' ವಸಂತದಲ್ಲಿ ಹಾಡು ನಿಲ್ಲಿಸಿದ ಕೋಗಿಲೆ '
ಅಂಬೇಡ್ಕರ್ ಜಯಂತಿಯ ದಿನವಾದ ಎಪ್ರೀಲ್ 14 ಮಧ್ಯಾನ್ಹ 1 ಗಂಟೆಗೆ ತೀವ್ರವಾದ ಹೃದಯಾಘಾತದಿಂದ ನಿಧನರಾದ ಕಂಚಿನ ಕಂಠದ ಕನ್ನಡ ಚಲನಚಿತ್ರ ಲೋಕದ ಗಾನಲೋಲ ಎಂದು ಖ್ಯಾತರಾದ ಜನಪ್ರಿಯ ಹಿನ್ನೆಲೆ ಗಾಯಕರಾದ ಪಿ.ಬಿ.ಶ್ರೀನಿವಾಸ ಈ ಲೋಕ ತ್ಯಜಿಸಿ ಹೋದರು. ಹುಟ್ಟು ಅಕಸ್ಮಿಕ ಸಾವು ನಿಶ್ಚಯ ಎಂಬ ವಿಧಿತತ್ವ ನಮಗೆ ಗೊತ್ತಿದ್ದರೂ ಹಲವು ಸಾವುಗಳು ನಮಗೆ ಬರ ಸಿಡಿಲಿನಂತೆ ಬಂದೆರಗುತ್ತವೆ. ನಮ್ಮನ್ನು ಆಘಾತಕ್ಕೆ ತಳ್ಳುತ್ತವೆ. ಜನಪ್ರಿಯ ನಟರ ಸಾವು, ಸಮಾಜಮುಖಿ ಚಿಂತಕರ, ನಮ್ಮ ಪ್ರೀತಿ ಪಾತ್ರರ ಸಾವು ನಮ್ಮಲ್ಲಿ ವಿಷಾದ ಹುಟ್ಟು ಹಾಕುತ್ತವೆ. ಪಿ.ಬಿ.ಎಸ್ ರವರ ಸಾವು ಅಂತಹುದೆ ಒಂದು ವಿಷಾದ ಭಾವವನ್ನು ಅವರ ಆರಾಧಕರಲ್ಲಿ ತಂದಿರು ವುದರಲ್ಲಿ ಯಾವುದೆ ಸಂಶಯವಿಲ್ಲ.
ಅವರು ಈಗ ಚಾಲ್ತಿಯಲ್ಲಿಲ್ಲದಿದ್ದ ಒಬ್ಬ ಹಿನ್ನಲೆ ಗಾಯಕ. ಹೊಸ ಪೀಳಿಗೆಗೆ ಅವರದೆ ಜಮಾನಾದ ಸಾಧಕರ ಬಗ್ಗೆ ಒಲವಿರುತ್ತದೆ. ಈಗ ಚಲನಚಿತ್ರ ರಂಗದ ಸಂಗೀತ ಲೊಕವನ್ನೆ ತೆಗೆದು ಕೊಂಡರೆ ಅದರಲ್ಲಿ ಸಾಕಷ್ಟು ಬದಲಾವಣೆ ಯಾಗಿದೆ. ಸಂಗೀತ ತನ್ನ ಮಾಧುರ್ಯ ಗುಣವನ್ನು ಕಳೆದುಕೊಂಡು ಅಬ್ಬರದ ಸಂಗೀತ ವಾಗುತ್ತಿದೆ ಇದು ಸಹಜವೆ. ಆದರೆ ಏಕ ಪ್ರಕಾರವಾಗಿ ಕಳೆದ ಶತಮಾನದ ಕೊನೆಯ ನಾಲ್ಕು ದಶಕಗಳ ಕಾಲ ಕನ್ನಡ ಚಿತ್ರರಂಗದ ಗಾನ ಸಮ್ರಾಟನಾಗಿ ಮೆರೆದ ಪಿ.ಬಿ.ಶ್ರೀನಿವಾಸ ನೆನಪಿನ ಮರೆಗೆ ಸರಿದು ಹೋಗಿ ಬಿಡಬಹುದಾದ ಗಾಯಕನಲ್ಲ. ಉತ್ತಮ ಹಿನ್ನೆಲೆ ಗಾಯಕನೆಂಬ ಅಭಿದಾನದ ಹೊರತಾಗಿಯು ತಮ್ಮ ಸಾಮಾನ್ಯ ಬದುಕಿನಲ್ಲಿ ಮತ್ತು ವೃತ್ತಿ ಜಿವನದಲ್ಲಿ ಅವರೊಬ್ಬ ಮಾನವಂತ, ಹೃದಯ ಸಂಸ್ಕಾರ ಹೊಂದಿದ ಜೊತೆಗೆ ಉನ್ನತಾದರ್ಶಗಳು ಒಂದೆಡೆ ಮುಪ್ಪುರಿಗೊಂಡ ಸೃಷ್ಟಿಕರ್ತನ ಒಂದು ಅಪರೂಪದ ಸೃಷ್ಟಿ. ಅಂತಹವರನ್ನು ದೇವರು ವಿರಳವಾಗಿ ಸೃಷ್ಟಿಸುತ್ತಾನೆ. ಹೀಗಾಗಿ ಪಿ.ಬಿ. ಯವರ ಸಾವು ನಮ್ಮನ್ನು ಖಿನ್ನರನ್ನಾಗಿಸುತ್ತದೆ.
ಅವರ ಆದರ್ಶಗುಣಗಳಿಗಾಗಿ ಒಂದು ಉದಾಹರಣೆಯನ್ನು ಕೊಡುವುದಾದರೆ ಒಂದು ಘಟನೆಯ ಉಲ್ಲೇಖ ಇಲ್ಲಿ ಪ್ರಸ್ತುತವೆನಿಸುತ್ತದೆ. ' ರಾಜಕುಮಾರ ಶರೀರವಾದರೆ ಪಿ.ಬಿ.ಶ್ರೀನಿವಾಸ ಅವರ ಶಾರೀರ ' ವೆನ್ನುವಷ್ಟು ಅವರ ಹಿನ್ನೆಲೆ ಗಾಯನ ರಾಜಕುಮಾರರಿಗೆ ಒಪ್ಪುತ್ತಿತ್ತು. ರಾಜಕುಮಾರ ಅತ್ಯುತ್ತಮ ಹಾಡುಗಾರರಾದರೂ ಅವರು ಹಿನ್ನಲೆ ಗಾಯಕರಾಗಲು ಉತ್ಸುಕರಾಗಿರಲಿಲ್ಲ. ಸಂಪತ್ತಿಗೆ ಸವಾಲ್ ಚಿತ್ರದ ತಯಾರಿಕೆ ಪ್ರಾರಂಭವಾದ ದಿನಗಳವು. ಎಮ್ಮೆ ಹಾಡನ್ನು ಪಿ.ಬಿ.ಶ್ರೀನಿವಾಸ ಹಾಡಬೇಕಿತ್ತು. ಅವರು ಪೂರ್ವ ನಿಯೋಜಿತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ವಿದೇಶಕ್ಕೆ ತೆರಳಿದ್ದರು. ಎಮ್ಮೆ ಚಿತ್ರೀಕರಣ ನಿಲ್ಲಿಸುವಂತಿರಲಿಲ್ಲ. ರಾಗ ಸಂಯೋಜಕ ಜಿ.ಕೆ.ವೆಂಕಟೇಶ ಆ ಹಾಡನ್ನು ರಾಜ ಕುಮಾರ ಕೈಲಿ ಹಾಡಿಸುತ್ತಾರೆ.
