" ವಸಂತದ ನಿರೀಕ್ಷೆ "

" ವಸಂತದ ನಿರೀಕ್ಷೆ "

 


ರಕ್ತದ ಕಣ ಕಣಗಳನು
ಥರ ಥರಗುಟ್ಟಿಸುವ
ಶಿಶಿರದ ಮೈಕೊರೆವ ಚಳಿ


ಎಲೆಯುದುರಿಸಿ ನಿಂತ
ತರುಲತೆ ಸಮೂಹ
ಮರಗಳ ಸುತ್ತೆಲ್ಲ ಹಬ್ಬಿ
ಹರಡಿದ 'ದರಗುಗಳ ರಾಶಿ'
ಹೊತ್ತಿ ಉರಯಲು ಸಾಕು
ಒಂದು 'ಕಿಡಿ ಸಂಪರ್ಕ'


ಬಿರು ಬಿಸಿಲು ಕಂಗೆಟ್ಟ ಹಕ್ಕಿ
ಹಾಡುತಿದೆ 'ವಿಷಾದ ಗೀತೆ'
ಬಳಲಿ ಬೆಂಟಾಗಿ ಬಸವಳಿದ
ಪಶು ಪಕ್ಷಿ ಗಣ
ಎದೆಯಾಳದಲಿ
'ಸಂತಸದ ಚಿಲುಮೆ'
ವಸಂತನಾಗಮನದ ನಿರೀಕ್ಷೆಯಲ್ಲಿ


ಸೊಕ್ಕಿದ ಕಾಮದ
ಉಲ್ಲಾಸದ ಮಾರ
ಬೀಸುವ ಮಂದಾನಿಲದಿ
ತೇಲಿ ಬರುತಿಹ
ರತಿಯ ಬೆರಗು  ಕೇಳಿ
ಬರುತಿಹ 'ನಲ್ಮಾತುಗಳು'
ಆಕೆಯ ಬೆಡಗು ಬಿನ್ನಾಣಕ್ಕೆ
ಮರುಳಾದ
ಸುಕುಮಾರ 'ಮಾರ'


ಮನದ ಪರದೆಯ ಮೇಲ್ಸುಳಿವ
ಕಳೆದ ವಸಂತದಲಿ ಕಳೆದ
ಸುಂದರ 'ಮಿಲನದ ಕ್ಷಣಗಳು'
ದೀರ್ಘ ಕಾಲದ ವಿರಹ
ಕಳೆದದ್ದೆ ಆ ಗತ
'ಮಧುರ ನೆನಪುಗಳಲಿ'


ಪ್ರಣಯಿಗಳ ಸಲ್ಲಾಪ
ಕಳೆದ ಒಂದೊಂದು ಕ್ಷಣ
ಆಡಿದೊಂದೊಂದು ಮಾತು
ಯಾವುದೂ ವ್ಯರ್ಥವಲ್ಲ
ಪ್ರೇಮ ಸಂಬಂಧಗಳಲ್ಲಿ
ರತಿಯ ಹೊಳೆವ ಕಣ್ಣುಗಳು
ಭಾವವರಸಿ ಕನಸಲಿ ತನ್ಮಯ
ಮದನಿಕೆಯ ಕನವರಿಕೆ
ಗಾಳಿಯಲಿ 'ತೊನೆವ ನಾಗರ'


ಯಕ್ಷಿಣಿಯ ಆಗಮನಕೆ
ಕಾದು ಹೈರಾಣವಾಗಿಹ ಯಕ್ಷ
ವಿರಹಿಣಿಯ ಹೃದಯದಲಿ
ಅದೆಷ್ಟು ಭಾವಗಳು?
ಶಬ್ದಗಳ ರೂಪದಲಿ
ಹೊರ ಬರಲು ಕಾದಿವೆ
ನಲ್ನುಡಿಯ ಕೇಳಿಕೆಗೆ
'ಕಿವಿಗಳ ಕಾತರ'


ವಿರಹಿಣಿಗೆ ದುಗುಡಗಳಿವೆ
ಕಲಹಗಳಿವೆ ಆಕ್ಷೇಪಗಳಿವೆ
ಮೌನ ಸಂಧಾನಗಳಿವೆ
ಎಷ್ಟೆಲ್ಲ ವಿಷಯಗಳಿವೆ
ವಸಂತದಲಿ ವಿನಿಮಯಕೆ


ಬರಲಿರುವ ವಸಂತದಲಿ
ಯಕ್ಷ ಯಕ್ಷಿಣಿಯರು
ಎದುರು ಬದುರಲಿ ಕೂತು
ಮನ ಬಿಚ್ಚಿ
ರಾಗ ದ್ವೇಷಾಸೂಯೆಗಳ
ಹಂಚಿ ಕೊಳಲಿದ್ದಾರೆ


