ವಾರದಾರಂಭದ ಸಮ್ಮೋಹನ....!!!

ವಾರದಾರಂಭದ ಸಮ್ಮೋಹನ....!!!

 ನಿರುತ್ಸಾಹ, ಆಲಸ್ಯ, ರವಿಕಿರಣದೆಡೆಗೆ ಕೋಪ, ಬೆಳೆಗಿನೆಡೆಗೆ ತೂರುವ ಶಾಪ - ಇದೆಂಥ ಶುರುವಾತು!!?
ಹೌದು, ಅವೇ ತಿಳಿ ಸೋಮವಾರದ ಮುಂಜಾವಿನಲ್ಲಿ ಮೂಡೋ ಭಾವ ಭಂಡಾರದ ಒಡನಾಡಿಗಳು.
 
            ಸೊಗಸಾದ, ಮಜವಾದ ವಾರಾಂತ್ಯದ ನಂತರ ಬರುವ ಸೋಮವಾರವು ಹೆಸರಿಗೆ ಮಾತ್ರ 'ಸೋಮರಸ'ದ ಮೊದಲರ್ಧ ಪದವನ್ನು ದತ್ತು ತೆಗೆದುಕೊಂಡಿದೆಯೇನೋ ಅನ್ನಿಸಿದರೂ, ಅಂಥ ರಸವತ್ತಾದ ನಶೆಯನ್ನೇನು ಕೊಡುವುದಿಲ್ಲ! ಬದಲಾಗಿ, ತದ್ವಿರುದ್ಧದ ಭಾವವನ್ನ ಮೈಪೂರ ಏರಿಸಿ ಜಡತೆಯ ಪ್ರತಿರೂಪ ಎಂಬಂತೆ ಮಾಡುವ ಸೋಮವಾರವೆಂದರೆ ಅಸಹನೆ ಕಾಡುತ್ತೆ.
            ಅದೇ ಶುರುವಾತು, ಅದೇ ಜನ ಜಂಗುಳಿ, ಅದೇ ಕೆಲಸ, ಅದೇ ಯಾಂತ್ರಿಕ ಬದುಕು, ಏನಿದೆ ಹೊಸತು....?
            ಸಾಮಾನ್ಯವಾಗಿ ಎಲ್ರಿಗೂ ಕಾಡೋ ಈ ಭಾವನೆಯೇ ನಂಗೂ ಕಾಡಿತ್ತು. ಯಾಕಂದ್ರೆ ಅಂದು ಸೋಮವಾರ!! ಅಷ್ಟೇನೂ ಉತ್ಸಾಹ ಇಲ್ಲದಿದ್ರು ಎಂದಿನ ಅಭ್ಯಾಸ ಎಂಬಂತೆ ಮಟ್ಟಸದ ಧಿರಿಸಿನೊಳಕ್ಕೆ ಹೊಕ್ಕವನಂತೆ ಅಣಿಯಾಗಿ ಯಾಂತ್ರಿಕವಾಗಿ ಕೆಲಸಕ್ಕೆಂದು ಹೊರಟು ನಿಂತೆ.
            ಮನೆಯಿಂದ ಹೊರಟವನಿಗೆ ಅದ್ಯಾಕೋ ಸಮಯದ ನಡಿಗೆಯೇ ನಿಧಾನವಾಯಿತೇನೋ ಎನ್ನಿಸಿತು. ಇದೇನಿದು, ಯಾರು ಯಾವುದೇನಾದರೂ ಸರಿ ತನ್ನ ಕೆಲಸವನ್ನ ಚಾಚೂ ತಪ್ಪದೆ, ಕೊಂಚವೂ ಏರುಪೇರಿಲ್ಲದೆ ನಡೆಸಿಕೊಂಡು ಹೋಗೋ ಸಮಯದಂಥ ಸಮಯಕ್ಕೇನೆ ಆಲಸ್ಯವಾ!?' ಎಂಬ ಪ್ರಶ್ನೆ ಮೆದುಳಿನ ಯಾವುದೋ ಮೂಲೆಯಲ್ಲಿ ಬಂದಂತಾಗಿ ಹಾಗೇ ಮಾಯವಾಯಿತು.
            ಹೆಜ್ಜೆಗಳೇಕೊ ಭಾರವಾಗ್ತಿದೆ ಅನ್ನಿಸ್ತು.ಇನ್ನೂ ಮನೆಯಿಂದ ಹೊರಡುವ ಸಮೀಪದ ಬಸ್ ನಿಲ್ದಾಣ ಕೂಡ ಸಿಕ್ಕಿಲ್ಲ, ಹೋಗಬೇಕಿರೋ ದಾರಿ ಗಾವುದ ಗಾವುದದಷ್ಟು ದೂರವಿದೆಯೇನೋ, 'ಇಂದು ಕಚೇರಿಗೆ ಹೋಗಲೇ ಬೇಕಾ? ಏನಾದರೂ ಸಬೂಬು ಹೇಳಿ ಉಳಿದುಕೊಂಡ್ರೆ ಹೇಗೆ?' ಅನ್ನೋ ಆಲೋಚನೆಗಳೇ ಬರುತಿದ್ವು. ದಾರಿಯ ಅಳತೆ ಮಾಡುತ್ತಲೇ, ಸಮಯದ ಸೋಮಾರಿತನದ ಸಹಚಾರಿಯಂತೆ ನಡೆದಿರಲು; ಇನ್ನೇನು ತುಸುವೇ ಅಂತರದಲ್ಲಿ ನಿಲ್ದಾಣವಿದೆ ಅನ್ನುವಾಗ ಹರಿಯಿತು ಮೈಯೊಳಗೆ ಉತ್ಸಾಹದ, ಉನ್ಮಾದದ ಕೋಲ್ಮಿಂಚು.....
            ಅಷ್ಟು ಮಂದಿ ಮಧ್ಯದಲ್ಲಿ ನನ್ನ ನೆಟ್ಟ ನೋಟವು ಸ್ವಲ್ಪವೂ ಆಚೀಚೆ ಜಾರದಂತೆ ಹಿಡಿದಿಟ್ಟ ಆ ಸುಂದರ ಆಕೃತಿಯು ಯಾರದೆಂಬ ಯೋಚನೆಯೇ ತಲೆ ಹೊಕ್ಕು ಕಾಡತೊಡಗಿತು. ತಟಸ್ಥವಾಗಿ ಹರಿಯುತ್ತಿದ್ದ ನೀರು ಅನಿರೀಕ್ಷಿತವಾಗಿ ಪ್ರಪಾತ ಎದುರಾದಾಗ ನಿಯಂತ್ರಣ ಕಳಕೊಂಡು ಭೋರೆಂದು ರಭಸದಿ ಬೀಳುವ ಹಾಗೆ; ತಂಗಾಳಿಯ ಸೊಂಪಲ್ಲಿ ಹಾರಾಡುತ್ತ, ತೇಲುತ್ತ ಇದ್ದ ತರಗೆಲೆಯು ಎಲ್ಲಿಂದಲೋ ಬಂದ ಬಿರುಗಾಳಿಗೆ ಸಿಲುಕಿ ಕರೆದೆಡೆಗೆ ಹೋಗೋ ಹಾಗೆ; ಸಂಗೀತಗಾರನು ಮಧುರಗಾನದಿ ವೀಣೆಯ ತಂತಿ ಮೀಟುವಾಗ ಯಾವುದೋ ಸಮ್ಮೋಹನಕ್ಕೆ ಒಳಗಾಗಿ ಶ್ರುತಿಯ ಗತಿಯನ್ನೇ ಬದಲಿಸಿ ಉನ್ಮಾದದಿ ನುಡಿಸುವ ಹಾಗೆ; ನನ್ನ ನಡಿಗೆಯ ವೇಗ ವೃದ್ಧಿಸಿ ಹಾವಿನ ಸರಿಸಮಾನವಾದ ವೇಗ ತಂದುಕೊಂಡು ಆ ಸೌಂದರ್ಯ ಮೂರ್ತಿ ಯಾರೆಂದು ನೋಡೋ ಆತುರದಿ ಸಾಗತೊಡಗಿತು.