ಇದೇನು ರಾಜ್, ಪಿಬಿ ಮತ್ತು ವೆಂಕಟೇಶರಿಗೆ ಹೊಸದಲ್ಲ. ಈ ಮೊದಲು ವೆಂಕಟೇಶ ರಾಜಕುಮಾರ ಕೈಲಿ ಹಾಡಿಸಿದ್ದರು. ಯಾಕೋ ಆ ಹಾಡುಗಳು ಉತ್ತಮವಾದರೂ ಅಷ್ಟು ಜನಪಪ್ರಿಯವಾಗಲಿಲ್ಲ. ಆದರೆ ಎಮ್ಮೆ ಹಾಡು ಪಡೆದ ಜನಪ್ರಿಯತೆ ಆ ಮೂವರನ್ನು ಸೇರಿಸದಂತೆ ರಾಜ್ ಅಭಿಮಾನಿ ಗಳ ಮನಸೂರೆ ಗೊಂಡಿತು. ರಾಜಕುಮಾರ ಅವರ ಚಿತ್ರಗಳಿಗೆ ತಾವೆ ಹಾಡಲು ಪ್ರಾರಂಭಿಸಿದರು. ಉಳಿದ ನಾಯಕ ನಟರುಗಳಿಗೆ ಹಾಡುವುದು ಮುಂದುವರಿದರೂ, ಅವರ ಏಕಮೇವಾದ್ವಿತೀಯ ಪಟ್ಟ ಹಿಂದೆ ಸರಿದಿತ್ತು. ಈ ಸಂಧರ್ಭ ದಲ್ಲಿ ಪತ್ರಕರ್ತರು ಎತ್ತಿದ ಪ್ರಶ್ನೆಗೆ ಪಿಬಿ ಹೀಗೆ ಹೇಳುತ್ತಾರೆ ' ರಾಜಕುಮಾರ ಉತ್ತಮ ಗಾಯಕರಾದರೂ ತಾವು ಹಾಡದೆ ನನಗೆ ದಶಕಗಳ ಕಾಲ ಅವಕಾಶ ಮಾಡಿಕೊಟ್ಟು ಅವರು ಉದಾತ್ತತನವನ್ನೆ ಮೆರೆದಿದ್ದಾರೆ ' ಎನ್ನುತ್ತಾರೆ. ಆದರೆ ರಾಜಕುಮಾರ ತಮ್ಮ ಚಿತ್ರಗಳಲ್ಲಿ ಕೆಲವು ಹಾಡುಗಳನ್ನು ಅವರಿಂದ ಹಾಡಿಸಲು ಮರೆಯಲಿಲ್ಲ. ಈ ನಡವಳಿಕೆ ಜನ ಸಾಮಾನ್ಯರಲ್ಲಿ ಬರುವಂತಹವಲ್ಲ. ಅದಕ್ಕೆ ಉನ್ನತ ಗುಣಾದರ್ಶಗಳು ಅವರಿಬ್ಬರಲ್ಲಿದ್ದವು.
ಪಿಬಿ ಕನ್ನಡ ಚಲನಚಿತ್ರರಂಗ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಸಂಭಾವನೆಯ ವಿಷಯದಲ್ಲಿ ಯಾವ ನಿಮರ್ಾಪಕರೊಂದಿಗೂ ಚಕಾರ ಮತನಾಡಲಿಲ್ಲ. ಅವರು ಕೊಟ್ಟಷ್ಟು ಪಡೆಯುತ್ತಿದ್ದರು ವ್ಯವಹಾರ ಹೊರತಾಗಿಯೂ ಅವರು ಮಾನವೀಯ ಮೌಲ್ಯಗಳ ವ್ಯಕ್ತಿಯಾಗಿದ್ದರು. ಅವರ ಇನ್ನೊಂದು ವಿಶೇಷತೆಯೆಂದರೆ ಅವರು ರಾಜ್ ಉದಯ ಮತ್ತು ಕಲ್ಯಾಣರಿಗೆ ಹೊಂದಿಕೊಂಡಂತೆ ಎರಡನೆ ತಲೆಮಾರಿನ ನಾಯಕ ನಟರಾದ ಶ್ರೀನಾಥ, ರಾಜಾಶಂಕರ, ರಾಜೇಶ ಮತ್ತು ಗಂಗಾಧರರಿಗೂ ಅದರಂತೆ ನಂತರದ ತಲೆಮಾರಿನ ವಿಷ್ಣವರ್ಧನ, ಅನಂತನಾಗ, ಅಂಬರೀಶ ರವರಿಗೂ ಸಹ ಹಾಡಿದರು. ಅವರ ಹಾಡುಗಾರಿಕೆ ಎಲ್ಲರಿಗೂ ಎಲ್ಲ ವಯೋಮಾನದ ವರಿಗೂ ಹೊಂದಿಕೆ ಯಾಗುತ್ತಿತ್ತು. ಅದು ಅವರ ಹಾಡುಗಾರಿಕೆಯ ಗಟ್ಟಿತನ ಮತ್ತೂ ಆಳ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಂಧರ್ಭದಲ್ಲಿ ನಮಗೆ ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ರಫಿ ನೆನಪು ಬರುತ್ತದೆ. ಅವತರೂ ಸಹ ದಿಲೀಪ, ರಾಜ್ ಮತ್ತೂ ದೇವರಿಂದ ಪ್ರಾರಂಭಿಸಿ ಶಮ್ಮನಿ, ಜಾಯ್, ಶಶಿ, ಬಿಶ್ವಜೀತ ಹಾಗೂ ಅವರ ನಂತರದ ನಾಯಕರಿಗೂ ಕೆಲ ಹಾಡುಗಳನ್ನು ಹಾಡಿದರು. ಆದರೆ ಇವರಿಗೆ ಫಾಲ್ಕೆ ಪುರಸ್ಕಾರ ದೊರೆಯದುದು ಒಂದು ವಿಷಾದಕರ ಸಂಗತಿ.
