ವಾಯ್! ಶ್ರೀರಾಮಸೇನೆ ಯಾಕೆ "ಕಪಿಚೇಷ್ಟೆ" ಮಾಡ್ತಾ ಉಂಟು ಮಾರಾಯ?

ವಾಯ್! ಶ್ರೀರಾಮಸೇನೆ ಯಾಕೆ "ಕಪಿಚೇಷ್ಟೆ" ಮಾಡ್ತಾ ಉಂಟು ಮಾರಾಯ?

ಶ್ರೀರಾಮಸೇನೆಯೆಂದರೆ ಕಪಿಸೈನ್ಯ ತಾನೆ. ಕಪಿಗಳು ತಾನೆ ಹೀಗೆ ಇಲ್ಲದ ಅವಾಂತರಗಳನ್ನು ಸೃಷ್ಟಿಸುವುದು! ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣ ರಾಷ್ಟ್ರಮಟ್ಟದ ಸುದ್ದಿಯಾದದ್ದು. ಹಾಗೂ ಹಾಗೆ ಆದ ಸುದ್ದಿ ಮುಖ್ಯ ವಿಷಯವನ್ನು ಬಿಟ್ಟು "ರಾಮರಸ" "ಸೋಮರಸ" ಸೇವನೆಯ ಬಗ್ಗೆ ಕೇಂದ್ರೀಕೃತವಾದದ್ದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡ ಕಾರಣದಿಂದಾಗಿ. ಇಂದು "ಹಿಂದುತ್ವ"ವನ್ನು ಮುಂದಿಟ್ಟುಕೊಂಡು ಬಹುಸಂಖ್ಯಾತ ಹಿಂದೂಗಳ ಪ್ರತಿನಿಧಿಗಳಂತೆ ವರ್ತಿಸುತ್ತ ದೇಶದೆಲ್ಲೆಡೆ ಇಲ್ಲದ ಅವಾಂತರ ಸೃಷ್ಟಿಸುತ್ತಿರುವ ಈ "ಕೋಮುವಾದಿಗಳು" ಹಾಗೆ ಹಿಂದುತ್ವ ಎಂದು ಕರೆಯುತ್ತಿರುವುದಾದರೂ ಏನನ್ನು? ಇನ್ನು ಪಾಶ್ಚಿಮಾತ್ಯರ ಅನುಕರಣೆಯಿಂದಾಗಿ ನಮ್ಮ ದೇಶದ ಸಂಸ್ಕೃತಿ ಹಾಳಾಗುತ್ತಿದೆ ಎಂದು ಬೊಬ್ಬೆಯಿಡುತ್ತಿರುವ ಈ ಮಂದಿ "ನಮ್ಮ ದೇಶದ ಸಂಸ್ಕೃತಿ" ಎಂದು ಕರೆಯುತ್ತಿರುವುದಾದರೂ ಯಾವುದನ್ನು? ಎಂತ ಹೇಳ್ತೀರಿ ಮಾರಾಯ್ರೆ ನೀವು?

ಇಡೀ ಭಾರತ ದೇಶಕ್ಕೆ ಅದರದ್ದೇ ಆದ ಒಂದು ಸಂಸ್ಕೃತಿ ಎಂಬುದು ಇದೆಯೇ? ಹಾಗಿದ್ದರೆ ಅದು ಯಾವುದು? ಎಂಬುದನ್ನು ಇವರು ತೋರಿಸಬಲ್ಲರೇ? ಇವರು ನಮ್ಮ ಸಂಸ್ಕೃತಿ ಎಂದು ಹೇಳುತ್ತಿರುವುದನ್ನು ಬಹುಸಂಖ್ಯಾತ ಹಿಂದೂಗಳಲ್ಲಿ ಎಷ್ಟು ಜನರು ತಮ್ಮದಾಗಿಸಿಕೊಂಡಿದ್ದಾರೆ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಏಳುತ್ತಲೇ ಹೋಗುತ್ತವೆ. ಭಾರತದ ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದ ಹಾಗೆ ಒಂದೊಂದು ಪುಟವೂ ಒಂದೊಂದು ಸಂಸ್ಕೃತಿಯನ್ನು ನಮ್ಮ ಮುಂದೆ ಬಿಚ್ಚಿಡುತ್ತಾ ಹೋಗುತ್ತದೆ. ಇಂದು ನಲ್ವತ್ತು-ಐವತ್ತು ಕಿಲೋ ಮೀಟರುಗಳಿಗೆ ಒಂದು ನಾಡಿನ ಭಾಷೆ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ ಹೋದ ಹಾಗೆಯೇ ಅಲ್ಲಿನ ಸಂಸ್ಕೃತಿಯೂ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಅಂದ ಮೇಲೆ ಜಗತ್ತಿನ ಏಳನೇ ಅತಿ ದೊಡ್ಡ ದೇಶವಾದ ಭಾರತಕ್ಕೆ ಇವರು ಹೇಳುವಂತ ಅಂತ ಒಂದು ಸಂಸ್ಕತಿ ಇದೆಯೇ?

