ವಿಚಾರವಾದಿ ಕೆ.ರಾಮದಾಸ್ ಅನಂತದಲ್ಲಿ ಲೀನ

ವಿಚಾರವಾದಿ ಕೆ.ರಾಮದಾಸ್ ಅನಂತದಲ್ಲಿ ಲೀನ

ತಾಯಿ ಮಂಜಮ್ಮನ ಮುದ್ದಿನ ಮಗನಾಗಿ, ತಂಗಿ ಕಮಲಮ್ಮನ ಪ್ರೀತಿಯ ಅಣ್ಣನಾಗಿ, ಹೆಂಡತಿ ನಿರ್ಮಲಳ ನಲ್ಮೆಯ ಪತಿಯಾಗಿ, ಮಗಳು ಸಮತಾಳ (ಸ್ನೇಹ) ಮೆಚ್ಚಿನ ತಂದೆಯಾಗಿ, ಅಳಿಯ ಓಂಕಾರ್ ನ ನೆಚ್ಚಿನ ಮಾವನಾಗಿ, ಎಲ್ಲಕ್ಕಿಂತ ಮಿಗಿಲಾಗಿ ಬಡ, ದೀನ ದಲಿತರಿಗೆ ಮಾರ್ಗದರ್ಶಿಯಾಗಿದ್ದ, ಎಲ್ಲರಿಗೂ ಬೇಕಾದವರಾಗಿದ್ದ ಮೇಸ್ಟ್ರು ಇನ್ನಿಲ್ಲ.

ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ಇಲ್ಲಿ ಹೇಳಬಯಸುತ್ತೇನೆ.

ಸರಳ ವಿವಾಹಕ್ಕೆ ಒತ್ತು ನೀಡುತ್ತಿದ್ದ ಅವರು, ಯಾವುದೇ ಅದ್ದೂರಿ ಸಮಾರಂಭಗಳಿಗೆ ಭೇಟಿ ನೀಡುತ್ತಿರಲಿಲ್ಲವೆನಿಸುತ್ತದೆ. ನಮ್ಮ ಮದುವೆಗೂ ಸಮತಾಳನ್ನು ಮಾತ್ರ ಕಳುಹಿಸಿದ್ದು ಇದೇ ಕಾರಣಕ್ಕೆ ಎಂಬುದು ನನಗೆ ತಡವಾಗಿ ಅರ್ಥವಾಯಿತು. ನನ್ನ ಅತ್ತೆ (ರಾಮದಾಸ್ ರ ತಂಗಿ) ಅಣ್ಣನ ಒಂದೊಂದು ನೆನಪಿನ ಬುತ್ತಿಯನ್ನು ಬಿಚ್ಚಿದಂತೆ, ನನಗೂ ಆ ಅದಮ್ಯ ಚೇತನದ ಅಂತ್ಯ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರ ಆತಿಥ್ಯ ನಿಜಕ್ಕೂ ಅವಿಸ್ಮರಣೀಯ. ಮನೆಗೆ ಯಾರೇ ಭೇಟಿ ನೀಡಿದರೂ, ಒಂದು ಕಪ್ ಕಾಫಿ ಕುಡಿಯದೇ ಹಿಂದಿರುಗುವಂತಿರಲಿಲ್ಲ. ಇನ್ನು ತಾಯಿ ಮಂಜಮ್ಮನ ಕೈ ರುಚಿ ಸವಿದವೆರೆಷ್ಟೊ.

ಪ್ರೊ.ರಾಮದಾಸ್ ರಿಗೆ ಮಲೆನಾಡಿನ ಅಡುಗೆ ಅಂದ್ರೆ ಪಂಚಪ್ರಾಣ, ನಮ್ಮತ್ತೆ ಅವರ ಮನೆಗೆ ಭೇಟಿ ನೀಡಿದಾಗಲೆಲ್ಲಾ ಅವರ ಬೇಡಿಕೆ ‘ಎಣ್ಣೆ ರೊಟ್ಟಿ, ಮೀನಿನ ಸಾರು, ಅರಶಿನದೆಲೆ ಕಡುಬು’ ಹೀಗೆ ಮಲೆನಾಡಿನ ಸಾಂಪ್ರದಾಯಿಕ ಅಡುಗೆಗಳೆ. ಇದನ್ನೆಲ್ಲ ಬಲು ಅಕ್ಕರೆಯಿಂದ ಮಾಡಿ ಬಡಿಸುತ್ತಿದ್ದ ತಂಗಿಗೆ, ಅಣ್ಣ ಹದಿನೈದು ದಿನಗಳಿಂದ ಕೇವಲ ರವೆ ಗಂಜಿ ಸೇವಿಸುತ್ತಿದ್ದರೆಂದು ತಿಳಿದು ಬಹಳ ಸಂಕಟ ಪಟ್ಟರು.