22.9.1930 ರಂದು ಆಂಧ್ರ ಪ್ರದೇಶದ ಕಾಕಿನಾಡಿನಲ್ಲಿ ಜನಿಸಿದ ಅವರು ಸಿನೆಮಾ ಹಡುಗಠಾತರಿಕೆಯನ್ನೆ ವೃತ್ತಿಯನ್ನಾಗಿಸಿಕೊಂಡು ಕನ್ನಡ ತೆಲುಗು ತಮಿಳು ಮಲೆಯಾಳಂ ಮತ್ತು ಹಿಂದಿ ಸೇರಿದಂತೆ ಸರಿ ಸುಮಾರು ಎಂಟು ಭಾಷಾ ಚಿತ್ರಗಳಿಗೆ ಹಿನ್ನೆಲೆ ಹಾಡುಗಳನ್ನು ಹಾಡಿದರು. ಕನ್ನಡದ 'ಜಾತಕಫಲ' ಚಿತ್ರದಿಂದ ಆರಂಭವಾದ ಅವರ ಹಾಡುಗಾರಿಕೆ ಅವರನ್ನು ಕನ್ನಡದ ಏಕಮಾತ್ರ ಶತಮಾನಗಳ ಕಾಲ ನೆನಪಿನಲ್ಲುಳಿಯುವ ಗಾಯಕ ತಾನೆಂಬುದನ್ನು ಅವರು ಪ್ರಮಾಣಿಸಿ ಕೊಟ್ಟರು. ಹೀಗಾಗಿ ಅವರ ಸಾವು ಕನ್ನಡ ಚಿತ್ರರಂಗಕ್ಕಾದ ತುಂಬಲಾರದ ನಷ್ಟ. ಅವರ ನೆನಪು ನಮ್ಮನ್ನು ನಮ್ಮ ಬಾಲ್ಯದ ದಿನಗಳಿಗೆ ಕರೆದೊಯ್ಯುತ್ತದೆ. ಬಯಲುಸೀಮೆಯ ಮರ ಗಿಡಗಳೆ ಅಪರೂಪ ವೆನ್ನುವ, ಬೀಸುವ ಗಾಳಿಯೂ ಸಹ ಬಿಸಿಯುಸಿರನ್ನೆ ಹೊತ್ತು ತರುವ ಬೇಸಿಗೆ ನಮಗೆ ಬೇಗುದಿಯನ್ನು ಹುಟ್ಟು ಹಾಕುವಂತಹುದು. ಈ ಬೇಗೆಯಿಂದ ಪಾರಾಗಲು ನಾವು ರಾತ್ರಿ ಮಲಗಲು ಆಯ್ಕೆ ಮಡಿಕೊಳ್ಳುತ್ತಿದ್ದ ಸ್ಥಳ ಮನೆ ಮುಂದಿನ ಬಯಲು ಜಾಗ ಇಲ್ಲದಿದ್ದರೆ ಮನೆಯ ಮಾಳಿಗೆಗಳು. ಅವು ನಮಗೆ ಸ್ವರ್ಗ ಸಮನ ಸ್ಥಳಗಳು. ಕಿಟಕಿ ಬಾಗಿಲು ಗೋಡಗಳಿಂದ ಮುಕ್ತವಾದ ವಿಶಾಲ ಅಂತರೀಕ್ಷಕ್ಕೆ ನಮ್ಮನ್ನು ಮುಖಾಮುಖಿ ಯಾಗಿಸುವ ಆ ಜಾಗೆಗಳು ನಮಗೆ ಅಪ್ಯಾಯಮಾನ.
ವಿಶಾಲ ನೀಕಲ ನಭ, ಮುನ್ನೆಲೆಗೆ ಮಿನುಗುಬವ ಗ್ರಹ ತಾರೆ ನಕ್ಷತ್ರಗಳು ಆಗಾಗ ಸರಿದು ಹೊಗುವ ತೆಳು ಬೆಳ್ಮೋಡಗಳು ಉದಯಿಸಿ ಅಸ್ತಮಿಪ ಚಂದ್ರ, ಶುಕ್ಲ ಪಕ್ಷದ ಹುಣ್ಣಿಮೆಯ ಕಾಲದಲ್ಲಿ ಆತ ಚೆಲ್ಲುವ ಬೆಳ್ನೊರೆಯ ಬೆಳ ದಿಂಗಳು ನಾವು ನಿದ್ರೆಗೆ ಜಾರಿದ್ದೆ ನಮಗೆ ಗೊತ್ತಾಗುತ್ತಿರಲಿಲ್ಲ. ಬಿಸಿಗಾಳಿ ತಂಗಾಳಿಯಾಗಿ ಹೊದಿಕೆಯೊಳಗೆ ನುಸುಳಿ ಕಚಗುಳಿಯಿಟ್ಟು ಪಿಸುಗುಡುವಾಗ ದಣಿದು ವಿಶ್ರಾಂತಿಗೆ ಮೊರೆ ಹೊಗಿದ್ದ ದೇಹ ಪ್ರಕೃತಿಯ ಬೆರಗಿನ ಬೇಳಗಿನ ಆಸ್ವಾದನೆಗೆ ಅಣಿಯಾಗಿ ಬಿಟ್ಟಿರುತ್ತಿತ್ತು. ಆಗ ಮದುವೆ ಮನೆಗಳ ಲೌಡ್ ಸ್ಪೀಕರ್ಗಳಲ್ಲಿ ತೇಲಿ ಬರುತ್ತಿದ್ದ ಪಿಬಿ ಮೋಡಿಯ ಗಾಯನದ ಭಕ್ತ ಕನಕದಾಸ ಚಿತ್ರದ ' ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ', ' ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನು ನೀವೇನಾದರೂ ಬಲ್ಲಿರಾ ', ಮಲ್ಲಿ ಮದುವೆಯ ' ಒಲವಿನ ಪ್ರಿಯ ಲತೆ ಅವಳದೆ ಚಿಂತೆ ', ಗಾಳಿಗೋಪುರದ ' ಯಾರಿಗೆ ಯಾರುಂಟು ಯರವಿನ ಸಂಸಾರ ' ಮುಂತಾದ ಮಾಧುರ್ಯ ಹಾಗೂ ಸತ್ವಭರಿತ ಹಡುಗಳು ನಮ್ಮನ್ನು ಭಾವಲೋಕಕ್ಕೆ ಎಳೆದೊಯ್ಯುತ್ತಿದ್ದವು. ಆ ಹಾಡುಗಳು ಅಲೆಯಲೆಯಾಗಿ ತೇಲಿ ಬರುತ್ತಿದ್ದರೆ ಮೋಡಗಳ ಮರೆಯ ವೈಕುಂಠದಲ್ಲಿ ತೇಲಿದ ಅನುಭವ. ಆ ಕಾಲ ಮತ್ತೆ ಬಾರದು ಕಾಲ ಗತಿಸಿದೆ ವ್ಯಕ್ತಿಗಳು ಗತಿಸಿದ್ದಾರೆ ನಾವೂ ಒಂದು ದಿನ ಗತಿಸುವವರೆ! ಜನರನ್ನು ಭಕ್ತಿ ಪರವಶತೆಗೆ ಒಯ್ಯುವ ಗುಣ ಪಿಬಿ ಯವರ ಗಾಯನಕ್ಕಿತ್ತು. ಹೀಗೆಯೆ ಉದಾಹರಿಸುತ್ತ ಹೋದರೆ ವಿಷಯಕ್ಕೆ ಬರವಿಲ್ಲ. ಅವರ ಶರೀರ ಈ ಭೌತಿಕ ಲೋಕವನ್ನು ಬಿಟ್ಟು ಹೋಗಿದ್ದರೂ ಅವರ ಶಾರೀರವನ್ನು ಉಳಿಸಿಕೊಂಡು ಕೇಳುವ ಸೌಲಭ್ಯವನ್ನು ವಿಜ್ಞಾನ ನಮಗೆ ನೀಡಿದೆ. ಅವು ನಮಗೆ ಬೇಕೆಂದಾಗ ಪಿಬಿ ಯವರನ್ನು ಆಲಿಸುವ ಸವಲತ್ತು ನಮಗೆ ಇದೆ. ಅವರ ಹಾಡುಗಳನ್ನು ಕೇಳಿ ಮೆಚ್ಚಿ ಇಂತಹ ಅದ್ಭುತ ಕಂಠದ ಗಾಯಕನೊಬ್ಬನಿದ್ದ ಎಂದು ನಾವು ಹೆಮ್ಮೆ ಪಡುವವರಾಆದರೆ ಅದು ನಾವು ಆ ಸುಸಂಸ್ಕೃತ ಆತ್ಮಕ್ಕೆ ನೀಡುವ ನಿಜವಾದ ಶ್ರದ್ಧಾಂಜಲಿ.
