ವಿನ್‌-98ನಲ್ಲಿ ಯೂನಿಕೋಡ್‌

ವಿನ್‌-98ನಲ್ಲಿ ಯೂನಿಕೋಡ್‌

ಸಂಪದ ಆಗಷ್ಟೇ ಆರಂಭವಾಗಿತ್ತು. ಇಷ್ಟೂ ಕಾಲವೂ ಕಚೇರಿ ಕಂಪ್ಯೂಟರ್‌ಗಳಲ್ಲಿಯೇ ನನ್ನ ಕಲಿಕಾ ಸಾಹಸವನ್ನು ನಡೆಸಿದ್ದ ನಾನು ಕೊನೆಗೂ ಒಂದು ಕಂಪ್ಯೂಟರ್‌ ಕೊಂಡಿದ್ದೆ. ಮನೆಯಲ್ಲಿದ್ದ ಕಂಪ್ಯೂಟರ್‌ನಲ್ಲಿ ಯೂನಿಕೋಡ್‌ ಸವಲತ್ತಿದ್ದರೂ ಅದರಲ್ಲಿ ಇಂಟರ್ನೆಟ್‌ ಇರಲಿಲ್ಲ. ಅದನ್ನು ಪಡೆಯುವ ಯೋಚನೆಯೂ ನನಗಾಗ ಇರಲಿಲ್ಲ.

ಕಚೇರಿಯಲ್ಲಿ ಇಂಟರ್ನೆಟ್‌ ಸವಲತ್ತೇನೋ ಇತ್ತು. ಆದರೆ ಅಲ್ಲಿರುವ ಕಂಪ್ಯೂಟರ್‌ಗಳೆಲ್ಲವೂ ವಿಂಡೋಸ್‌-98 ಆಪರೇಟಿಂಗ್‌ ಸಿಸ್ಟಂನಲ್ಲಿ ಕಲೆಸ ಮಾಡುತ್ತಿದ್ದವು. ಇಷ್ಟರಲ್ಲೆ ಸಂಪದಕ್ಕೆ ಕೆಲವು ಲೇಖನಗಳನ್ನೂ ಬರೆದಿದ್ದ ನನಗೆ ಅವುಗಳು `ಹೇಗೆ ಕಾಣಿಸುತ್ತಿವೆ' ಎಂದು ತಿಳಿದುಕೊಳ್ಳುವ ಆಸೆ. ಕೊನೆಗೊಮ್ಮೆ ಆರ್‌.ಟಿ. ನಗರದಲ್ಲಿ ವಿನ್‌-ಎಕ್ಸ್‌ಪಿ ಬಳಸುವ ಸೈಬರ್‌ ಕೆಫೆ ಹುಡುಕಿ ಯಶಸ್ವಿಯಾದರೆ. ಅದರಿಂದ ಸಮಾಧಾನವಾಗಲಿಲ್ಲ. ಮನೆಗೆ ಇಂಟರ್ನೆಟ್‌ ತೆಗೆದುಕೊಳ್ಳೋಣ ಎಂದು ಜೊತೆಗಿರುವವರ ಜತೆ ಸಮಾಲೋಚಿಸಿದೆ. ಯಾವ್ಯಾವುದೋ ಕಾರಣಗಳಿಂದ ಈ ಪ್ರಸ್ತಾಪ ಬಿದ್ದು ಹೋಯಿತು.

ನನ್ನ ಬಹುಕಾಲವನ್ನು ಕಚೇರಿಯಿಲ್ಲಿಯೇ ಕಳೆಯುವುದರಿಂದ ವಿಂಡೋಸಂ-98ರಲ್ಲಿ ಯೂನಿಕೋಡ್‌ ಅಕ್ಷರಗಳನ್ನು ಕಾಣಿಸುವಂತೆ ಮಾಡುವ ಸಾಧ್ಯತೆಗಳ ಬಗ್ಗೆ ಸಿಕ್ಕ ಸಿಕ್ಕವರನ್ನು ಕೇಳಲು ಆರಂಭಿಸಿದೆ. ಈ ದಾಳಿಗೆ ಬಹುವಾಗಿ ಗುರಿಯಾದವರು ಹರಿಪ್ರಸಾದ್‌ ನಾಡಿಗ್‌ ಮತ್ತು ಡಾ.ಯು.ಬಿ.ಪವನಜ.

