ವೀಳ್ಯದೊಡನೆ ಚಿಗುರೊಡೆದ ಪ್ರೇಮ

ವೀಳ್ಯದೊಡನೆ ಚಿಗುರೊಡೆದ ಪ್ರೇಮ

ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಕಲಶವಿಟ್ಟಂತಿರುವ ಪಶ್ಚಿಮ ಘಟ್ಟಸಾಲು, ಆ ಸಾಲಿಗೆ ಹೊಂದಿಕೊಂಡಂತೆ ಇರುವ ಹಳ್ಳಿಗಳು, ಅಂತಹದೊಂದು ಪುಟ್ಟ ಸೊಬಗಿನ ಊರು ಬಾಳೇಹೊಳೆ. ಮಲೆನಾಡಿನ ಊರುಗಳ ಹೆಸರುಗಳನ್ನು ಕೇಳುವುದೇ ಬಯಲುಸೀಮೆಯವರಿಗೆ ಒಂದು ಆನಂದ. ಬಾಳೇಹೊಳೆ, ಬಸರಿಕಟ್ಟೇ, ಮೆಣಸೆ, ದೊಡ್ಡಹೊನ್ನೆ, ನೆಮ್ಮಾರ್, ಜೇನುಗದ್ದೆ, ಕಕ್ಕಬ್ಬೆ ಹೀಗೆ ಹೇಳುತ್ತಾ ಹೋದರೆ ಊರುಗಳ ಪಟ್ಟಿಯೇ ಬೆಳೆಯುತ್ತದೆ.

ಮಲೆನಾಡಿನ ಹಳ್ಳಿಗಳು ಇತರೆ ಪ್ರದೇಶದ ಊರುಗಳಿಗೆ ಹೋಲಿಸಿದರೆ ಚಿಕ್ಕದಾಗಿದ್ದರೂ ಚೊಕ್ಕಟವಾಗಿರುತ್ತದೆ, ಅವುಗಳ ಸೌಂದರ್ಯವನ್ನು ವರ್ಣಿಸುವುದೇ ಒಂದು ಖುಶಿ. ಈ ಪ್ರಾಕೃತಿಕ ಸೌಂದರ್ಯ ಮಲೆನಾಡಿನವರಿಗೆ ದೈವವಿತ್ತ ವರದಾನ. ಅಲ್ಲೊಂದು ಇಲ್ಲೊಂದು ಮನೆ, ಸುತ್ತೆಲ್ಲ ಕಾಡು, ಒಂದೊಂದು ಮನೆಗೂ ಸುಮಾರು ನಾಲ್ಕೈದು ಫರ್ಲಾಂಗಿನ ಅಂತರ, ಮನೆಯ ಸುತ್ತಣ ತೋಟ, ಗಿಡ ಮರಗಳು, ಜೀವಸಂಕುಲಕ್ಕೆ ಉಸಿರಾಗಿರುವ ಹಸಿರು ಎಲ್ಲೆಲ್ಲ್ಲೂ ಪಸರಿಸುತ್ತಿರುತ್ತದೆ.

ಹದಿಮೂರು ಹದಿನಾಲ್ಕು ಮನೆಗಳಿರುವ ಬಾಳೇಹೊಳೆಯಲಿ, ಒಂದೆರಡು ಮನೆಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲ ಮನೆಗಳು ಶಿವಳ್ಳಿ ಬ್ರಾಹ್ಮಣರದ್ದು. ಅದರಲ್ಲಿ ವೆಂಕಟಕೃಷ್ಣಯ್ಯನವರ ಬೆಟ್ಟದ ತಪ್ಪಲಿನಲ್ಲಿರುವ ಕಂಬಸಾಲಿನ ದೊಡ್ಡ ಪ್ರಾಕಾರ ಹಾಗೂ ಪ್ರಾಂಗಣವುಳ್ಳ ಸುಂದರವಾದ ತೊಟ್ಟಿ ಮನೆಯ ಸುತ್ತಣ ಅಡಿಕೆ ತೋಟ, ಮನೆಯ ಮುಂದೆ ನೂರಾರು ಹೂವಿನ ಗಿಡಗಳಿವೆ.

