ವಸಂತ - ಲಕ್ಷ್ಮೀಕಾಂತ ಇಟ್ನಾಳ
ವಸಂತ
-ಲಕ್ಷ್ಮೀಕಾಂತ ಇಟ್ನಾಳ
ಹೂ ತುರುಬಲ್ಲಿ ಕಾದಿದೆ ಒಂಟಿಗಾಲಲ್ಲಿ,
ವಸಂತನ ಸಂತಸಕೆ, ಹೂಗನಸಲ್ಲಿ....
ಪರಿಮಳದ ಕಾಲಲ್ಲಿ ವನವೆಲ್ಲ ನಲಿನಲಿದು,
ಗಂಧ ಹಾಡಾಗಿದೆ ತಂಗಾಳಿಯೆದೆಯಲ್ಲಿ
ಬನದ ಬಾನ್ದಳದಲ್ಲಿ ಕಡಲಾದ ಮೋಡಗಳು
ಮಳೆಯಾಗಿ ಸುರಿದಿಹುದು ಹೂಸುಮಗಳಿಳೆಗೆ
ಪ್ರೀತಿ ಪ್ರೇಮಗಳೋಂಕಾರವಾಗಿ ನೇಸರದ ಮಂತ್ರದಲಿ
ಭ್ರಮರಗಳ ಬರುವಿಗರಳಿದ ಮೊದಲ ಮಿಲನಹಾಸಿಗೆ
ಹಸಿರು ಮೈಗೆ ಮಖಮಲ್ಲಿನ ಬಿಳಿಸೀರೆ ಕುಪ್ಪಸ ತೊಡುಗೆ
ಮೈನೆರೆದ ಋತುವಲ್ಲಿ ಕನಸಲ್ಲೂ ಕರೆವುದು ಮದನನ ಸನ್ನಿಧಿಗೆ
ಪರಿಮಳದ ಮತ್ತಿಗೆ ಸೋತ ದುಂಬಿಗಳ ಗುಂಯಗುಡುವ ಝೇಂಕಾರ
ಮತ್ತಿನಲಿ ಮತ್ತೊಮ್ಮೆ ಮದವೇರಿದೆ ಹೂನೆಲದ ಕಾದೆದೆಗೆ
ಹಸಿರು ಮಳೆಯಾಗಿ ಮತ್ತೆ ಹೂವಾಗಿ ತುಳುಕಾಡಿ ನಲಿಯುತಿವೆ
ಹೂ ಹಣೆಯಲಿಬ್ಬನಿ ತಬ್ಬುತಿವೆ ಮಿಲನೋತ್ಸವದ ಬೆವರಮಾಲೆ
ನಗುವಾಗಿ ಮಗುವಾಗಿ ಹರಕೆ ಸಂದಂತೆ, ಘಮವೆಂಬ ಅಮೃತ ಹರಡುತಿವೆ
ಪ್ರಕೃತಿಯ ಚಿತ್ತ ಕುಂಚವಾಗಿ ಬರೆಯುತಿದೆ ವಸಂತಗೆ ಪ್ರಣಯದೋಲೆ
Comments
ಉ: ವಸಂತ - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಹನುಮಂತ ಅನಂತ ಪಾಟೀಲ್ ಸರ್, ತಮ್ಮ ಪ್ರೇರಣಾತ್ಮಕ ನುಡಿಗಳು ಹೆಚ್ಚಿನ ಸಾಹಿತ್ಯದೆಡೆಗೆ ಬರಹಗಾರನನ್ನು ಕೊಂಡೊಯ್ಯುವುದು ಖಂಡಿತ ಸತ್ಯ. ಈ ತರಹದ ಪ್ರೇರಣೆ ನೀಡುವವರು ಅಪರೂಪ. ತಾವಂತೂ ಅಪರೂಪದಲ್ಲಿ ಅಪರೂಪದವರು ಸರ್. ಈ ಮೂಲಕ ತಮಗೆ ಶ್ಲಾಘನೀಯ ಅಭಿನಂದನೆಗಳು,ಹಾಗೆಯೇ ತಮ್ಮ ಮೆಚ್ಚುಗೆಗೆ ಎಂದಿನಂತೆ ಧನ್ಯ ಸರ್. ವಂದನೆಗಳು