆ ಕರೆದರೂ, ಅವಳ ಮನಸ್ಸಲ್ಲಿ ಗಂಡ ಇನ್ನೂ ಸ್ವಲ್ಪ ಹೊತ್ತು ಮಲಗಲಿ ಎನ್ನುವುದೇ ಆಗಿತ್ತು. ನಿನ್ನೆ ರಾತ್ರಿ ರಾಮಚಂದ್ರನ ಅಂಗಡಿಗೆ ತಾನು ತೆಗೆದುಕೊಂಡು ಹೋಗಬೇಕಾದ ಒಣಗಿದ ಗೇರು ಬೀಜ, ವಾಂಟೆ ಹುಳಿ, ಮುರಲಕಾಯಿ ಎಲ್ಲಾ ಒಂದು ಚೀಲದಲ್ಲಿ ತುಂಬಿ ಸಾತಣ್ಣ ಮಲಗುವಾಗ ಮದ್ಯರಾತ್ರಿಯ ಹತ್ತಿರವೇ ಆಗಿತ್ತು. ದಿನಾ ಎಂಟು, ಒಂಬತ್ತು ಗಂಟೆಗೆ ನಿದ್ದೆ ಹೋಗುವ ಸಾತಣ್ಣ ನಿನ್ನೆ ಸ್ವಲ್ಪ ತಡವಾಗಿಯೇ ಮಲಗಿದ್ದ. ರಾತ್ರಿ ಎಷ್ಟೇ ತಡವಾಗಿ ಮಲಗಿದರೂ ಬೆಳಿಗ್ಗೆ ಐದಕ್ಕೇ ಏಳುವುದು ಅವನ ಅಭ್ಯಾಸ. ಬೆಳಿಗ್ಗೆ ಎದ್ದು ಮುಖ ಮಜ್ಜನ ಮುಗಿಸಿ ಒಂದಿಷ್ಟು ನೀರು ಕುಡಿದು ಮನೆಯಿಂದ ಹೊರಬಿದ್ದರೆ, ಆರು ಗಂಟೆಗೆ ಚಹಾ ಕುಡಿಯುವ ಹೊತ್ತಿಗೆ ಒಂದು ಹೊರೆ ಸೊಪ್ಪು, ಇಲ್ಲವೇ ದನಕ್ಕೆ ಹುಲ್ಲು ದನದ ಕೊಟ್ಟಿಗೆ ಸೇರಿರುತ್ತಿತ್ತು. ಚಹಾ ಕುಡಿದು ಮನೆಯ ಹೊರಗಿರುವ ತೋಟಕ್ಕೆ ಹೋಗಿ ಅದು ಇದು ಸಣ್ಣ ಪುಟ್ಟ ಕೆಲಸ ಮಾಡಿ ಮನೆ ಸೇರುವ ಹೊತ್ತಿಗೆ ಹನ್ನೆರಡು ದಾಟಿರುತ್ತಿತ್ತು. ಮನೆಗೆ ಬಂದು ಊಟ ಮುಗಿಸಿ ಸ್ವಲ್ಪಹೊತ್ತು ನಿದ್ದೆ ಮಾಡಿ ಎದ್ದು ಚಹಾ ಕುಡಿದು ತೋಟಕ್ಕೋ, ಗದ್ದೆಗೋ ಹೋದರೆ ಮನೆ ಸೇರುವುದು ಸಂಜೆ ಹೊತ್ತು ಮುಳುಗಿದ ಮೇಲೆಯೇ. ಇದು ಸಾತಣ್ಣನ ದಿನಚರಿಯೂ ಹೌದು.