ಊರಿನ ಪ್ರಮುಖ ವ್ಯಕ್ತಿಗಳಲ್ಲಿ ವೆಂಕಟಕೃಷ್ಣಯ್ಯನವರು ಒಬ್ಬರು. ಪೂರ್ವಜರಿಂದ ಬಂದ ಅಡಿಕೆ ತೋಟ, ಮನೆ ಇವೆಲ್ಲವನ್ನು ಉಳಿಸಿ ವೃದ್ಧಿಗೊಳಿಸಿ ತಮ್ಮ ಮನೆತನದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪತ್ನಿ ಕಮಲಮ್ಮನವರು ಪತಿಯ ಪ್ರತಿಯೊಂದು ಕೆಲಸಗಳಿಗೂ ಹೆಗಲು ನೀಡುತ್ತಾ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿರುವ ಚೂಟಿಯಾದ ಗೃಹಿಣಿ. ಇವರ ಎಂಟು ಮಂದಿ ಮಕ್ಕಳಲ್ಲಿ ಮುದ್ದಿನ ಮಗ ರಾಘು ಎರಡನೆಯವನು. ಹಿರಿಯ ಮಗ ಶಂಕರನು ತೋಟಕ್ಕೆ ನೀರು ಹಾಯಿಸುವುದು, ಗೊಬ್ಬರ ಹಾಕಿಸುವುದು, ಕಳೆ ಕೀಳಿಸುವುದು, ಬೆಳೆ ಬೆಳೆಯುವುದು ಇವೇ ಮೊದಲಾದ ತೋಟದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರೆ; ಬೆಳೆದ ಬೆಳೆಗಳನ್ನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದು ರಾಘುವಿನ ಕೆಲಸ.

ಬಸರೀಕಟ್ಟೆಯೂ ಸಹ ಬಾಳೇಹೊಳೆಯಂತೆ ತುಂಗಾನದಿಯ ತಟದಲ್ಲಿರುವ ಪುಟ್ಟ ಹಳ್ಳಿ. ತುಂಗೆಯು ಈ ಎರಡು ಹಳ್ಳಿಗಳನ್ನು ಬೇರ್ಪಡಿಸುತ್ತಾ ಹಸಿರಿನ ವನರಾಶಿಯ ಮಧ್ಯೆ ಜುಳು ಜುಳು ನಿನಾದ ಮಾಡುತ್ತಾ ಮೂಡಣದಿಂದ ಪಡುವಣದೆಡೆಗೆ ಹರಿಯುತ್ತಾಳೆ. ಬಾಳೇಹೊಳೆಯಿಂದ ಬಸರೀಕಟ್ಟೆಗೆ ಹೋಗಬೇಕಾದರೆ ರಸ್ತೆಯ ಸಂಪರ್ಕವಿಲ್ಲದಿರುವುದರಿಂದ ತೆಪ್ಪದ ಮೂಲಕವೇ ತುಂಗೆಯನ್ನು ದಾಟಿ ಸಾಗಬೇಕು. ಊರಿನ ಪ್ರಮುಖ ಬೆಳೆಯಾದ ವೀಳ್ಯದೆಲೆಯನ್ನು ರಾಘುವು ಬೆಳೆದವರ ಬಳಿ ಹುಂಡಿ ಬೆಲೆಯಲ್ಲಿ ಗುತ್ತಿಗೆ ತೆಗೆದುಕೊಂಡು ವ್ಯವಹರಿಸಲು ಆರಂಭಿಸಿದ. ಮೊದಮೊದಲು ತನ್ನ ಊರಿಗೆ ಸೀಮಿತವಾಗಿದ್ದ ಈ ವ್ಯವಹಾರವನ್ನು ಕ್ರಮೇಣ ಬಸರೀಕಟ್ಟೆಗೂ ವಿಸ್ತರಿಸಿದ.

