ವೆಂಕಟ ಸುಬ್ಬಾ ಶಾಸ್ತ್ರಿ- ಗಾಂಧೀಜಿಯವರನ್ನು ಶಿವಮೊಗ್ಗೆಗೆ ಕರೆತಂದವರು
೧೯ ನೆಯ ಶತಮಾನದ ಆದಿಭಾಗದಲ್ಲಿ ಶಿವಮೊಗ್ಗೆಯಲ್ಲಿ ಜನಪ್ರಿಯವ್ಯಕ್ತಿ, ವೆಂಕಟ ಸುಬ್ಬಾ ಶಾಸ್ತ್ರಿಯವರು. ಪ್ರಸಿದ್ಧ ವಕೀಲ, ಕಾಂಗ್ರೆಸ್ ಧುರೀಣರು, ಗಾಂಧಿ ವಾದಿ, ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯ ನೇತಾರರು. ಚಿಕ್ಕ ಬ್ರಾಹ್ಮಣರ ಕೇರಿಯಲ್ಲಿ ಅವರ ಮನೆ. (ಈಗಿನ ಎಸ್.ಪಿ.ಎಂ. ರಸ್ತೆ) ದೊಡ್ಡಮನೆಯ ಮಾಲೀಕರಾದ ಅವರ ಮನೆಗೆ ಶಂಕರ ಮಠದ ಸ್ವಾಮೀಜಿಯವರಿಂದ ಪ್ರಸಿದ್ಧ ರಾಜಕಾರಣಿಗಳು ಸ್ವಾತಂತ್ರ್ಯ ಸೇನಾನಿಗಳು ಬರುತ್ತಿದ್ದರು. ವೆಂಕಟ ಸುಬ್ಬಾ ಶಾಸ್ತ್ರಿಗಳು, ೭, ಏಪ್ರಿಲ್, ೧೮೮೮ ರಲ್ಲಿ ಪಂಡಿತ ವೆಂಕಟರಾಮಾ ಶಾಸ್ತ್ರೀ, ಲಕ್ಷ್ಮೀ ದೇವಮ್ಮ ದಂಪತಿಗಳ ಮಗನಾಗಿ ಜನಿಸಿದರು. '೧೯೨೪ ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶನ' ದ ಸಮಯದಲ್ಲಿ ಪಾಲ್ಗೊಂಡಿದ್ದರು. ಬಾಪುರವರನ್ನು ಹತ್ತಿರದಲ್ಲಿ ಕಂಡು ಮಾತಾಡಿಸಿ, ಅವರ ಆಪ್ತ ವಲಯದಲ್ಲಿ ಸೇರಿಬಿಟ್ಟರು. ಶಿವಮೊಗ್ಗಕ್ಕೆ ಒಮ್ಮೆ ಭೇಟಿನೀಡುವುದಾಗಿ ಮಹಾತ್ಮಾ ಗಾಂಧಿಯವರು ಶಾಸ್ತ್ರಿಗಳಿಗೆ ಭರವಸೆ ನೀಡಿದರು. ವೆಂಕಟಸುಬ್ಬಾ ಶಾಸ್ತ್ರಿಗಳ ಆಹ್ವಾನದ ಮೇರೆಗೆ ಬಾಪು, ಹಾಗೂ ಅವರ ಪತ್ನಿ ಶ್ರೀಮತಿ ಕಸ್ತೂರ್ ಬಾ ಗಾಂಧಿ, ಹೊನ್ನಾಳಿ ಮೂಲಕ ಆಗಸ್ಟ್, ೧೪, ೧೯೨೭ ರಂದು, ಶಿವಮೊಗ್ಗಕ್ಕೆ ಭೇಟಿಯಿತ್ತಿದ್ದು ಒಂದು ಮಹತ್ವದ ಘಟನೆಯಾಗಿತ್ತು. ಗಾಂಧಿ ದಂಪತಿಗಳು ಎರಡು ದಿನ ಶಾಸ್ತ್ರಿಗಳ ಅತಿಥಿಯಾಗಿದ್ದಲ್ಲದೇ ಅಲ್ಲಿಂದ ತೀರ್ಥಹಳ್ಳಿ, ಕುಂಸಿ, ಭದ್ರವತಿನಗರಕ್ಕೂ ಭೇಟಿಕೊಟ್ಟಿದ್ದರು. ಈ ಸವಿ ನೆನಪಿಗಾಗಿ ಆ ಪ್ರದೇಶವನ್ನು 'ಗಾಂಧಿ ಬಜಾರ್' ಎಂದು ಹೆಸರಿಡಲಾಗಿದೆ. ವೃಂದಾವನ ಹೋಟೆಲ್ ನಲ್ಲಿ ವಾಸ್ತವ್ಯ (ಆಗ ಅದನ್ನು ನ್ಯಾಷನಲ್ ಲಾಡ್ಜ್ ಎಂದು ಕರೆಯುತ್ತಿದ್ದರು) ಸಭೆಯ ಬಳಿಕ ಗಾಂಧೀಜಿ ಮತ್ತು ಕಸ್ತೂರ್ ಬಾ ತೆಂಗಿನ ಸಸಿಗಳನ್ನು ಹೋಟೆಲ್ ಮುಂದೆ ನೆಟ್ಟರು. ಹರಿಜನರ ಉದ್ಧಾರಕ್ಕಾಗಿ ೬ ಸಾವಿರ ರೂಪಾಯಿ ದೇಣಿಗೆ ಶೇಖರಿಸಿ ಮಹಾತ್ಮಾ ಗಾಂಧಿ ಪಾರ್ಕ್ ನಲ್ಲಿ ಗಾಂಧೀಜಿಯವರಿಗೆ ಅರ್ಪಿಸಿದ್ದರು.
