"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೧)

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೧)


ಈ ಸರಣಿಯ ಹಿಂದಿನ ಲೇಖನ " ಮೀಮಾಂಸ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೭ (೨) ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.

http://sampada.net/blog/%E0%B2%AE%E0%B3%80%E0%B2%AE%E0%B2%BE%E0%B2%82%E0%B2%B8-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AD-%E0%B3%A8/30/04/2012/36541


                                                       ವೇದಾಂತ ದರ್ಶನ
ಸೂತ್ರಗಳಿಗೆ ಪೀಠಿಕೆ

    ಪುರಾತನ ಭಾರತದ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಗುರುಕುಲವೆಂದು ಕರೆಯಲ್ಪಡುತ್ತಿದ್ದ ಅರಣ್ಯ ವಿಶ್ವವಿದ್ಯಾಲಯಗಳಲ್ಲಿ ಗುರುಗಳೊಂದಿಗೆ ವಾಸವಾಗಿದ್ದು ತಮ್ಮ ಕಲಿಕೆಯನ್ನು ಕೈಗೊಳ್ಳುವುದು ಅವಶ್ಯವಾಗಿತ್ತು. ಶಿಕ್ಷಣದ ಪದ್ಧತಿಯು ಬಹುತೇಕವಾಗಿ ಯಾವಾಗಲೂ ಸೂತ್ರ ಅಥವಾ ನುಡಿಗಟ್ಟಿನ ರೂಪದಲ್ಲಿರುತ್ತಿತ್ತು, ಹಾಗು ವಿವರಣೆ ಮತ್ತು ಚರ್ಚೆ ಅದನ್ನು ಅನುಸರಿಸುತ್ತಿದ್ದವು. ಎಲ್ಲ ವಿಷಯಗಳನ್ನೂ ಕಂಠಸ್ಥವಾಗಿ ನೆನಪಿನಲ್ಲಿಟ್ಟುಕೊಳ್ಳುವುದು ಅನಿವಾರ್ಯವಾಗಿದ್ದಾಗ ಈ ರೀತಿಯ ಪದ್ಧತಿಯು ಪ್ರಮುಖವಾಗಿತ್ತಲ್ಲದೆ ಅದು ಹೆಚ್ಚು ಸೂಕ್ತವಾಗಿತ್ತು ಕೂಡ.
   
    ಸೂತ್ರ ರೀತಿಯ ಸಾಹಿತ್ಯವು ತನ್ನದೇ ಆದ ಪ್ರತ್ಯೇಕ ವರ್ಗಕ್ಕೆ ಸೇರುತ್ತದೆ.  ಸೂತ್ರಕ್ಕೆ ವಿಧಿಸಲ್ಪಟ್ಟ ನಿಯಮಾವಳಿಗಳೆಂದರೆ, ಅದು 'ಅಲ್ಪಾಕ್ಷರ' (ಬಹಳ ಕಡಿಮೆ ಅಕ್ಷರಗಳನ್ನು ಒಳಗೊಂಡಿರಬೇಕು), 'ಅಸಂದಿಗ್ಧ' (ಸ್ಪಷ್ಟವಾದ ಅರ್ಥವನ್ನು ಹೊಮ್ಮಿಸಬೇಕು), 'ಸಾರವತ್' (ವಿಷಯದ ಸಾರವನ್ನು ಒಳಗೊಂಡಿರಬೇಕು), ಮತ್ತು 'ವಿಶ್ವತೋಮುಖ'ವಾಗಿರಬೇಕು (ವಿಷಯದ ಎಲ್ಲಾ ಮುಖಗಳನ್ನು ಪ್ರತಿಬಿಂಬಿಸಬೇಕು).  ಅಕ್ಷರಗಳನ್ನು ಮಿತಗೊಳಿಸುವ ಆತುರದಲ್ಲಿ, ಸೂತ್ರಗಳ ರಚನಕಾರರು ಉಳಿದ ನಿಯಮಗಳಿಗೆ ಗಮನ ಕೊಡದೇ ಇದ್ದದ್ದರಿಂದ ತದನಂತರ ಬಂದ ಶ್ರುತಿ ರಚನಕಾರರಿಗೆ ಭಾಷ್ಯ ಅಥವಾ ವ್ಯಾಖ್ಯಾನ ಗ್ರಂಥಗಳನ್ನು ಬರೆಯುವುದು ಅನಿವಾರ್ಯವಾಯಿತು.

