ವರ್ಣಭೇದ ಈಗ ಕ್ರಿಕೆಟ್‍ನಲ್ಲೂ

ವರ್ಣಭೇದ ಈಗ ಕ್ರಿಕೆಟ್‍ನಲ್ಲೂ

ಭಾರತೀಯ ಮಾಧ್ಯಮಗಳು ಮತ್ತು ಅವು ಬಿತ್ತರಿಸುವ ಅಂತರ್ರಾಷ್ಟ್ರೀಯ ವರದಿಗಳನ್ನು ಬಿಟ್ಟರೆ ಮಿಕ್ಕವರು ಸುಮಾರು ಜನ ಭಾರತೀಯ ತಂಡವನ್ನು, ಹರ್ಭಜನ್ ಸಿಂಗ್‍ರನ್ನು ವಿಶೇಷ ಪದಗಳಿಂದ ಬಯ್ಯುತ್ತಿದ್ದಾರೆ. ನಮ್ಮ ಕ್ರಿಕೆಟ್ಟಿಗರೂ ರೇಸಿಸ್ಟ್ ಭಾಷೆ ಬಳಸುತ್ತರೆಯೇ ಎಂಬು ಸಣ್ಣ ಅನುಮಾನ ನಮ್ಮ ಹೃದಯದಲ್ಲೂ ಹುಟ್ಟಿದೆ. ಕ್ರಿಕೆಟ್ಟಿನ ನೆಪದಲ್ಲಾದರೂ ಭಾರತೀಯರು ರೇಸಿಸಂ ಬಗ್ಗೆ ಗಹನವಾಗಿ ಯೋಚಿಸುತ್ತಿರುವುದನ್ನು ನೋಡಿದರೆ ಖುಷಿಯಾಗುತ್ತದೆ. ನಾವೇ ಶೋಷಿತರಾಗ್ಯೂ ನಮ್ಮ ಮಾತನ್ನು ಬೇರೆಯವರು ನಂಬದೇ ನಮ್ಮನ್ನೆ ಆರೋಪಿಸಿದರೆ ಹೇಗೆನ್ನಿಸಬಹುದೆಂದು ಈಗಲಾದರೂ ನಾವು ತಿಳಿಯಬಹುದೇನೊ. ದಲಿತರ ಬಗ್ಗೆಯೋ ಗಿರಿಜನರ ಬಗ್ಗೆಯೋ ವಿಕಲಾಂಗರ ಬಗ್ಗೆಯೋ ಅಥವ ಹೆಣ್ಣಿನ ಬಗ್ಗೆಯೋ ನಾವು ಕೇವಲವಾಗಿ ಮಾತಾಡುವಾಗ ಈ ಘಟನೆಗಳನ್ನು ನೆನಪಿಸಿಕೊಳ್ಳುತ್ತಿದ್ದರೆ ನಾವುಗಳು ನಮ್ಮ ಮನಸ್ಸನ್ನು ಶುದ್ಧೀಕರಿಸಿಕೊಳ್ಳಬಹುದೇನೋ.

ಬಿ.ಬಿ.ಸಿ, ಸಿ.ಎನ್.ಎನ್ ಮುಂತಾದ ವಿದೇಶಿ ಪ್ರಸಾರಗಳಲ್ಲಿ ಬಿಳಿ ಜನರು ಹರ್ಭಜನ್ ಸಿಂಗ್‍ರ ವರ್ತನೆಯನ್ನು (ಅದನ್ನು ಅವರು ಮಾಡಿದ್ದೇ ಆದರೆ ಎಂಬ ಕ್ಲಾಸ್ ಸೇರಿಸಿ) ತೀವ್ರವಾಗಿ ಖಂಡಿಸಿದರು. ನಿಯಮದಂತೆ ಹರ್ಭಜನ್ ಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಒತ್ತಿ ಒತ್ತಿ ಹೇಳಿದ್ದನ್ನು ಟೀವಿಯಲ್ಲಿ ನೋಡಿದೆ. ಇತರರ ವಿಷಯ ಬಂದಾಗ ಹೀಗೆ ವರ್ಭಭೇದದ ವಿರುದ್ಧ ನಿಲುವನ್ನು ನಿರ್ದಾಕ್ಷಿಣ್ಯವಾಗಿ ಇವರು ತೆಗೆದುಕೊಳ್ಳುವುದು ಹೊಸದೇನಲ್ಲ ಬಿಡಿ. ಆದರೆ ಇವರ ಇತ್ತೀಚಿನ ಶತಮಾನಗಳ ವರ್ತನೆಯನ್ನು ಸುಮ್ಮನೆ ಒಮ್ಮೆ ನೆನಪಿಸಿಕೊಳ್ಳುವ.

