ವಸಂತದ ವಿಷಾದ, ಏಪೆಕ್ ಮತ್ತು ಸೋಲ್ಸನಿತ್ಸಿನ್

ವಸಂತದ ವಿಷಾದ, ಏಪೆಕ್ ಮತ್ತು ಸೋಲ್ಸನಿತ್ಸಿನ್

ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್‌ನ "ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್‌" ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದಲಾಗಿರಲಿಲ್ಲ. ಇದೊಂದು ಪ್ರೇರಣೆ ಸಾಕಾಯ್ತು. ಕೈಗೆತ್ತಿಕೊಂಡೆ.

ನಡುವೆ ಏಪೆಕ್ ಸಮಿಟ್‌ನ ಪ್ರೊಟೆಸ್ಟ್‌ನಲ್ಲಿ ಪಾಲ್ಗೊಂಡಾಗ ನಾನು ಹಲವರಿಗೆ ಉತ್ತರಿಸಬೇಕಾಗಿ ಬಂದ ಪ್ರಶ್ನೆ "ನೀನು ಏನನ್ನು ವಿರೋಧಿಸುತ್ತಿದ್ದೀಯ?" ಕೆಲಸ, ಹಣ ಆಸೆಗಳು ಎಲ್ಲ ಇರುವ ನಿನಗೆ ತೊಂದರೆ ಏನು? ಅಂದರೆ, ವಯ್ಯಕ್ತಿಕವಾಗಿ ನಿನಗೆ ಏನು ಅನ್ಯಾಯವಾಗಿದೆ? ಪ್ರಶ್ನೆ ಕೇಳಿದವರು ಉತ್ತರಿಸದ ನನ್ನನ್ನು ಒಂದು ಕ್ಷಣ ದಿಟ್ಟಿಸಿ, ಕೇಳಬಾರದಿತ್ತು ಎಂಬಂತೆ ತಟ್ಟನೆ ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಅವರ ತಲೆಯಲ್ಲಿ ಪ್ರಶ್ನೆ. ನನ್ನ ತಲೆಯಲ್ಲಿ ಅದಕ್ಕೆ ಉತ್ತರವಾಗಲು ನಿರಾಕರಿಸುವ ಹಲವು ವಿಚಾರಗಳು.

ಸಿಡ್ನಿಯಲ್ಲಿ ವಸಂತ ಛಳಿಗಾಲದ ಬಟ್ಟೆ ಕಳಚಿ ಹೊಸ ಉನ್ಮಾದದಿಂದ ಕುಣಿಯುತ್ತಿದೆ. ಹಚ್ಚವಾಗಿ ನಗುವ ಬಿಸಿಲು. ಮಳೆ ಬಂದು ತೊಳೆದಿಟ್ಟ ನೆಲದಲ್ಲಿ ಹಸಿರು ಚಿಗುರು. ಎಲ್ಲ ಹೋದ ವರ್ಷದಂತೆಯೇ. ಆದರೆ ಈ ವರ್ಷ ಆಸ್ಟ್ರೇಲಿಯಾದ ಬರಗಾಲ ಕೊನೆಗಾಣುತ್ತಿರಬಹುದು ಎಂಬ ಉಲ್ಲಾಸವೂ ಇದೆ. ಅದು ಮನಸ್ಸನ್ನು ಹಗುರಾಗಿಸಿದೆ.