    ಶ್ರೌತ, ಗೃಹ್ಯ ಮತ್ತು ಧರ್ಮಸೂತ್ರಗಳು ಅತ್ಯಂತ ಪ್ರಾಚೀನವಾದ ಸೂತ್ರ ಸಾಹಿತ್ಯದ ಗೊಂಚಲುಗಳು. ಆಮೇಲೆ ಪ್ರಾಚುರ್ಯಕ್ಕೆ ಬಂದ ದರ್ಶನಗಳು ಅಥವಾ ತತ್ವಶಾಸ್ತ್ರದ ಪದ್ದತಿಗಳು ಈ ಸೂತ್ರ ಪದ್ಧತಿಯು ತಮ್ಮ ಅವಶ್ಯಕತೆಗಳಿಗೆ ಪೂರಕವಾಗಿದ್ದರಿಂದ ಅದನ್ನು ಅಳವಡಿಸಿಕೊಂಡವು. 

ವೇದಾಂತ ದರ್ಶನ

    ಹಿಂದೂಗಳ ಮೂಲ ಪವಿತ್ರ ಗ್ರಂಥಗಳಾದ 'ವೇದ'ಗಳ ಪ್ರಾಮಾಣ್ಯವನ್ನು ಒಪ್ಪಿಕೊಳ್ಳುವ ಆರು ದರ್ಶನಗಳಲ್ಲಿ, ಕಡೆಯದಾದ ಎರಡು ಪದ್ಧತಿಗಳು - 'ಮೀಮಾಂಸ' ಮತ್ತು 'ವೇದಾಂತ ದರ್ಶನ'ಗಳು ಅದರೊಂದಿಗೆ ನೇರವಾದ ಸಂಭಂದವನ್ನು ಹೊಂದಿವೆ. ಇವೆರಡರಲ್ಲಿ ಮೊದಲನೆಯದಾದ 'ಮೀಮಾಂಸ'ವು; ವಿವಿಧ ವೈದಿಕ ಗ್ರಂಥಗಳಲ್ಲಿ ಉಲ್ಲೇಖವಾಗಿದ್ದ ಒಂದೇ ವೈದಿಕ ಕ್ರಿಯೆಯ ಬಗ್ಗೆ ಇದ್ದ ಹಲವು ರೀತಿಯ ರೂಢಿಗತ ಪದ್ಧತಿಗಳನ್ನು ಏಕರೂಪವಾಗಿಸುವಲ್ಲಿ ಶ್ರಮಿಸಿದರೆ; ಎರಡನೆಯದಾದ 'ವೇದಾಂತ'ವು, 'ಬ್ರಹ್ಮ'ದ (ಪರಿಪೂರ್ಣ ಭಗವಂತನ) ಬಗ್ಗೆ ಮೇಲ್ನೋಟಕ್ಕೆ ವೈರುದ್ಧ್ಯಗಳಿಂದ ಕೂಡಿದ್ದ ಉಪನಿಷತ್ತಿನ ಹಲವಾರು ವಾಕ್ಯಗಳನ್ನು ಸಮನ್ವಯಗೊಳಿಸಲು ಶ್ರಮಿಸಿತು.

