'ವೀರ' ವಸಂತ

'ವೀರ' ವಸಂತ

 

ಇಂದು ಬೆಳಗ್ಗೆ ಬರುವಾಗ ರೇಡಿಯೋದಲ್ಲಿ ಕೇಳಿದ ಸುದ್ದಿ - ಈ ದಿನ ಹೀಟ್ ಅಡ್ವೈಸರಿ! ಅಂದ್ರೆ, ನಿಜವಾದ ಸೆಖೆಗಾಲ ಶುರುವಾಯ್ತು ಅಂತಲೇ ಅರ್ಥ, ಲೆಕ್ಕಕ್ಕೆ ಯಾವತ್ತು ಶುರುವಾದರೂ. ಹಾಗಾಗಿ ಬೇಸಿಗೆ ಜೋರಾಗಿ ಮೊದಲಾಗೋಕ್ಕಿಂತ ಮುಂಚೆಯೇ ಈ 'ವೀರ' ವಸಂತನ ಬಗ್ಗೆಯ ಪದ್ಯದ ಅನುವಾದವನ್ನು ಹಾಕೋಣವೆನ್ನಿಸಿತು!




ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು

ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ

ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ-

ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು ||



ಸಂಸ್ಕೃತ ಮೂಲ ( ಕಾಳಿದಾಸನ ಋತುಸಂಹಾರ, ಸರ್ಗ 6, ಪದ್ಯ 1)



ಪ್ರಫುಲ್ಲ ಚೂತಾಂಕುರತೀಕ್ಷ್ಣಸಾಯೋ

ದ್ವಿರೇಫಮಾಲಾ ವಿಲಸದ್ಧನುರ್ಗುಣಃ

ಮನಾಂಸಿ ವೇದ್ಧುಮ್* ಸುರತಃಪ್ರಸಂಗಿನಾಂ^

ವಸಂತಯೋದ್ಧಾ~ ಸಮುಪಾಗತಃ ಪ್ರಿಯೇ



प्रफुल्लचूताङ्कुरतीक्ष्णसायो

द्विरेफमालाविलसद्धनुर्गुणः।

मनांसि वेद्धुम् सुरतप्रसङ्गिनां

वसन्तयोद्धा समुपागतः प्रिये॥६-१||



-ಹಂಸಾನಂದಿ



ಚಿತ್ರ: ಹೂಬಿಟ್ಟ ಮಾಮರ, ವಿಕಿಪೀಡಿಯಾದಿಂದ



ಕೊ: ಈ ಪಾಠಾಂತರಗಳೂ ಇವೆ: * – ಭೇತ್ತುಮ್ ;    ^ – ಸುರತೋತ್ಸುಕಾನಾಮ್  ; ~ – ಯೋಧಃ ;  ಇವುಗಳಿಂದ ಅರ್ಥದಲ್ಲೇನೂ ಭಾರಿ ಬದಲಾಗುವುದಿಲ್ಲ.



ಕೊ.ಕೊ: (ಕೆಲವು 1:1 ಅನುವಾದವಿಲ್ಲದಿದ್ದರೂ ಒಟ್ಟಾರೆ ಭಾವವನ್ನು ಉಳಿಸುವ ಪ್ರಯತ್ನ ಮಾಡಿದ್ದೇನೆ.



ಕೊ.ಕೊ.ಕೊ: "ವೀರವಸಂತ" ಎನ್ನುವುದು ಕರ್ನಾಟಕ ಸಂಗೀತದ ಒಂದು ರಾಗವೂ ಹೌದು. ಸ್ವಲ್ಪ ಅಪರೂಪವಾದ ರಾಗವೇ. ಇದರಲ್ಲಿ ತ್ಯಾಗರಾಜರ "ಏಮನಿ ಪೊಗಡುದುರಾ" ಮತ್ತೆ ಮುದ್ದುಸ್ವಾಮಿ ದೀಕ್ಷಿತರ "ವೀರವಸಂತ ತ್ಯಾಗರಾಜ" ಅನ್ನುವ ರಚನೆಗಳು ಇವೆ.

 
Rating
No votes yet