ವರುಷತೊಡಕಿನ ದಿನ
ಯುಗಾದಿಯಂಥ ವರ್ಷಾವಧಿ ಹಬ್ಬದ ಮರುದಿನವನ್ನ ವರ್ಷತೊಡಕಿನ ದಿನ ಅಂತ ಕರೆಯೋ ರೂಢಿ. ಚಿಕ್ಕವನಿರುವಾಗ, ಈ ವರ್ಷತೊಡಕಿನ ದಿನ ಏನು ಮಾಡಿದರೆ, ವರ್ಷವಿಡೀ ಅದನ್ನೇ ಮತ್ತೆ ಮತ್ತೆ ಮಾಡ್ತಿರ್ತೇವೆ ಅಂತ ಮನೆಯಲ್ಲಿ ಹೇಳುತ್ತಿದ್ದರು. ಅಂದ್ರೆ ಆ ದಿನ ಸಿನೆಮಾಗೆ ಹೋಗೋದು ಇತ್ಯಾದಿ ಚಟುವಟಿಕೆಗಳು ಮನ್ನಾ. ಒಂದು ಸ್ವಲ್ಪವಾದರೂ ಓದಿ ಬರೆದು ಮಾಡಿ ಅಂತ ಮನೆಯಲ್ಲಿ ಅಪ್ಪಣೆ ( ಬೇಸಿಗೆಯ ಪರೀಕ್ಷೆ ಒಂದು ವೇಳೆ ಕಳೆದು ಹೋಗಿದ್ದರೂ ಕೂಡ)!
ಈಗ ಜನವರಿ ಒಂದನೇ ತೇದಿ ಕೂಡ ವರ್ಷಾರಂಭವಾದ್ದರಿಂದ, ಇವತ್ತು, ಎರಡನೇ ತಾರೀಕನ್ನ ವರ್ಷತೊಡಕು ಅಂತ ಕರೆದರೂ ತಪ್ಪಿಲ್ಲವೇನೋ. ಇವತ್ತು ಏನನ್ನೋ ನೋಡುತ್ತಿದ್ದಾಗ ವಿದ್ಯಾಕರನ ಸುಭಾಷಿತ ರತ್ನಕೋಶವೆಂಬ ಪುಸ್ತಕವೊಂದು ದೊರೆತಿತು. ಜೈ ಗೂಗಲೇಶ್ವರ! ಕೆಲವು ಪದ್ಯಗಳನ್ನ ಓದಿದೆ. ಒಂದು ಪದ್ಯವನ್ನ ಅನುವಾದಿಸಬೇಕೆನ್ನಿಸಿ ಮಾಡಿದೆ. ಅದು ಹೀಗಿದೆ ನೋಡಿ.
ಅರರೆ! ಅದೆಂತಹ ನಿಪುಣತೆಯು
ಬಿಲ್ಗಾರಿಕೆಯಲಿ ಮದನನದು
ಬಿಟ್ಟಿರೆ ಬಾಣವು ಮೈಮೇಲೆ
ತಗುಲದೆ ಒಳಮನ ಸೀಳುವುದು!
ಸಂಸ್ಕೃತ ಮೂಲ: (ಪದ್ಯ 330, ವಿದ್ಯಾಕರನ ಸುಭಾಷಿತ ರತ್ನಕೋಶದಿಂದ)
ಅಹೋ ಧನುಷಿ ನೈಪುಣ್ಯಂ ಮನ್ಮಥಸ್ಯ ಮಹಾತ್ಮನಃ
ಶರೀರಂ ಅಕ್ಷತಂ ಕೃತ್ವಾ ಭಿನ್ನತಿ ಅಂತರ್ಗತಂ ಮನಃ ||
अहो धनुषि नैपुण्यं मन्मथस्य महात्मनः ।
शरीरं अक्षतं कृत्वा भिनत्ति अन्तर्गतं मनः । ।
ಈಗ ವರುಷತೊಡಕಿನ ಮಹಿಮೆಯಿಂದ ಈ ರೀತಿಯ ಕೆಲಸಗಳನ್ನೇ ಮತ್ತೆ ಮತ್ತೆ ಮಾಡುವಂತೆ ನಿಜಕ್ಕೂ ಆದರೆ, ಅದು ನನಗೆ ಸಂತಸವನ್ನೇ ತರುವುದೆಂದು ಮತ್ತೆ ಹೇಳಬೇಕಾದ್ದೇ ಇಲ್ಲ!