ಈ "ನಮ್ಮ ಸಂಸ್ಕೃತಿ" ಎಂದು ವಾದವನ್ನು ಮುಂದಿಡುತ್ತಿರುವವರು ಪುರಾತನ ಭಾರತದಲ್ಲಿ ವರ್ಣಾಶ್ರಮ ಪದ್ಧತಿಯನ್ನು ಜಾರಿಗೆ ತಂದು ಹಿಂದೂ ಧರ್ಮಶಾಸ್ತ್ರ ಎಂಬ ಹೆಸರಿನಲ್ಲಿ ನೀತಿಸಂಹಿತೆಯನ್ನು ರೂಪಿಸಿದ ಮನುಮಹಾಶಯನ ಹಿಂ"ಬಾಲಕ"ರಷ್ಟೆ. ಈಗ ನಮ್ಮ ಸಂಸ್ಕೃತಿಯ ಹೆಸರು ಹೇಳಿ ಇವರು ಮರುಪ್ರತಿಷ್ಟಾಪನೆಗೆ ಹೊರಟಿರುವುದು ವರ್ಣಾಶ್ರಮದಂತಹ ಹೀನ ವ್ಯವಸ್ಥೆಯನ್ನಷ್ಟೆ. ಹಾಗೆಯೇ, "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ"(ಯಾವ ಸ್ತ್ರೀಯೂ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ) ಎಂಬ ದಬ್ಬಾಳಿಕೆ, ದೌರ್ಜನ್ಯಗಳ ವಾದವನ್ನಷ್ಟೆ. ಇದು ಒಳ್ಳೆ ಇಲ್ಲ ಮಾರಾಯ್ರೆ!

ಎಲ್ಲದಕ್ಕಿಂತ ವಿಪರ್ಯಾಸದ ಸಂಗತಿಯೆಂದರೆ, ಹೀಗೆ ನಮ್ಮ ಸಂಸ್ಕೃತಿ ಎಂದು ವಾದಿಸುತ್ತ ಶ್ರೀರಾಮನನ್ನ ತಮ್ಮ ಆದರ್ಶವನ್ನಾಗಿ ಇಟ್ಟುಕೊಂಡು ಹೊರಟಿರುವ ಈ ಕಪಿ ಸೈನ್ಯ(ಪದೇ ಪದೇ ಇವರನ್ನು "ಕಪಿಗಳು" ಎಂದು ಕರೆಯುತ್ತಿರುವುದಕ್ಕೆ ಕಪಿಗಳ ಕ್ಷಮೆ ಕೋರುತ್ತೇನೆ. ಅವು ನಾವೆಂದು ಇಂತಹ ಹೀನ ಕೆಲಸ ಮಾಡಿದ್ದೀವಿ. ನಮ್ಮನ್ನು ಹಾಗೆ ಕರೆದಲ್ಲಿ ನಾವು defamation case ಹಾಕ್ತೀವಿ ಎಂದು ನನ್ನ ವಿರುದ್ಧ ಸಿಡಿದೇಳದ್ದಿದ್ದರೆ ಸಾಕು!)ದವರೇ ಮೊದಲನೆಯದಾಗಿ ಅಲ್ಪಸಂಖ್ಯಾತರು. ಈ ಹಿಂದೆ ಇದೇ ಶ್ರೀರಾಮನ ಹೆಸರು ಹೇಳಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಮಹಾನುಭಾವರು ಇವರೇ. ಮತ್ತೊಂದು ಬಹುದೊಡ್ಡ ವಿಪರ್ಯಾಸವೆಂದರೆ, ಸ್ವತಹ ಶ್ರೀರಾಮನೇ ವರ್ಣಾಶ್ರಮದಲ್ಲಿ ಅತಿಶೂದ್ರನೆಂದು ಕರೆಸಿಕೊಳ್ಳುವ ಬೇಡನೊಬ್ಬನ ಪಾತ್ರಸೃಷ್ಟಿ. ಹಾಗೂ ಈ ಶ್ರೀರಾಮನೇ ಒಬ್ಬ ಕ್ಷತ್ರಿಯ.