ದುರ್ದೈವವೆಂದರೆ, ಮಹಾತ್ಮಾ ಗಾಂಧಿಯವರನ್ನು ೧೯೨೭ ರ ಸಮಾರಂಭದಲ್ಲಿ ಭೇಟಿಮಾಡಲಾಗಲಿಲ್ಲ :
ತಂದೆಯವರ ತೀವ್ರ ಅನಾರೋಗ್ಯದಿಂದಾಗಿ ಗಾಂಧಿ ದಂಪತಿಗಳನ್ನು ೧೯೨೭ ರಲ್ಲಿ ಸಮಾರಂಭದಲ್ಲಿ ಭೇಟಿಮಾಡಲಾಗಲಿಲ್ಲ. ನಂತರ ಗಾಂಧೀಜಿ, ಕಸ್ತೂರ್ಬಾ ದಂಪತಿಗಳೇ ಶಾಸ್ತ್ರಿಗಳ ಮನೆಗೆ ಹೋಗಿದ್ದರು. ವೆಂಕಟಸುಬ್ಬಾ ಶಾಸ್ತ್ರಿಗಳು ಮತ್ತು ಅವರ ಪತ್ನಿ ಶ್ರೀಮತಿ ಶೇಷಮ್ಮನವರು ಗಾಂಧಿ ದಂಪತಿಗಳನ್ನು ಆದರಿಸಿದರು. ಪತಿಯ ಆಣತಿಯಂತೆ, ಶೇಷಮ್ಮನವರು ತಮ್ಮ ಕೊರಳಿನಲ್ಲಿದ್ದ ಚಿನ್ನದ ಸರವನ್ನು 'ಗಾಂಧೀಜಿವರ ಹರಿಜನ ನಿಧಿ' ಗೆ ಅರ್ಪಿಸಿದರು. ಬಾ ಮತ್ತು ಬಾಪೂರವರು ಕುಳಿತಿದ್ದ ಕುರ್ಚಿಗಳನ್ನು ಇಂದಿಗೂ ಇಟ್ಟುಕೊಂಡು ಬಂದವರಿಗೆ ಅವರ ಮೊಮ್ಮಕ್ಕಳು ತೋರಿಸುತ್ತಾರೆ !