-ಹಂಸಾನಂದಿ
ಕೊ: ಸ್ವಲ್ಪ ಇದೇ ರೀತಿ ಮನ್ಮಥನ ಬಾಣ ಬಿಡುವ ಕುಶಲತೆಯ ಬಗ್ಗೆ ಹಿಂದೊಮ್ಮೆ ಬರೆದಿದ್ದೆ.
ಚಿತ್ರ ಕೃಪೆ: ವಿಕಿಪೀಡಿಯಾ
Comments
ವರುಷತೊಡಕು ನಮ್ಮ ಊರ ಕಡೆ ಯುಗಾದಿ,
ವರುಷತೊಡಕು ನಮ್ಮ ಊರ ಕಡೆ ಯುಗಾದಿ, ದಸರಾ, ಗಣೇಷ ಹಬ್ಬದ ನ೦ತರದ ದಿನ ನಡೆಯುತ್ತದೆ. ಅ೦ದು ಮಾ೦ಸದ ಊಟ ಮಾಡುತ್ತಾರೆ. ಆದರೆ ಇದು ಯಾಕೆ ಈ ಹಬ್ಬಗಳಲ್ಲಿ ಮಾತ್ರ? ಇದರ ಉದ್ದೇಶ ಏನು? ಅನ್ನುವುದು ಮಾತ್ರ ಗೊತ್ತಿಲ್ಲ.. ನಿಮಗೇನಾದರೂ ಗೊತ್ತಿದೆಯಾ?
In reply to ವರುಷತೊಡಕು ನಮ್ಮ ಊರ ಕಡೆ ಯುಗಾದಿ, by spr03bt
ವರುಷದ ಮೊದಲದಿನದ ಮರುದಿನ
ವರುಷದ ಮೊದಲದಿನದ ಮರುದಿನ ತಿಂದುಂದು ಸಂತಸದಿಂದ್ದಿದ್ದರೆ ವರ್ಷ ಪೂರ್ತಿ ಸಂತಸದಿಂದಿರುವೆವು ಎನ್ನುವ ನಿರೀಕ್ಶ, ಆಸೆ ಅಷ್ಟೆ
ಉಗಾದಿಯ ಮರುದಿನ ವರುಶದ ತೊಡಕು, ಆದರೆ ದಸರಾ ಗಣೇಶನದು ಗೊತ್ತಿಲ್ಲ.
ಹಿಂದೆಲ್ಲ ಹಬ್ಬದ ದಿನ, ಮದುವೆಗಳಲ್ಲಿ ಸಾಮಾನ್ಯವಾಗಿ ಮಾಂಸದ ಊಟ ಮಾಡುತ್ತಿರಲಿಲ್ಲ ಹಿಂದೆಲ್ಲ , ಹಾಗಾಗಿ ಅಂತಹ ಸಂಭ್ರಮದ ಮರುದಿನ ಮಾಂಸದೂಟ ಮಾಡುವ ಪದ್ದತಿ ಇತ್ತು ಅನ್ನಿಸುತ್ತೆ.
ನಿಮ್ಮ ಆನುವಾದ ಬಹಳ ಚೆನ್ನಗಿದೆ
ನಿಮ್ಮ ಆನುವಾದ ಬಹಳ ಚೆನ್ನಗಿದೆ ಹoಸಾನoದಿಯವರೆ. ಅಪ್ಲೋಡ್ ಮಾಡಿರುವ ಚಿತ್ರವೂ ಚೆನ್ನಾಗಿದೆ. ಚಿತ್ರ ಅಪ್ ಲೋಡ್ ಮಾಡುವುದು ಹೇಗೆ ಎoದು ತಿಳಿಸುವಿರಾ?