ಅಂದರೆ, ವರ್ಣಾಶ್ರಮದಲ್ಲಿ ಎರಡನೆಯ ವರ್ಣಕ್ಕೆ ಸೇರಿದವನು. ಅಂತಹದರಲ್ಲಿ ಇವರು ಹೀಗೆ ಶ್ರೀರಾಮನನ್ನು ಇವರು ಹೇಳುವ ಹಿಂದೂ ಧರ್ಮದ ಪ್ರತಿನಿಧಿ ಎಂದು ಕರೆದರೆ ನನ್ನ ಮಂಡೆ ಬಿಸಿಯಾಗ್ತ ಉಂಟು! ಇದು ಒಟ್ರಸಿ Illogic ಅಲ್ವ ಮಾರಾಯ್ರೆ?

ಇವರು ಹಾಗೆ ಶ್ರೀರಾಮನನ್ನ ಹಿಂದೂಗಳ ದೇವರು ಎಂದು ಕರೆಯುವುದಕ್ಕೆ ಕಾರಣ ಬಹುಶಹ ಆತ ವಿಪ್ರನೊಬ್ಬನ ಮಾತು ಕೇಳಿ ತಪಸ್ಸಿಗೆ ಕೂತಿದ್ದ ಶೂದ್ರ ಶಂಭೂಕನನ್ನ ಕೊಂದದ್ದು ಕಾರಣವಿರಬಹುದೇ? ಈ ಶಂಭೂಕನನ್ನು ಪ್ರಧಾನ ಪಾತ್ರವನ್ನಾಗಿಸಿಕೊಂಡು ಕುವೆಂಪುರವರು ಬರೆದ "ಶೂದ್ರತಪಸ್ವಿ" ನಾಟಕ ಅಂದು ಭಾರೀ ವಿವಾದಕ್ಕೆಡೆ ಮಾಡಿಕೊಟ್ಟಿದ್ದನ್ನು ಹಾಗೂ ಅಂದಿನ ಪುರೋಹಿತಶಾಹಿಗಳ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ನೆನಪಿಸಿಕೊಂಡರೆ ತಪ್ಪೇನಿಲ್ಲವಲ್ಲ! ಹಾಗೆಯೇ, ಇವರು ಹೀಗೆ ಹೆಂಗಸರನ್ನೇ "ಟಾರ್ಗೆಟ್" ಮಾಡುವುದಕ್ಕೆ ಕಾರಣ, ಗರ್ಭಿಣಿ ಹೆಂಗಸನ್ನು ಯಾರದೋ ಮಾತು ಕೇಳಿ ಅಡವಿಗಟ್ಟಿದ ಶ್ರೀರಾಮನ "ಸಂಸ್ಕೃತಿ"ಯನ್ನೇ ನಾವು ಪಾಲಿಸಬೇಕೆಂದೆ? ಶ್ರೀರಾಮನಿಗೆ ಸೀತೆಯ ಮೇಲಿದ್ದ ಸಿಟ್ಟನ್ನೆ ರಾಮಸೇನೆಯವರಾದ ಇವರು ಮಹಿಳೆಯರ ಮೇಲೆ ತೀರಿಸಿಕೊಳ್ಳಬೇಕು ಎಂಬ ಹಟದಿಂದ ಹೀಗೆ ಮಾಡ್ತಾ ಉಂಟಾ ಎಂಬ ಅನುಮಾನ ನನಗೆ?

