(ವರ್ಷದ) ಕೊನೆಯ ಕೊಸರು

(ವರ್ಷದ) ಕೊನೆಯ ಕೊಸರು

ಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ ಹಾಗೆ ಮಾಡ್ಬಿಟ್ಟಿವೆ. ಈಚೀಚೆಗೆ, ಈ ಕೊಸರಿಗೆ ಅಡಿಟಿಪ್ಪಣಿ, ಅನ್ನೋ ಹೊಸ ಅರ್ಥ ಬಂದು ಸ್ವಲ್ಪ ಅದು ಕೆಲವೆಡೆಲ ನಲಿದಾಡ್ತಿದೆ ಅನ್ನಿ. ವರ್ಷದ ಕೊನೆಯ ಈ ದಿವಸ ಏನಾದ್ರೂ ಬರೀಬೇಕು ಅಂದ್ರೆ, ಸರಕು-ಸಮಯು ಎರಡೂ ಇರ್ಬೇಕಲ್ವ? ಇಲ್ದೇ ಇದ್ರೆ? ತೊಂದ್ರೆ ಏನಿಲ್ಲ. ಮಿಕ್ಕಿದ್-ಹಕ್ಕಿದ್ದೆಲ್ಲ ಅಕ್ಕಮ್ಮನ ಪಾಲು ಅನ್ನೋ ಗಾದೆ ಹಾಗೆ, ಏನಾದ್ರೂ ಉಳ್ದಿದೆಯಾ ನೋಡ್ಬೇಕು. ಅಷ್ಟೆ.

ಅಕ್ಕಮ್ಮ ಹಾಗಿರ್ಲಿ. ಈ ೨೦೦೭ ನೇ ವರ್ಷ ಮುಗಿಯೋ ಈ ದಿವಸ ಒಂದು ವಿಷಯ ಹೇಳ್ಬಿಡ್ತೀನಿ. ನಮ್ಮಲ್ಲಿ ಹಲವಾರು ಪಂಚಾಂಗಗಳಿವೆ (calendar). ಸೌರಮಾನ -ಚಾಂದ್ರಮಾನ-ಮುಸ್ಲಿಮ್ - ಚೈನೀಸ್ ಅಂತ. ಎಲ್ಲಾ ಪಂಚಾಂಗಗಳೂ ಆಕಾಶದ್ ಜೊತೆ ಒಂದಲ್ಲ ಒಂದ್ರೀತಿ ತಾಳೆ ಹಾಕ್ಬಿಟ್ಟೇ ಹೊಸ ವರ್ಷ ಶುರು ಮಾಡತ್ತ್ವೆ. ಆದ್ರೆ, ಈ ಜನವರಿ ಒಂದಕ್ಕೆ ಶುರುವಾಗೋ ಈ ಗ್ರಿಗೋರಿಯನ್ ಪಂಚಾಂಗ ಮಾತ್ರ, ಆ ತರಹ ಯಾವ ಕಟ್ಟೂ ಇಲ್ದೆ, ಸುಮ್ಮನೆ ಯಾವ್ದೋ ಒಂದು ದಿನದಿಂದ ಶುರುವಾಗಿಬಿಡತ್ತೆ ಹಾಳಾದ್ದು! ಇಲ್ದೇ ಇದ್ರೆ, ಹತ್ತನೆ ತಿಂಗ್ಳು ಅನ್ನೋ ಅರ್ಥ ಡಿಸೆಂಬರ್ ಅನ್ನೋ ಹೆಸರಲ್ಲೇ ಬರೋವಾಗ, ಅದು ಮುಗಿದ್ಮೇಲೆ ಬರೋ ಜನವರಿ ಮೊದಲ್ ತಿಂಗ್ಳಾಗಕ್ಕೆ ಹೇಗಾಗ್ತಿತ್ತು ಹೇಳಿ?

ವರ್ಷ ಮುಗ್ಯೋವಾಗ ಹಿಂತಿರುಗಿ ನೋಡೋರು ಕೆಲವ್ರು; ನಾಳೆ ಹೊಸ ವರ್ಷ ಬರತ್ತಲ್ಲಾ ಅಂತ ಮುಂದಿನ ಲೆಕ್ಕಾಚಾರ ಹಾಕೋರು ಇನ್ನೊಂದಷ್ಟು ಜನ. ಎಲ್ಲ ಬರೀ ನಮ್ಮಂಥ ನರಮನುಷ್ಯರು. ಇವ್ರೆಲ್ಲರ ನಡುವೆ, ಇದೂ ಯಾವತ್ತಿನ ತರಹವೆ ಇನ್ನೊಂದು ದಿವ್ಸ ಅಂತ ಸುತ್ತೋ ಸೂರ್ಯ ಚಂದ್ರ ಭೂಮಿ - ರಾಹು ಕೇತು - ಧೂಮಕೇತುಗಳೆಲ್ಲ ಅವುಗಳ ಪಾಡಿಗವು ಸುತ್ತುತಾನೇ ಇರತ್ವೆ, ಪಾಪ!

