ವಯಸು ಮತ್ತು ಮನಸು
ಯಶವಂತ ಚಿತ್ತಾಲರ 'ಕತೆಯಾದಳು ಹುಡುಗಿ’ ಯನ್ನು ಒಂದೇ ರಾತ್ರಿ (ರಾತ್ರಿ ೯ ರಿಂದ ೩ ರ
ವರೆಗೆ) ಒಂದೇ ಗುಕ್ಕಿನಲ್ಲಿ ಓದಿದಾಗ ನನಗೆ ಹದಿನೇಳೋ ಹದಿನೆಂಟೋ ವರ್ಷ. ಈಗದೆಲ್ಲ
ನೆನಪಾಗುತ್ತಿರುವುದು ಹದಿನೇಳೋ ಹದಿನೆಂಟೋ ವರ್ಷದ ನಂತರ ಮತ್ತೆ ಅವರ ’ಐವತ್ತೊಂದು
ಕತೆಗಳು’ ಓದಿದಾಗ.
ಸಸಿಯಿದ್ದಾಗ, ಒಂದೆರೆಡು ದಿನ ನೀರಿಲ್ಲದಿದ್ದರೆ ಸತ್ತೇ ಹೋಯಿತೇನೋ ಎಂಬಂತೆ
ಬಾಡಿದ್ದು, ನೀರು-ಎಳೆಬಿಸಿಲು ಬಿದ್ದ ಮರುದಿನ ನಳನಳಿಸಿ ಅರ್ಧ ಇಂಚು ಬೆಳೆದು ಎರೆಡು
ಹೊಸ ಎಲೆ ಚಿಗುರಿ ನಿಂತಿರುತ್ತೆ. ಅದೇ ಸಸಿ ಬೆಳೆದು ಮರವಾದಾಗ, ಒಂದು ಋತು ಪೂರ್ತಿ ಮಳೆ
ಇಲ್ಲದಿದ್ದರೇನಂತೆ, ಒಂದು ಋತು ಪೂರ್ತಿ ಮಳೆ ಹೊಯ್ದರೇನಂತೆ, ತನಗೇನೂ ಆಗಿಲ್ಲವೆಂಬಂತೆ
ಮೆಲ್ಲಗೆ ಅಲುಗಾಡುತ್ತೆ.
ಆಗಲೂ ಅಷ್ಟೇ, ಅಷ್ಟೂ ಕತೆಗಳನ್ನು ಓದಿ ಮುಗಿಸಿದಾಗ ಕಣ್ಣು ನಿಚ್ಚಳ ಎಚ್ಚರ, ಮನಸ್ಸು
ಪ್ರಕ್ಷುಬ್ದ! ಈಗ ಅಷ್ಟು ಕತೆಗಳನ್ನು ಇನ್ನೊಮ್ಮೆ ಓದಿದ್ದು ರಾತ್ರಿಗೊಂದು ಕತೆ, ಆಮೇಲೆ
ಘೋರ ನಿದ್ದೆ!!
ವಯಸ್ಸಾದಂತೆ, ಮನಸ್ಸು ತನ್ನ ತೀವ್ರತೆಯನ್ನು ತಾನೇ ತಾನಾಗಿ ಕಳೆದುಕೊಂಡು,
ಬರುವುದನ್ನು ಬಂದಂತೆ ಸ್ವೀಕರಿಸುವ ಸ್ಥಿತಪ್ರಜ್ನತೆಗೆ ಜಾರುತ್ತೋ ಏನೋ; ಅಥವಾ ನಾನು ಆ
ಕತೆಗಳನ್ನು ಆಗಲೇ ಓದಿ ಅನುಭವಿಸಿ ಆಗಿದ್ದರಿಂದ ಈಗ ಯಾವ ಪರಿಣಾಮವನ್ನು ಮಾಡಲಿಲ್ಲವೇನೋ;
ಯಾಂಬಲ್ಲ!
ನೀವೇ ಯೋಚಿಸಿ, ಒಂಬತ್ತನೇ ಕ್ಲಾಸಿನಾಲ್ಲಿದಾಗ ನೀವು ಇಷ್ಟಪಡುವ ಹುಡುಗಿಯ ಮನೆ ಮುಂದೆ
ಹಾದುಹೋಗುತ್ತಿದ್ದರೇ ಸಾಕು, ನಿಮ್ಮ ಹೃದಯ ಬಾಯಿಗೆ ಬರುತ್ತಿರಲಿಲ್ಲವೇ? ಈಗ ನೀವು ಒಲಿದ
ಹೆಣ್ಣು ಮದುವೆಯಾಗಿ ಪಕ್ಕದಲ್ಲಿದ್ದರೂ ರಿಮೋಟ್ ಮೇಲೆ ಕೈಯಿಟ್ಟು ಸುಮ್ಮನೇ ಟಿವಿ ನೋಡುವ
ಉದಾಸೀನತೆ!
ಟೀನೇಜಿನ ಹದಿಹರೆಯದ ಕಾತರ, ರೋಮಾಂಚನ, ಹುಂಬತನ, ಕುಚೋದ್ಯತನ,
ರೋಮ್ಯಾಂಟಿಸಂಗಳೆಲ್ಲ ಓದು-ನೌಕರಿ-ಮನೆ-ಕಾರು-ಲೋನುಗಳಲ್ಲಿ ಕರಗಿ ಹೋಗುತ್ತಿವೆಯೇ; ಅಥವಾ
ಈಗಿನ ಮನಸ್ಥಿತಿಯನ್ನು ಕೇವಲ ವಯಸ್ಸಿಗೆ ಆರೋಪಿಸಿ ಸುಮ್ಮನಾಗಬಹುದೇ?