ವಿದ್ಯಾರ್ಥಿನಿಯರು ಮದ್ಯಾರ್ಥಿನಿಯರಾದಾಗ!

ವಿದ್ಯಾರ್ಥಿನಿಯರು ಮದ್ಯಾರ್ಥಿನಿಯರಾದಾಗ!

(ಬೊಗಳೂರು ರಿಮೋಟ್ ಬ್ಯುರೋದಿಂದ)
ಬೊಗಳೂರು, ಅ.25- ಚೀನಾದಲ್ಲಿ ಇತ್ತೀಚೆಗೆ ಫಿಂಗ್ ಕಿಶರ್, ತ್ರಿಬಲ್ ಝಡ್ ಮುಂತಾದ ಮಾರ್ಕಿನ ಕಿಕ್ ಕೊಡಲಾರದ ದ್ರವಗಳು ಭಾರಿ ಬೇಡಿಕೆ ಪಡೆದುಕೊಂಡಿದ್ದು, ಯಾಕಿರಬಹುದು ಎಂಬ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ಪರಲೋಕ ಯಾತ್ರೆ ಕೈಗೊಳ್ಳಲಾಯಿತು.

ಪರಲೋಕ ಯಾತ್ರೆಗೆ ಮೊದಲೇ 'ತೀರ್ಥ' ಯಾತ್ರೆಯನ್ನೂ ಕೈಗೊಂಡ ಕಾರಣದಿಂದಾಗಿ ಕೆಲವು ದಿನಗಳಿಂದ ಬೊಗಳೆ ರಗಳೆ ತಲೆಮರೆಸಿಕೊಳ್ಳಬೇಕಾಗಿತ್ತು.

ತನಿಖೆ ವೇಳೆ ಮತ್ತೊಂದು ವಿಷಯ ಬಯಲಾಗಿದ್ದು, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ವಿಶೇಷವಾಗಿ ಹುಡುಗಿಯರು ಓದಿನಲ್ಲಿ, ಕಲಿಯುವಿಕೆಯಲ್ಲಿ ಹಿಂದೆ ಬಿದ್ದಿದ್ದಾದರಾದರೂ, ಇಂತಹಾ ಮದ್ಯೋದ್ಯೋಗ ಕಲಿಯುವಿಕೆಯಲ್ಲಿ ಮುನ್ನಡೆ ಸಾಧಿಸುತ್ತಾ, ಮದ್ಯಾರ್ಥಿಗಳಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಕರು ಕೊಡುವ ಶಿಕ್ಷೆ ಹೆಚ್ಚಾದಂತೆ ಬಾಲ-ಕರುಗಳು ಕೂಡ ಓದಿನಲ್ಲಿ ಹೆಚ್ಚು ಹೆಚ್ಚು ಹಿಂದೆ ಬೀಳತೊಡಗಿದ್ದಾರೆ. ವಿದ್ಯಾರ್ಥಿನಿಯರು ಮದ್ಯಾರ್ಥಿನಿಯಾಗುತ್ತಿರುವುದರಿಂದ ಕಂಗೆಟ್ಟ ವಿದ್ಯಾರ್ಥಿಗಳೂ ಕಾರು- ಮತ್ತು ಬಾರು ಹೆಚ್ಚಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ Studyಯಲ್ಲಿ concentrate ಮಾಡದವರೆಲ್ಲರೂ ಹೆಚ್ಚು ಹೆಚ್ಚು concentrated ಆಗಿರುವ ಮದ್ಯಕ್ಕೆ ಮೊರೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅವರನ್ನು ಮಾತನಾಡಿಸಿದಾಗ, ಕಲಿಯುವುದಕ್ಕಿಂತ ಕಲಿಯದೆ ದೊರೆಯುವ ಕಿಕ್ಕೇ ಉತ್ತಮ ಎಂದು ತಾವು ತಿಳಿದುಕೊಂಡಿರುವುದಾಗಿ ಮದ್ಯಾರ್ಥಿನಿಯರು ಹೇಳಿದ್ದಾರೆ.
bogaleragale.blogspot.com

Rating
No votes yet