ಅಲ್ಲೆ ಇನ್ನೊಂದು ಕೊನೆ ಕೊಸ್ರು ನೆನಪಾಯ್ತು.

ಚಕ್ರವತ್ಪರಿವರ್ತಂತೇ ದುಃಖಾನಿ ಚ ಸುಖಾನಿ ಚ

ಸುಖವೂ ದುಃಖವೂ ಚಕ್ರದಂತೆ ಮತ್ತೆ ಮತ್ತೆ ಸುತ್ತಿ ಬರ್ತಾ ಇರತ್ವೆ. ಹೇಗೆ ಚಕ್ರ ಒಂದ್ಕಡೆ ನಿಲ್ಲದೆ ತಿರುಗ್ತಿರತ್ತೋ, ಹಾಗೇ, ದುಃಖವೇ ಆಗ್ಲೀ, ಸುಖವೇ ಆಗ್ಲೀ ಶಾಶ್ವತವಲ್ಲ - ಅನ್ನೋದನ್ನ ಈ ಮಾತು ಎತ್ತಿ ಹೇಳ್ತಿದೆ. ಹೊಸ ವರ್ಷದಲ್ಲಿ, ಇದನ್ನ ನಾವು ಮರೆಯೋದು ಬೇಡ ಅಲ್ವಾ? ಆಗ ಎಡರು ತೊಡರು ಬಂದಾಗ, ಮುನ್ನುಗ್ಗೋ ಎದೆಗಾರಿಕೆ ಬೆಳೆಯತ್ತೆ., ಸಂತೋಷ ಸಿಕ್ಕಾಗ ನನಗೇನೂ ಕಡಿಮೆಇಲ್ಲ ಅನ್ನೋ ಅಹಂಕಾರ ಮುತ್ಕೋಳೋದಿಲ್ಲ. ಅಲ್ವಾ? ಹಳೇ ಭಾಷೆ, ಸತ್ತ ಭಾಷೆಯಲ್ಲಿ ಹೇಳಿರೋದು, ಇದನ್ನು ಓದೋದೇನು, ಕೇಳೋದೇನು ಅಂತ ದೂರ ತಳ್ಬೇಡಿ ಸ್ವಾಮಿ. ಎಷ್ಟೋ ಹಳೇ ನೆನಕೆಗಳು, ಚಿಂತನೆಗಳು ಈ ಭಾಷೇಲಿವೆ. ನಮ್ಮ ತಾಯಿಯನ್ನ ಬೀದಿಗೆ ಕಳಿಸಿ ಕಂಡೋರಿಗೆ ಮಣೆ ಹಾಕಿ ಉಪಚಾರ ಮಾಡೋದು ಬೇಡ. ಆದ್ರೆ, ಕಂಡೋರಲ್ಲಿ ಒಳ್ಳೇ ವಿಷ್ಯ ಇದ್ರೆ, ಅದನ್ನ ಅರಿತು ಅಳವಡಿಸಿಕೊಳ್ಳೋಣ. ಏನಂತೀರಾ?

"ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತ:" - ಋಗ್ವೇದ ೧-೮೯-೧

"ಒಳ್ಳೇ ವಿಷಯಗಳು, ಯೋಚನೆಗಳು ವಿಶ್ವದಲ್ಲೆಲ್ಲೆಡೆಯಿಂದ ನಮ್ಮತ್ತ ಬರಲಿ"

"Let good thoughts come to us from all directions"

ಹೊಸ ವರ್ಷ ಎಲ್ಲರಿಗೂ ಸಂತೋಷವಾಗಿರ್ಲಿ ಅನ್ನೋ ಆಸೆ ನನ್ನದು. ಹೊಸ ವರ್ಷದಲ್ಲಿ ಮತ್ತೆ ಸಿಗೋಣ್ವಾ?

-ಹಂಸಾನಂದಿ

 

Rating
No votes yet

Comments