ಹೀಗೆಯೇ ನಮ್ಮ ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರೂ ರವರೂ ಶಾಸ್ತ್ರಿಗಳ ಆತಿಥ್ಯವನ್ನು ಸ್ವೀಕರಿಸಿದ್ದುಂಟು. ಚನ್ನಪಟ್ಟಣದ ಅಭಿಮಾನಿಯೊಬ್ಬ ಬುಟ್ಟಿತುಂಬಾ ಬೊಂಬೆಗಳನ್ನು ನೆಹರೂರವರಿಗೆ ಅರ್ಪಿಸಿದಾಗ, ಅವರು ಎಸ್ ಪಿಎಂ ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆಲ್ಲ ಹಂಚಿದ್ದು ದಾಖಲಾಗಿದೆ. ಬಾಪೂರವರಿಗೆ ಮುಖಕ್ಷೌರ ಮಾಡಿಸಲು ಶಿವಮೊಗ್ಗ ಜೈಲಿನಲ್ಲಿ ಕೆಲಸಮಾಡುತ್ತಿದ್ದ ಕ್ಷೌರಿಕ ನೊಬ್ಬನಿಗೆ ತಮ್ಮ ಖಾದಿ ಜುಬ್ಬಾ ಪೈಜಾಮಗಳನ್ನು ತೊಡಿಸಿ ಕಳಿಸಿದ್ದರು. ಆತ ಧರಿಸಿದ್ದ ದೊಗಳೆ ಉಡುಪನ್ನು ನೋಡಿ ಗಾಂಧೀಜಿಯವರು ಮನಸಾರೆ ಬಹಳ ನಕ್ಕಿದ್ದರು. ಆತ ಗಾಂಧೀಜಿಯವರಿ ಕ್ಷೌರ ಮಾಡಲು ಬಳಸಿದ್ದ ಕತ್ತಿಯನ್ನು ಜೋಪಾನವಾಗಿ ಎತ್ತಿಟ್ಟುಕೊಂಡು ಎಲ್ಲರಿಗು ತೋರಿಸುತ್ತಿದ್ದನಂತೆ. ಅಂದಿನಿಂದ 'ಗಾಂಧೀಕ್ಷೌರಿಕ' ನೆಂದು ಹೆಸರುಗಳಿಸಿದ ಅವನ ಹತ್ತಿರ ಎಲ್ಲರು ಕ್ಷೌರಮಾಡಿಸಿಕೊಳ್ಳಲು ಹಾತೊರೆಯುತ್ತಿದ್ದರಂತೆ. ಈ ಘಟನೆಯನ್ನು ಗೋರುರುರಾಮಸ್ವಾಮಿ ಅಯ್ಯಂಗಾರರು ತಮ್ಮ ಕೃತಿಯೊಂದರಲ್ಲಿ ತಮಾಷೆಯಾಗಿ ದಾಖಲಿಸಿದ್ದಾರೆ. ಗಾಂಧೀಜಿಯವರ ಬಳಕೆಗೆ ಶಾಸ್ತ್ರಿಗಳು ತಮ್ಮ 'ಎಸೆಕ್ಸ್ ಕಾರ್' ರನ್ನು ನೀಡಿದ್ದರು. ನಿಗದಿತ ಸಮಯಕ್ಕೆ ಕಾರು ಬರದಿದ್ದಾಗ, ಬಾಪು ನಡೆದೇ ತೀರ್ಥಹಳ್ಳಿಯ ಕಡೆಗೆಹೊರಟರು. ಕೊನೆಗೆ ಕಾರು ಬಂದು ಅದರಲ್ಲಿ ಕುಳಿತು ಗಾಂಧಿಯವರು ದಾರಿಯಲ್ಲಿ ಬರುವ ಗಾಜನೂರಿನ ಗ್ರಾಮಸ್ಥರನ್ನು ಸೇತುವೆಯಿಂದಾಚೆ ಇರುವ ಜಾಗದಲ್ಲಿ ಉದ್ದೇಶಿಸಿ ಬಹಿರಂಗ ಸಭೆ ನಡೆಸಿದರು. ಸ್ವದೇಶಿ ಚಳುವಳಿಗೆ ಬೆಂಬಲ ನೀಡಲು ಕೋರಿದರು ಗಾಂಧೀಜಿಯವರ. ಭೇಟಿಯ ೭೫ ವರ್ಷದ ನೆನಪನ್ನು ಆಚರಿಸಲು, ಇತ್ತೀಚಿಗೆ ಸರ್ವೋದಯ ಮಂಡಳಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ವೆಂಕಟ ಸುಬ್ಬಾ ಶಾಸ್ತ್ರಿಗಳಿಗೆ, ಐದು ಜನ ಮಕ್ಕಳು. ಶಿವಮೊಗ್ಗೆಗೆ ಕೈಗಾರಿಕೆ ತಂದ, ದಿ.ಟಿ.ವಿ.ನಾರಾಯಣ ಶಾಸ್ತ್ರಿ, ಪ್ರಸಿದ್ಧ ವಕೀಲ ಟಿ. ವಿ. ವೆಂಕಟರಾಮ ಶಾಸ್ತ್ರಿ, ಮತ್ತು ಮೂರು ಹೆಣ್ಣುಮಕ್ಕಳು.
-ಎಂ. ಏನ್ ಸುಂದರ ರಾಜ್
ಕೃಪೆ : 'ವಿಪ್ರ ಧಾರಾ', ಅಕ್ಟೋಬರ್, ನವೆಂಬರ್, ೨೦೨೧, ಪುಟ. ೬