            ತಿಳಿ ಹಸಿರು ಚೂಡಿದಾರ ಧರಿಸಿ, ಹಾಲುಗೆನ್ನೆಯ ಒಡತಿ ಎಂಬಂತೆ ಹೊಳೆಯುತ್ತಿದ್ದ ಆ ಹಸನ್ಮುಖಿ; ಸಹ್ಯಾದ್ರಿ ಸಾಲಲ್ಲಿ ಮೂಡಿ ಇಣುಕುತ್ತಿದ್ದ ಚಂದ್ರನ ನೆನಪು ಮಾಡಿದಳು. ಹಿಂದೆಂದೂ ನೋಡಿರಲಿಲ್ಲ ಆಕೇನ....
            ಸಮೀಪದಿ ಸಾಗಿದೆ. ಮತ್ತೊಮ್ಮೆ ಮೈಯಲ್ಲಿ ಮಿಂಚು ಸಂಚರಿಸಿತು! ಬಸ್ಸು ಬರಲು ಇನ್ನೂ ಸಮಯವಿದೆ ಅಂತ ಅನಿಸಿದ್ದೇ ತಡ ಮತ್ತೆ ಮತ್ತೆ ಆ ಚೆಲುವಿನ ನಿಲುವನ್ನು ನೋಡೋ ಹಂಬಲದಿಂದ ನಿಲ್ದಾಣದ ಒಂದು ತುದಿಯಿಂದ ಇನ್ನೊಂದು ತುದಿಗೆ ಆಮೆಯು ಮೈ ಮೇಲೆ ಬಂತೇನೋ ಅನ್ನಿಸುವಷ್ಟು ನಿಧಾನವಾಗಿ ಓಡಾಡತೊಡಗಿದೆ. 'ಎಲ್ಲಿದ್ದಳೋ ಭಗವಂತ ಇವಳು ಇಷ್ಟು ದಿನ? ಬಂಜರಾಗಿ, ನಿಸ್ತೇಜವಾಗಿ, ತೋರುತ್ತಿದ್ದ ಈ ನಿಲ್ದಾಣ ಇಂದು ಜೀವ ಚಿಲುಮೆಯ ಸ್ಥಾವರದಂತೆ, ಬಾಳ ಬೆಳಕಿನ ಸತುವಂತೆ ತೋರುತಿಹುದು ಯಾಕೆ? ಜರ್ಜರಿತ ಸೋಮವಾರವೂ ಕೂಡ ಕಳೆ ತುಂಬಿದ ಹಬ್ಬದ ದಿನವೇನೋ ಅನ್ನಿಸೋ ಭಾವದಿಂದ ಕೂಡಿದೆ. ಇಂಥ ಶುರುವಾತು ಸಿಗೋದಾದ್ರೆ ದಿನಾ ಸೋಮವಾರವಾದ್ರೂ ಚಿಂತೆಯಿಲ್ಲ ಅನ್ನಿಸ್ತಿದೆ. ಧನ್ಯ ಕಣಯ್ಯಾ ಭಗವಂತ' ಅನ್ನೋ ವಂದನೆಯ ಕೂಗು ಸದ್ದಿಲ್ಲದೆ ಮೂಡಿ ಬಂದು, ಆಲೋಚನೆಗಳನ್ನ ತಹಬಂದಿಗೆ ತಂದುಕೊಂಡಂತೆ ಒಂದು ಕ್ಷಣ ಅವಳನ್ನೇ ದಿಟ್ಟಿಸಿ ನೋಡಿದವು ಆಪ್ತತೆ ಬಯಸುವ ಕಣ್ಣುಗಳು. ನನ್ನ ಚಡಪಡಿಕೆ ಮನವರಿಕೆ ಆಯಿತೇನೋ ಎಂಬಂತೆ ಅನಿರೀಕ್ಷಿತವಾಗಿ ನನ್ನೆಡೆಗೆ ತಿರುಗಿ ನೋಡಿಯೇಬಿಟ್ಟಳು! ಆಗ ಸ್ತಂಭಿಸಿತು ಕಾಲ....
