ವಾರಾಂತ್ಯದ ಲಾಗ್

ವಾರಾಂತ್ಯದ ಲಾಗ್

ಕಳೆದ ವಾರಾಂತ್ಯ ತೀರ ಬಿಡುವಿಲ್ಲದಂತಾಗಿಬಿಟ್ಟಿತ್ತು. ಶನಿವಾರ ಬೆಳಗಾಗಿ ಫೋನ್ ಮಾಡಿದ ಅಕ್ಕ, "ಏ ಮನೆ ಕ್ಲೀನ್ ಇಟ್ಕೊಳೋ" ಎಂದೇ ಪ್ರಾರಂಭ ಮಾಡುತ್ತ "ಮನೆಗೆ ಬರುತ್ತಿದ್ದೇನೆ, ಒಂದೆರಡು ದಿನ ಇದ್ದು ಹೋಗುತ್ತೇನೆ" ಎಂದಾಗ ಸ್ವಲ್ಪ ಗಾಬರಿಯಾದದ್ದುಂಟು. ಬೆಳಗಾಗಿ ಅವಳ ಫೋನ್ ಕಾಲ್ ಕರ್ಟನ್ನುಗಳ ಧೂಳು ಹೊಡೆಯುತ್ತ, ಇಡಿಯ ಮನೆಯೆಲ್ಲ ವ್ಯಾಕ್ಯೂಮ್ ಮಾಡುತ್ತ ಸುಮಾರು ಹೊತ್ತು ಕಳೆಯುವಂತೆ ಮಾಡಿತು. ಮನೆ "ಕ್ಲೀನ್ ಆಗಿ ಇಲ್ಲ" ಎಂದರೆ ಅವಳಿಗೆ ಸುತಾರಾಂ ಇಷ್ಟವಾಗೋದಿಲ್ಲ. "ಏನೋ, ಮನೆ ಇಷ್ಟು ಗಲೀಜಾಗಿ ಇಟ್ಟುಕೊಂಡಿದ್ದೀಯ....", "ಏನೋ ಹರಿ, ಇಲ್ಲಿ ಇಷ್ಟೊಂದು ಧೂಳಿದೆ, ಕಂಪ್ಯೂಟರ್ ಮೇಲೆ ನೋಡೋ ಎಷ್ಟೊಂದು ಧೂಳಿದೆ." ಎಂದು ಒಂದೇ ಸಮನೆ ಶುರುಮಾಡಿಬಿಡುತ್ತಾಳೆ.

ಇನ್ನೇನು ಮನೆ ಧೂಳು ಹೊಡೆಯೋದು ಮುಗಿಸಿದ್ದೆ, ಮುರಳಿ ಬಂದ. ಅವನಿಗೆ ನಾನು ಕ್ಲೀನ್ ಮಾಡಿದ್ದು ಕಾಣಿಸಲಿಲ್ಲ ಅನ್ಸತ್ತೆ, "ಏನೋ ಇಷ್ಟೊಂದು ಹರಡ್ಕೊಂಡಿದೀಯ? ನೀಟಾಗಿ ಜೋಡಿಸಿ ಇಟ್ಕೋ ಮಾರಾಯ" ಅಂದ. :-) ಮುರಳಿ ಟೆಕ್ ಸಂಪದ ಕುರಿತು ಚರ್ಚೆ ಮಾಡೋಣ ಎಂದು ಬಂದಿದ್ದ. ಕೊನೆಗೂ ಕುಳಿತು ಟೆಕ್ ಸಂಪದದ ಚಹರೆ ಬದಲಿಸಿದೆವು. ಆದರೆ ಸಂದರ್ಶನಗಳ ಎಡಿಟಿಂಗ್ ಮುಗಿಸಲಾಗಲಿಲ್ಲ.