ಸೋಲ್ಸನಿತ್ಸಿನ್ ಸೈಬೀರಿಯಾದಲ್ಲಿ ಅಮಾನುಷವಾಗಿ ತಾನೇ ಬಂಧಿಸಲ್ಪಟ್ಟಿದ್ದ. ಹತ್ತಾರು ವರ್ಷ ಮಾರಣಾಂತಿಕ ಹಿಮದಲ್ಲಿ ಹಿಂಸೆ ಅನುಭವಿಸಿದ್ದ. ಸಾಯದೆ ಉಳಿದು ಪಾರಾಗಿ ತನ್ನ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದ. ಇವಾನ್‌ ಪಾತ್ರದ ಮೂಲಕ ತನ್ನ ಇಡೀ ಅನುಭವವನ್ನು ಒಂದು ದಿನದ ಆಗು ಹೋಗಿನಲ್ಲಿ ಪ್ರತಿಫಲಿಸುತ್ತಾನೆ. ಅವನು ಅಲ್ಲಿ ಯಾಕೆ ಬಂಧನದಲ್ಲಿದ್ದಾನೆ? ಕತೆಯ ಮೂರನೇ ಒಂದು ಭಾಗದವರೆಗೂ ಕತೆಗಾರ ಹೇಳುವುದಿಲ್ಲ. ನಂತರ ಅದನ್ನು ಸಹಜವಾಗಿ ಹೇಳುತ್ತಾನೆ. ಆದರೆ, ಅಷ್ಟರಲ್ಲಿ ಅದು ಗೌಣ ಎಂದು ಅನಿಸುವಲ್ಲಿಗೆ ಓದುಗ ಬಂದು ನಿಂತಿರುತ್ತಾನೆ. ಅದೊಂದು ಅಚ್ಚರಿ, ಆದರೆ ಸಹಜವೂ ಕೂಡ.

ನಮ್ಮ ವಯ್ಯಕ್ತಿಕದ ಆಚೆಗೆ ನಡೆಯುವ ಅನ್ಯಾಯ ನಮಗೂ ಸಂಬಂಧಪಟ್ಟಿದ್ದು. ಏಪೆಕ್ ಪ್ರೊಟೆಸ್ಟ್ ಬಗ್ಗೆ ನನ್ನನ್ನು ಪ್ರಶ್ನಿಸಿದವರಿಗೆ ಅದನ್ನು ಹೇಗೆ ಹೇಳಲಿ? ಮಾನವೀಯತೆ ಇಲ್ಲದ ಪರಿಸರ ನನ್ನ ಮಾನವೀಯತೆಯನ್ನೂ ಕಸಿದುಕೊಳ್ಳುತ್ತದೆ. ಹೇಗೆ ಅದನ್ನು ಅರ್ಥಮಾಡಿಸಲಿ? ಆರ್ಥಿಕ ಏಳಿಗೆಗೆ ಬಲಿಯಾಗುವವರು ಯಾರು? ಅವರು ಯಾಕೆ ಬಲಿಯಾಗಬೇಕು? ಈ ಪ್ರಶ್ನೆಗಳನ್ನೆಲ್ಲಾ ಹೇಗೆ ಉತ್ತರವನ್ನಾಗಿ ಮಾರ್ಪಡಿಸಿ ಪ್ರಶ್ನಿಸದವರ ಮುಂದೆ ಹಿಡಿಯಲಿ? ಒಳಗೊಳಗೇ ಇದೆಲ್ಲದರ ಜತೆ ಗುದ್ದಾಡುತ್ತಿದ್ದೇನೆ. ಆದರೆ ಹೊರಗೆ ನಗುತ್ತೇನೆ.

ವಸಂತದ ಬಿಸಿಲಿಗೆ ಮುಖವೊಡ್ಡಿ ಅಸಾಧಾರಣ ಸ್ವಾಸ್ಥ್ಯ ಅನುಭವಿಸುತ್ತೇನೆ. ವಸಂತಕ್ಕೆ ತಾನು ಕೊಂಚ ಬೇಗ ಬಂದುಬಿಟ್ಟೆನೆ ಎಂಬ ಅನುಮಾನ. ಮತ್ತೊಂದು ವಾರ ಮಳೆ, ಛಳಿ. ಜನರಿಗೂ ಕೊಂಚ ಗಲಿಬಿಲಿ. ನಿಜವಾಗಿಯೂ ಇದು ವಸಂತವೇ? ವಸಂತ ಬಂದು ಬಿಟ್ಟಿತೆ? ಮರೆತು ಬಿಟ್ಟೆನೆ? ವಸಂತವೆಂದರೆ ಇದೇನೆ? ಇದು ನೋಡಿ ಯಾವಾಗಲೂ ಹೀಗೆ. ಕಾಲ ಬದಲಾಗುವುದು ಸ್ವಿಚ್ ಹಾಕಿದ ಹಾಗಲ್ಲ. ವಿದ್ಯುತ ದೀಪ ಹಾಕಿ ಆರಿಸಿದಂತಲ್ಲ. ಅದು ನಿಧಾನಕ್ಕೆ ಅನುಮಾನದಿಂದ ಜರುಗುತ್ತದೆ. ಅದಕ್ಕೆ ಹಲವಾರು ಸಣ್ಣ ಸಣ್ಣ ಒತ್ತಡಗಳಿರಬೇಕಾಗುತ್ತದೆ. ಅದನ್ನು ನಾನು ನೀವು ತರಬೇಕಷ್ಟೆ. ಸಣ್ಣ ಸಣ್ಣ ಪ್ರಮಾಣದಲ್ಲಾದರೂ ಸರಿಯೆ.