ವ್ಯಾಪಾರ ವಿಸ್ತಾರವಾದಂತೆ ಬಸರೀಕಟ್ಟೆಯೊಡನೆ ರಾಘುವಿನ ಒಡನಾಟ ಹೆಚ್ಚಾಯಿತು, ಅಲ್ಲಿ ವೀಳ್ಯದೆಲೆಯನ್ನು ಹೇರಳವಾಗಿ ಬೆಳೆಯುತ್ತಿದ್ದ ಲಕ್ಷ್ಮ್ಮೀನಾರಾಯಣ ವೈಲಾಯರು ರಾಘುವಿನೊಡನೆ ವ್ಯವಹಾರ ಪ್ರಾರಂಭಿಸಿದರು. ಲಕ್ಷ್ಮೀನಾರಾಯಣ ವೈಲಾಯರ ನಾಲ್ಕು ಮಂದಿ ಮಕ್ಕಳ ಪೈಕಿ ಅವರ ಹಿರಿಯ ಮಗಳೇ ಹದಿನೆಂಟರ ಹರೆಯದ ಉಮಾಶಂಕರಿ. ತಿಂಗಳ ಬೆಳಕಿನಲ್ಲಿ ಹೊಳೆವ ಚಂದ್ರಮನಂತೆ ಆಕೆ ಬೆಳ್ಳನೆ ಫಳಫಳನೆ ಬೆಳಗುತ್ತಿದ್ದಳು. ಆದುದರಿಂದಲೆ ಅವಳನ್ನು ಮನೆಯವರೆಲ್ಲರೂ ಬೆಳ್ಳಿ ಎಂದು ಕರೆಯಲು ಪ್ರಾರಂಭಿಸಿದರು. ಲಕ್ಷಣವಾದ ಮುಖ, ನೀಳವಾದ ಕಪ್ಪು ಕೂದಲು, ಹಾಗೂ ಬೆಳ್ಳನೆಯ ಮೈಬಣ್ಣ. ಒಟ್ಟಾರೆ ಹೇಳಬೇಕೆಂದರೆ ಕರ್ಪೂರದ ಗೊಂಬೆಯಂತಿದ್ದಳು. ಅವಳ ಹಸಿರು ಲಂಗಕ್ಕೆ ಕೆಂಪು ಜರಿಯ ಅಂಚು ಹಾಗು ಕೆಂಪು ದಾವಣಿ, ಕಿವಿಗೆ ಪುಟ್ಟ ಬೆಂಡೋಲೆ, ಹಣೆಗೆ ಉದ್ದವಾದ ಬಿಂದಿ, ಅದರ ಕೆಳಗೆ ಹುಡಿಕುಂಕುಮ, ಮೂಗಿಗೆ ತಿಳಿನೇರಳೆ ಬಣ್ಣದ ಹರಳು ಹಾಗು ಚಿನ್ನದಿಂದ ಮಾಡಿದ ಮುದ್ದಾದ ಮೂಗುತಿ, ಕತ್ತಿಗೆ ಲಕ್ಷ್ಮೀ ಡಾಲರಿನ ಸರ, ಕೈ ತುಂಬ ಹಸಿರು ಗಾಜು ಹಾಗು ಹರಳಿನ ಬಳೆಗಳು, ಆಕೆ ಮನೆಯ ಹಾಗು ಹೂವಿನ ತೋಟದ ತುಂಬೆಲ್ಲ ಲವಲವಿಕೆಯಿಂದ ಓಡಾಡುವಾಗ ಘಲ್ ಘಲ್ ಎಂದು ಇಂಪಾದ ದನಿಯನ್ನು ಹೊರಸೂಸುವ ತುಂಬುಗೆಜ್ಜೆ, ಇವೆಲ್ಲವೂ ಅವಳ ಸೌಂದರ್ಯಕ್ಕೆ ಮೆರುಗು ನೀಡಿದ್ದವು.

ಬೆಳ್ಳಿಯ ಸೌಂದರ್ಯಕ್ಕೆ ಮರುಳಾದ ಪಕ್ಕದ ಜೇನುಗದ್ದೆಯ ಜಮೀನುದಾರರ ಮಗ ದತ್ತಾತ್ರೇಯನು ಆಕೆಯನ್ನೇ ಮದುವೆಯಾಗುದಾಗಿ ತನ್ನ ತಂದೆಯ ಸ್ನೇಹಿತರ ಬಳಿ ಹೇಳಿಕಳಿಹಿಸಿದ್ದನ್ನು ಕೇಳಿದ ವೈಲಾಯರ ಪತ್ನಿ ಪದ್ಮಾವತಮ್ಮನವರು ಆತನು ತನ್ನ ಮಗಳ ಕೂದಲಗಿಂತಲೂ ಕಪ್ಪೆಂದು ವೈಲಾಯರ ಬಳಿ ಹೇಳಿದಾಗ ಅವರು ತಮ್ಮ ಪತ್ನಿಯ ಮಾತನ್ನು ಕೇಳಿ ಗೊಳ್ಳೆಂದು ನಕ್ಕಿದ್ದರು.