ಇನ್ನು ಮರಳಿ ಮಂಗಳೂರು ಪಬ್ ಪ್ರಕರಣಕ್ಕೆ ವಾಪಸ್ಸಾಗುವುದಾದರೆ, ಮಂಗಳೂರು ಯೂನಿವರ್ಸಿಟಿಯ ಉಪನ್ಯಾಸಕರಾದ ಪಟ್ಟಾಭಿರಾಮ ಸೋಮಯಾಜಿಯವರು ನೀಡಿದ ಹೇಳಿಕೆ ಇಲ್ಲದ ವಿವಾದ ಸೃಷ್ಟಿ ಮಾಡಿದ್ದು. ಅವರು ಹೇಳಿದ್ದಾದರೂ ಏನು? "ಸಂಸ್ಕೃತಿ ಎಂದರೆ ಪುರುಷರು ಮಹಿಳೆಯರೊಂದಿಗೆ ಹಾಗೂ ಮಹಿಳೆಯರು ಪುರುಷರೊಂದಿಗೆ ವರ್ತಿಸುವ ರೀತಿ. ಪಬ್ ನಲ್ಲಿ ಮಹಿಳೆಯರ ಮೇಲೆ ದಾಳಿ ಮಾಡಿದ ಪುರುಷರು ತಾವೇ ಟೀಶರ್ಟು, ಪ್ಯಾಂಟು ಹಾಕಿಕೊಂಡಿದ್ದರು. ಅದು ಪಾಶ್ಚಾತ್ಯ ದಿರಿಸು ತಾನೆ. ಹಾಗೆಂದ ಮೇಲೆ ಅವರು ಹೊರಗಿನ ಪ್ರಭಾವ ಎಂದು ಕರೆಯುವುದಾದರೂ ಏನನ್ನು". ಈ ಹೇಳಿಕೆಯಲ್ಲಿರುವ ದೋಷವಾದರೂ ಏನು ಸ್ವಾಮಿ?

ಕುಡಿಯುವುದು ಮಾತ್ರ ಪಾಶ್ಚಿಮಾತ್ರ ಪ್ರಭಾವವೇ? ಯಾಕೆ ಹಿಂದೂ ಪುರಾಣಗಳಲ್ಲಿ ಬರುವ ದೇವತೆಗಳು, ದೇವತೆಗಳ ಅಧಿಪತಿಯಾದ ಇಂದ್ರ ಎಲ್ಲರೂ ರಂಭೆ ಊರ್ವಶಿ ಮೇನಕೆಯರ ಗಾನನಾಟ್ಯ ರಸಧಾರೆಯನ್ನು ಸವಿಯುತ್ತ, ಸೇವಿಸುತ್ತಿದ್ದ ರಾಮರಸ, ಸೋಮರಸವೆಲ್ಲ ಯಾವ ಪ್ರಭಾವದಿಂದ ಬಂದದ್ದು? ಇದು ಯಾವ ಪಬ್, ಡಿಸ್ಕೋ ಥೆಕ್, ಲೈವ್ ಬ್ಯಾಂಡ್ ಗಳಿಗೆ ತಾನೇ ಕಮ್ಮಿ ನೀವೇ ಹೇಳಿ?

ಇನ್ನೊಂದು ವಿಚಾರವೇನೆಂದರೆ, ಇಂದು ಹಿಂದೂ ವಾದವನ್ನು ಮುಂದಿಡುತ್ತಿರುವವರು ಹೀಗೆ ಮಹಿಳೆಯರನ್ನು ಮಾತ್ರ "ಟಾರ್ಗೆಟ್" ಮಾಡಿಕೊಂಡಿದ್ದರಲ್ಲಿ ತಪ್ಪೇನಿಲ್ಲ. ಯಾಕೆಂದರೆ, ಇಂದ್ರ ಮಾಡುತ್ತಿದ್ದ ಕೆಲಸವೂ ಅದೇ. ಹಾಗೆಯೇ, ಶ್ರೀಮನ್ನಾರಯಣ ಬೃಂದಾಗೆ(ತುಳಸಿ ಕತೆ) ಮಾಡಿದ್ದು ಅದೇ ತಾನೇ. ಪಾಪ, ನಮಗೆ ಆದರ್ಶವಾಗಬೇಕಾದದ್ದು ಇಂತದೇ ತಾನೇ? ನಮ್ಮ ಕಣ್ಣ ಮುಂದೆಯೇ ಘಟಿಸಿ ಹೋದ ಗಾಂಧಿಯ ಸ್ವದೇಶಿ ಚಳುವಳಿ, ಅಸ್ಪೃಶ್ಯತಾ ವಿರೋಧಿ ಚಳುವಳಿಗಳು ಇವರಿಗೆ ಹೇಗೆ ತಾನೆ ಆದರ್ಶವಾಗಬೇಕು! ಅದಕ್ಕೇ ಏನೋ ಅಲ್ಲಮ ಪ್ರಭು "ಪುರಾಣ ಪುಂಡರ ಗೋಷ್ಠಿ" ಎಂದದ್ದು. ಎಲ್ಲಿಯವರೆಗೂ ಇಂತಹ ಕಂತೆ ಪುರಾಣಗಳು ನಮಗೆ ಆದರ್ಶವಾಗುತ್ತವೆಯೋ ಅಲ್ಲಿಯವರೆಗೂ ನಮ್ಮ ದೇಶ ಹೀಗೆಯೇ.