Comments
ಇಂದಿನ ಸಂಪದದಲ್ಲಿ ಪೀ ಬಿ ಶ್ರೀ
ಇಂದಿನ ಸಂಪದದಲ್ಲಿ ಪೀ ಬಿ ಶ್ರೀ ಅವರ ಬಗ್ಗೆ ಒಟ್ಟು ೩ ಬರಹಗಳು ಬಂದಿವೆ ,ನಾಡಿಗರು ಬರೆದದ್ದು ಓದಿ ಪ್ರತಿಕ್ರಿಯಿಸುವುದರೊಳಗೆ ಮತ್ತೆರಡು ಬರಹಗಳೂ ಸೇರಿದವು , ಈ ಎಲ್ಲ ನುಡಿ ನಮನಗಳಲ್ಲಿ ನನ್ನ ಪ್ರತಿಕ್ರಿಯೆ ನಮನ ಸಲ್ಲಿಸುವೆ ,,...
ಆಗ ಸುಮಾರು ೧೪ - ೧೫ ಇರ್ಬೇಕು , ಹಳ್ಳಿಯಲ್ಲಿ ಇದ್ದ ಒಂದೋ ಎರಡು ಟಿ ವಿ ಇರುವ ಗೌಡರ ಮನೆಯಲ್ಲಿ ಶನಿವಾರ ಭಾನುವಾರ ಕನ್ನಡ ಹಿಂದಿ ಚಲನ ಚಿತ್ರಗಳನ್ನು ನೋಡಲು ಹೋಗುತ್ತಿದ್ದೆ ,ಆಗೊಮ್ಮೆ ನಾ ನೋಡಿದ್ದು ಬಭ್ರುವಾಹನ ಚಿತ್ರ. ಡಾ :ರಾಜ್ ಅವರು ದ್ವಿ ಪಾತ್ರಗಳಲ್ಲಿ ಎದುರು ಬದುರಾಗಿ ವಾಗ್ಯುದ್ಧ ಮಾಡುತ್ತಾ ಹಾಡುವ ಹಾಡು ನೋಡುತ್ತಾ ಕೇಳುತ್ತ ಅದು ಡಾ:ರಾಜ್ ಅವರೇ ಎರಡು ಧ್ವನಿಗಳಲ್ಲಿ ಹಾಡಿರುವರು ಎಂದು ಯೋಚಿಸಿದ್ದೆ , ಆದರೆ ಅದೊಮ್ಮೆ ಕ್ಯಾಸೆಟ್ ತಂದಾಗ ಅದರಲ್ಲಿ ಡಾ; ರಾಜ್ ಮತ್ತು ಪೀ ಬಿ ಶ್ರೀನಿವಾಸ್ ಎಂದು ಇರುವುದು ನೋಡಿ ಅಚ್ಚರಿ ಆಯ್ತು. ಆಮೇಲೆ ಗಂಧದ ಗುಡಿ , ಕಸ್ತೂರಿ ನಿವಾಸದ ಜನ ಪ್ರಿಯ ಹಾಡುಗಳನ್ನು ಕೇಳುವಾಗ ನೋಡುವಾಗ ರಾಜ್ ಅವರೇ ನೆನಪಿಗೆ ಬರುತ್ತಿದ್ದರು.
ಒಂದೇ ರೀತಿ ಕೇಳಿಸುವ ಸ್ವರ ಧ್ವನಿ ಕಾರಣವಾಗಿ ಪೀ ಬಿ ಶ್ರೀ ಅವರಿಗಿಂತ ಡಾ ರಾಜ್ ಅವರೇ ಮಿಂಚಲು ಕಾರಣವಾಯ್ತೆ ? ಎಂಬುದು ನನ್ನ ಸಂಶಯ .. ಆದರೆ ನನತರ ರಾಜ್ ಆವರು ಪೀ ಬಿ ಶ್ರೀ ಅವರನ್ನ ತಮ್ಮ ಶಾರೀರ ಎಂದು -ರಾಜ್ ಅವರಿಗಾಗಿ ನಾವ್ ಹಾಡಿದ್ದು ತಮ್ಮ ಸೌಭಾಗ್ಯ ಎಂದೂ ಪೀ ಬಿ ಶ್ರೀ ತಮ್ಮ ತಮ್ಮ ಘನತೆ ಹಿರಿಮೆ ಔದಾರ್ಯ ಮೆರೆದರು ಜನ ಮಾನಸದಲ್ಲಿ ನೆಲೆಸಿದರು ...
ಅದ್ಕೆ ಇರ್ಬೇಕು ಈಗಲೂ ಕೆಲ ರಾಜ್ ಪೀ ಬಿ ಶ್ರೀ ಹಾಡುಗಳನ್ನು ಕೇಳುವಾಗ ಫಕ್ಕನೆ ರಾಜ್ ಮತ್ತು ಪೀ ಬಿ ಶ್ರೀ ಇಬ್ಬರೂ ನೆನಪಾಗುವರು . ಇಂತಹ ಸೌಭಾಗ್ಯತೆ ಅಧ್ರುಸ್ಟ ಎಷ್ಟು ಜನಕೆ ದಕ್ಕೀತು ...
ಅದರಲ್ಲೂ ಕಸ್ತೂರಿ ನಿವಾಸ ಮತ್ತು ನಾವಾಡುವ ನುಡಿಯೇ, ಕನ್ನಡ ನಾಡಿನ ವೀರರ ಮಣಿಯ , ಮೂಲಕ ಪೀ ಬಿ ಶ್ರೀ ಸದಾ ಅಮರ ..
ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಜನರ ಪ್ರೀತಿ ಪ್ರೆಮಾಧಾರಕ್ಕೆ ಸೋತ ಪೀ ಬಿ ಶ್ರೀ ಅನ್ದೊಮೆಮ್ ಮೈಸೂರು ಪೇಟದಲ್ಲಿ ಸನ್ಮಾನ ಮಾಡಿದ್ದು ಮರೆಯದೆ ಅದೇ ಪೇಟವನ್ನು ಸದಾ ಧರಿಸುತ್ತಾ ಕನ್ನಡ ನಾಡು ನುಡಿ ಜನರ ಬಗೆಗಿನ ಪ್ರೇಮ ಜಗ ಜ್ಜಾಹೀರು ಮಾಡಿದರು .
ಬಹುಶ ಮೈಸೂರು ಪೇಟ ಧರಿಸಿ ಆ ಪೇಟಕ್ಕೂ ಮತ್ತು ತಮ್ಮ ವ್ಯಕ್ತಿತ್ವಕ್ಕೂ ಘನತೆ ಗೌರವ ತಂದುಕೊಟ್ಟ ಕಂಗೊಳಿಸಿದ ಮಹನೀಯರು ರಾಜ್ ಮತ್ತು ಪೀ ಬಿ ಶ್ರೀ ..
ಇವರನ್ನು ಟೀ ವಿಯಲ್ಲಿ ಸನ್ಮಾನ ಸಭೆ ಸಮಾರಂಭಗಳಲಿ ಕರೆಯಿಸಿ ಹಾಡಲು ಮಾತಾಡಲು ಹೇಳುವಾಗ ಅದು ಕೇಳೋದು ನೋಡೋದು ಸೊಗಸಾಗಿತ್ತು... ರಾಜ್ ಅವರ ಮರಣಾನಂತರ ಅವರ ನೆನಪಿನಲ್ಲಿ ತಾವೇ ಸ್ವ ರಚಿಸಿ ವಾಚಿಸಿದ ರಾಜ್ ಬಗೆಗಿನ ಕವನ ಓದುವಾಗ ಅವರ ಸ್ವರ ಕಂಪಿಸುತ್ತಿದ್ದುದು ಈಗಲೂ ನೆನಪಿದೆ...