ವ್ಯಾಪಾರಕ್ಕೆಂದು ಬರುತ್ತಿದ್ದ ರಾಘುವಿನ ಊಟೋಪಚಾರಗಳು ವೈಲಾಯರ ಮನೆಯಲ್ಲೇ ಕಳೆಯುತ್ತಿತ್ತು. ವೈಲಾಯರು ಮನೆಗೆ ಬಂದ ಯಾರನ್ನು ಸಹ ಊಟೋಪಚಾರವಿಲ್ಲದೆ ಕಳುಹಿಸುತ್ತಿರಲಿಲ್ಲ. ಹೀಗೆಯೇ ವಾರಕ್ಕೊಂದೆರಡು ಬಾರಿ ರಾಘುವಿನ ಊಟ ವೈಲಾಯರ ಮನೆಯಲ್ಲೇ. ಪದ್ಮಾವತಮ್ಮನವರು ಹಿರಿಯ ಮಗಳಾದ ಬೆಳ್ಳಿಗೆ ಅಡಿಗೆ ಕೆಲಸದಿಂದ ಹಿಡಿದು ಮನೆಯ ಎಲ್ಲ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ಕಲಿಸಿದ್ದರು. ಬಂದ ಅತಿಥಿಗಳಿಗೆ ಊಟಕ್ಕೆ ಎಲೆ ಹಾಕುವುದು, ಬಡಿಸುವುದು, ಗೋಮಯ ಹಚ್ಚುವುದು ಇವೆ ಮೊದಲಾದ ಕೆಲಸಗಳನ್ನು ಬೆಳ್ಳಿ ನಿರ್ವಹಿಸುತ್ತಿದ್ದಳು.

ಇಪ್ಪತ್ತೆರಡರ ಹರಯದ ರಾಘುವೂ ಸಹ ತೆಳ್ಳನೆಯ ಮೈಕಟ್ಟಿನ ದುಂಡನೆಯ ಮುಖವುಳ್ಳ ಸ್ಫುರದ್ರೂಪಿ. ಮೊದಲ ನೋಟದಲ್ಲೇ ಎಂತಹವರನ್ನದರೂ ಗಮನ ಸೆಳೆಯುವಂತಿತ್ತು ಬೆಳ್ಳಿಯ ಸೌಂದರ್ಯ. ಅಂತಹುದರಲ್ಲಿ ನಮ್ಮ ರಾಘುವಿನಂತಹ ಹರೆಯದ ತರುಣನ ಗಮನ ಸೆಳೆಯದಿರಲು ಹೇಗೆ ಸಾಧ್ಯ? ಬೆಳ್ಳಿಯೆಂದರೆ ರಾಘುವಿನ ಮನಸ್ಸಿನಲ್ಲಿ ಮೂಡುತ್ತಿದ್ದುದು ಆಕೆಯ ಮುದ್ದಾದ ಮೊಗದಲ್ಲಿ ಹೊಳೆಯುತ್ತಿರುವ ತಿಳಿನೇರಳೆ ಬಣ್ಣದ ಮೂಗುತಿ, ಆಕೆಯ ಮುಖಕ್ಕೆ ಮೂಗುತಿ ಮತ್ತಷ್ಟು ಹೊಳಪು ನೀಡಿ ಅವಳನ್ನು ಅಪ್ರತಿಮ ಸುಂದರಿಯನ್ನಾಗಿಸಿತ್ತು.