ನನ್ನ ಯಜಮಾನರು, ಸೋದರ ಮಾವ ರಾಮದಾಸ್ ರ ಮನೆಯಲ್ಲಿ ಸಣ್ಣಂದಿನಲ್ಲಿ ಅವರ ಮಾರ್ಗದರ್ಶನದಲ್ಲಿ ಬೆಳೆದವರು. ‘ಆಗಾಗ್ಗೆ ಗೆಳೆಯರಾದ ತೇಜಸ್ವಿ ಮತ್ತು ಲಂಕೇಶರೊಂದಿಗೆ ಮೀನು ಹಿಡಿಯಲೊರಟರೆ ಮಾವ ಹಿಂದಿರುಗುತ್ತಿದ್ದದು ರಾತ್ರಿ ಹನ್ನೆರಡರ ಆಸುಪಾಸಿಗೆ, ಅವರ ದಾರಿ ಕಾಯುತ್ತಿದ್ದ ನಾನು, ಅಜ್ಜಿಯೊಂದಿಗೆ ಆ ಸರಿರಾತ್ರಿಯಲ್ಲಿ ಮೀನಿನ ಅಡುಗೆ ಮಾಡಿ ಬಡಸಿ, ನಾವು ತಿಂದುಂಡು ಮಲಗುತ್ತಿದ್ದೆವು’ ಎಂಬುದನ್ನು ಹಲವಾರು ಬಾರಿ ಹೇಳಿಕೊಂಡಿದ್ದರು.

ದಿನಕ್ಕೆ ನಾಲ್ಕು ಸಿಗರೇಟು ಪ್ಯಾಕ್ ಖಾಲಿ ಮಾಡುತ್ತಿದ್ದರಂತೆ, ಕೇಳಿದೊಡನೆ ಸಿಗರೇಟು ತಂದುಕೊಡುತ್ತಿದ್ದ ತಂಗಿಯ ಮಗ ಪ್ರಶಾಂತನಿಗೆ ಅವರ ಆರೋಗ್ಯದ ಬಗ್ಗೆ ವಿಪರೀತ ಕಾಳಜಿಯಾಗುತ್ತಿತ್ತಂತೆ.

ಹತ್ತಿರದ ನೆಂಟರಿಷ್ಟರನ್ನು, ಕೈ ಹಿಡಿದು ಎತ್ತಿ, ಅವರ ಜೀವನಕ್ಕೆ ದಾರಿ ತೋರಿದವರು. ಕೊನೆಯುಸಿರೆಳೆಯುವ ಎರಡು ದಿನಗಳ ಹಿಂದೆ, ಶಿವಮೊಗ್ಗದಲ್ಲಿರುವ ತಂಗಿಯ ಮನೆಗೆ ಮತ್ತು ರಿಪ್ಪನ್ ಪೇಟೆಯಲ್ಲಿರುವ ಚಿಕ್ಕಮ್ಮನ ಮನೆಗೆ ಭೇಟಿ ನೀಡಬೇಕೆಂಬ ಇಂಗಿತ ವ್ಯಕ್ತ ಪಡಿಸಿದ್ದರಂತೆ. ಬಹುಶಃ ಕೊನೆಯ ಬಾರಿ ಎಲ್ಲರನ್ನೊಮ್ಮೆ ನೋಡುವ ಆಸೆ ಅವರಲ್ಲಿತ್ತೇನೊ??

ಯಾರಿಗೂ ಹೆದರದ ನಮ್ಮೆಜಮಾನ್ರಿಗೆ ಅವರ ಮಾವನ ಬಗ್ಗೆ ಎಲ್ಲಿಲ್ಲದ ಗೌರವ, ಅವರನ್ನು ಅಷ್ಟು ಹತ್ತಿರದಿಂದ ಕಂಡ ಅವರೇ ಧನ್ಯ.

--ಕವಿತ ಪ್ರಶಾಂತ್--

Rating
No votes yet

Comments