ಕಲೆ - ಕಲೆಗಾರ ,ಸಾಹಿತಿ ,ಸಂಗೀತಗಾರ ಗಾಯಕರು ಭೌತಿಕವಾಗಿ ನಮ್ಮಿಂದ ಮರೆಯಾದರೂ ಅವರ ಕೊಡುಗೆ (ನಟನೆ-ಸಾಹಿತ್ಯ ಕೃಷಿ -ಸಂಗೀತ- ಚಿತ್ರ ಕಲೆ ಇತ್ಯಾದಿ)ಮೂಲಕ ಸದಾ ಅಮರ..
ನಾಡಿನ ಸಾಧಕರನ್ನು ಒಬ್ಬೊಬ್ಬರನ್ನಾಗಿ ತನ್ನೆಡೆಗೆ ಕರೆಸಿಕೊಳ್ಳುತ್ತಿರುವ ದೇವನ ದೇವ ಲೋಕದಲ್ಲಿ ಇವರೆಲ್ಲರ ಉಪಸ್ಥಿತಿ ಖಂಡಿತ ಅಲ್ಲಿ ಕಳೆ ಕಟ್ಟಲಿದೆ .... ದೇವಲೋಕದ ಹಿರಿಮೆ ಹೆಚ್ಚಲಿದೆ ...
ಪೀ ಬಿ ಶ್ರೀ ಅವರ ಆತ್ಮಕ್ಕೆ ಶಾಂತಿ ಸಿಗಲಿ -ಅವರ ಕುಟುಂಬ ವರ್ಗ ಮತ್ತು ಅಭಿಮಾನಿ ಶೋತೃ ವರ್ಗಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ ..
\। /
In reply to ಇಂದಿನ ಸಂಪದದಲ್ಲಿ ಪೀ ಬಿ ಶ್ರೀ by venkatb83
ಸಪ್ತಗಿರಿಯವರಿಗೆ ವಂದನೆಗಳು
ಸಪ್ತಗಿರಿಯವರಿಗೆ ವಂದನೆಗಳು
ಮಾನ್ಯರೆ ತಮ್ಮ ಪ್ರತಿಕ್ರಿಯೆ ಓದಿದೆ, ಪಿಬಿಎಸ್ ಬಗೆಗೆ ಅತ್ಯುತ್ತಮವಾಗಿ ಜೊತೆಗೆ ಅಪ್ಯಾಯಮಾನವಾಗಿ ಪ್ರತಿಕ್ರಿಯಿಸಿದ್ದೀರಿ. ಉತ್ತರಿಸುವಲ್ಲಿ ವಿಳಂಬವಾಯಿತು ಕ್ಷಮೆಯಿರಲಿ, ಧನ್ಯವಾದಗಳು.
ಹಿರಿಯರಾದ ಪಾಟೀಲರವರಿಗೆ,
ಹಿರಿಯರಾದ ಪಾಟೀಲರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಪಿ.ಬಿ. ಶ್ರೀ ಇನ್ನಿಲ್ಲ. ನಂಬಲೇ ಆಗುತ್ತಿಲ್ಲ. ಲೇಖನ ತುಂಬ ಉತ್ತಮ ಆಂಶಗಳನ್ನು ಒಳಗೊಂಡು ಸವಿವರಗಳೊಂದಿಗೆ ಮೂಡಿಬಂದಿದೆ. ಪ್ರತಿವಾದಿ ಭಯಂಕರ ಶ್ರೀನಿವಾಸ ತುಂಬ ಮಾನವೀಯ ಗುಣಗಳ ಪ್ರತಿಭಾವಂತ ಹಳೆ ಪೀಳಿಗೆಯ ಗಾಯಕ. ಗಾನ ಗಂಧರ್ವ. ಅವರ ಆತ್ಮಕ್ಕೆ ಶಾಂತಿ ಕೋರುವೆ, ಹಾಗೆಯೇ ವೆಂಕಟೇಶ ರವರ ಪ್ರತಿಕ್ರಿಯೆ ಕೂಡ ಸೂಕ್ಷ್ಮ ಸ್ಪಂದನೆಗಳನ್ನು ಸೃಷ್ಟಿಸಿ, ವೈಬ್ರಂಟ್ ಫೀಲಿಂಗ್ ನೀಡುತ್ತದೆ. ಹಿರಿಯರಿಗೆ ಉತ್ತಮ ಲೇಖನ ನೀಡಿ ಶೃದ್ಧಾಂಜಲಿ ಸಲ್ಲಿಸಿದ್ದಕ್ಕೆ ವಂದನೆಗಳು.
In reply to ಹಿರಿಯರಾದ ಪಾಟೀಲರವರಿಗೆ, by lpitnal@gmail.com
ಲಕ್ಷ್ಮೀಕಾಂತ ಇಟ್ನಾಳರಿಗೆ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ದಿ. 15 ರಿಂದ ನಾಲ್ಕು ದಿನಗಳ ಕಾಲ ಕಾರ್ಯ ನಿಮಿತ್ತ ಹುಬ್ಬಳ್ಳಿಯಲ್ಲಿದೆ, ಸಂಪದ ನೋಡಲು ಆಗಿರಲಿಲ್ಲ. ಪಿಬಿಎಸ್ ಕುರಿತ ಲೇಖನಕ್ಕೆ ತಮ್ಮ ಪ್ರತಿಕ್ರಿಯೆ ಓದಿದೆ. ಲೇಖನದ ಮುಚ್ಚುಗೆಗೆ ಧನ್ಯವಾದಗಳು.
In reply to ಲಕ್ಷ್ಮೀಕಾಂತ ಇಟ್ನಾಳರಿಗೆ by H A Patil
ಹಿರಿಯರಾದ ಪಾಟೀಲರಿಗೆ,
ಹಿರಿಯರಾದ ಪಾಟೀಲರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಸರ್ ,ತಾವು ಹುಬ್ಬಳ್ಳಿಯಲ್ಲಿ ಎಲ್ಲಿ ಇರುವಿರಿ, ಧಾರವಾಡಕ್ಕೆ ಬರಲು ಸಾಧ್ಯವೇ, ಸಾಧ್ಯವಾಗದಿದ್ದರೆ ಹುಬ್ಬಳ್ಳಿಗೆ ತಮ್ಮನ್ನು ಕಾಣಲು ಬರಬಹುದೇ! ಬಿಡುವಾಗಬಹುದೇ, ನನ್ನ ಫೇಸ್ ಬುಕ್ ಗೆ ಹೋಗಿ, ನನಗೆ ಪರ್ಸನಲ್ ಮೆಸೇಜ್ ಗೆ ತಮ್ಮ ಮೋ. ನಂ. ನೀಡಿದಲ್ಲಿ ತಮ್ಮನ್ನು ಸಂಪರ್ಕಿಸಲು ಸಾಧ್ಯವಾಗಬಹುದು. ಇಲ್ಲವೇ ತಾವು ಸಂಯುಕ್ತ ಕರ್ನಾಟಕ, ಕೊಪ್ಪಕರ ರಸ್ತೆಯಂತಹ ಗುರುತರ ಕಟ್ಟಡದ ಹತ್ತಿರ ನಿಂತರೆ, ವೇಳೆಗೆ ಸರಿಯಾಗಿ ಬರುವೆ. ಎಲ್ಲಿಯವರೆಗೆ ವಾಸ್ತವ್ಯವಿದೆ ಸರ್. ಪ್ಲೀಸ್ ನಮ್ಮನ್ನು ಭೇಟಿಯಾಗಿ. ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ. ಧನ್ಯವಾದಗಳು.