ಸೋಲ್ಸನಿತ್ಸಿನ್ ವಿವರಿಸುವ ದಿನವೂ ಅದರ ಹಿಂದಿನ ದಿನದಿಂದ ಬೇರೆಯಾಗಿ ಕೊಯ್ದಿಟ್ಟದ್ದಲ್ಲ. ಹಿಮದಲ್ಲಿ ಇಡೀ ದಿನ ಒದ್ದಾಡಿ ರಾತ್ರಿ ತನ್ನ ಹಾಸಿಗೆಯ ಹರಕು ಬಟ್ಟೆ, ತೂತು ಕಾಲುಚೀಲಗಳಲ್ಲೇ ಶಾಖ ಹುಟ್ಟಿಸಿಕೊಳ್ಳುವುದು. ಮತ್ತೆ ರೋಲ್-ಕಾಲ್ ಕರೆದು ಬಿಟ್ಟಾರು ಎಂದು ಹೆದರುತ್ತಾ ದೇಹ ನಿದ್ದೆಗಿಳಿಯುವುದು. ಆ ನಿದ್ದೆಯೊಂದೆ ಹಿಂದಿನ ದಿನದಿಂದ ಮುಂದಿನ ದಿನವನ್ನು ಬೇರ್ಪಡಿಸುವುದು. ಓದುತ್ತಿರುವ ವಸಂತದಲ್ಲಿ ನನ್ನನ್ನು ಇವೆಲ್ಲಾ ನಡುಗಿಸುತ್ತದೆ. ಅವನಿಗೆ ನಿದ್ದೆ ಅಗತ್ಯ. ಆದರೆ ಇವಾನ್ ಮಾಡುವ ನಿದ್ದೆ ಎಚ್ಚರ ತುಂಬಿದ ನಿದ್ದೆ. ನಿದ್ದೆಯಲ್ಲೂ ತಪ್ಪು ಮಾಡಿಬಿಟ್ಟರೆ?

ಏಪೆಕ್ ಪ್ರೊಟೆಸ್ಟಿಗೆ ಹೋಗಲು ಏನು ಕಾರಣ ಎಂದು ಕೇಳುವುದೇ ಒಂದು ರಾಜಕೀಯ ಪ್ರಶ್ನೆ ಅನ್ನಿಸಿತು. ಹಲವಾರು ಕಾರಣ ಕೊಟ್ಟು ಸಮರ್ಥಿಸಿಕೊಳ್ಳಬಹುದು. ನಾನು ಅನ್ನುವ ಇದು, ನಾನೊಬ್ಬನೇ ಅಲ್ಲ. ನಾನು ನನ್ನ ಸಮುದಾಯ, ನಾನು ನನ್ನ ಸಮಾಜ ಕೂಡ. ಅದಕ್ಕೆ ಹಿಡಿದ ಹುಳುಕು ನನಗೂ ಹಿಡಿದ ಹಾಗೆ. ನಾನು ನಿದ್ದೆ ಮಾಡುತ್ತಿಲ್ಲ. ಎಚ್ಚರವಾಗಿದ್ದೀನಿ. ಹಾಗೆಂದು ನನಗೆ ನಾನೇ ಹೇಳಿಕೊಳ್ಳುವ ಒಂದು ವಿಧಾನ ಇದು. ಚೆನ್ನಾಗಿ ನಿದ್ದೆ ಮಾಡವಂಥ ಸ್ವಸ್ಧ ಪರಿಸರದಲ್ಲಿ ಏಕೆ ನಿದ್ದೆಗೆಡಬೇಕು? ಎಚ್ಚರ ಸವಲತ್ತಲ್ಲ. ಎಚ್ಚರ ಹೊಟ್ಟೆ ತುಂಬಿದವರ ಸೌಖ್ಯವಲ್ಲ. ಅದೊಂದು ಅಗತ್ಯ. ಅಸಹನೆಯನ್ನು ಹಂಚಿಕೊಳ್ಳುವುದೂ ಅಷ್ಟೆ.