ಭಾರತವನ್ನೊಳಗೊಂಡಂತೆ ಜಗತ್ತಿನ ಬಹುಭಾಗದ ಜನರ ಮೇಲೆ ವರ್ಣಭೇದ ನೀತಿ, ಅಮಾನುಷ ವರ್ತನೆ, ಧಗೆ, ಮೋಸ ದಬ್ಬಾಳಿಕೆ ಇತ್ಯಾದಿಗಳನ್ನು ಮೂರು-ನಾಲ್ಕು ಶತಮಾನಗಳ ತನಕ ಎಸಗಿದ್ದು ಇವರೆ. ಜಪಾನಿನ ಮೇಲೆ (ಜರ್ಮನಿಯನ್ನು ಬಿಟ್ಟು) ಅಣುಬಾಂಬ್ ಉಡಾಯಿಸಿದ್ದೂ ಇವರೆ. ತಾವು ಮನಬಂದಂತೆ ಭೂಮಿಯನ್ನು ಬಗೆದು, ಇಂಧನಕ್ಕೆ ಉಪಯೋಗಿಸಿ ಮಾರಕ ಅನಿಲಗಳನ್ನು ಆಕಾಶಕ್ಕೆ ಹೊರಸೂಸಿದ್ದೂ ಇವರೆ. ಆದರೆ ಇವೆಲ್ಲ ತಪ್ಪಲ್ಲ. ಅಪರಾಧಗಳಲ್ಲ. ಅಲ್ಲ... ಆ ಕಾಲಕ್ಕೆ ಇವುಗಳ ವಿರುದ್ಧ ನಿಯಮಗಳಿರಲಿಲ್ಲವಲ್ಲ, ಅದಕ್ಕೆ ಇವರು ಮಾಡಿದಾಗ ಇವ್ಯಾವುದಕ್ಕೂ ಶಿಕ್ಷೆಯಿಲ್ಲ. ಆದರೆ ಇನ್ನು ಮುಂದೆ ನಾವುಗಳು ಮಾತ್ರ ಈ ತರಹ ಮಾಡುವಂತಿಲ್ಲ ಅಷ್ಟೆ.