ರಾಘುವೆಂದರೆ ಬೆಳ್ಳಿಗೆ ಮನದೊಳಗೆ ಎನೋ ಆಕಷಣೆ, ಚುರುಕಾದ ಸುಂದರ ತರುಣ ರಾಘುವನ್ನು ನೋಡಿ ಆಕೆಯ ಮನ ಮಿಡಿಯಿತು. ಊಟಕ್ಕೆ ರಾಘು ಬರುವ ದಿನದಂದು ವಿಶೇಷವಾದ ಅಡುಗೆಯನ್ನು ಮಾಡಿ ಬಡಿಸುತ್ತಿದ್ದಳು, ತುಪ್ಪವನ್ನು ಬಡಿಸುವಾಗಲಂತೂ, ಎಲ್ಲರಿಗೂ ಎರಡು ಮಿಳ್ಳೆ ಹಾಕಿದರೆ ರಾಘುವಿಗೆ ನಾಲ್ಕು ಮಿಳ್ಳೆ ಹಾಕುತ್ತಿದ್ದಳು. ಊಟಕ್ಕೆ ಕೂತಾಗ ಬೆಳ್ಳಿಗೆ ಓರೆಗಣ್ಣಿನ ನೋಟ ಬೀರುವುದರೊಂದಿಗೆ ರಾಘು ತನ್ನ ಪ್ರೇಮಕ್ಕೆ ನಾಂದಿ ಹಾಡಿದ. ಅವನ ಈ ನೊಟಕ್ಕೆ ಅವಳದು ಕುಡಿನೋಟದಿಂದೊಡಗೂಡಿದ ಕಿರುನಗೆ, ಈ ಪರಿಯಾಗಿ ಇವರ ಪ್ರೇಮ ಗರಿಗೆದರಿಕೊಳ್ಳಲು ಶುರುವಾಯಿತು. ಕಣ್ಣಂಚಿನ ನೋಟದಿಂದ ಆರಂಭವಾದ ಪ್ರೇಮವನ್ನು ಶಬ್ದಗಳಿಂದ ಅಭಿವ್ಯಕ್ತಪಡಿಸಲಿಕ್ಕೆ ರಾಘುವಿಗೆ ವರುಷವೇ ಹಿಡಿಯಿತು, ಅಂತೂ ಇಂತೂ ಯಾರೂ ಇಲ್ಲದ ಸಮಯ ನೋಡಿ ರಾಘು ಬೆಳ್ಳಿಗೆ ತನ್ನ ಪ್ರೇಮದ ಪ್ರಸ್ತಾಪವನ್ನ ಮಾಡಿಯೇ ಬಿಟ್ಟ. ಮೊದಮೊದಲು ಕೊಂಚ ಭಯವಾಯಿತಾದರೂ ಬೆಳ್ಳಿ ಅದಕ್ಕೆ ತನ್ನ ಸಮ್ಮತಿಯನ್ನ ಸೂಚಿಸಿದಳು.

ದಿನ ಕಳೆದಂತೆ ರಾಘು ಬೆಳ್ಳಿಯ ಪ್ರೇಮ ಪರಿಪಕ್ವವಾಗತೊಡಗಿತು. ಆಗಾಗ ರಾಘು-ಬೆಳ್ಳಿ ಬಸರಿಕಟ್ಟೆಯಿಂದ ಆಚೆಯಿರುವ ಅಂದಗಾರುವಿನ ಆಂಜನೇಯನ ಗುಡಿಯ ಹಿಂಭಾಗದಲ್ಲಿರುವ ಮಾವಿನ ತೋಪಿನಲ್ಲಿ ಭೇಟಿಯಾಗುತ್ತಿದ್ದರು. ಪಕ್ಕದ ಊರಿನ ಗೆಳತಿಯ ಮನೆಗೆ ಹೋಗಿಬರುತ್ತೇನೆಂಬ ನೆಪದೊಂದಿಗೆ ಬೆಳ್ಳಿ ಅಲ್ಲಿಗೆ ಬರುತ್ತಿದ್ದಳು. ಪೂಜಾಸಮಯದ ನಂತರ ಹೆಚ್ಚ್ಚಿನ ಜನಸಂದಣಿಯಿಲ್ಲದಿರುವುದರಿಂದ ಹಾಗೂ ಗುಡಿಯು ಊರಿನ ಹೊರಭಾಗದಲ್ಲಿರುವುದರಿಂದ ಇವರ ಎಕಾಂತಕ್ಕೆ ಭಂಗವಿರುತ್ತಿರಲಿಲ್ಲ, ಅಲ್ಲಿ ಇವರು ಗಂಟೆಗಟ್ಟಲೆ ಹರಟಿ, ಹಣ್ಣು ಹಂಪಲುಗಳನ್ನು ತಿಂದು ಮರಳುತ್ತಿದ್ದರು.

