ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ - ಕಾರ್ಯಕ್ರಮ ಪಟ್ಟಿ

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ - ಕಾರ್ಯಕ್ರಮ ಪಟ್ಟಿ

ಕನ್ನಡ ಬಂಧುಗಳೇ,

ಕರ್ನಾಟಕ ರಕ್ಷಣಾ ವೇದಿಕೆಯು ನಾಡಿನ ಎಲ್ಲಾ ಕನ್ನಡಿಗರನ್ನು ಒಂದೆಡೆ ಸೇರಿಸಿ ನಾಡು ನುಡಿ ನಾಡಿಗರ ಏಳಿಗೆಯ ಕನಸುಗಳು, ನಡೆದು ಬಂದ ದಾರಿಗಳ ಪರಾಮರ್ಶೆ, ಮುಂದಿನ ದಿನಗಳಲ್ಲಿ ಸಾಗಬೇಕಾದ ದಿಕ್ಕುಗಳ ಬಗ್ಗೆ ಸಮಾಲೋಚನೆ ನಡೆಸುವ ಮಹತ್ವದ ಕಾಯಕವನ್ನು ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದ ಹೆಸರಿನಲ್ಲಿ ಇದೇ ಜನವರಿ ೧೮ ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಮುಂದಾಗಿದೆ.

ಜಾಗತೀಕರಣದ ಪರಿಣಾಮವಾಗಿ ನಡೆದಿರುವ ಅನಿಯಂತ್ರಿತ ವಲಸೆ, ಹೆಚ್ಚುತ್ತಿರುವ ಉದ್ಯೋಗಾವಕಾಶಗಳು, ಆರ್ಥಿಕವಾದ ಬೆಳವಣಿಗೆಗಳು, ತಲೆಯೆತ್ತುತ್ತಿರುವ ಮಾಲ್ ಸಂಸ್ಕೃತಿ, ಹತ್ತಿರವಾಗುತ್ತಿರುವ ಮಹಾನಗರ ಪಾಲಿಕೆ ಚುನಾವಣೆ, ರಾಜಕೀಯ ಏರಿಳಿತಗಳಿಂದಾಗಿ ಆಗುತ್ತಿರುವ ಏರುಪೇರುಗಳು...ಇವೆಲ್ಲವುಗಳ ಹಿನ್ನೆಲೆಯಲ್ಲಿ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ದೊಡ್ಡ ಜವಾಬ್ದಾರಿಯಿದೆ. ಈ ಸಮಾವೇಶದ ಮೂಲಕ ಕನ್ನಡಿಗರಲ್ಲಿ ಒಗ್ಗಟ್ಟಿನ ಮಹತ್ವದ, ನಾಡಿನ ಸಮಸ್ಯೆಗಳ ಆಳ ಅಗಲಗಳ, ಮತ್ತವುಗಳ ಪರಿಹಾರಗಳ, ಗುರಿ ಮುಟ್ಟುವ ದಾರಿಗಳ ಬಗ್ಗೆ ಅರಿವು ಮಾಡಿಸಬೇಕಾಗಿದೆ. ಕನ್ನಡ ನಾಡಿನ ರಾಜಕೀಯ ಪಕ್ಷಗಳಿಗೆ ಕನ್ನಡ ಕೇಂದ್ರಿತ ರಾಜಕೀಯ ಮಾಡಬೇಕಾದ ಅಗತ್ಯವನ್ನು ಮನಗಾಣಿಸಲು, ಕನ್ನಡ ನಾಡಿನಲ್ಲಿರುವ ಪರಭಾಷಿಕರಿಗೆ, ಪರಭಾಷಾ ಸಂಘಟನೆಗಳಿಗೆ ನಾಡದ್ರೋಹಕ್ಕೆ ಮುಂದಾಗದೇ, ಕನ್ನಡದ ಮುಖ್ಯವಾಹಿನಿ ಸೇರುವಂತೆ ಕೋರಲು, ಕನ್ನಡದ ಉದ್ದಿಮೆದಾರರ, ರೈತರ, ಕಾರ್ಮಿಕರ, ವಿದ್ಯಾರ್ಥಿಗಳ, ಮಹಿಳೆಯರ ರಕ್ಷಣೆಗೆ, ನಾಡು ನುಡಿ ನೆಲ ಜಲ, ಸಂಸ್ಕೃತಿಗಳ ರಕ್ಷಣೆಗೆ ಕರ್ನಾಟಕ ರಕ್ಷಣಾ ವೇದಿಕೆ ಸಿದ್ಧವಾಗಿದೆ, ಕಟಿಬದ್ಧವಾಗಿದೆ ಅನ್ನುವ ಸಂದೇಶ ನೀಡಲು ಕನ್ನಡಿಗರ ಸ್ವಾಭಿಮಾನದ ಈ ಸಮಾವೇಶ ನಡೆಯಲಿದೆ.