ಸಾಯಂಕಾಲ ಅವಧಿಯವರು ಆಯೋಜಿಸಿದ್ದ ಕಾರ್ಯಕ್ರಮ "ಸ್ವತಂತ್ರ ತ್ರಂತ್ರಾಂಶ, ನ್ಯೂ ಮೀಡಿಯ" ಸುತ್ತ ಎಬೆನ್ ಮಾಗ್ಲೆನ್ ರವರ ಟಾಕ್ ಇತ್ತು. "ಮಿಸ್ ಮಾಡ್ಬೇಡ್ರೀ, ಬನ್ರೀ. ಬರೀ ಬಂಕ್ ಮಾಡ್ತೀರ ನೀವು" ಎಂದ ಇಸ್ಮಾಯಿಲ್ (ನಿಜವಾಗಲೂ ಆರೋಗ್ಯ ಸರಿ ಇಲ್ಲದೇ) ಸ್ವತಃ ಬಂಕ್ ಹೊಡೆದಿದ್ದರು. ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ನನ್ನ ಹೆಸರೂ ಸೇರಿಸಿಬಿಟ್ಟಿದ್ದರು. ಹೋದ ಕೂಡಲೆ ನಾ ಮಾಡಿದ ಕೆಲಸ ಕಾರ್ಯಕ್ರಮ ಆಯೋಜಿಸಿದ್ದ ಜಯಕುಮಾರರನ್ನು ಹುಡುಕಿ, "ನೋಡ್ರಿ, ಸ್ಟೇಜ್ ಮೇಲೆಲ್ಲ ನನ್ನ ಕರೀಬೇಡಿ. ಪ್ರೊ. ಎಬೆನ್ ಮಾತನಾಡಲಿ. ನಾನು ಇಲ್ಲೇ ಎಲ್ಲರೊಂದಿಗೆ ಕುಳಿತಿರುತ್ತೇನೆ. ನಂತರ ನನ್ನ ಸರದಿ ಬಂದಾಗ ಬಂದು ಮಾತನಾಡಿದರಾಯಿತು" ಎಂದು ಹೇಳಿದ್ದು. ಆದರೆ ಜಯಕುಮಾರ್ ಮೊದಲಿಗೇ‌ ವೇದಿಕೆಗೆ ಕರೆದುಬಿಟ್ಟರು. ಮತ್ತೇನು ಮಾಡೋದು ಅನ್ನುತ್ತ ವೇದಿಕೆ ಹತ್ತಿದೆ.
ವೇದಿಕೆಯ ಮೇಲೆ ಮೂರ್ನಾಲ್ಕು ಜನರನ್ನು ಗೊಂಬೆಗಳಂತೆ ಕೂಡಿಸುವ ಪರಂಪರೆ ನನಗೆ ಮುಂಚಿನಿಂದಲೂ ಇಷ್ಟವಾಗದು.

ಪ್ರೊ. ಎಬೆನ್ ಮಾಗ್ಲೆನ್ ರವರ ಉಪನ್ಯಾಸ ಬಹಳ ಚೆನ್ನಾಗಿತ್ತು. ಅವರ ಮಾತು, ಆಲೋಚನೆಗಳ ನಡುವೆ ಇರುವ ಅಂತರ ಬಹಳ ಕಡಿಮೆ ಇದ್ದಂತಿದ್ದು ಗಾಢವಾದ ಆಲೋಚನೆಯಿಂದ ಹೊರಬಂದ ವಾಕ್ಯಗಳು ಸಾಕಷ್ಟು ಸಮಯ ವ್ಯಯ ಮಾಡಿ ಅಚ್ಚಾದ ಪುಸ್ತಕದ ಪುಟಗಳಲ್ಲಿ ಬರೆದವುಗಳಂತಿದ್ದವು. ಆದರೂ ಅಲ್ಲಿ ನೆರೆದಿದ್ದ ಜನರಿಗೆ ಇವರ ಮಾತು ಸ್ವಲ್ಪ ಟೆಕ್ನಿಕಲ್ ಆಗಿರಲಿಕ್ಕೂ ಸಾಕು. ಏಕೆಂದರೆ ಅಲ್ಲಿಲ್ಲಿ ಆಕಳಿಕೆ ಕಾಣುತ್ತಿತ್ತು.