ರಾಘು-ಬೆಳ್ಳಿಯ ಪ್ರೇಮ ಕಥೆ ಹೀಗೆಯೇ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮೂರ್‍ನಾಲ್ಕು ವರ್ಷ ಮುಂದುವರೆಯಿತು. ಒಮ್ಮೆ ಬಾಳೇಹೊಳೆಯ ರಾಮಾಶಾಸ್ತ್ರಿಗಳು ಮಳೆಯ ಅದಿದೇವತೆಯಾದ ಕಿಗ್ಗದಲ್ಲಿರುವ ಋಷ್ಯಶೃಂಗೇಶ್ವರನ ದೇವಾಲಯಕ್ಕೆ ಹಾಸನದ ಅರಕಲಗೂಡಿನ ಬಳಿ ಇರುವ ಬೆಳವಾಡಿಯ ತಮ್ಮ ತಂಗಿ ಹಾಗು ಭಾವನೊಡನೆ ಬಂದಿದ್ದರು. ಭಕ್ತಾದಿಗಳು ಋಷ್ಯಶೃಂಗೇಶ್ವರನ ಸನ್ನಿಧಿಗೆ ಬಂದು ಮಳೆಗಾಗಿ ಪ್ರಾರ್ಥನೆ ಸಲ್ಲಿಸುವುದು ತಲೆಮಾರುಗಳಿಂದ ನಡೆದುಕೊಂಡು ಬಂದ ವಾಡಿಕೆ. ದೇವಾಲಯದಿಂದ ಹೊರಬರುತ್ತಿದ್ದ ರಾಮಾಶಾಸ್ತ್ರಿಗಳ ದೃಷ್ಟಿ ದೇವಾಲಯದ ಹೊರಪ್ರಾಂಗಣದಲ್ಲಿ ಒಟ್ಟಿಗೆ ಪ್ರದಕ್ಷಿಣೆ ಹಾಕುತ್ತಿದ್ದ ರಾಘು-ಬೆಳ್ಳಿಯ ಕಡೆಗೆ ಹೊರಳಿತು. ಅವರು ಇದನ್ನು ಕಂಡೂ ಕಾಣದಂತೆ ಆಚೆ ನಡೆದರು.

ಊರಿಗೆ ಬಂದ ರಾಮಾಶಾಸ್ತ್ರಿಗಳು ನೇರವಾಗಿ ವೆಂಕಟಕೃಷ್ಣಯ್ಯನವರ ಮನೆಗೆ ಹೋಗಿ ವಿಚಾರವನ್ನು ತಿಳಿಸಿದರು. ಇದನ್ನು ಕೇಳಿದ ವೆಂಕಟಕೃಷ್ಣಯ್ಯನವರ ಜಂಘಾಬಲವೇ ಉಡುಗಿತು. ಆಗ ಅವರ ಪತ್ನಿ ಕಮಲಮ್ಮನವರು ಗಂಡನಿಗೆ ಸಮಾಧಾನ ಮಾಡಿ ವಿವೇಕವಾಗಿ ವರ್ತಿಸಬೇಕೆಂದು ಬೇಡಿಕೊಂಡರು. ಎಷ್ಟೇ ಆದರೂ ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬತೆ ತಮ್ಮ ಮುದ್ದಿನ ಮಗ ರಾಘುವನ್ನು ಸಮರ್ಥಿಸಿಕೊಳ್ಳಲು ಮುಂದಾದರು. ವೆಂಕಟಕೃಷ್ಣಯ್ಯನವರ ಕೋಪ ತಾಪ ಕಡಿಮೆಯಾಗುವಂತೆ ಉಪಾಯದಿಂದ ತಿಳಿಹೇಳಿದರು.