ಮಜ ಎಂದರೆ, ಬಿಳಿ ಜನ ಜಗಳ ಮಾಡುವುದಕ್ಕೆ ಆಯ್ಕೆ ಮಾಡಿಕೊಳ್ಳುವ ಘಟನೆಗಳು. ತಮ್ಮ ಉಡುಪು ಧರಿಸುವ ವೈಖರಿಯಿಂದಲೇ ಶೋಷಣೆಗೆ ಹಲವು ಬಾರಿ ತುತ್ತಾಗಿರುವ ಕೋಮಿನ ಒಬ್ಬ ಮನುಷ್ಯ, ಗುಲಾಮಗಿರಿಗೆ ತಳ್ಳಲ್ಪಟ್ಟ ಮತ್ತೊಂದು ಕೋಮಿನ ಮನುಷ್ಯನ ವಿರುದ್ಧ ಅವಹೇಳನಕಾರಿಯಾಗಿ ಮಾತಾಡಿದ ಎಂಬ ಕಾರಣಕ್ಕಾಗಿ ಇಷ್ಟು ದೊಡ್ಡ ಗಲಾಟೆ ಬಿಳಿ ಜನರದ್ದು. ಹರ್ಭಜನ್ ಮತ್ತು ಸೈಮಂಡ್ಸ್ ಇಬ್ಬರ ಕೋಮಿನ ವಿಷಯದಲ್ಲೂ ತಪ್ಪು ಮಾಡಿ, ಶಿಕ್ಷೆಯಿಲ್ಲದೇ ಪರಾರಿಯಾಗಿದ್ದ ಬಿಳಿ ಮಂದಿ ಈಗ ಇವರ ಮಧ್ಯ ನ್ಯಾಯ ಮಾಡಲು ಉತ್ಸುಕರಾಗಿ ಮುಂದಾಗಿರುವುದು ನಿಮ್ಮನ್ನು ಕಿಚಾಯಿಸುವುದಿಲ್ಲವೇ.
ಅದು ಹೋಗಲಿ, ಅಲ್ಲಾರಿ ಸೈಮಂಡ್ಸ್, ನಿಮ್ಮಷ್ಟೇ ಕಪ್ಪಗಿರುವ ಮತ್ತೊಬ್ಬ ಮನುಷ್ಯ ನಿಮ್ಮನ್ನು ಮಂಗ ಅಂದರೆ ನಿಮಗೆ ಇಷ್ಟು ಬೇಜಾರಾಯ್ತು. ತಡ್ಕೊಳಕ್ಕೇ ಆಗ್ಲಿಲ್ಲ. ನಿಮ್ಮ ತಂಡದ ಆಟಗಾರರ ಪೂರ್ವಜರು ನಿಮ್ಮ ಜನಾಂಗವನ್ನು ನಡೆಸಿಕೊಂಡ ರೀತಿಯ ಬಗ್ಗೆ ನಿಮಗೇನು ಸಿಟ್ಟೇ ಇಲ್ವೆ? ಅವರು ಮಾಡಿದ್ದು ತಪ್ಪಲ್ವೆ? ಇನ್ನೂ ಅವರ ಜೊತೆಗೇ ಇದ್ದುಕೊಂಡು ಅವರ ಒಟ್ಟಿಗೆ ಅದ್‍ಹೇಗ್ರಿ ಆಟ ಆಡ್ತೀರ?

ಆಸ್ಟ್ರೇಲಿಯಾದಲ್ಲಿ ಆಡುವುದು ಕ್ರಿಕೆಟ್ ಅಲ್ಲ. ಅದರ ತರಹವೇ ಇರುವ ಮತ್ತೊಂದು ಆಟ: ಇದು ವಿ. ಇ. ಕ್ರಿಕೆಟ್ (ವಿವೇಚನೆ ಇಲ್ಲದ ಕ್ರಿಕೆಟ್). ಹಂಗೆ ನೋಡ್ತಾ ಹೋದ್ರೆ ಇವೆಲ್ಲವೂ ಬಿಳಿಜನರ ಧೂರ್ತತೆಗೆ ಹಿಡಿದ ಕನ್ನಡಿ, ಇಷ್ಟೆಲ್ಲಾ ಗೊತ್ತಿದ್ದು ನಾವುಗಳು ಕೇವಲ ಆಸ್ಟ್ರೇಲಿಯ ಸೀರೀಸ್ ಬಹಿಷ್ಕರಿಸುತ್ತೇವೆ ಅಂತ ಹೇಳೋದು ಕೂಡ ಡೋಂಗಿತನವೇ. ನಾವು ಈ ದುರುಳರ ವಿರುದ್ಧ ನಿಜವಾಗಿಯೂ ಏನಾದ್ರೂ ಕ್ರಾಂತಿಕಾರಿ ಹೆಜ್ಜೆ ಇಡಬೇಕು ಅಂದ್ರೆ ಈ ಬಿಳಿಜನ ಕಂಡುಹಿಡಿದ ಕ್ರಿಕೆಟ್ ಎಂಬ ಆಟವನ್ನೇ ಬಹಿಷ್ಕರಿಸಬೇಕು; ಅಥವ ಈ ಬಿಳಿಯರನ್ನೇ ಈ ಆಟದಿಂದ ಬಹಿಷ್ಕರಿಸಬೇಕು.

Rating
No votes yet

Comments