ಕನ್ನಡ-ಕರ್ನಾಟಕ-ಕನ್ನಡಿಗರ ಏಳಿಗೆಗೆ ಜಗತ್ತಿನ ಮೂಲೆ ಮೂಲೆಯಲ್ಲಿರುವ ಕನ್ನಡಿಗರೆಲ್ಲ ಕೈ ಜೋಡಿಸಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದ್ದು, ಕನ್ನಡಿಗರ ಒಗ್ಗಟ್ಟೇ ಈ ನಾಡಿನ ಏಳಿಗೆಗೆ ಬೇಕಾದ ಆಧಾರ ಸ್ಥಂಭ ಎನ್ನುವುದನ್ನು ನಾವು ಮನಗಂಡಿದ್ದೇವೆ. ಈ ನಿಟ್ಟಿನಲ್ಲಿ ಹೊರ ದೇಶಗಳಿಂದಲೂ, ಹೊರರಾಜ್ಯಗಳಿಂದಲೂ ಕನ್ನಡಿಗರು ಈ ಕೂಟದಲ್ಲಿ ಪಾಲ್ಗೊಂಡು ಈ ಐತಿಹಾಸಿಕ ಒಗ್ಗಟ್ಟಿನ ಸಮ್ಮೇಳನಕ್ಕೆ ಸಾಕ್ಷಿಯಾಗಲಿದ್ದಾರೆ.

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿನ ಕಾರ್ಯಕ್ರಮ ಪಟ್ಟಿ ಕೆಳಕಂಡಂತಿದೆ:

ಉದ್ಘಾಟನೆ: ಜನವರಿ ೧೮, ೧೧:೦೦

ವಿಚಾರ ಸಂಕಿರಣ: ಜನವರಿ ೧೮, ೧೧:೩೦ - ೧.೩೦

ಈ ಬಾರಿ ನಾವು " ಕನ್ನಡನಾಡು: ಉದ್ದಿಮೆ ಹಾಗೂ ಉದ್ಯೋಗಗಳು" ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದೇವೆ. ನಾಡಿನ ಕೈಗಾರಿಕಾ ಸಚಿವರು, ಕಾರ್ಮಿಕ ಸಚಿವರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸರ್ಕಾರದ ವತಿಯಿಂದ ಉದ್ದಿಮೆ, ಉದ್ದಿಮೆಗಾರಿಕೆ, ಕನ್ನಡಿಗರಿಗೆ ಉದ್ಯೋಗದ ವಿಚಾರದಲ್ಲಿ ಸರ್ಕಾರದ ನಿಲುವುಗಳ ಬಗ್ಗೆ ಮಾತನಾಡಲಿದ್ದಾರೆ. ಕೊನೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರು ಕನ್ನಡ ನಾಡಿನಲ್ಲಿ ಉದ್ದಿಮೆಗಳ ಮಹತ್ವ, ಸವಾಲುಗಳು, ಉದ್ಯೋಗಾವಕಾಶಗಳು, ಅನುಸರಿಸಬೇಕಾದ ಉದ್ದಿಮೆ ನೀತಿ, ಕನ್ನಡ ನಾಡಿನಲ್ಲಿ ಉದ್ದೆಮೆಗಳ ಸ್ಥಾಪನೆಗೆ ಪೂರಕವಾದ ವಾತಾವರಣದ ಬಗ್ಗೆ, ಅದರಿಂದ ಹುಟ್ಟುವ ಕೆಲಸಗಳ ಬಗ್ಗೆ, ಆ ಕೆಲಸಗಳಿಗೆ ಬೇಕಾದ ಪರಿಣಿತಿಯನ್ನು ಕನ್ನಡಿಗರು ಗಳಿಸಿಕೊಳ್ಳುವ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

ಜನಪದೋತ್ಸವ: ಜನವರಿ ೧೮, ೨:೩೦ - ೪:೩೦

ಕನ್ನಡ ನಾಡಿನ ಜನಪದ ಕಲೆಗೆ ವಿಶಿಷ್ಟವೂ, ಅಪೂರ್ವವೂ ಆದ ಇತಿಹಾಸವಿದ್ದು, ನಾಡಿನ ಭವ್ಯ ಪರಂಪರೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಇಂತಹ ಕಲೆಯನ್ನು, ಕಲಾವಿದರನ್ನು ಪೋಷಿಸಲು, ಪ್ರೋತ್ಸಾಹಿಸಲು ಜನಪದೋತ್ಸವ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡನಾಡಿನ ಎಲ್ಲಾ ಭಾಗದ ಜನಪದ ತಂಡಗಳಿಂದ ಅಪರೂಪದ ಜನಪದ ಕಾರ್ಯಕ್ರಮಗಳು ನಡೆಯುತ್ತದೆ.

