ವಿಮಾನ ಮುಳುಗುವ ಮಳೆ

ವಿಮಾನ ಮುಳುಗುವ ಮಳೆ

ಜಾನ್ ಲೀ ಹುಕರ್‍ನ ಒಂದು ಬ್ಲೂಸ್ ಪದ "ಡೀಪ್ ಬ್ಲೂ ಸೀ" ಅಂತ. "ಚಿಲ್ ಔಟ್" ಎಂಬ ಆಲ್ಬಮ್ಮಿನಲ್ಲಿದೆ.

ಹಾಡುತ್ತಿರುವವ ಇರುವ ಊರಿನಲ್ಲಿ ಮಳೆಯೋ ಮಳೆ. ಎಷ್ಟೆಂದರೆ ವಿಮಾನಗಳು ಮುಳುಗಿ ಹೋಗುವಷ್ಟು. ಅವನಿಗೋ ಮನೆಗೆ ಹೋಗಬೇಕು ಹೋಗಬೇಕೆನ್ನುವ ತೀರದ ಒದ್ದಾಟ. ಆದರೆ ಅವನಿರುವ ಊರಿನಲ್ಲಿ ವಿಮಾನ ಮುಳುಗಿ ಹೋಗುವಷ್ಟು ಮಳೆ.

ಆಳದ ನೀಲಿ ಸಾಗರದಲ್ಲೆದ್ದ ಚಂಡಮಾರುತ ಇಷ್ಟು ಮಳೆ ಸುರಿಯಬಹುದೆ ಎಂದು ನಾಯಕನಿಗೆ ಅಚ್ಚರಿ. ಏರ್ಪೋರ್ಟಿಗೆ ಫೋನ್ ಮಾಡಿದರೂ "ಇಲ್ಲಿ ತುಂಬಾ ಮಳೆ. ಮೂರುನಾಕು ದಿನ ಎಲ್ಲಿಗೂ ಹೋಗುವುದಿಲ್ಲ. ವಿಮಾನ ಮುಳುಗುವಷ್ಟು ಮಳೆ" ಎಂಬ ಉತ್ತರ.

ದೂರದ ಊರಲ್ಲಿರುವ ತನ್ನ ನಲ್ಲೆಗೆ ಫೋನ್ ಮಾಡಿ "ನನಗಾಗಿ ಅಳಬೇಡ. ಇಲ್ಲಿ ಎಡೆಬಿಡದ ಮಳೆ. ಆಳದ ನೀಲಿ ಸಾಗರದಲ್ಲಿ ಚಂಡಮಾರುತವೆದ್ದಿದೆ. ನಿನಗಾಗಿ ತಹತಹಿಸುತ್ತಾ ಇದ್ದೀನಿ" ಎಂದು ಸಮಾಧಾನದ ನುಡಿ.

ನಂತರ ವಿಮಾನದ ಕ್ಯಾಪ್ಟನ್‌ ಜತೆ, ಪೈಲೆಟ್ ಜತೆ ಮಾತಾಡುತ್ತಾನೆ. ಅವರೂ "ಇನ್ನು ಮೂರು ನಾಕು ದಿನ ಹೊರಡುವುದಿಲ್ಲ. ನೋಡು ಹವೆ ಎಷ್ಟು ಕೆಟ್ಟದಿದೆ. ಮಳೆ ನೋಡು, ವಿಮಾನ ಮುಳುಗವಷ್ಟು ಮಳೆ" ಎಂದು ವಿವರಣೆ ಕೊಡುತ್ತಾರೆ.

ಕಡೆಯಲ್ಲಿ ನಾಯಕ "ನಲ್ಲೆ - ನಿನ್ನಿಂದಾಗಿ ನಾನೀಗ ತೀರಾ ಒಬ್ಬಂಟಿ. ನಾನೇನು ಮಾಡಲಿ ಇಲ್ಲಿ ಮಳೆಯೋ ಮಳೆ" ಎಂದು ಹೇಳಿಕೊಂಡು ಅದೇ ಗುಂಗಿನಲ್ಲಿ "ವಿಮಾನಗಳೆಲ್ಲಾ ಮುಳುಗುತ್ತಿವೆ, ಮನೆಗೆ ಹೋಗಬೇಕು ಅಂತ ತುಂಬಾ ಒದ್ದಾಟ ಆಗ್ತಿದೆ, ಆದರೆ ವಿಮಾನಗಳೆಲ್ಲಾ ಮುಳುಗುತ್ತಿದೆ" ಎಂದು ಗುನುಗುತ್ತಾ ಗುನುಗುತ್ತಾ ಹಾಡು ಕೊನೆಯಾಗುತ್ತದೆ.

ಅವಿರತವಾದ ಜೋರು ಮಳೆ- ನಲ್ಲೆಯ ಬಳಿ ಹೋಗಲಾಗದೆ ಆ ಊರಲ್ಲಿ ಸಿಕ್ಕಿಕೊಂಡು ಇರಲಾರದೆ, ಹೋಗಲಾರದೆ ಇದ್ದಾನೆ, ಹೋಗಲು ಬೇಕಾದ ವಿಮಾನಗಳೆಲ್ಲಾ ಮುಳುಗುತ್ತಿವೆ. ಬ್ಲೂಸ್ ಸಂಗೀತದ, ತಾಳ, ರಾಗದ ಗುಂಗೇ ಈ ಹಾಡಿನ ಚೆಲುವಿಗೆ ಬಹುಪಾಲು ಕಾರಣ ಅನಿಸಬಹುದು. ಆದರೂ ಹಾಡು ಹೆಣೆಯುವ ವಿಚಿತ್ರ ಪ್ರತಿಮೆಗಳು ನನ್ನನ್ನು ಎಷ್ಟು ಬಲವಾಗಿ ಸುತ್ತಿಕೊಂಡಿತೆಂದರೆ ಹತ್ತಾರು ಸಲ ಕೇಳುವಂತೆ ಮಾಡಿತು. ಮಾತುಗಳೆಡೆಯಲ್ಲಿ ಕಂಡು ಮಾಯವಾಗುವ ತೀವ್ರತೆ ಹಿಡಿದು ಅಲ್ಲಾಡಿಸುತ್ತಿತ್ತು. ಯಾಕೆಂದು ಹೇಳುವ ಅಗತ್ಯವಿಲ್ಲ. ಅಗತ್ಯವಿದ್ದರೂ ಹೇಳುವುದಲ್ಲ.

Rating
No votes yet

Comments