ವಿದ್ಯಾ ಭೂಷಣ

ವಿದ್ಯಾ ಭೂಷಣ

ಚಿತ್ರ

ಅಭಿಮಾನಿಯ ನಾಲ್ಕು ಸಾಲು
 
’ಭಕ್ತಿ’ ಮನಸ್ಸಿನ ಅನೇಕ ಚಕಿತ ಸ್ಥಿತಿಗಳಲ್ಲೊಂದು.   ’ದೈವ’ ಭಕ್ತಿ ಮನುಷ್ಯ ಮನಸ್ಸನ್ನು ತಿಳಿಯಾಗಿಸುವ ಒಂದು ದಾರಿಯೂ ಹೌದು.   ಈ ತಿಳಿಗೊಳಿಸುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ದೇವ’ಸ್ತುತಿ’.  ಅದಕ್ಕೆ ಇಂಬು ಕೊಟ್ಟು ಮನಸ್ಸನ್ನು ತೇಲಿಸುವುದು ಸ್ತುತಿ ಭಾವತುಂಬಿ ರಾಗದಲ್ಲಿ ಹರಿದಾಗ. 
 
ಕೀರ್ತನೆಗಳಿಗೆ  ಪಂ.ಭೀಮಸೇನ ಜೋಶಿಯವರಂತೆ ಜೀವ ತುಂಬಿ ಹಾಡಿದವರು  ಶ್ರೀ ವಿದ್ಯಾಭೂಷಣರು.   ಸಂಗೀತ  ಜ್ಞಾನವಿಲ್ಲದ  ನನ್ನಂತಹ  ಮಂದಿಗೆ  ಅವರು  ತಮ್ಮ ಸಿರಿಕಂಠದಿಂದ  ದಾಸರ  ಪದಗಳತ್ತ ಸೆಳೆದಿದ್ದಾರೆ. ದಾಸ ಸಾಹಿತ್ಯದ ತಿರುಳು ಉಣಬಡಿಸಿದ್ದಾರೆ.  ಮನಸ್ಸನ್ನು ತಿಳಿಗೊಳಿಸಿದ್ದಾರೆ. 
 
ಅವರ ಕಂಠಕ್ಕೆ ಮಾರುಹೋಗಿ ಮೂರು-ನಾಲ್ಕು ದಶಕಗಳೇ ಸರಿದಿವೆ.    ಅವರ ಹಾಡುಗಾರಿಕೆಯ ಅಭಿಮಾನಿಯಾಗಿ ನಾಲ್ಕು ಸಾಲು, "ವಿದ್ಯಾ ಭೂಷಣ" ಕವಿತೆ ರೂಪದಲ್ಲಿ....  
 
 
ವಿದ್ಯಾ ಭೂಷಣ
 
 
ಪವಡಿಸಿದಲ್ಲಿಂದ ಪನ್ನಗಶಯನ ಏಳಲೊಲ್ಲ
ಕೇಳದಿರೆ ದಿನವೂ ಈ ಉದಯರಾಗದ ಸೊಲ್ಲ!
 
ದಾಸಾದಿ ಸಂತ ಯತಿ ಕವಿಕೋವಿದರೆಲ್ಲ 
ಸ್ವರ್ಗ ಸಭೆಯಲ್ಲಿ ಕಲೆತು ಕೊರಗಿದರು !
ಕೀರ್ತನೆಗಳ ತಾವೆ ಮತ್ತಷ್ಟು ಬರೆಯದೆ
ಈ ನಾಲಿಗೆಯಲ್ಲಿ ನುಡಿಸಿ ಕೇಳಲಾಗದೆ !!
 
ವೇದ ಓದಿ ವ್ಯಾಕರಣ ಬರೆದು ರಾಗ ಪಲುಕಿದ
ಕಂಠಸ್ತರೆಲ್ಲರೂ ತಮ್ಮಲ್ಲೆ ಎಚ್ಚೆರೆಚ್ಚರು
ಇವರುಲಿವ ಸ್ಪಷ್ಟತೆಗೆ ಆಲಾಪಕ್ಕೆ ತದೇಕಕ್ಕೆ 
ವಾತ್ಸಲ್ಯ ವಾಣಿ ಭಕ್ತಿ ಉಕ್ತಿಗಳುಕ್ಕುವ ರಸಕ್ಕೆ
 
ಪಾಡಿದರೆ ಪಾಮರರ ಮಸ್ತಕದ ರಸಾತಲಕ್ಕೆ 
ಪಾತಾಳಗರಡಿ ಬಿಟ್ಟು ಭಕ್ತಿಯೆಂಬ ಮುತ್ತು 
ಹೆಕ್ಕಿ ಹೃದಯಕ್ಕಿಡುವ ಗಾರುಡಿಗ ಕಂಠಕ್ಕೆ
ನಾರಾಯಣ ನಲಿದಾಡುವ ಹೂ ನಗೆ ಹೊತ್ತು 
 
ಅಮ್ಮಂದಿರ ನಡುವೆ ಗಣಪನ ಕುಳ್ಳಿರಿಸಿ
ಶೇಷಶಾಯಿಗೆ ಕುಳಿತು ಕೇಳುವಂತೆ ರಾಗಿಸಿ
ವ್ಯಾಸಪುರಂದರಕನಕರ ಗೀತ ಪಾರಾಯಣಿಸಿ 
ತಪಿಸುವರಿಗೆ ವಿರಮಿಸದೆ ಉಣಿಸುವ ಸಂವೇದಿ
 
ಉಗಾಭೋಗ ಬಡಿಸಿದ ಬಳಿಕ ಏನ ಬೇಡಲಿ!?
ಭಾಗ್ಯದಲಿ ತೇಲಿಸಿ ದಡ ಮುಟ್ಟಿಸಿ ಸುಖಿಸುವ 
ಈ ಹಾಯಿಗಾರನ ಗಮನ ದಾಸವಾಣಿಯ ದಿಕ್ಕು 
ನಿಬಿಡವಾಗಿದೆ ಸರಿಗಮ ಸ್ವರ ಸಿರಿ ಕಂಠ ಹೊಕ್ಕು! 
 
ಮುಕ್ತಿಗಿಲ್ಲಿಂದ ರಹದಾರಿ ಸಿಕ್ಕಂತೆ  ಮಾಧುರ್ಯ
ದೊಳ ಮುಳುಗಿ ಮೀವ  ಮೀಮಾಂಸರು;  
ಆಲಾಪ ಸಲ್ಲಾಪಕ್ಕೆ ಲೆಕ್ಕತಪ್ಪುವ ಅವಲೋಕಿಗರು 
ಸದ್ಭಾವದಲಿ ಸಲಿಲ ತೇಲುವ ಲೌಕಿಗರು !
 
ವಾತ್ಸಲ್ಯದ ಅನುರಣಿತ; ಒಳತೋಟಿ ಅಪ್ರಕಟಿತ
ಉಕ್ಕುವ ಕೀರ್ತಿಯಂಬರದ ಹಂಬಲದನಾಸಕ್ತ  
ಸ್ವರಗಳ ಅನುರಾಗಿಸುವ ಕೊರಳ  ಪಯಣ; 
ಬಲು ಚೆನ್ನ ಮಧುಕರ ವೃತ್ತಿ; ಅಪ್ರಮತ್ತ ಗಾನ !
 
ಈ ದನಿ ಹೊತ್ತಿದೆ ಭಕ್ತಿ; ಹೊತ್ತಿಸುತ್ತದೆ ರಕ್ತಿ
ಸಾದರಿಸುವ ವಿರಾಗದಲೆ ತೆರೆ, ಜಿಜ್ಞಾಸೆ ತೊರೆ
ದಾಲಿಸೆ ಮನಮನ ಬೆಸುಗೆ, ಹುರಿಗಟ್ಟಿ ಭಕ್ತಿ 
ಬಾಗಿ ಸಕಲೇಂದ್ರಿಯದೊಳಗೂ  ವಿರಕ್ತಿಯೊಸಗೆ !
 
                                                              - ಅನಂತ ರಮೇಶ್
 

Rating
No votes yet