ಒಂದು ದಿನ ರೋಹಿತ್‌ ಎಂಬುವವರು ವಿಂಡೋಸ್‌-98ನಲ್ಲಿಯೇ ಯೂನಿಕೋಡ್‌ ಅಕ್ಷರ ಓದಲು ಸಾಧ್ಯ ಎಂದು ಸಂಪದದಲ್ಲಿ ಬರೆದದ್ದನ್ನು ಓದಿ ನಾನೂ ಆ ಪ್ರಯತ್ನದಲ್ಲಿ ತೊಡಗಿದೆ. ಒಂದು ಓಪನ್ ಟೈಪ್ ಫಾಂಟ್ ಹಾಕಿಕೊಂಡೆ. ನನ್ನ ಇಂಟರ್ನೆಟ್‌ ಎಕ್ಸ್‌ಪ್ಲೋರರನ್ನು ಅರೇಬಿಕ್‌ ಎನೇಬಲ್‌ ಮಾಡಿ ಇನ್‌ಸ್ಟಾಲ್‌ ಮಾಡಿದೆ. ಅದರಿಂದ ಏನೂ ಬದಲಾಗಲಿಲ್ಲ. ಕೊನೆಗೆ ಯುಎಸ್‌ಪಿ-10 ಡಿಲ್‌ ಫೈಲನ್ನು ಡಾಸ್‌ ಮೋಡ್‌ನಲ್ಲಿ ಅದನ್ನು ಸಿಸ್ಟಂ ಫೋಲ್ಡರ್‌ಗೆ ಕಾಪಿ ಮಾಡಿದೆ. ಈ ಎಲ್ಲಾ ಕ್ರಿಯೆಗಳಲ್ಲಿ ಹಲವು ದಿನಗಳೇ ಉರುಳಿದ್ದವು. ನೂರಾರಿ ಬಾರಿ ಕಂಪ್ಯೂಟರ್‌ ರಿಸ್ಟಾರ್ಟ್‌ ಆಗಿತ್ತು. ಕೊನೆಗೂ ಕನ್ನಡ ಕಾಣಿಸಲಿಲ್ಲ!

1998ಕ್ಕೆ ಮೊದಲೇ ಯಾಕೆ ಯೂನಿಕೋಡ್‌ ಬರಲಿಲ್ಲ ಎಂದು ದುಃಖಿಸುತ್ತಾ ದಿನಗಳೆಯುತ್ತಿರುವಾಗ ಪವನಜ ಒಂದು ಶುಭ ಸಮಾಚಾರ ತಿಳಿಸಿದರು- `ಐಬಿಎಂನವರದ್ದೊಂದು ಐಎಂಇ ಇದೆ. ಅದನ್ನು ಉಪಯೋಗಿಸಿ ವಿಂಡೋಸ್‌-98ನಲ್ಲಿಯೂ ಯೂನಿಕೋಡ್‌ ಅಕ್ಷರಗಳನ್ನು ಟೈಪಿಸಬಹುದಂತೆ. ಐಬಿಎಂನವರು ಏನಾದರೂ ಮಾಡಿದರೆ ಸ್ವಲ್ಪ ಸರಿಯಾಗಿಯೇ ಮಾಡಿರುತ್ತಾರೆ.'
ಈ ಮಾತುಕತೆಯ ಹಿಂದೆಯೇ ಅವರ ಮೇಲ್‌ ಬಂತು. ಲಿಂಕ್‌ ಕ್ಲಿಕ್ಕಿಸಿ ಐಬಿಎಂ ಸೈಟಿಗೆ ಹೋಗಿ ಅಲ್ಲಿರುವ ಫಾರ್ಮ್‌ ಭರ್ತಿ ಮಾಡಿ ಡೌನ್‌ ಲೋಡ್‌ ಮಾಡಲು ಎಸ್‌ ಎಂದರೆ ನನ್ನ ಆಫೀಸಿನ ಕಂಪ್ಯೂಟರ್‌ ದೊಡ್ಡ ಫೈಲ್‌ ಡೌನ್‌ ಲೋಡ್‌ ಮಾಡಲು ನಿನಗೆ ಅನುಮತಿಯಿಲ್ಲ ಎಂದು ಕಿರಿಕಿರಿ ಮಾಡಿತು. ಕೊನೆಗೆ ಏನೋ ಮಾಡಿ ಈ ಸಮಸ್ಯೆಯನ್ನೂ ಪರಹರಿಸಿಕೊಂಡು ಐಎಂಇಯನ್ನು ಇನ್‌ಸ್ಟಾಲ್‌ ಮಾಡಿದೆ.