ಎಂದು ಮಧ್ಯರಾತ್ರಿಯಲ್ಲಿಯೂ ಒಬ್ಬ ಹೆಣ್ಣುಮಗಳು ನಿರ್ಭೀತಳಾಗಿ ರಸ್ತೆಯಲ್ಲಿ ಓಡಾಡುವಂತಾಗುತ್ತದೆಯೋ ಅಂದೇ ರಾಮರಾಜ್ಯ ನೆಲೆಸಿದಂತಾಗುವುದು ಎಂದು ಮಹಾತ್ಮ ಗಾಂಧಿ ಹೇಳಿದ್ದು ಇವರಿಗೆ ಮರೆತು ಹೋಗಿರಬೇಕು! ಹೀಗೆ ಎಲ್ಲೆಂದರಲ್ಲಿ ನುಗ್ಗಿ ಹೆಣ್ಣು ಮಕ್ಕಳ ಮೇಲೆ ದಾಳಿ ಮಾಡುವುದು ನಮ್ಮ ಸಂಸ್ಕೃತಿ ಎಂಬುದನ್ನು ನಾವು ನೀವೆಲ್ಲಾ ಒಪ್ಪಬೇಕೇ ಸ್ವಾಮಿ? ಈ ಮಂಗಳೂರು ಪಬ್ ದಾಳಿ ಪ್ರಕರಣದಲ್ಲಿ ನೋಡಿ, ಕೇವಲ ಪಬ್ ಮಾತ್ರ ಮಾಧ್ಯಮಗಳಲ್ಲಿ ಎಲ್ಲೆಡೆ ಮುಖ್ಯವಾಗಿದೆಯೇ ಹೊರತು ಖಾಸಗಿ ಪಾರ್ಟಿಯಲ್ಲಿ ದಾಳಿಗೊಳಗಾದ ನಾಲ್ವರು ಹುಡುಗಹುಡುಗಿಯರು ಮಾತ್ರ ಮುಖ್ಯವಾಗಲಿಲ್ಲ ನಮಗೆ.

ಬರೀ ಮಂಗಳೂರು ಒಂದರಲ್ಲೇ ಈ ರೀತಿಯ 12 ಪ್ರಕರಣಗಳು 2008ರ ಜುಲೈ ಹಾಗೂ ಡಿಸೆಂಬರ್ ನಡುವೆ ವರದಿಯಾಗಿವೆಯಂತೆ. ಈ ಕಪಿಚೇಷ್ಟೆಯ ತೀವ್ರತೆ ಎಷ್ಟು ಮಟ್ಟಿಗಿರಬಹುದು ಎಂದು ಯಾರು ಬೇಕಾದರೂ ಯೋಚಿಸಬಹುದು. ಇದನ್ನು ಹಲವಾರು ಮಾಧ್ಯಮಗಳು "ತಾಲಿಬಾನೀಕರಣ"(Talibanisation) ಎಂದು ಬಣ್ಣಿಸಿವೆ. ಇಲ್ಲಿಯೂ ನಮ್ಮ ಸಂಸ್ಕತಿಯನ್ನು ಬಿಡದ ಕೆಲವರು "ಕೇಸರೀಕರಣ"(Saffronisation)ಎಂದು ಕರೆದರೆ ಸರಿ ಹೋಗುತ್ತದೆ ಎಂದಿದ್ದಾರೆ. ಅಲ್ಲ, ನಮ್ಮ ರಾಷ್ಟ್ರಧ್ವಜದಲ್ಲಿ ಮೊದಲನೆಯ ಬಣ್ಣವಾದ ತ್ಯಾಗ ಬಲಿದಾನಗಳ ಸಂಕೇತವಾದ ಕೇಸರಿಯನ್ನು ಇಂತಹದಕ್ಕೆ ಹೋಲಿಸುವುದೇ? ಇದು ಸಂಸ್ಕೃತಿಗೆ ಸಂಬಂಧಿಸಿದ ವಿಚಾರವಾದ್ದರಿಂದ "ಸಂಸ್ಕತೀಕರಣ" ಎಂದು ಕರೆದರೆ ಉಚಿತವಾದೀತು!