ನಿನ್ನೆ ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ಬೇಗ ಎದ್ದಿದ್ದರಿಂದ ಅವನಿಗೆ ಸ್ವಲ್ಪ ಜಾಸ್ತಿಯೇ ನಿದ್ದೆ ಹತ್ತಿತ್ತು. ಒಂದೆರಡು ಬಾರಿ ಕರೆದ ತಿಮ್ಮಕ್ಕ ದನದ ಕೊಟ್ಟಿಗೆಗೆ ಹೋಗಿ ಹಾಲು ಕರೆದು ತಂದು, ಚಹಾಕ್ಕೆ ನೀರಿಟ್ಟು ಮತ್ತೆ ಸಾತಣ್ಣನನ್ನು ಕರೆಯಲು ಹೊರಬರುವ ಹೊತ್ತಿಗೆ ಗಂಟೆ ಐದು ದಾಟಿತ್ತು. ಇನ್ನೂ ತಡ ಮಾಡಿದರೆ ಗಂಡನ ಹತ್ತಿರ ಬೈಸಿ ಕೊಳ್ಳಬೇಕಾದೀತು ಎಂದು, ಸಾತಣ್ಣ ಮಲಗಿದ ಚಿಟ್ಟೆಯ ಹತ್ತಿರ ಬಂದು, "ಏನ್ರೆ, ಏಳ್ರೆ. ಅದೇನೋ ರಾಮಚಿರಣ್ಣನ ಅಂಗ್ಡಿಗೆ ಹೋಗ್ಬೇಕ ಅಂದದ್ರಿ. ಏಳುಲಾ" ಎಂದು ಒಂದೆರಡು ಬಾರಿ ಮೆಲ್ಲಗೆ ಮೈತಟ್ಟಿ ಏಳಿಸಿದಳು.
"ಹಾಂ!" ಎಂದು ಏನೋ ಜ್ನಾನೋಧಯವಾದಂತಾಗಿ ಎದ್ದು ಕುಳಿತು, ಅರ್ಧಂಬರ್ಧ ನಿದ್ದೆಗಣ್ಣಿನಿಂದ ಕಣ್ಣು ತೆರೆದು ಸುತ್ತಲೂ ನೋಡಿ, " ಈ ಹಾಳಾದ್ ನಿದ್ದೆ, ಮಲಗಿದ್ರೆ ಎಚ್ಚರವೇ ಆಗ್ದೇ ಇರೋ ಹಂಗೆ ಮಾಡ್ತಿದ" ಎಂದು ನಿದ್ದೆಗೆ ಒಂದಿಷ್ಟು ಬೈಯ್ದು "ಟೈಮ್ ಇಟ್ಟಾಯ್ತ?" ಎಂದು ಹೆಂಡತಿಯನ್ನು ಕೇಳಿದ.
"ಟೈಮ್ ಏಗೆ ಐದ ಗಂಟಿ ಆಗೋಯ್ತ, ಆಗನಿಂದೆ ನಿಮ್ಗೆ ಏಳಸ್ತೆ ಇಂವೆ, ಮೂರ್ನಾಲ್ಕು ಸಲಾನಾದ್ರೂ ಆಗುದ್, ನೀವ್ ಕುಂಬಕರ್ಣ ಮಲಗ್ದಂಗೆ ಮಲ್ಗರಿ, ಏಳುದೆ ಇಲ್ಲಾ". ಎಂದು ತಾನು ಎಂದೋ ಕೇಳಿ ತಿಳಿದ ಕುಂಬಕರ್ಣನೆಂಬುವ ರಾಕ್ಷಸನಿಗೆ ತನ್ನ ಗಂಡನನ್ನು ಹೋಲಿಸಿ, "ಆಯ್ತ ಏಳಿ, ಚಾಕ್ಕೆ ಇತ್ತಿ, ಕಣ್ಣಿಗೆ ಇಟ್ಟ ನೀರ್ ಹಾಕಂಡೆ ಬರ್ರಿ, ಚಾ ಕುಡ್ಕಂಡೆ ಹೋಗಕಿ" ಎಂದು ಹೇಳಿ ತಾನು ಚಹಾ ತಯಾರಿಮಾಡಲು ಹೊರಟಳು.