In reply to ಹಿರಿಯರಾದ ಪಾಟೀಲರಿಗೆ, by lpitnal@gmail.com
ಲಕ್ಷ್ಮೀಕಾಂತ ಇಟ್ನಾಳರಿಗೆ
ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ಮಾನ್ಯರೆ ತಮ್ಮ ಮರು ಪ್ರತಿಕ್ರಿಯೆ ಓದಿದೆ, ನಾನು ನಿಸ್ನೆಯೆ ಬೆಳಿಗ್ಗೆ ಹುಬ್ಬಳ್ಳಿಯಿಂದ ಹೊರಟು ರಿಪ್ಪನಪೇಟೆಗೆ ಮರಳಿ ಬಂದಿದ್ದೇನೆ, ಇನ್ನೊಮ್ಮೆ ಬಂದಾಗ ತಮ್ಮನ್ನು ಭೇಟಿಯಾಗಲು ಪ್ರಯತ್ನಿಸುವೆ, ತಮ್ಮ ಆತ್ಮೀಯ ಮರು ಪ್ರತಿಕ್ರಿಯೆಗೆ ಧನ್ಯವಾದಗಳು.
ಪಾಟಿಲರೆ ನಮಸ್ಕಾರ
ಪಾಟಿಲರೆ ನಮಸ್ಕಾರ
ನಮ್ಮ ಕಣ್ಣೆದುರೆ ಎಷ್ಟೊ0ದು ಎಲೆಗಳು ಉದುರಿಹೋದವು ಅನಿಸುವಾಗ ಎ0ತದೊ ಸ0ಕಟವೆನಿಸುತ್ತೆ. ಅದರಲ್ಲಿ ಬದುಕಿ ಬಾಳಬೇಕಾದ ಚಿಕ್ಕ ಜೀವಗಳು ಅಲ್ಲದೆ ಈ ರೀತಿಯ ತು0ಬು ಬಾಳು ಬಾಳಿ ಮರೆಯಾದ ಕೆಲವು ಹಣ್ಣೆಲೆಗಳು. ಸಾವು ಅನ್ನುವುದು ಮನುಷ್ಯನಲ್ಲಿಯ ವೇದಾ0ತವನ್ನು , ನಿರ್ಲಿಪ್ತತೆಯನ್ನು ಹೆಚ್ಚುಮಾಡುತ್ತೆ. ಪಿ.ಬಿ. ಯವರ ಸಾವು ದು:ಖದಾಯಕ ಆದರೆ, ಅವರು ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿದವರು, ತು0ಬು ಬದುಕು ನಡೆಸಿದವರು. ಬಹುಷ: ಸಾಕೆನಿಸಿತೇನೊ.
In reply to ಪಾಟಿಲರೆ ನಮಸ್ಕಾರ by partha1059
ಪಾರ್ಥ ಸಾರಥಿ ಯವರಿಗೆ ವಂದನೆಗಳು
ಪಾರ್ಥ ಸಾರಥಿ ಯವರಿಗೆ ವಂದನೆಗಳು
ಈ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ತಮ್ಮ ಅನಿಸಿಕೆ ಗಹನವಾದುದು. ಅದು ನನ್ನನ್ನು ಕ್ಷಣಕಾಲ ಯೋಚಿಸುವಂತೆ ಮಾಡಿತು, ಧನ್ಯವಾದಗಳು.
ನಮಸ್ಕಾರ ಪಾಟೀಲರೆ, ಇದು
ನಮಸ್ಕಾರ ಪಾಟೀಲರೆ, ಇದು ಸಂಪದದಲ್ಲಿ ನನ್ನ ಮೋದಲನೇ ಪ್ರತಿಕ್ರಿಯೆ ಜನಪ್ರಿಯ ಹಿನ್ನೇಲೆ ಗಾಯಕರಾದ ಡಾ. ಶ್ರೀ ಪಿ.ಬಿ.ಶ್ರೀನಿವಾಸ ರವರ ಅಗಲಿಕೆ ನಮಗೆಲ್ಲಾ ಬರಿಸಲಾಗದ ನಷ್ಟವಾಗಿದೆ.ತಾವುಗಳು ಅವರ ಬಗ್ಗೆ ಸವಿವಾರವಾಗಿ ಬರೆದಿರುವದಕ್ಕೆ ನನ್ನ ಧನ್ಯವಾದಗಳು
In reply to ನಮಸ್ಕಾರ ಪಾಟೀಲರೆ, ಇದು by Amaresh patil
ಅಮರೇಶ ಪಾಟೀಲರಿಗೆ ವಂದನೆಗಳು,
ಅಮರೇಶ ಪಾಟೀಲರಿಗೆ ವಂದನೆಗಳು,
ಸಂಪದದ ತಮ್ಮ ಮೊದಲ ಪ್ರತಿಕ್ರಿಯೆ ನನ್ನ ಲೇಖನಕ್ಕೆ ಬಂದಿದೆ, ಹೀಗೆಯೆ ಓದುತ್ತ ಬರೆಯುತ್ತ ಪ್ರತಿಕ್ರಿಯಿಸುತ್ತ ಹೋಗಿ, ನಿಮ್ಮಂತಹ ಯುವಕರ ಪಾಲ್ಗೊಳ್ಳುವಿಕೆ ಅದು ಯಾವುದೇ ರಂಗವಿರಲಿ ಅದು ಬಹು ಮುಖ್ಯ. ನನ್ನ ಈ ಲೇಖನದ ಮುಚ್ಚುಗೆಗೆ ಧನ್ಯವಾದಗಳು.