ಕರ್ನಾಟಕ ರಕ್ಷಣಾ ವೇದಿಕೆಯು ಹೊರತಂದಿರುವ ಕನ್ನಡಪರ ಹಾಡುಗಳು ಮತ್ತು ಕ್ರಾಂತಿಗೀತೆಗಳನ್ನೊಳಗೊಂಡ ಧ್ವನಿ ಸುರಳಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಸಮಾರೋಪ ಸಮಾರಂಭ: ಜನವರಿ ೧೮, ೫:೦೦ - ೮:೦೦

ನಾಡು ನುಡಿಗಾಗಿ ದುಡಿದಂತಹ ಮಹನೀಯರನ್ನು ಗುರುತಿಸಿ ಅವರನ್ನು ಗೌರವಿಸುವ ಪರಿಪಾಠ ಕ.ರ.ವೇ ತನ್ನ ಸಮಾವೇಶಗಳಲ್ಲಿ ನಡೆಸಿಕೊಂಡು ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ, ನಾಡಿಗೆ ಹೆಮ್ಮೆ ತಂದ ಕನ್ನಡಿಗರನ್ನು ಗೌರವಿಸಲು ಹಲವು ಪ್ರಶಸ್ತಿಗಳ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನಪದ, ರಾಜಕೀಯ, ರೈತಪರ ಹೋರಾಟ, ಸಮಾಜ ಸೇವೆ, ಸಾಹಿತ್ಯ, ಕಲೆ ಹಾಗೂ ಪತ್ರಿಕೋದ್ಯಮದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ, ನಾಡಿಗೆ ಹೆಮ್ಮೆ ತಂದ ಕನ್ನಡಿಗರನ್ನು ಗೌರವಿಸಲು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೊನೆಯಲ್ಲಿ, ನಾಡು ನುಡಿ ನಾಡಿಗರ ಏಳಿಗೆಯ ಕನಸುಗಳು, ಮುಂದಿನ ದಿನಗಳಲ್ಲಿ ಸಾಗಬೇಕಾದ ದಿಕ್ಕು, ಇಂದಿಗೆ ನಮ್ಮ ಮುಂದಿರುವ ಸವಾಲುಗಳು, ಅವುಗಳನ್ನು ಎದುರಿಸಲು ನಾವು ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ನಿರ್ಣಯಗಳ ರೂಪದಲ್ಲಿ ಘೋಷಿಸಲಾಗುತ್ತದೆ. ಇವುಗಳನ್ನು ದಾರಿ ದೀಪವಾಗಿಟ್ಟುಕೊಂಡು ಸಧೃಡ, ಸಬಲ ಕರ್ನಾಟಕ ಕಟ್ಟುವ ಕನಸಿನತ್ತ ನಾವು ನಡೆಯಲಿದ್ದೇವೆ. ನಾಡಿನ ಮುಖ್ಯಮಂತ್ರಿಗಳಾದ ಶ್ರೀಮಾನ್ ಡಾ|| ಬಿ.ಎಸ್. ಯಡಿಯೂರಪ್ಪರವರನ್ನು ಒಳಗೊಂಡಂತೆ ಕನ್ನಡ ನಾಡಿನ ಎಲ್ಲ ರಾಜಕೀಯ ಪಕ್ಷಗಳ ಮುಖ್ಯ ಧುರೀಣರು, ದೇಶ ವಿದೇಶಗಳ ಕನ್ನಡದ ಉದ್ಯಮಿಗಳು, ಚಿಂತಕರು ಪಾಲ್ಗೊಳ್ಳಲಿದ್ದು, ಸಮಾವೇಶದಲ್ಲಿ ಕೈಗೊಳ್ಳಲಿರುವ ನಾಡು ಕಟ್ಟುವ ಈ ನಿರ್ಣಯಗಳಿಗೆ ಸಾಕ್ಷಿಯಾಗಲಿದ್ದಾರೆ.

ಇಂದಿನ ದಿನ ಕನ್ನಡನಾಡು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಕನ್ನಡಿಗರ ಒಗ್ಗಟ್ಟು ಎನ್ನುವುದೇ ಸತ್ಯವಾಗಿದೆ. ಈ ಒಗ್ಗಟ್ಟಿನ ಬಲದಿಂದ ಇಂದು ನಾಡಿಗೆ ರಕ್ಷಣೆಯ ಬೇಲಿ ಹಾಕುವುದರ ಜೊತೆಯಲ್ಲಿ ಏಳಿಗೆಯ ಸಮೃದ್ಧಿಯ ನಾಳೆಗಳ ನಿರ್ಮಾಣ ಮಾಡಬೇಕಾದ ಹೊಣೆಗಾರಿಕೆ ಎಲ್ಲ ಕನ್ನಡಿಗರಿಗಿದೆ. ಆದ್ದರಿಂದ ತಾವೆಲ್ಲರೂ ಈ ಸಮಾವೇಶದಲ್ಲಿ ಪಾಲ್ಗೊಂಡು ಇದನ್ನು ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ.

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ - ಆಹ್ವಾನ ಪತ್ರಿಕೆ ಇಲ್ಲಿದೆ:
http://www.karnatakarakshanavedike.org/modes/view/94/vishwa-kanndigarakaagruti-ahvana-patrike.html

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ - ಇನ್ನಷ್ಟು ಮಾಹಿತಿ
http://karave.blogspot.com/2008/12/vishva-kannadigara-jagruti-samaavesha.html

Rating
No votes yet

Comments