          ಚೇಳು ಕಡಿದವನಿಗೆ ಆಗೋ ಚಳುಕಿನ ಲಕ್ಷಣ ಮೈಯನ್ನೆಲ್ಲ ಆವರಿಸಿ ತಬ್ಬಿಬ್ಬಾಗಿ ಆಕಾಶ-ಭೂಮಿ-ಮರ-ಕಲ್ಲು-ಜನ ಹೀಗೆ ಸಿಕ್ಕ ಸಿಕ್ಕ ಕಡೆಗೆಲ್ಲಾ ಕಣ್ಣಾಯಿಸುತ್ತಿದ್ದರೆ; ನನ್ನ ಒದ್ದಾಟವನ್ನು ಗಮನಿಸಿದ ಆಕೆ ತುಟಿಯಿಕ್ಕೆಲದಲ್ಲಿ ಸಣ್ಣ ನಗೆಯೊಂದನ್ನ ಝಾಳಕಿಸಿ ಏನೂ ಅರಿಯದ ಹಾಗೆ ಬಸ್ಸು ಬರುವ ಕಡೆಗೆ ದೃಷ್ಟಿ ನೆಟ್ಟು ನಿಂತುಬಿಟ್ಟಳು.
            [ಇಲ್ಲಿ ಒಂದು ವಿಷಯ ಪ್ರಸ್ತಾಪಿಸಲು ಇಷ್ಟಪಡುತ್ತೇನೆ. ಪ್ರಯೋಗದ ಸಲುವಾಗಿ ಅನುಭವಕ್ಕೆ ಕೆಲವಾರು ಬಾರಿ ಬಂದಿರುವ ಇದು, ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದಂತೂ ತಿಳಿಯದು. ಹೆಣ್ಣಿಗೆ ದೈವದತ್ತವಾಗಿ, ಜನ್ಮತಃ ಬಂದಂತ ಒಂದು ಗುಣವಿದೆ. ತನ್ನ ಬೆನ್ನ ಹಿಂದೆ ಯಾವುದೇ ಗಂಡಸು ತನ್ನ ನಿಲುವಿನತ್ತ ನೋಡುತ್ತಿರುವುದೇ ಆದರೆ ಆಕೆಯ ಅರಿವಿಗದು ಬರುತ್ತದೆ. ಬೆನ್ನಲ್ಲಿಯೂ ಕಣ್ಣಿದೆಯೇನೋ  ಎಂಬಂತೆ. ತನ್ನೆಡೆಗೆ ಆ ನೋಟವು ಯಾವ ದಿಕ್ಕಿನಿಂದ ಬರುತ್ತಿದೆಯೆಂಬುದನ್ನೂ ತಿಳಿದ ಆಕೆ ಯಾವ ಸುಳಿವೂ ನೀಡದೆ ತಿರುಗಿ ನೋಡಿಬಿಡುತ್ತಾಳೆ. ಎಂಥಾ ಘಟಾನುಘಟಿ ಗಂಡಸೇ ಆದರೂ ಆ ಕ್ಷಣಕ್ಕೆ ಕಕ್ಕಾಬಿಕ್ಕಿಯಾಗುವುದಂತೂ ನಿಶ್ಚಿತ. ಇದರ ಮರ್ಮವೇನೋ ತಿಳಿಯದು! ಗಂಡಸಿನ ಆ ದೃಷ್ಟಿ ಆಕೆಯಲ್ಲಿ ಯಾವುದೋ ಸಂಚಲನವೊಂದನ್ನು ಉಂಟು ಮಾಡುತ್ತದಿರಬೇಕು. ಇದು ಹೆಣ್ಣಿನ ಅಂತಃಕರಣದ, ಎಷ್ಟೋ ಅರಿವಿಗೆ ಬಾರದ ಭಾವನೆ-ಸಂಗತಿಗಳಲ್ಲಿ ಒಂದು...]