ಈ ಐಎಂಇ ವಿಂಡೋಸ್‌-98ನಲ್ಲಿ ಕೇವಲ ಬ್ರೌಸರ್‌ಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ. ನನ್ನ ಜಿ-ಮೇಲ್‌ ಅಕೌಂಟ್‌ ತೆರೆದು ಟೈಪಿಸಿದೆ. ಬರೇ ಪ್ರಶ್ನಾರ್ಥಕ ಚಿಹ್ನೆಗಳು....!

ನನ್ನ ನಿರಾಶೆ ಮತ್ತಷ್ಟು ಹೆಚ್ಚಿತು. `ವಿನ್‌-98 ಇಟ್ಕೊಂಡು ಯೂನಿಕೋಡ್‌ಗೆ ಕೈಚಾಚಿದಂತೆ' ಎಂಬ ಹೊಸ ಗಾದೆಯೊಂದು ಹೊಳೆಯಿತು.
ಮನೆಯಲ್ಲಿರುವ ಕಂಪ್ಯೂಟರ್‌ನಲ್ಲಿ ಲೇಖನ ಬರೆದು ತಂದು ಹರಿಪ್ರಸಾದ್‌ಗೆ ಕಳುಹಿಸಿಕೊಟ್ಟು ಸಂಪದದಲ್ಲಿ ಪ್ರಕಟಿಸುವುದೇ ಸರಿ ಎಂದು ನಿರ್ಧರಿಸಿದೆ. ಕೆಲ ಕಾಲ ಇದೇ ನಡೆಯಿತು.

ಒಂದು ದಿನ ಕನ್ನಡ ವಿಕಿಪೀಡಿಯಾ ತೆರೆದರೆ ಒಂದು ಆಶ್ಚರ್ಯ ಕಾದಿತ್ತು. ಮುಖಪುಟದಲ್ಲಿದ್ದ ಇಟಾಲಿಕ್ಸ್‌ನಲ್ಲಿ ಇದ್ದ ಕನ್ನಡ ಅಕ್ಷರಗಳು ಕಾಣಿಸುತ್ತಿದ್ದವು. ತಕ್ಷಣ ಹರಿಪ್ರಸಾದ್‌ಗೆ ಫೋನ್‌ ಮಾಡಿ `ಸಂಪದ'ದಲ್ಲಿ ಯಾವುದಾದರೂ ಒಂದು ಲೇಖನದ ಅಕ್ಷರಗಳನ್ನು ಇಟಾಲಿಕ್‌ ಮಾಡಿ ಎಂದು ವಿನಂತಿಸಿದೆ. ಅವರೇನೋ ಮಾಡಿದರು. ಆದರೆ ಅವು ಎಂದಿನಂತೆ ಪ್ರಶ್ನಾರ್ಥಕ ಚಿಹ್ನೆಗಳೇ ಆಗಿದ್ದವು. ಒಂದೇ ಒಂದು ವ್ಯತ್ಯಾಸವೆಂದರೆ ಅವೆಲ್ಲಾ ಇಟಾಲಿಕ್‌ ಪ್ರಶ್ನಾರ್ಥಕ ಚಿಹ್ನೆಗಳು.