ವಸಂತದಲ್ಲಿ ಹಾಡು ನಿಲ್ಲಿಸಿದ
ವಸಂತದಲ್ಲಿ ಹಾಡು ನಿಲ್ಲಿಸಿದ ಕೋಗಿಲೆ..ಪಾಟೀಲರೆ ಮರೆಯಾದ ಕೋಗಿಲೆ ಬಗ್ಗೆ ನಿಮ್ಮ ಲೇಖನ ಒಂದೊಂದೇ ಹಳೆ ನೆನಪುಗಳನ್ನು ತಂದಿತು. ಪಿ ಬಿ ಎಸ್ ಹಾಡಿದ ಭಕ್ತ ಕುಂಬಾರ ಚಿತ್ರದ ಹಾಡು ಕೇಳುವಾಗ ನಾಸ್ತಿಕರಲ್ಲೂ ಭಕ್ತಿ ಉಂಟಾಗಬಹುದು- (http://www.youtube.com/watch?v=P58YYzxDiUA ). "ಯಾರು ತಿಳಿಯರು ನಿನ್ನ.." ಬಭ್ರುವಾಹನ ಚಿತ್ರದಲ್ಲಿ ರಾಜ್ ಜತೆ ಹಾಡಿದ ಹಾಡು ನನಗೆ ಬಹಳ ಇಷ್ಟವಾದುದು. ಪಾತ್ರಕ್ಕೆ ತಕ್ಕಂತೆ ಹುಣಸೂರು ಕೃಷ್ಣಮೂರ್ತಿಯವರ ಗೀತೆ ರಚನೆ, ಇಬ್ಬರೂ ಒಬ್ಬರಿಗೊಬ್ಬರು ಮೀರಿಸುವಂತೆ ಹಾಡಿದ್ದು, ಜತೆಗೆ ರಾಜ್(ದ್ವಿಪಾತ್ರ) ಅಭಿನಯ ನೋಡಿದ ಯಾರೂ ಈ ಗೀತೆಯನ್ನು ಮರೆಯಲಾರರು. "ಪಿ.ಬಿ.ಎಸ್" ಹಾಗೂ "ಎಸ್.ಪಿ.ಬಿ" ಯವರನ್ನು ರಾಜ್ ತಮ್ಮ " ರಾಜ ನನ್ನ ರಾಜ" ಚಿತ್ರದಲ್ಲಿ ಒಟ್ಟಾಗಿ ಹಾಡಿಸಿದ್ದರು ಅದನು ಹೊಗಳಲು ನೂರು ಮಾತೂ ಸಾಲದು. ಕೇಳಿ- http://www.youtube.com/watch?v=8PozOGG3x6s
ಇನ್ನೊಂದು ಸೂಪರ್ ಹಾಡು- "ರವಿವರ್ಮನ ಕುಂಚದ.." ಇತ್ತೀಚೆಗೆ ಅದರ ರಿಮಿಕ್ಸ್ ಮಾಡಿ ಕುಲಗೆಡಿಸಿದರು. :(. ನಿರಾಶೆಯ ಸಮಯದಲ್ಲಿ "ನಗು ನಗುತಾ ನಲಿ..." ಹಾಡು ಕೇಳಿದಾಗ ಮನದಲ್ಲಿ ಹೊಸ ಉತ್ಸಾಹ ಖಂಡಿತಾ ಬರುವುದು. ನಮ್ಮ ಕಾಲದ ಹುಡುಗರು ಹುಡುಗಿಯರ ಬೆನ್ನ ಹಿಂದೆ ಸುತ್ತುತ್ತಾ "ಆ..ಕಾ..ಶವೆ ಬೀಳಲಿ ಮೇಲೆ.." ಎಂದು ಹಾಡುತ್ತಿದ್ದರು..., ಆಕಾಶ ಬೀಳುವುದು ಬಿಡಿ, ಹುಡುಗಿಯರು ತಿರುಗಿ ನೋಡಿದಾಗ ಜನ ನಾಪತ್ತೆ! :) "ಇವಳು ಯಾರು ಬಲ್ಲೆಯೇನು?.." ನರಸಿಂಹ ಸ್ವಾಮಿಯವರ ಹಾಡನ್ನು ಪಿ.ಬಿ.ಶ್ರೀನಿವಾಸ್ ಎಷ್ಟು ಚೆನ್ನಾಗಿ ಹಾಡಿದ್ದಾರೆ. ಅದೇ ಈ ಕಾಲದಲ್ಲಾಗುತ್ತಿದ್ದರೆ... ತಮಿಳೋ ತೆಲುಗೋ ಟ್ಯೂನ್ಗೆ.. "ಡುಂಡುಂ ಡಂಕನಕರ..ಕಿವಿ ತಮಟೆ ಹರಿಯುವ ಹಾಗೆ ಮ್ಯೂಸಿಕ್, ೧೫೦ ಜನ ಹುಡುಗರು, ಒಂದಿಪ್ಪತ್ತು ಹುಡುಗಿಯರ ಕುಣಿತ, ಕನ್ನಡ ಬರದ ಸಿಂಗರ್ ಹಾಡಿದ್ದು ಎಡೆಎಡೆಯಲ್ಲಿ ಕೇಳಿಸುತ್ತಿತ್ತು. :) ನಮ್ಮ ಜನ ಒಂದು ಹತ್ತು ನಿಮಿಷ ಹಾಕಿಕೊಂಡು ಇರಲು ಮುಜುಗುರ ಪಡುವ ಪೇಟವನ್ನು ಪ್ರತಿದಿನವೂ ಧರಿಸುತ್ತಿದ್ದ ಪಿ.ಬಿ.ಶ್ರೀನಿವಾಸ್ ನಿಜಕ್ಕೂ ಕರ್ನಾಟಕ ರತ್ನ.
In reply to ವಸಂತದಲ್ಲಿ ಹಾಡು ನಿಲ್ಲಿಸಿದ by ಗಣೇಶ
ಗಣೇಶ ರವರಿಗೆ ವಂದನೆಗಳು
ಗಣೇಶ ರವರಿಗೆ ವಂದನೆಗಳು
ಪಿಬಿಎಸ್ ಲೇಖನಕ್ಕೆ ತಾವು ಬರೆದ ಪ್ರತಿಕ್ರಿಯೆ ಓದಿದೆ, ತಾವು ಪಿಬಿಯವರನ್ನು ನೆನಪಿಸಿಕೊಂಡು ಬರೆದ ಆಯಾ ಚಿತ್ರ ಮತ್ತು ಹಾಡುಗಳು ನಮ್ಮನ್ನು ಮತ್ತೆ ಮತ್ತೆ ಆ ಜಮಾನಾಕ್ಕೆ ಕೊಂಡು ಒಯ್ಯುತ್ತವೆ. ಬಹಳ ಮುಕ್ತವಾಗಿ ಆ ಕಾಲವನ್ನು ಜ್ಞಾಪಿಸಿ ಕೊಂಡಿದ್ದಿರಿ, ಧನ್ಯವಾದಗಳು.
ನಮಸ್ಕಾರ,"ವಸಂತದಲಿ ಹಾಡು
ನಮಸ್ಕಾರ,"ವಸಂತದಲಿ ಹಾಡು ನಿಲ್ಲಿಸಿದ ಕೋಗಿಲೆ" - ಖಂಡಿತವಾಗಿ , ಶೀರ್ಷಿಕೆ ಮತ್ತು ಲೇಖನ ಎರಡೂ ಸೂಕ್ತವಾಗಿದೆ. ಇವರು ಬದುಕಿ ಬಾಳಿದವರು, ವಸಂತ ಕಾಲ ಮುಗಿಸಿ ಪದುಮನಾಭನ ಪಾದದ ಒಲುಮೆ ಎನಗಾಯಿತು ಎಂದು ನಡೆದ ಜೀವ.
ನಮ್ಮ ಪೀಳಿಗೆ ಇರುವವರೆಗೆ ಪಿ.ಬಿ.ಎಸ್., ರಫಿ, ಮುಖೇಶ್ ಎಲ್ಲರೂ ಶಾರೀರಿಕವಾಗಿ ಇರುತ್ತಾರೆ.
ವಾಣಿ, ಸಿಂಗಪುರ.
In reply to ನಮಸ್ಕಾರ,"ವಸಂತದಲಿ ಹಾಡು by ramvani
ನಮಸ್ಕಾರ. ಇನ್ನೂ ನಿಮ್ಮ ಲೇಖನ
ನಮಸ್ಕಾರ. ಇನ್ನೂ ನಿಮ್ಮ ಲೇಖನ ಓದಿಲ್ಲ. ಗೊತ್ತಿರುವ ವಿಷಯವನ್ನೇ ಬರೆದಿರುತ್ತೀರಿ . ಆದರೆ 'ಪಾಟೀಲ್ ಶೈಲಿಯಲ್ಲಿ'. ನೀವು ನಿಮ್ಮ ಲೇಖನಕ್ಕೆ ಇಟ್ಟಿರುವ ಶೀರ್ಷಿಕೆ, ನಿಜಕ್ಕೂ ಅದ್ಭುತವಾಗಿದೆ. ಅತಿ ಸಂದರ್ಭೋಚಿತವಾಗಿದೆ.