            ಹೀಗೆ ನನ್ನ-ಅವಳ ಕಣ್ಣಿನ ಆಟವು ನಡೆದೇ ಇತ್ತು. ಅಂಥ ಸಂದರ್ಭದಲ್ಲಿ; ಮುಂಜಾವಿನ ಸೂರ್ಯನ ಕಿರಣಗಳಿಗೆ ಮೈಚಳಿಯನ್ನು ಓಡಿಸಲು ಮೈಯೊಡ್ಡಿ ನಿಂತಾಗ ಧೋ ಅನ್ನೋ ಮಳೆಯ ಹಾಗೆ; ಸುಂದರ ಸಂಗೀತದಂತೆ ಮರಗಳು-ಕೊಂಬೆಗಳು ಗಾಳಿಗೆ ಮೈಯಾಡಿಸಿ ಎಲೆಗಳ ತೂರಾಡುವಿಕೆಯಿಂದ ಉಂಟಾದ ದನಿಯ ನಡುವೆ ಕೀರಲು ದನಿಯಲ್ಲಿ ಕೂಗುವ ಹಕ್ಕಿಯ ಹಾಗೆ; ಅವಳ ಬಸ್ಸು ಬಂದೆಬಿಟ್ಟಿತು! ನೋಡ ನೋಡುತ್ತಿದ್ದಂತೆ ಆಕೆ ಬಸ್ಸು ಹತ್ತಿ ಕಿಟಕಿಯೆಡೆಗಿನ ಸೀಟಿಗೆ ಆನಿಸಿ ಕುಳಿತುಬಿಟ್ಟಳು. ನಾನೂ ಕೂಡ ಅದೇ ಬಸ್ಸಿನಲ್ಲಿ ಹೋಗೋಣ ಅಂದುಕೊಂಡೆ, ಆದರೆ ಕೆಲಸದ ಅರಿವಾಗಿ ನಿಶ್ಚಲನಾಗಿ ನಿಂತುಬಿಟ್ಟೆ. ಕಣ್ನಂತೂ ಮಿಟಕಿಸುವುದನ್ನೂ ಮರೆತು ಅವಳೆಡೆಗೆ ನೋಡುತ್ತಲೇ ಇತ್ತು.
            ಆ ರೋಮಾಂಚಕಾರಿ, ಹಿತಮಯವಾದ ಸೋಮವಾರವು ಒಳ್ಳೆಯ ಶುರುವಾತು ನೀಡಿದ್ದು ಅಲ್ಲಿಗೆ ಮುಗಿಯಿತೇನೋ ಎಂಬಂತೆ ಅನ್ನಿಸಿ ಎಂದಿನಂತೆ ನಿತ್ಯದ ಬದುಕಿಗೆ ಮನವು ಅಣಿಯಾಗುತ್ತಿತ್ತೇನೋ; ಆದರೆ ಮತ್ತೆ ತಿರುಗಿ ನೋಡಿದಳು ಹಸಿರ ಹೊನ್ನ ತೇರ ಮೇಲೆ ಬಂದಿದ್ದಂತ ಚೆಲುವೆ! ಈ ಬಾರಿ ಕೇವಲ ಕಿರುನಗೆಯಲ್ಲ, ಮನದುಂಬಿ ಬಂದ ಹರ್ಷದ, ನಾಚಿಕೆ ತುಂಬಿದ; 'ಮತ್ತೆ ಸಿಗುವೆ' ಎಂಬ ಮಾತು ಹೇಳಲಾಗದೆ ನಗುವಲ್ಲೇ ಆ ಸಂದೇಶವನ್ನ ತಲುಪಿಸೋ ಪ್ರಯತ್ನವಿರುವ ಆ ನಗುವು ಮತ್ತೆ ಉಲ್ಲಸಿತನಾಗೋ ಹಾಗೆ ಮಾಡಿತು.

            ಅಲ್ಲಿಗೆ ಮುಂದಿನ ಎಲ್ಲ ಮುಂಜಾವುಗಳು ಹೊಸತನದ ಖನಿಜ ಹೊತ್ತು ಬರುತ್ತೆ ಅನ್ನೋ ಆಕಾಂಕ್ಷೆ ಮನಸಲ್ಲಿ ತಳವೂರಿ ನೆಲೆನಿಂತು ನನ್ನ ದಾರಿಯೆಡೆಗೆ ಸಾಗೋ ಬಸ್ಸು ಬಂದೊಡನೆ ಅದೇ ಉತ್ಸಾಹದ ಹರಹಿನಲ್ಲಿ ಕಚೇರಿಯ ಕಡೆಗೆ ಸಾಗಿದೆ...ನಾಳೆಯ ನಿರೀಕ್ಷೆಯಲ್ಲಿ.......

Rating
No votes yet

Comments