ತಲೆಕೆಟ್ಟು ವಿಕಿಪೀಡಿಯಾದಲ್ಲಿಯೇ ಕೆಲವು ಅಕ್ಷಗಳನ್ನು ಇಟಾಲಿಕ್‌ಗೆ ಪರಿವರ್ತಿಸಲು ತೀರ್ಮಾನಿಸಿ ಎಡಿಟ್‌ ಆರ್ಟಿಕಲ್‌ ಕ್ಲಿಕ್ಕಿಸಿದೆ. ಅಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು. ಇಡೀ ಲೇಖನ ಸ್ಪಷ್ಟವಾಗಿ ಕನ್ನಡ ಅಕ್ಷರಗಳಲ್ಲಿಯೂ ಕಾಣಿಸುತ್ತಿತ್ತು.
ಹರಿಪ್ರಸಾದ್‌ ಮತ್ತು ಪವನಜ ಇಬ್ಬರಿಗೂ ಫೋನ್‌ ಮಾಡಿ ಸಮಸ್ಯೆ ವಿವರಿಸಿದೆ. ಇಬ್ಬರೂ ಒಂದೇ ಉತ್ತರ ಹೇಳಿದರು. `ಯೂನಿಸ್ಕ್ರೈಬ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತ ಕಾಣ್ಸುತ್ತೆ'. ಪವನಜ ಅವರು ಒಂದು ದಿನ ನಮ್ಮ ಕಚೇರಿಗೇ ಬಂದು ಈ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿ ವಿಫಲರಾದರು. ಈ ವೈಫಲ್ಯಕ್ಕೆ ಹಲವಾರು ವೈಜ್ಞಾನಿಕ ಕಾರಣಗಳನ್ನು ಅವರು ಕೊಟ್ಟಿದ್ದರು. ಈಗ ನನಗೆ ಅವೆಲ್ಲಾ ಮರೆತುಹೋಗಿವೆ.ಈ ಮಧ್ಯೆ ರೋಹಿತ್‌ ಅವರು ವಿನ್‌-98ನಲ್ಲಿ ಯೂನಿಕೋಡ್‌ ಸರಿಯಾಗಿ ಕಾಣಿಸುತ್ತದೆ ಎಂದು ಹೇಳಿದ್ದು ನನಗೊಂದು ಬಿಡಿಸಲಾಗದ ಒಗಟಾಗಿತ್ತು. ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಹಾಸಿಗೆ ಇದ್ದಷ್ಟು ಕಾಲುಚಾಚುವುದಕ್ಕೆ ತೀರ್ಮಾನಿಸಿ ಕೆಲಸ ಆರಂಭಿಸಿದೆ.

ಸಂಪದದಲ್ಲಿ ಲೇಖನಗಳನ್ನು ಓದುವುದಕ್ಕೆ ಅನುಸರಿಸುತ್ತಿದ್ದ ವಿಧಾನ ಹೀಗಿದೆ. ಲೇಖನವನ್ನು ಸೆಲೆಕ್ಟ್‌ ಮಾಡಿ ಕಾಪಿ ಮಾಡಿ ಆ್ಯಡ್‌ ಕಮೆಂಟ್‌ ವಿಂಡೋ ತೆರೆದು ಅದರಲ್ಲಿ ಪೇಸ್ಟ್‌ ಮಾಡಿ ಓದುವುದು.
ಇನ್ನು ಬರೆಯುವುದಕ್ಕೆ ಬಹಳ ಸುಲಭ. ಜಿ-ಮೇಲ್‌ ಹೊರತು ಪಡಿಸಿದರೆ ಉಳಿದೆಲ್ಲಾ ಇ ಮೇಲ್‌ ಅಕೌಂಟ್‌ಗಳಲ್ಲೂ ಐಬಿಎಂನ ಐಎಂಇ ಬಳಸಿ ಟೈಪಿಸಬಹುದು. ಇಂಟೆರ್ನೆಟ್‌ ಎಕ್ಸ್‌ಪ್ಲೋರರ್‌ನ ಛ್ಟಿಜಿಟ್ಞ6ನಲ್ಲಿ ಇದು ಕೆಲಸ ಮಾಡುತ್ತದೆ. ಜಿ-ಮೇಲ್‌ನಲ್ಲಿ ಟೈಪಿಸಲು ಆಗದೇ ಇರುವುದು ಯಾಕೆ ಎಂಬ ಪ್ರಶ್ನೆಗೆ ನಾನು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಲಿಲ್ಲ. ಈ ಸಂಶೋಧನೆ ಆರಂಭವಾಗುವ ಹೊತ್ತಿಗೆ ನನ್ನ ಕಚೇರಿಯ ಕಂಪ್ಯೂಟರ್‌ಗೆ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂ ಬಂದಿತ್ತು.

-ಇಸ್ಮಾಯಿಲ್‌

Rating
No votes yet