In reply to ನಮಸ್ಕಾರ. ಇನ್ನೂ ನಿಮ್ಮ ಲೇಖನ by venkatesh
ಕೋಗಿಲೆ ಪಕ್ಷಿಗೆ ಗಂಡು ಮತ್ತು
ಕೋಗಿಲೆ ಪಕ್ಷಿಗೆ ಗಂಡು ಮತ್ತು ಹೆಣ್ಣು ಪ್ರಬೇಧಗಳಿರಬಹುದು...ಕೋಕಿಲಾ, ಕೋಗಿಲೆ ಸರಿ ಇರಬಹುದೇ ?
In reply to ಕೋಗಿಲೆ ಪಕ್ಷಿಗೆ ಗಂಡು ಮತ್ತು by venkatesh
ವೆಂಕಟೇಶ ರವರಿಗೆ ವಂದನೆಗಳು
ವೆಂಕಟೇಶ ರವರಿಗೆ ವಂದನೆಗಳು
ತಮ್ಮ ಅನಿಸಿಕೆ ನೊಡಿದೆ, ಎಲ್ಲ ಪಕ್ಷಿ ಪ್ರಬೇಧಗಳಿಗಿರುವಂತೆ ಕೊಗಲೆಯಲ್ಲಿಯೂ ಸಹ ಹೆಣ್ಣು ಗಂಡು ಪ್ರಬೇಧಗಳಿವೆ ಎಂದು ನನ್ನ ಅನಿಸಕೆ. ಕೋಕಿಲಾ, ಕೋಕಿಲೆ ಮತ್ತು ಕೋಗಿಲೆ ಈ ಪದ ಪ್ರಯೊಗಗಳು ಕನ್ನಡದಲ್ಲಿವೆ, ಧನ್ಯವಾದಗಳು.
In reply to ನಮಸ್ಕಾರ. ಇನ್ನೂ ನಿಮ್ಮ ಲೇಖನ by venkatesh
ವೆಂಕಟೇಶ ರವರಿಗೆ ವಂದನೆಗಳು
ವೆಂಕಟೇಶ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಈ ಕಂಪ್ಯೂಟರ್ ಯುಗದಲ್ಲಿ ಯಾವುದು ಅಸಾಧ್ಯ ? ಅದನ್ನು ತೆಗೆದಿಟ್ಟು ಕೊಂಡರೆ ಬೆರಳ ತುದಿಗೆ ಎಲ್ಲ ಮಾಹಿತಿಯನ್ನು ತಂದು ಸುರಿದು ಬಿಡುತ್ತದೆ. ನಿಜ ! ಆದರೆ ಬಾಲ್ಯದಿಂದ ನಮ್ಮಂತಹ ಜನ ಸಾಮಾನ್ಯರನ್ನು ರಂಜಿಸಿದ, ಮೌಲ್ಯಗಳನ್ನಿಟ್ಟುಕೊಂಡು ಬದುಕಿದ ಒಂದು ಸಭ್ಯ ಸುಸಂಸ್ಕೃತ ಜೀವದ ಅಗಲಿಕೆ ಅವರ ಬಗೆಗೆ ದಾಖಲಿಸ ಬೇಕೆಂದು ಮನಸು ಹೇಳಿತು ಅದಕ್ಕಾಗಿ ಈ ಲೇಖನ, ಪ್ರತಿಕ್ರಿಯೆಗೆ ಧನ್ಯವಾದಗಳು.
In reply to ನಮಸ್ಕಾರ. ಇನ್ನೂ ನಿಮ್ಮ ಲೇಖನ by venkatesh
>>>ಇನ್ನೂ ನಿಮ್ಮ ಲೇಖನ ಓದಿಲ್ಲ.
>>>ಇನ್ನೂ ನಿಮ್ಮ ಲೇಖನ ಓದಿಲ್ಲ. ಗೊತ್ತಿರುವ ವಿಷಯವನ್ನೇ ಬರೆದಿರುತ್ತೀರಿ .!!! ಇದು ಹೇಗೆ ಸಾಧ್ಯಾ? ವೆಂಕಟೇಶರೆ, ನೀವು ಯಾವ ಅರ್ಥದಲ್ಲಿ ಈ ಪದ ಪ್ರಯೋಗ ಮಾಡುತ್ತೀರೋ ಗೊತ್ತಾಗುತ್ತಿಲ್ಲ. ಹೆಸರುವಾಸಿ ವ್ಯಕ್ತಿಯ ಬಗ್ಗೆ ಗೂಗಲಿಸಿದರೆ ಎಲ್ಲಾ ವಿಷಯ ಗೊತ್ತಾಗುವುದು. ಹೊಸ ವಿಷಯ ಸೇರಿಸಬೇಕಾದರೆ ತೀರಾ ಪರಿಚಿತರು ಅಥವಾ ಸಂಬಂಧಿಗಳಿಂದ ಮಾತ್ರ ಸಾಧ್ಯ. ನೀವು ಹೀಗೆ ಬರೆದಿರುವುದರಿಂದ ಮಂಗಳವಾರ ನಿಧನರಾದ ಸುಪ್ರಸಿದ್ಧ ಗಾಯಕಿ"ಶಂಶಾದ್ ಬೇಗಂ" ಬಗ್ಗೆ ಪಾಟೀಲರಿಂದ ಶೃದ್ಧಾಂಜಲಿ ಬಂದೇ ಇಲ್ಲ. ನೀವಾದರೂ ಬರೆಯಿರಿ. ಸಂಪದದವರು ಮರೆತಿದ್ದಾರೆ ಎಂದಾಗಬಾರದಲ್ಲ..
In reply to ನಮಸ್ಕಾರ,"ವಸಂತದಲಿ ಹಾಡು by ramvani
ರಾಮವಾಣಿ ಯವರಿಗೆ ವಂದನೆಗಳು
ರಾಮವಾಣಿ ಯವರಿಗೆ ವಂದನೆಗಳು
ಪಿಬಿಎಸ್ ಲೇಖನ ಕುರಿತು ತಾವು ಬರೆದ ಪ್ರತಿಕ್ರಿಯೆಯ ಎರಡು ಸಾಲುಗಳು ನನ್ನನ್ನು ಯೊಚನೆಗಬೆ ಹಚ್ಚಿತು, ತಾವು ದಾಖಲಿಸಿದಂತೆ ಪಿಬಿಎಸ್, ರಫಿ ಮತ್ತು ಮುಖೇಶ ಅಸಾಮಾನ್ಯ ತಾಕತ್ತಿನ ಗಾಯಕರೆ ! ಜೊತೆಗೆ ತಲತ್ ಮೆಹಮ್ಮೂದ್, ಮನ್ನಾಡೆ, ಮಹೇಂದ್ರ ಕಪೂರ, ಬರ್ಮನ್ ದಾ, ಹೇಮಂತ ದಾ ಎಷ್ಟೊಂದು ಗಾಯಕರು ಅಗಲಿ ಹೊದರು ಅಲ್ಲವೆ ? ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಾ