ವಾಸ್ತುಪುರುಷನ ಅನುಗ್ರಹ
ನಾನು ಹದಿನೇಳು ವರ್ಷಗಳೆ ನನ್ನ ಹೆಂಡತಿ ಮಕ್ಕಳೊಂದಿಗೆ ವಠಾರದ ಒಂದು ಬಾಡಿಗೆ ಮನೆಯಲ್ಲಿದ್ದೆ. ಆ ಮನೆ ವಾಸ್ತು ಪ್ರಕಾರ ಬಹಳ ದೋಷದಿಂದ ಕೂಡಿತ್ತು. ನೈರುತ್ಯಕ್ಕೆ ಮುಂಬಾಗಿಲು, ಈಶಾನ್ಯದಲ್ಲಿ ಕಕ್ಕಸು, ಆಡಿಗೆ ಮಾಡುತ್ತಿದ್ದುದು ದಕ್ಷಿಣಾಭಿಮುಖವಾಗಿ. ಹೀಗೆ ಹೇಳುತ್ತಾ ಹೋದರೆ ಇನ್ನೂ ಇದೆ. ಇಲ್ಲೇ ನನ್ನ ಮಕ್ಕಳು ಹುಟ್ಟಿ ಬೆಳೆದರು. ಎಲ್ಲ ಸಾಮಾನ್ಯರಂತೆ ನಮ್ಮ ಕುಟುಂಬವೂ ಕಾಯಿಲೆ ಕಸಾಲೆ, ಆರ್ಧಿಕ ಮುಗ್ಗಟ್ಟು ಇದನ್ನೆಲ್ಲ ಎದುರಿಸಿದರೂ ನಾನೆಂದೂ ವಾಸ್ತು ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ಕಡೆಗೂ ಅಲ್ಲೇ ಹದಿನೈದು ವರ್ಷಗಳಾದ ಮೇಲೆ ನನ್ನ ಹೆಂಡತಿ ಒತ್ತಾಯಕ್ಕೆ ಮಣಿದು ವಾಸ್ತು ಶಾಸ್ತ್ರದತ್ತ ಕಣ್ತೆರೆದು ನೋಡುವಂತಾಯ್ತು. ನನಗೆ ಆ ಮನೆಯಲ್ಲಿ ಋಣಾತ್ಮಕ ದೋಷಗಳೇನೆ ಇದ್ದರೂ, ಧನಾತ್ಮಕ ಪ್ರಕಾರಗಳೂ ವಾಸ್ತು ತತ್ವಕ್ಕೆ ಒತ್ತುಕೊಡುವಂತೆ ಇದ್ದವು. ಉದಾಹರಣೆಗೆ ಉತ್ತರ ಮತ್ತು ಪೂರ್ವಭಾಗವು ತಗ್ಗಾಗಿಯೆ ಇದ್ದು, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಭಾವು ಎತ್ತರದ ಸ್ಥಾನದಲ್ಲೆ ಇತ್ತು. ದಕ್ಷಿಣ ಭಾಗದಲ್ಲಿ ನಮಗೆ ಅರಿವಿಲ್ಲದಂತೆ ತುಳಸಿ ಕಟ್ಟೆಯನ್ನಿಟ್ಟಿದ್ದೆವು. ಆನಂತರ, ನಾನೊಂದಿಷ್ಟು ಮನೆಯ ಪೀಠೋಪಕರಣ, ಸಾಮಾನು ಸರಂಜಾಮು ಎಲ್ಲೆಲ್ಲಿರಬೇಕೆಂಬುದನ್ನು ಸಾಧ್ಯವಾದಷ್ಟು ಪುನ ರ್ ವ್ಯಸ್ಥೆಗೊಳಿಸಿದ್ದೆ. ಹೇಳಬೇಕೆಂದರೆ, ಯಾವುದೇ ಮನೆಯಲ್ಲಿ ಕೆಲವೊಂದು ಮೈನಸ್ ಪಾಯಿಂಟ್ಸ್ ಇದ್ದರೆ, ಇನ್ನೂ ಕೆಲವು ಪ್ಲಸ್ ಪಾಯಿಂಟ್ಸ್ ಇದ್ದೇ ಇರುತ್ತವೆ. ಶಾಸ್ತ್ರವನ್ನು ಸಂಪೂರ್ಣ ತೆಗಳುವವರ ಮಾತು ಬೇರೆಯೆ. ಈಗ ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ. ಆ ವಠಾರದಿಂದ ಹೊರ ಬಂದಿದ್ದೇನೆ. ಟಾರಸಿಯ ಪ್ರತ್ಯೇಕ ಬಾಡಿಗೆ ಮನೆಯಲ್ಲಿದ್ದೇನೆ. ಮೊದಲಿಗೆ ಏನೇ ನೋಡಿಕೊಂಡು ಬಂದರೂ ಇದರಲ್ಲೂ ದೋಷಗಳಿವೆ. ಮನೆಯ ಮುಂದೆಯೆ ಈಶಾನ್ಯ ಮೂಲೆಯಲ್ಲಿ ತೆಂಗಿನ ಮರವಿದೆ. ಇದರಿಂದ ಮನೆಯ ಯಜಮಾನನ ಆರೋಗ್ಯಕ್ಕೇ ಕುತ್ತೆಂದು ತಿಳಿದಿದೆ. ನನ್ನಲ್ಲಿ ಮತ್ತು ದೇವರಲ್ಲಿ ನನಗೆ ನಂಬಿಕೆ ಇದೆ. ಆರೋಗ್ಯವಾಗಿಯೆ ಇದ್ದೇನೆ. ಇದೀಗ ನನ್ನನ್ನು ಕಾಡುವ ಮುಖ್ಯ ಪ್ರಶ್ನೆಗಳೆಂದರೆ....
"ಮನೆ ಕಟ್ಟಿ ನೋಡು'ಎಂಬಂತೆ ನಮ್ಮಲ್ಲಿ ಅನೇಕರ ಪಾಲಿಗೆ ಮನೆಕಟ್ಟುವುದು ಕನಸಿನ ಮಾತೇ. ಒಂದು ಅಂದಾಜಿನ ಪ್ರಕಾರ ಭಾರತದ ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರ ಸಂಖ್ಯೆ ಹದಿನೈದು ದಶಲಕ್ಷ. ಇನ್ನೂ ಮನೆಯಿಲ್ಲದೇನೆ ಬೀದಿಯಲ್ಲಿ ಅಲೆಮಾರಿಗಳಂತೆ ದಿನ ನೂಕುವವರ ಸಂಖ್ಯೆ ಇನ್ನೆಷ್ಟೋ ಗೊತ್ತಿಲ್ಲ... ಈ ಬಾಡಿಗೆ ಮನೆಯಲ್ಲಿರುವ ಲಕ್ಷೋಪ ಲಕ್ಷ ಜನರು ತಾವು ವಾಸಿಸುವ ಮನೆ ವಾಸ್ತು ಪ್ರಕಾರ ಸರಿ ಇದೆಯೋ ಇಲ್ಲವೋ ಎಂದು ತಲೆ ಕೆಡಿಸಿಕೊಂಡರೆ ಸಾಕು, ಅವರೆಲ್ಲರೂ ಸುಸೂಕ್ತ ಮನೆ ಸಿಗದೇನೆ ಬೀದಿಗೆ ಬರಬೇಕಾಗುತ್ತದೆ. ಇನ್ನು ಹಣವಿರುವ ಶ್ರೀಮಂತರೋ ನಿವೇಶನ ಖರೀದಿಯಿಂದ ಆರಂಭಿಸಿ, ಮನೆ ನಿರ್ಮಾಣಗೊಳ್ಳುವ ತನಕ ಪ್ರತಿ ಹಂತದಲ್ಲೂ ವಾಸ್ತು ತತ್ವ ಆಧರಿಸಿ(ತಮ್ಮ ಹಣ ಬಲದಿಂದ)ಶೇ.ನೂರರಷ್ಟು ವಾಸ್ತು ಪ್ರಕಾರ ತಮ್ಮ ಮನೆಯನ್ನು ವಾಸಕ್ಕೆ ಅಣಿಗೊಳಿಸಿ, ಗೃಹಪ್ರವೇಶ ಮಾಡುತ್ತಾರೆನ್ನಿ, ಮನೆಯೊಂದೇ ಮನುಷ್ಯನ ನಡೆ ಆಚಾರ ವಿಚಾರಗಳನ್ನೆಲ್ಲ ನಿರ್ಧರಿಸುವುದೇ ಆದರೆ, ಇನ್ನೇನು ಅಂತಹ ವಾಸ್ತು ಶುದ್ಧ ಮನೆಯಲ್ಲಿದ್ದುಕೊಂಡೇ ಮಾಡಬಾರದ ಪಾಪ ಕೃತ್ಯಗಳನ್ನೆಲ್ಲ ಮಾಡುವವರೂ ಇರುತ್ತಾರಲ್ಲ... ಅಥವಾ ವಾಸ್ತು ತತ್ವ ಶುದ್ಧಿ ಹೊಂದಿರುವ ಆ ಮನೆಯೇ ಅಂಥವರನ್ನು ಹೇಯ ಕೃತ್ಯಗಳನ್ನು ಮಾಡದಂತೆ ತಡೆಯ ಬಲ್ಲದಾದರೆ ತುಂಬ ಸಂತೋಷವೇ.
ಇತ್ತೀಚೆಗೆ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು ತಾವು ಅಧಿಕಾರ ವಹಿಸಿಕೊಂಡ ಐದು ತಿಂಗಳ ನಂತರ, ಅವರ ಅಧಿಕೃತ ನಿವಾಸ "ಅನುಗ್ರಹ''ವನ್ನು ವಾಸ್ತು ಪ್ರಕಾರ ಸರ್ಕಾರಿ ವೆಚ್ಚದಲ್ಲಿ ಪುನರ್ ನವೀಕರಣಗೊಳಿಸಿ ಗೃಹಪ್ರವೇಶ ಮಾಡಿದರಂತೆ. ಉತ್ತರ ಭಾರತದ ಸ್ವಾಮೀಜಿಯೊಬ್ಬರು ೩೫,೦೦೦ ರೂಬೆಲೆಯ ಹಸುವೊಂದನ್ನು ಮು.ಮಂತ್ರಿಗಳಿಗೆ ದಾನಮಾಡಿದರಂತೆ. ಭರ್ಜರಿ ಹೋಮ ಹವನಾದಿಗಳೂ ನಡೆದವಂತೆ. ನಮ್ಮ ಮು.ಮಂತ್ರಿಗಳು ಇದೀಗ ತಮ್ಮ ಅಧಿಕೃತ ನಿವಾಸದ "ಅನುಗ್ರಹ''ದಲ್ಲಿ ವಾಸ್ತುಪುರುಷನನ್ನು ಸಂತುಷ್ಟಿಗೊಳಿಸಿ ಆತನ ಅನುಗ್ರಹವನ್ನೂ ಪಡೆದಿದ್ದಾರೆ. ಅವರು ಇನ್ನು ಮುಂದೆ ನಿರಾತಂಕ ಸೇವೆ ಮಾಡುತ್ತಾರೆನ್ನೋಣವೇ....
ಅದೇ ವಾಸ್ತು ದೋಷವಿರಬಹುದಾದ ಬಾಡಿಗೆ ಮನೆಯಲ್ಲಿಯೆ ರಾಮ, ಕೃಷ್ಣಾ ಅಂತ ದೇವರ ಮೇಲೆ ಭಾರ ಹಾಕಿ ಸನ್ನಡತೆಯುಳ್ಳವರಾಗಿದ್ದರೆ, ಆ ಮನೆಯ ವಾಸ್ತು ಪುರುಷನ ಅನುಗ್ರಹದಿಂದಲೇ ಅವರು ಎಲ್ಲ ಸಂಕಷ್ಟಗಳಿಂದ ಪಾರಾಗಲೂ ಬಲ್ಲರೆಂಬುದೂ ನನ್ನ ಹಾಗೂ ಅನೇಕರ ಅನುಭವದ ವ್ಯಾಪ್ತಿಯಲ್ಲಿ ಬಂದಿರಲಿಕ್ಕೂ ಸಾಕಲ್ಲವೇ...? ಈ ರೀತಿಯಾಗಿ ಒಬ್ಬ ಮನುಷ್ಯನ ವ್ಯಕ್ತಿತ್ವ -ಚಾರಿತ್ಯ್ರ ದೊಡ್ಡದೋ, ಆತ ವಾಸಿಸುವ ಮನೆಯ ವಾಸ್ತು ತತ್ವವಷ್ಟೇ ದೊಡ್ಡದೋ ಎಂಬ ಪ್ರಶ್ನೆ ನನ್ನ ಬಹಳಷ್ಟು ಕಾಡಿದೆ;ಕಾಡುತ್ತಲೇ ಇದೆ...
Comments
ವಾಸ್ತು