ಅಮರ ಪ್ರೇಮದ ಬಂಧ
ಗಟ್ಟಿ ಗೊಳಿಸಲಿದ್ದಾರೆ
ವಸಂತದಲಿ ವಿಹರಿಸಿ
ವಿರಹಕೆ ವಿದಾಯ ಹೇಳಿ
ಮತ್ತೆ ವ್ಯಾಪಿಸಲಿಹರು
ಮುಂಬರುವ ವಸಂತಗಳಲ್ಲಿ
ಜಗದ ತುಂಬ ಹೃದಯ ತುಂಬಿ


            *
 

Rating
No votes yet

Comments

Submitted by tthimmappa Sat, 04/13/2013 - 12:53

ಕವನವನ್ನು ಓದಿ ವಸ೦ತದ‌ ನಿರೀಕ್ಷೆಯಲ್ಲಿ ಕುಣಿಯುವ೦ತಾಯಿತು ಮನ‌...................................................,,,, ....... ಧನ್ಯವಾದಗಳು ಸಾರ್..

Submitted by venkatb83 Sat, 04/13/2013 - 14:09

"ಪ್ರಣಯಿಗಳ ಸಲ್ಲಾಪ
ಕಳೆದ ಒಂದೊಂದು ಕ್ಷಣ
ಆಡಿದೊಂದೊಂದು ಮಾತು
ಯಾವುದೂ ವ್ಯರ್ಥವಲ್ಲ"

"ವಿರಹಿಣಿಗೆ ದುಗುಡಗಳಿವೆ
ಕಲಹಗಳಿವೆ ಆಕ್ಷೇಪಗಳಿವೆ
ಮೌನ ಸಂಧಾನಗಳಿವೆ
ಎಷ್ಟೆಲ್ಲ ವಿಷಯಗಳಿವೆ
ವಸಂತದಲಿ ವಿನಿಮಯಕೆ"

;()))

ಹಾ .. ಸ್ಸರಿ ..!

ಹಿರಿಯರೇ ನೀವ್ ಸೇರಿಸಿದ ಎರಡು ಕವನಗಳು ಸೂಪರ್ ... ಸಖತ್ ..
ಕವನ ಓದಿ ಈ ಬಿರು ಬಿಸಿಲಲ್ಲೂ ತಂಗಾಳಿ ಸುಳಿದಂತೆ ಆಯ್ತು ,ಹಾಯೆನಿಸಿತು ,ಇದು ಖಂಡಿತ ಉತ್ಕ್ರೇಕ್ಷೆ ಮಾತಲ್ಲ .. ಕವನದ ಸತ್ವ ಹಾಗಿದೆ ..

ನೀವ್ ಬಳಸಿದ ಪದಗಳ ಅವುಗಳ ವರ್ಣನೆ ಹೇಗೆ ಹೇಳಲಿ ..
ಇಷ್ಟು ಚೆನ್ನಾಗಿ ಬರೆವ ನಿಮ್ಮ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಕಾರ್ಯ ಆಗಬೇಕಿದೆ , ಮತ್ತು ನಿಮ್ಮ ಈ ಎಲ್ಲ ಬರಹಗಳನ್ನು ನ್ನು ಮಾಸಿಕ -ವಾರ ಪತ್ರಿಕೆಗಳಿಗೆ ವಿಷೆಶಾಂಕಗಳಿಗೆ ಕಳುಹಿಸಿ ಅವು ಅಲ್ಲಿ ಪ್ರಕಟವಾಗಲಿ .. ಸಮಸ್ತ ಕರುನಾಡ ಮಂದಿ ಆ ಬರಹಗಳನ್ನು ಓದಲಿ -ಮೆಚ್ಚಲಿ -ಅವು ಅವರನ್ನು ಮುಟ್ಟಲಿ - ಮನ ತಟ್ಟಲಿ

ಶುಭವಾಗಲಿ
\।

Submitted by H A Patil Fri, 04/19/2013 - 16:53

In reply to by venkatb83

ಸಪ್ತಗಿರಿಯವರಿಗೆ ವಂದನೆಗಳು
ಈ ಕವನಕ್ಕೆ ತಾವು ಬರೆದ ಪ್ರತಿಕ್ರಿಯೆಯನ್ನು ಈ ದಿನ ನೊಡಿದೆ. ಕವನ ಕುರಿತು ತಾವು ಪ್ರತಿಕ್ರಿಯಿಸಿದ ರೀತಿ ನನ್ನ ಹೃದಯ ತುಂಬಿ ಬಂದಂತಾಯಿತು, ಕವನ ಬರದದ್ದಕ್ಕೆ ಸಾರ್ಥಕ ಎನಿಸಿತು. ಕವನವನ್ನು ಅಸ್ವಾದಿಸುವ ಸಹೃದಯತನ ತಮಗಿದೆ, ಕವನದ ಆತ್ಮಕ್ಕೆ ನಿಮ್ಮ ಆತ್ಮವನ್ನು ತೆರೆದಿಟ್ಟು ಕೊಂಡಿದ್ದೀರಿ ಹೀಗಾಗಿ ಕವನ ನಿಮ್ಮ ಮೇಲೆ ಪ್ರಭಾವ ಬೀರಿದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.