ಇನ್ನಾದರೂ ಪ್ರಜ್ಞಾವಂತರಾದ ಜನರೆಲ್ಲರೂ ಸುಧಾರಿಸಬೇಕಾಗಿದೆ. ಇಂತಹ ದಾಳಿಗಳ ವಿರುದ್ಧ ಜಾಗೃತರಾಗಿ, ಸಂಘಟಿತರಾಗಿ ಖಂಡಿಸಬೇಕಿದೆ, ಹೋರಾಡಬೇಕಿದೆ. ಅದರಲ್ಲೂ ಮಹಿಳೆಯರು. ಇಲ್ಲವಾದರೆ, ಭಾರತದ ಜನಗಳಾದ ನಾವು ಭಾರತವನ್ನು ಒಂದು (ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ) ಗಣರಾಜ್ಯವಾಗಿ ರಚಿಸಲು ಹಾಗೂ:
ಅದರ ಸಮಸ್ತ ನಾಗರಿಕರಿಗೆ:

ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು
ಉಪಾಸನಾ ಸ್ವಾತಂತ್ರ್ಯ;
ಸ್ಥಾನಮಾನ ಮತ್ತು ಅವಕಾಶ ಸಮಾನತೆ
ದೊರೆಯುವಂತೆ ಮಾಡಲು ಮತ್ತು
ವ್ಯಕ್ತಿ ಗೌರವವನ್ನು (ರಾಷ್ಟ್ರದ ಏಕತೆಯನ್ನು ಹಾಗೂ
ಅಖಂಡತೆಯನ್ನು) ಖಾತ್ರಿ ಮಾಡಿ ಅವರಲ್ಲಿ ಎಲ್ಲರಲ್ಲೂ
ಭ್ರಾತೃ ಭಾವನೆಯನ್ನು ವೃದ್ಧಿಗೊಳಿಸುವುದಕ್ಕಾಗಿ
ಶ್ರದ್ಧಾಪೂರ್ವಕವಾಗಿ ದೃಢಸಂಕಲ್ಪ ಮಾಡಿದವರಾಗಿ;
ನಮ್ಮ ಸಂವಿಧಾನ ಸಭೆಯಲ್ಲಿ ಈ 1949 ನೆಯ ಇಸವಿ ನವೆಂಬರು ತಿಂಗಳು ಇಪ್ಪತಾರನೆಯ ತಾರೀಖಾದ ಇಂದಿನ ದಿವಸ ಈ ಮೂಲಕ ಸಂವಿಧಾನವನ್ನು ಅಧಿನಿಯಮಿತಗೊಳಿಸಿ, ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.

ನಮ್ಮ ಅಂದರೆ ಭಾರತದ ಸಂವಿಧಾನ ಎಷ್ಟು ಉದಾತ್ತ ಆದರ್ಶಗಳನ್ನು ಹೊಂದಿದೆ ಎನ್ನುವುದನ್ನು ಈ ಪ್ರಸ್ತಾವನೆ(Preamble)ಯೇ ಸ್ಪಷ್ಟಪಡಿಸಿಬಿಡುತ್ತದೆ. ಮೇಲಿನ ಪ್ರಸ್ತಾವನೆಯನ್ನು ಓದಿದಾಗ ನಮ್ಮ ಸಂವಿಧಾನವನ್ನು ಯಾವ ಉದ್ದೇಶವಿಟ್ಟುಕೊಂಡು ಯಾರು ಯಾರ ಸಲುವಾಗಿ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಶಾಸಕಾಂಗ, ಕಾರ್ಯಾಂಗ, ರಾಜ್ಯಾಂಗ ಹಾಗೂ ನಾವು(ಭಾರತದ ಪ್ರಜೆಗಳು) ಈ ಪ್ರಸ್ತಾವನೆಯನ್ನು ಅಗೌರವಿಸುತ್ತಿರುವುದು ಏಕೆ?

(ಈ ವಿಚಾರದ ಬಗ್ಗೆ "ದಿ ಹಿಂದೂ"ವಿನಲ್ಲಿ ಆಯೇಶಾ ಮತ್ತನ್ ಎಂಬಾಕೆ ಬರೆದಿರುವ What lies beneath ಎಂಬ ಲೇಖನವನ್ನು ಓದಿ. Infact, ಈ ನನ್ನ ಬ್ಲಾಗ್ ಬರೆಹಕ್ಕೆ ಅದೇ ಸ್ಫೂರ್ತಿ.)

Rating
No votes yet

Comments