ಲಯನ್ ಸಫಾರಿ ಲಯನ್ಸ್ ವರಿ

ಲಯನ್ ಸಫಾರಿ ಲಯನ್ಸ್ ವರಿ

"ಅವು ಮಕ್ಕಳಾ....ಥೇಟ್ ಕೋತಿಗಳು. ಬಾಲ ಒಂದಿಲ್ಲ ಅಷ್ಟೇ.." ಅನ್ನುತ್ತಾರೆ, ಚೇಷ್ಟೆ ಮಾಡುವ ಮಕ್ಕಳಿಗೆ.

"೯ ಗಂಟೆಯವರೆಗೆ ಹಾಸಿಗೆಯಲ್ಲಿ ಹೊರಳಾಡುತ್ತಾನೆ, ಕೋಣ" ಮಗನ ಗುಣಗಾನ ತಾಯಿಯಿಂದ.

ಮಂಗನಿಂದ ಮಾನವ ಹೌದೋ ಅಲ್ಲವೋ, ಆದರೆ ಪ್ರಾಣಿಗಳ ಒಂದಿಲ್ಲೊಂದು ಗುಣವನ್ನು ಮಾನವನಿಗೆ ಹೋಲಿಸಿ ಹೊ(ತೆ)ಗಳುವರು. ನಾಯಕ ಯಾವಾಗಲೂ "ಸಿಂಹ". ಆದರೆ ಈಗಿನ ನಾಯಕರ ಬಗ್ಗೆ ಹಾಗೆ ಹೇಳಲು ಸಾಧ್ಯವಿಲ್ಲ.

"ಕುಮಾರಣ್ಣನವರಿಂದ ಸಿಂಹಘರ್ಜನೆ"

"ಕಾಂಗೈ ವರಿಷ್ಠರಿಂದ ಪಕ್ಷದ ಗೆಲುವಿನ(!) ಸಿಂಹಾವಲೋಕನ"

"ಎದುರಾಳಿಗಳಿಗೆ ಯಡ್ಡಿ ಸಿಂಹಸ್ವಪ್ನ" ಈ ತರಹ ಹೇಳಿದರೆ ಅವರವರ ಪಕ್ಷದವರೇ ಬಿದ್ದುಬಿದ್ದು ನಗುವರು.

ಈ ನಾಯಕರುಗಳಿಂದಾಗಿ ಸಿಂಹದ ವ್ಯಾಲ್ಯೂ ಸಹ ಕಮ್ಮಿಯಾಗಿದೆ! ಚಿತ್ರವನ್ನು ಗಮನಿಸಿ- ಯಾರ ಘರ್ಜನೆಗೆ ಇಡೀ ಕಾಡೇ ನಡುಗುತ್ತಿತ್ತೋ, ಯಾರನ್ನು ಎದುರಲ್ಲಿ ಕಂಡರೆ ಉಸಿರೇ ನಿಂತು ಹೋಗುತ್ತಿತ್ತೋ, ಅಂತಹ "ಸಿಂಹ" ಒಳ್ಳೇ ಸಾಕಿದ ನಾಯಿ ತರಹ ಕಾಣಿಸುತ್ತಿಲ್ಲವಾ!? ಕೆರಳಿದ ಸಿಂಹಕ್ಕೆ ಈ ತಂತಿ ಬೇಲಿ ಒಂದು ಲೆಕ್ಕಾನಾ? ನಿಜಕ್ಕೂ ಇದು ಸಿಂಹಾನಾ?

(ಸಿಂಹದ ಭೇಟಿಗೆ ಹೊರಟ ನನ್ನ ಹಿಂದಿನ ಬ್ಲಾಗ್-  1  2)