ಹೆಂಡತಿ ಅಡಿಗೆ ಕೋಣೆಗೆ ಹೋಗುತ್ತಿದ್ದಂತೆ, ಸಾತಣ್ಣ ಎದ್ದು ಮನೆಯ ಹಿತ್ತಲಿನಲ್ಲಿ ಇಟ್ಟ ನೀರ ಹಂಡೆಯ ಬಳಿ ತೆರಳಿ, ಹಂಡೆಯಿಂದ ಒಂದು ಚೆಂಬು ನೀರು ತೆಗೆದು ಮುಖಕ್ಕೆ ಒಂದಿಷ್ಟು ಸಿಂಪಡಿಸಿ, ಕೈಕಾಲು ತೊಳೆದ ಶಾಸ್ತ್ರಮಾಡಿ ಹೆಂಡತಿ ಮಾಡಿದ ಚಹಾ ಸವಿಯಲು ಅಡಿಗೆ ಕೋಣೆ ಸೇರಿದ. ಸಾತಣ್ಣ ಅಡಿಗೆ ಕೋಣೆ ಸೇರುವಷ್ಟರಲ್ಲಿ, ತಿಮ್ಮಕ್ಕ ಚಹಾವನ್ನು ತಪ್ಪಲೆಯಿಂದ ಲೋಟಕ್ಕೆ ಸುರಿಯುತ್ತಿದ್ದಳು. ಸಾತಣ್ಣನಿಗೆ ಯಾವಾಗಲೂ ಬಿಸಿ ಚಹಾ ಕುಡಿದೇ ಅಭ್ಯಾಸ. ಚಹಾ ತಣ್ಣಗಾದರೆ, ಇದೇನು ಕಲಗಚ್ಚು ಇದ್ದ ಹಾಗಿದೆ ಎಂದು ತಣಿದ ಚಹಾವನ್ನು ತೆಗೆದುಕೊಂಡು ಹೋಗಿ ಹೊರಗೆ ಚೆಲ್ಲಿ ಬರುತ್ತಿದ್ದ. ಹಾಗಾಗಿ ತಿಮ್ಮಕ್ಕ ಯಾವಾಗಿನಿಂದಲೂ ಗಂಡನಿಗೆ ಒಲೆಯ ಮೇಲೆ ಊರಿಯುತ್ತಿದ್ದ ಚಹಾವನ್ನೇ ಲೋಟಕ್ಕೆ ಹಾಕಿ ಕೊಡುತ್ತಿದ್ದಳು. ತಿಮ್ಮಕ್ಕ ಕೊಟ್ಟ ಬಿಸಿ ಬಿಸಿ ಚಹಾವನ್ನು ನಾಲ್ಕೈದು ಗುಟುಕಿಗೆ ಕುಡಿದು ಮುಗಿಸಿ, " ನಾನ್ ಹಂಗಾರೆ ರಾಮಚಿರಣ್ಣನ ಅಂಗಡಿಗೆ ಹೋಗಿ ಬತ್ತಿ" ಎಂದು ಹೆಂಡತಿಯ ಉತ್ತರಕ್ಕೂ ಕಾಯದೇ ಎದ್ದು ಮನೆಯ ನಡುಕೋಣೆಗೆ ಬಂದು, ಗಿಳಿಗೆ ತೂಗಿಟ್ಟ ಅಂಗಿಯನ್ನು ಧರಿಸಿ, ಸೊಂಟಕ್ಕೆ ಮುಂಡವನ್ನು ಸುತ್ತಿಕೊಂಡು ಹೊರಬಂದು, ಮನೆಯ ಚಿಟ್ಟೆಯ ಇನ್ನೊಂದು ಬದಿಗೆ ನಿನ್ನೆ ರಾತ್ರಿ ತಯಾರಿ ಮಾಡಿಟ್ಟ ಚೀಲವನ್ನು, ಹೆಂಡತಿ ಹೊರಗೆ ಬರುವುದಕ್ಕೂ ಕಾಯದೇ, ತಾನೇ ಕಷ್ಟಪಟ್ಟು ಹೊತ್ತುಕೊಂಡು ಹೆಂಡತಿಗೆ "ಬತ್ತಿ ಹಂಗಾರೆ, ಬರ್ಬೇಕಾದ್ರೆ ಹಿಲ್ಲೂರಬೈಲ್ ಅಂಗ್ಡಿ ಹತ್ರೆ ಮೀನ್ ಸಿಕ್ಕರೆ ತಕ್ಕಂಡೆ ಬತ್ತಿ." ಎಂದು ಹೇಳಿ, ಹಿಲ್ಲೂರ್ ಬೈಲ್ ರಾಮಚಂದ್ರನ ಅಂಗಡಿಯತ್ತ ಹೊರಟ.
ಮುಂದುವರಿಯುವುದು...
ಮಂಜು ಹಿಚ್ಕಡ್
Comments
ಉ: ಲಗ್ನ ಪತ್ರಿಕೆ! (1)
ಮುಂದುವರೆಸಿ. ಕುತೂಹಲ ಮೂಡಿಸಿದ್ದೀರಿ.
In reply to ಉ: ಲಗ್ನ ಪತ್ರಿಕೆ! (1) by kavinagaraj
ಉ: ಲಗ್ನ ಪತ್ರಿಕೆ! (1)
ಖಂಡಿತ ಸರ್, ಧನ್ಯವಾದಗಳು