ಅಲ್ಲಿ ನೆರೆದಿದ್ದವರಲ್ಲಿ ಹೆಚ್ಚು ಕನ್ನಡದ ಮಂದಿ ಇದ್ದಂತಿರಲಿಲ್ಲ. ಕನ್ನಡ ಬ್ಲಾಗ್ ಸಮುದಾಯದವರಿಗೆಂದು ಕಾರ್ಯಕ್ರಮದ ಆಹ್ವಾನದಲ್ಲಿ ಪ್ರಕಟಿಸಿದ್ದರಾದರೂ ಹೆಚ್ಚಾಗಿ ಕನ್ನಡ ಮುಖಗಳು ಕಾಣಲಿಲ್ಲ. ಬಂದವರಲ್ಲಿ ಸುಮಾರು ಜನ Free Software Users Groupನವರೇ ಇದ್ದರು. ಹೆಚ್ಚಿನವರು ಮಲ್ಯಾಳ ಮಾತನಾಡುವವರು. ಕನ್ನಡದಲ್ಲಿ ಮಾತನಾಡಿದರೆ ಅಲ್ಲಿ ಎಷ್ಟು ಜನಕ್ಕೆ ನಿಜವಾಗಲೂ ಅರ್ಥವಾಗಬಹುದೋ ಎಂದುಕೊಳ್ಳುತ್ತಿರುವಾಗ ಆಗಲೇ ಆಕಳಿಸುತ್ತಿದ್ದ ಮಂದಿಗೆ ಮತ್ತಷ್ಟು ಬೋರ್ ಹೊಡೆಸುವುದು ಬೇಡವೆಂದು ತೀರ್ಮಾನಿಸಿ ನಾನು ಹತ್ತು ನಿಮಿಷ ಕನ್ನಡದಲ್ಲಿ ಮಾತನಾಡಿ ಮುಗಿಸಿದೆ. ಪ್ರೊ. ಎಬೆನ್ ರವರು ತಿಳಿಸಿದ ವಿಷಯಗಳ ಕುರಿತು, ನಾನು ಮಾತನಾಡಿದ ಕೆಲವು ವಿಷಯಗಳ ಕುರಿತು ಮತ್ತೊಮ್ಮೆ ವಿವರವಾಗಿ ಬರೆಯುವೆ.

ಇನ್ನು ವಿಕಿಪೀಡಿಯ ಹುಟ್ಟುಹಾಕಿದವರಲ್ಲೊಬ್ಬರಾದ ಜಿಮ್ಮಿ ವೇಲ್ಸ್ ಬೆಂಗಳೂರಿಗೆ ಬಂದದ್ದರಿಂದ ಭಾನುವಾರ ಅವರೊಂದಿಗೆ ವಿಕಿಪೀಡಿಯದ ಹಳಬರಿಗೆ ಊಟಕ್ಕೆ ಜೊತೆಗೂಡಲು ಆಹ್ವಾನವಿತ್ತು. ವಿಕಿಪೀಡಿಯದಲ್ಲಿ ಎಡಿಟ್ ಮಾಡುವಾಗ ಪರಿಚಿತರಾಗಿದ್ದ ಹಲವು ವಿಕಿ ಸ್ನೇಹಿತರು ಬಂದಿದ್ದರು, ಎಷ್ಟೋ ದಿನಗಳ ನಂತರ ಅವರೆಲ್ಲರೊಂದಿಗೆ ಕುಳಿತು ಮಾತನಾಡುತ್ತ ಕಳೆದ ಸಮಯ ಖುಷಿ ಕೊಟ್ಟಿತು.

(ಇದೇ ಕುರಿತು ನನ್ನ ಇಂಗ್ಲೀಷ್ ಬ್ಲಾಗಿನಲ್ಲಿ ಮೊನ್ನೆ ಲಾಗ್ ಮಾಡಿದ್ದೆ)

Rating
No votes yet

Comments