ಸಿಂಹವೇ ಹತ್ತಿರ ಕರೆದು ನನ್ನ ಸಂಶಯ ಪರಿಹರಿಸಿತು-ಭಯಬೀಳಬೇಡ. ನಾನೂ ನಿಮ್ಮ ಹಾಗೇ ಮನುಷ್ಯ! ಸರ್ಕಸ್‌ಗಳಲ್ಲಿ ಸಿಂಹದ ವೇಷ ಹಾಕಿ ನಾಕು ಕಾಸು ಸಂಪಾದಿಸುತ್ತಿದ್ದೆ. ಸರಕಾರ ವನ್ಯಪ್ರಾಣಿಗಳನ್ನು ಸರ್ಕಸ್‌ಗಳಲ್ಲಿ ಬಳಸಬಾರದೆಂದು ಕಾನೂನು ಮಾಡಿ ನಮ್ಮನ್ನೆಲ್ಲಾ ವನ್ಯಪ್ರಾಣಿ ರಿಹೆಬಿಲಿಟೇಶನ್ ಸೆಂಟರ್‌ಗಳಿಗೆ ಸಾಗಿಸಿದರು. ನಾವು ಮನುಷ್ಯರು ಎಂದು ಎಷ್ಟು ಬೇಡಿದರೂ ನಮ್ಮನ್ನು ಬಿಡಲಿಲ್ಲ. -'ಕಾಡಲ್ಲೇ ಸಿಂಹಗಳಿಲ್ಲ. ಇನ್ನು ಸಿಕ್ಕಿದ ನಿಮ್ಮನ್ನು ಬಿಡಲುಂಟೆ? ಸರ್ಕಸ್‌ನಲ್ಲಿ ಹೇಗೆ ಆಕ್ಟ್ ಮಾಡುತ್ತಾ ಇದ್ದಿರೋ, ಇಲ್ಲೂ ಹಾಗೇ ಆಕ್ಟ್ ಮಾಡುತ್ತಾ ಇರಿ. ನಾನ್‌ವೆಜ್ ಊಟ ಮೂರೂ ಹೊತ್ತು ಹಾಕುವೆವು. ಸಂಬಳ ನಿಮ್ಮ ಮನೆಗೆ ಕಳುಹಿಸುವೆವು'-ಅಂದರು. ಹೇಗೋ ದಿನ ಸಾಗುತ್ತಿತ್ತು.

ಬನ್ನೇರು ಘಟ್ಟದಲ್ಲಿ ಒಂದೊಂದೇ ಪ್ರಾಣಿಗಳು ಸಾಯುತ್ತಿರುವುದು ನಿಮಗೆ ಗೊತ್ತೇ ಇದೆ. ಮನುಷ್ಯರಿಗೇ ಕಳಪೆ ರೇಶನ್ ಸಪ್ಲೈ ಮಾಡುತ್ತಿರುವಾಗ, ನಮ್ಮ ಬಗ್ಗೆ ಕಾಳಜಿ ಎಲ್ಲಿರುತ್ತದೆ? ’ಅವುಗಳ ಆಯುಷ್ಯನೇ ಅಷ್ಟು’ ಎಂದು ಯಾವಾಗ ಮಂತ್ರಿವರ್ಯರೇ ಹೇಳಿದರೋ, ನಮಗೆ ಭಯ ಹತ್ತಿದೆ. ಸಿಂಹ ೨೬ ವರ್ಷ ಬದುಕುವುದು ಹೆಚ್ಚೇ ಇರಬಹುದು, ಆದರೆ ನನಗಿನ್ನೂ ಆಯುಸ್ಸಿದೆಯಲ್ಲಾ.... ಮಾಂಸ ನೋಡಿದರೆ ವಾಕರಿಕೆ ಬರುತ್ತಿದೆ.ನಾಲಗೆ ನೋಡು ಹೇಗೆ ಜಡ್ಡುಗಟ್ಟಿದೆ- ಮುದ್ದೆ-ಸಾರಿನ ಆಸೆಯಾಗುತ್ತಿದೆ. ಹೇಗಾದರೂ ನಮ್ಮನ್ನ ಉಳಿಸಿ. ವನ್ಯಪ್ರಾಣಿಗಳನ್ನು ಕಾಡಿಗೆ ಕಳುಹಿಸುವಂತೆ ಹೋರಾಟ ಮಾಡಿ. ಒಮ್ಮೆ ಕಾಡಿಗೆ ಹೋದ್ರೆ, ಅಲ್ಲಿಂದ ತಪ್ಪಿಸಿಕೊಂಡು ಬಂದು ಕೂಲಿನಾಲಿನಾದರೂ ಮಾಡಿಕೊಂಡು ಬದುಕಿಕೊಳ್ಳುತ್ತೇವೆ" ಎಂದನು!

ಯಡ್ಡಿ ರಾಜ್ಯದಲ್ಲಿ ಆಶ್ವಾಸನೆ ಕೊಡಲೇನಡ್ಡಿ.. ನಾನೂ ಕೊಟ್ಟು ಬಂದೆ.

-ಗಣೇಶ.

Rating
No votes yet

Comments