ಕಿಗ್ಗದ ದೇವಾಲಯದಿಂದ ರಾಘು ಸಂಜೆ ಮನೆಗೆ ಬಂದ. ವೆಂಕಟಕೃಷ್ಣಯ್ಯನವರು ಮಗನನ್ನು ಕರೆದು ವಿಚಾರಿಸಿದಾಗ ಅವನ ಬಾಯಿಂದ ಸತ್ಯಾಂಶ ಹೊರಬಂತು. ತುಸು ಸಮಯ ಮಗನ ಮೇಲೆ ಕುಪಿತರಾದರೂ ಸಹ ನಂತರ ಶಾಂತವಾದರು. ಈ ವಿಚಾರ ವೈಲಾಯರನ್ನು ಸಹಾ ತಲುಪಿತು, ಹೆಂಡತಿ ಹಾಗು ಮಗಳೊಡನೆ ವಿಚಾರ ಮಾಡಿದ ನಂತರ ಒಂದು ಒಳ್ಳೆಯ ದಿನವನ್ನು ನೋಡಿ ವೆಂಕಟಕೃಷ್ಣಯ್ಯನವರನ್ನು ಭೇಟ್ಟಿಯಾಗುವಂತೆ ತೀರ್ಮಾನಿಸಿದರು. ವೆಂಕಟಕ್ರಿಶ್ನಯ್ಯನವರೂ ವೈಲಾಯರೂ ಪರಿಚಯಸ್ತರಾದರೂ ಸಹ ಅವರ ನಡುವೆ ಹೆಚ್ಚಿನ ಒಡನಾಟವೇನೂ ಇರಲಿಲ್ಲ.

ಒಂದು ದಿನ ಪತ್ನಿಯೊಡನೆ ವೈಲಾಯರು ವೆಂಕಟಕೃಷ್ಣಯ್ಯನವರ ಮನೆಗೆ ಬಂದು ಮಗಳ ಜಾತಕವನ್ನು ಫಲತಾಂಬೂಲದೊಡನೆ ನೀಡಿ ವಿವಾಹ ಪ್ರಸ್ತಾಪ ಮಾಡಿದರು. ರಾಘುವಿನ ಅಣ್ಣ ಶಂಕರನಿಗೆ ಇನ್ನು ಮದುವೆ ನಿಶ್ಚಯವಾಗಿರಲಿಲ್ಲವಾದುದರಿಂದ ಅವನ ಮದುವೆಯ ನಿರ್ಣಯವಾದನಂತರ ಈ ಪ್ರಸ್ತಾಪದೊಡನೆ ಮುಂದುವರಿಯುವುದಾಗಿ ವೆಂಕಟಕೃಷ್ಣಯ್ಯನವರು ಅಭಿಪ್ರಾಯಪಟ್ಟ್ತರು. ವೈಲಾಯ ದಂಪತಿಗಳು ಸಹ ಇದಕ್ಕೆ ತಮ್ಮ ಸಹಮತವನ್ನು ಸೂಚಿಸಿದರು.

ರಾಘು-ಬೆಳ್ಳಿಯ ಜಾತಕಗಳನ್ನು ವೆಂಕಟಕೃಷ್ಣಯ್ಯನವರು ಊರಿನ ಸೀತಾರಾಮಯ್ಯನವರ ಬಳಿ ತೋರಿಸಿದಾಗ ಅವರು ಜಾತಕ ಕೂಡಿಬರುವುದಿಲ್ಲವೆಂಬ ಅಭಿಪ್ರಾಯಪಟ್ಟರು. ಇತ್ತ ರಾಘು ಜಾತಕ ಆಗಲಿ ಬಿಡಲಿ ತಾನು ಬೆಳ್ಳಿಯನ್ನೇ ಮದುವೆಯಾಗುವೆನೆಂದು ಚಂಡಿ ಹಿಡಿದ. ವೆಂಕಟಕೃಷ್ಣಯ್ಯನವರಿಗೀಗ ಧರ್ಮಸಂಕಟಕ್ಕಿಟುಕೊಂಡಿತು. ಇನ್ನೊಮ್ಮೆ ತಮ್ಮ ಮನಸ್ಸಿನ ಸಮಾಧಾನಕ್ಕೊಸ್ಕರ ವೆಂಕಟಕೃಷ್ಣಯ್ಯನವರು ಆ ಜಾತಕವನ್ನು ಆ ಸೀಮೇಯಲ್ಲಿಯೇ ಪ್ರಸಿದ್ದ ಆಗಮಿಕರಾದ ನಾರ್‍ವೆಯ ಶ್ರೀನಿವಾಸ ಶರ್ಮರ ಬಳಿ ತೆಗೆದುಕೊಂದು ಹೋದರು. ಕೂಲಂಕಷವಾಗಿ ಪರಿಶೀಲಿಸಿದ ಅವರು ರಾಘುವಿನದು ಅನುರಾಧ ನಕ್ಷ್ಶತ್ರವು ಮಹಾನಕ್ಷತ್ರವೆಂದೂ, ಮತ್ತು ವಧೂ ವರರಲ್ಲಿ ಯಾರೊಬ್ಬರದಾದರೂ ಮಹಾನಕ್ಷ್ಶತ್ರವಾಗಿದ್ದರೆ ಜಾತಕ ನೋಡುವ ಪ್ರಮೇಯವೇ ಇಲ್ಲವೆಂದು ತಿಳಿಸಿ ಜಾತಕ ಹೊಂದುತ್ತದೆ ಎಂದು ಅಭಿಪ್ರಾಯಪಟ್ಟ ನಂತರ ವೆಂಕಟಕೃಷ್ಣಯ್ಯನವರ ಮನಸ್ಸು ನಿರಾಳವಾಯಿತು. ಮನದಲ್ಲೇ ಸೀತಾರಾಮಯ್ಯನವರನ್ನು ಬಯ್ದುಕೊಂಡು ಊರಿಗೆ ಹಿಂತಿರುಗಿದರು. ಅಂತೂ ಇಂತೂ ರಾಘು-ಬೆಳ್ಳಿಯ ಮದುವೆ ನಿಶ್ಚಯವಾಯಿತು.

