ವಂದಿಪೆ ನಿನಗೆ ಕರುನಾಡ
ಹರಸು ದೇವನೇ ಹರಸು, ಹರಸಿ ಉಳಿಸೆಮ್ಮ ನಾಡ | ಗಂಧದಾ ಗುಡಿ ಇದುವೇ ಚಿನ್ನದಾ ನುಡಿ ನುಡಿವ ಕವಿ ಕೋಗಿಲೆಗಳ ತಾಣ| ವನ, ವನ್ಯ ಮೃಗಗಳ ನಿಲ್ದಾಣ| | ಜೋಗದ ಜಲಪಾತದಲಿ ,ತುಂಗೆಯ ಅದಃ ಪಾತದಲಿ ಗಿರಿ ಶಿಖರಗಳನರಸಿ ಹರಿವ, ಚಿನ್ನದಾ ನೀರೆ | | ನವಿಲು ಕುಣಿಯುವುದಿಲ್ಲಿ ,ಗಿಣಿಯು ನುಡಿಯುವುದಿಲ್ಲಿ ಗಗನ ಚುಂಬಿಸುವುದಿಲ್ಲಿ ಮಲೆನಾಡಿನ ಹಸಿರ ಸೀರೆ | | ಮಂಕುತಿಮ್ಮ ಜನಿಸಿದ ನಾಡು ,ತಿಮ್ಮಗುರುವಿನ ನೆಚ್ಚಿನ ಬೀಡು ನರ ಮಾನವನ ಬಾಳ್ವೆಗೆ ನಂಬಿಕೆಯನಿತ್ತ ಗೂಡು | ಭಾಮಿನಿಯ ಕಂಡು , ಬದುಕೆಂಬ ಬಂಡಿಯಲಿ ಆನಂದಗೊಂಡ | ಪುಣ್ಯ ಭೂಮಿ ಇದು ಗುಂಡಪ್ಪ ಜನಿಸಿದ ನಾಡು | | ಜಟಾಧರನ ಮುಡಿಯಿಂದ ಧುಮುಕಿ ದುಡುಕಿ ಇಳಿದು ಬಂದ ತುಂಗೆ , ಕಪಿಲೆ ಕಾವೇರಿಯ ನಾಡು | | ಸಾಧನಕೇರಿಯವ ಇವ , ನಾಕು ತಂತಿಯ ಕಂದನಿವ | ವರಕವಿ ಅಂಬಿಕಾತನಯದತ್ತನ ನಾಡು | | ಬ್ರಷ್ಟರಟ್ಟಹಾಸವ , ಕಾಲ್ತುದಿಯಲ್ಲಿ ಮೆಟ್ಟಿ ನಿಂದ | ಧೂರ್ತರೆದಗೆ ತೀಡುವ ತೀಕ್ಷ್ಣ ಬಾಣವಾದ | | ಜನ ಸಾಗರವನೋಯ್ದು ನಗೆಯ ಹೊಳೆಯಲಿ ತೋಯ್ದು | ಮಿಂಚಿನಂತೆ ಮರೆಯಾಗಿ , ಕಾಣದೆ ಹೋದ | | ಕೋಟಿ ಕೋಟಿ ಕನ್ನಡಿಗರ ಪ್ರೀತಿ ಪಾತ್ರನಾದ, ಬೀಚಿಯವರ ನೆಲೆ ಬೀಡು , ನಮ್ಮ ಈ ಕರುನಾಡು | | ಮೂಕಜ್ಜಿಯ ಕನಸಿಲ್ಲಿಹುದು, ಚಿಗುರಿದಾ ಕನಸುಗಳುಂಟು | ಅತ್ಯುನ್ನತ ಸಾಹಿತ್ಯವಿಲ್ಲಿಹುದು , ನಿತ್ಯೋತ್ಸವ ಕವಿಗಳುಂಟು| | ಮೇರು ಕೃತಿಯ ಮಾಸ್ತಿಯವರ, ಜ್ಞಾನ ಪೀಠ ಕಾರಂತರ | ಹರಿದಾಸರ ಕನಕದಾಸರ ಪುರಂದರರ ಒಡಲಿದು | | ಸರ್ವಜ್ಞನ ವಚನವಿರುವ , ಬಸವಣ್ಣನ ವಚನವಿರುವ | ಸುರಸುಂದರ ವಿಜಯನಗರ ಕಂಗೊಳಿಸುವ ನಾಡಿದು, ನಮ್ಮ ಕರುನಾಡಿದು | | ಕಣ್ತೆರೆದು ನೀ ನೋಡು , ಬೇಲೂರು ಹಳೇಬೀಡು | ಮಹಿಷಾಸುರನ ಮರ್ಧಿನಿ , ಚಾಮುಂಡಿಯಾ ನಾಡು | | ಭೋರ್ಗರೆವ ಕಡಲುಗಳು ,ಧಿಗ್ಬ್ರಮಿಸುವ ಸಹ್ಯಾದ್ರಿಯು | ಘಮ ಘಮಿಸುವ ಮೈಸೂರಿನ, ಮಲ್ಲಿಗೆಯ ನಾಡು | ನೋಟವದು ವಿಹಂಗಮ , ಆಗುಂಬೆಯ ಸೂರ್ಯಾಸ್ತಮ | ಸ್ವರ್ಗವಿದುವೆ , ಧನ್ಯ ನಾನ್ ,ನುಡಿವುದು ನಿನ್ನoತರಾತ್ಮ | | ಶಂಕರರು ಸ್ಥಾಪಿಸಿದ, ಶಾರದಾ ಪೀಠವಿಹುದು | ಮೌನದಲಿ ನಿಂತಿರುವ, ಗೊಮ್ಮಟನ ನಗುವಿಹುದು | | ಕಣ್ಣೆ ನಂಬಲಾರದಷ್ಟು, ಚಂದ ಮಂಜುನಾಥನದು | ಬೆಣ್ಣೆ ಕದ್ದ ನಮ್ಮ ಕೃಷ್ಣ, ಅವತರಿಸಿದ ಗುಡಿಯಿದು | | ಚಿನ್ನದ ,ರನ್ನದ , ಮುತ್ತಿನ ,ಹವಳದ ,ತೆಂಗಿನ ,ಮಾವಿನ ,ಬಾಳೆಯ, ತೇಗದ | ಕರಡಿಯ ,ಸಿಂಹದ , ಆನೆಯ, ಹುಲಿಗಳ , ಕೋಗಿಲೆ ಕಂಠದ ಇಂಪಿನ ಸ್ವರವಿದು | ನವಿಲಿನ ನಾಟ್ಯದ ರಂಗಸ್ಥಳವಿದು, ಜಲಚರಗಳಿಗೆ ಅಮೃತದ ನೀರಿದು | ಹಕ್ಕಿಗೆ ಚಿಟ್ಟೆಗೆ ಬಾನಾಡಿಗಳಿಗೆ ಬೆಚ್ಚನೆ ಮಲಗುವ ಸ್ವಚ್ಚನೆ ಗೂಡಿದು| | ಪರಶಿವ ನೆಲೆಸಿದ ಧರ್ಮಸ್ಥಳವಿದು ,ಪಂಪನ ರನ್ನನ ಜನ್ಮಸ್ಥಳವಿದು | | ಕನ್ನಡ ಕೋಗಿಲೆ ಕಾಳಿಂಗ ರಾಯರ, ಕನ್ನಂಬಾಡಿಯ ವಿಶ್ವೆಶ್ವರಯ್ಯರ | ಸಾಧನೆ ಮೆರೆಸುವ ಸುಂದರ ನಾಡಿದು | | ನಿನಗೀ ತಾಣವು ಅತಿ ನಿರ್ಭಯವು | ಸಕಲ ಸೃಷ್ಟಿಯಲಿ ಆನಂದಮಯವು | | ನಿತ್ಯವೂ ದೈವಿಕ, ಅರುಣೋದಯವು | ಕನ್ನಡ ತಾಯಿಯು ಶೃಂಗಾರಮಯವು | | ಹರಸು ದೇವನೆ ಹರಸು ,ಹರಸಿ ಉಳಿಸೆಮ್ಮ ನಾಡ | ಕೈ ಮುಗಿದು ,ಶಿರ ಬಾಗಿ ವಂದಿಪೆ ನಿನಗೆ ಕರುನಾಡ | |