ಸೋಲ್ಸನಿತ್ಸಿನ್ ಕತೆಯನ್ನು ೧೯೬೨ರಲ್ಲಿ ಸೋವಿಯತ್ ಪ್ರಧಾನಿ ಕೃಷೇವ್‌ನ ಪರವಾನಗಿ ಪಡೆದು ಪ್ರಕಟಿಸಿದರಂತೆ. ಅದು ಕಾಲಮಾನದಲ್ಲಿ ತುಂಬಾ ದೂರದ ಸಂಗತಿ. ರಾಜಕೀಯ ಪರಿಸ್ಥಿತಿಯಲ್ಲೂ ಕೂಡ. ಹಾಗಾಗಿಯೇ ಇವಾನ್ ಕತೆ ಚರಿತ್ರೆಯಂತೆ ಕಾಣುತ್ತದೆ. ಆದರೆ ಒಂದು ವಿಪರ್ಯಾಸ ನೋಡಿ. ಮರಣ ಪದ್ಯ ಕೂಡ, ಲೋಕದಲ್ಲೇ ಅತಿ ಹೆಚ್ಚು ಸ್ವಾತಂತ್ಯ್ರವಿರುವ ಅಮೇರಿಕದಂಥ ದೇಶದ ಆಡಳಿತದ ಪರವಾನಗಿ ಪಡೆದು ಪ್ರಕಟವಾಗಬೇಕಾಯಿತು.

ನೋಡಿ - ನಿದ್ದೆ ವಿಪರ್ಯಾಸಗಳನ್ನು ಒಂದಕ್ಕೊಂದು ಹೊಂದಿಸಿಬಿಡುತ್ತದೆ. ಅದನ್ನು ಕನಸಾಗಿ ಹೆಣೆದು ನಾವು ಅದರಲ್ಲಿ ಕಳೆದುಹೋಗುವಂತೆ ಮಾಡಿಬಿಡುತ್ತದೆ. ಎಚ್ಚರ ಮಾತ್ರ ಅದರೊಡನೆ ಗುದ್ದಾಡ ಬೇಕಾಗುತ್ತದೆ.

ವಸಂತದ ಅನುಮಾನ ಈಗ ವಿಷಾದವಾಗಿ ಕಾಡುತ್ತದೆ. ವಿಷಾದದಿಂದ ಕೈಚೆಲ್ಲದೆ, ವಿಷಾದವನ್ನು ಇಟ್ಟುಕೊಂಡೂ ಎಚ್ಚರವಾಗಿರುವುದು ಪಡಬೇಕಾದ ಪಾಡಷ್ಟೇ ಅಲ್ಲ. ಅದು ಜವಾಬ್ದಾರಿ ಕೂಡ. ಅದನ್ನು ನನಗೆ ನಾನೇ ಆಗಾಗ ಹೇಳಿಕೊಳ್ಳುವುದೂ ಮುಖ್ಯ. ಅದು ಯಾವ ರೀತಿಯಲ್ಲಾದರೂ ಆಗಬಹುದು.

ಇವಾನ್ ಹಿಮದ ಆಳದಲ್ಲಿ,
ವಸಂತಕ್ಕೆ ಎದುರು ನೋಡುತ್ತಾ,
ಸಣ್ಣಪುಟ್ಟ ಪ್ರತಿರೋಧವನ್ನು ತೋರಿಸುತ್ತಾ ಬದುಕುಳಿದ ಹಾಗೆ,
ತೋರಿಸಿದ್ದರಿಂದಲೇ ಬದುಕುಳಿದ ಹಾಗೆ...

Rating
No votes yet

Comments