ಮುಂಚೆ ಕದ್ದು ಮುಚ್ಚಿ ಒಡಾಡುತ್ತಿದ್ದ ರಾಘು-ಬೆಳ್ಳಿ ಈಗ ಎಲ್ಲರೆದುರು ರಾಜಾರೋಷವಾಗಿ ತಿರುಗಾಡಲು ಆರಂಭಿಸಿದರು. ತೆಪ್ಪದಲ್ಲಿ ದಿನಾಲೂ ಇವರ ದೋಣಿ ವಿಹಾರ. ಬಾಳೇಹೊಳೆ ಹಾಗೂ ಬಸರೀಕಟ್ಟೆಯ ಸುತ್ತೆಲ್ಲ ತಿರುಗಾಡುತ್ತಿದ್ದರು. ಕೆಲವು ತಿಂಗಳುಗಳ ಬಳಿಕ ಶಂಕರನ ವಿವಾಹವೂ ನಿಶ್ಚಯವಾಯಿತು. ರಾಘು-ಬೆಳ್ಳಿಗೀಗ ಇನ್ನಿಲ್ಲದ ಸಂತೋಷ. ನವರಾತ್ರಿಯ ಎರಡನೆಯ ದಿನವಾದ ಆಶ್ವಯುಜ ಶುದ್ಧ ಬಿದಿಗೆಯಂದು ಶಂಕರನ ವಿವಾಹ ಹಾಗೂ ಆದಾದ ಎಂಟು ದಿನಕ್ಕೆ, ಅಂದರೆ ವಿಜಯದಶಮಿಯ ದಿನ ರಾಘುವಿನ ವಿವಾಹವೆಂದು ಲಗ್ನ ಸ್ಫುಟ ಮಾಡಲಾಯಿತು.

ಶಂಕರನ ವಿವಾಹದ ನಂತರ ವೈಲಾಯರು ವಿಜಯದಶಮಿಯ ದಿನದಂದು ರಾಘುವಿಗೆ ಬೆಳ್ಳಿಯನ್ನು ಧಾರೆ ಎರೆದು ಸಾಲಂಕ್ರೃತ ಕನ್ಯಾದಾನವನ್ನು ಮಾಡಿದರು. ವೆಂಕಟಕೃಷ್ಣಯ್ಯನವರು ತಾವು ಜೀರಿಗೆ ಧಾರೆಯಾಗಿ ಅಂತಃಪಟ ಸರಿದ ಮೇಲೇ ಹುಡುಗಿಯನ್ನು ನೋಡಿದ್ದಾಗಿಯೂ, ಹಾಗೂ ತಮ್ಮ ಮಗ ರಾಘುವಿನ ಈ ವೀರ ಪ್ರೇಮ ಪ್ರತಾಪವನ್ನ ಮದುವೆಗೆ ಬಂದಿದ್ದ ಅವರ ಸ್ನೇಹಿತರ ಬಳಿ ಬಣ್ಣಿಸುತ್ತಿರುವುದನ್ನು ಕೇಳಿಸಿಕೊಂಡ ರಾಘು ಅವರತ್ತ ನೋಡಿ ನಸು ನಗೆಯನ್ನು ಬೀರಿದ.

Rating
No votes yet