ಪ್ರಸ್ಥಾನತ್ರಯ

    ವೇದಾಂತ ಪದ್ಧತಿಯು ಹೆಸರೇ ಹೇಳುವಂತೆ ಅದು ಉಪನಿಷತ್ತುಗಳೊಂದಿಗೆ ಸಂಭಂದಹೊಂದಿವೆ; ಉಪನಿಷತ್ತುಗಳು ವೇದಗಳ ಅಂತ್ಯ ಭಾಗವಾಗಿದ್ದು ಅದರ ಸಾರವನ್ನು ಒಳಗೊಂಡಿವೆ (ಅಂತ = ಕಡೆಯ ಭಾಗ ಅಥವಾ ಸಾರ). ವಾಸ್ತವವಾಗಿ, ವೇದಾಂತ ದರ್ಶನವು ಮೂರು ರೀತಿಯ ಶಾಸ್ತ್ರ (ಶಾಸನ/ನಿಯಮ) ಗ್ರಂಥಗಳ ಆದಾರದ ಮೇಲೆ ರಚಿಸಲ್ಪಟ್ಟಿದೆ, ಅವೆಂದರೆ ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಭಗವದ್ಗೀತೆ. ಉಪನಿಷತ್ತುಗಳನ್ನು ’ಶ್ರುತಿ ಪ್ರಸ್ಥಾನ’ವೆಂದು ಕರೆದಿದ್ದರೆ, ಬ್ರಹ್ಮಸೂತ್ರಗಳನ್ನು ’ನ್ಯಾಯಪ್ರಸ್ಥಾನ’ವೆಂದು ಮತ್ತು ಭಗವದ್ಗೀತೆಯನ್ನು ”ಸ್ಮೃತಿಪ್ರಸ್ಥಾನ’ವೆಂದು ಕರೆದಿದ್ದಾರೆ. ಪ್ರಸ್ಥಾನವೆಂದರೆ ತತ್ವಶಾಸ್ತ್ರದ ಶಾಖೆ ಅಥವಾ ಅಭಿಮತ.

ಉಪನಿಷತ್ತುಗಳು

    ಇಂದು ಮುದ್ರಣ ರೂಪದಲ್ಲಿ ಉಪನಿಷತ್ತುಗಳ ಹೆಸರಿನ ಅನೇಕ ಪುಸ್ತಕಗಳು ನಮಗೆ ಲಭ್ಯವಿದ್ದರೂ ಕೂಡ, ಸಾಂಪ್ರದಾಯಿಕವಾಗಿ ಕೇವಲ ಬೆರಳೆಣಿಯಷ್ಟು - ಹನ್ನೆರಡರಿಂದ ಹದಿನಾಲ್ಕು ಉಪನಿಷತ್ತುಗಳಷ್ಟೇ ಸನಾತನ ಮತ್ತು ಅಧಿಕಾರಯುತವಾದವುಗಳೆಂದು ಪರಿಗಣಿಸಲ್ಪಟ್ಟಿವೆ. ಇಡೀ ವೇದಾಂತ ದರ್ಶನದ ಜ್ಞಾನಸೌಧವೇ ಈ ಉಪನಿಷತ್ತುಗಳ ಆಧಾರದ ಮೇಲೆ ನಿಂತಿದೆ.

    ಉಪನಿಷತ್ತುಗಳ ಬೋಧನೆಗಳನೆಗಳನ್ನು ಈ ರೀತಿ ಸ್ಥೂಲವಾಗಿ ಕ್ರೋಢೀಕರಿಸಬಹುದೆನಿಸುತ್ತದೆ. ಜಗತ್ತಿನ ಅಂತಿಮ ಕಾರಣವಾದ ಬ್ರಹ್ಮ, ಅದರ ಸ್ವರೂಪ, ಸೃಷ್ಟಿಯ ಉಗಮ ಮತ್ತು ಅದರ ಸ್ವರೂಪ, ಪ್ರತ್ಯೇಕ ಜೀವಾತ್ಮಗಳ ಸ್ವರೂಪ ಮತ್ತು  ಬ್ರಹ್ಮದೊಂದಿಗೆ ಅವುಗಳ ಸಂಭಂದ, ಪ್ರಪಂಚದೊಂದಿಗೆ ಅತ್ಮದ ಒಡನಾಟ ಮತ್ತು ಪುನರ್ಜನ್ಮ ಹೊಂದುವಿಕೆ, ಜೀವನದ ಅಂತಿಮ ಉದ್ದೇಶ, ಆ ಉದ್ದೇಶವನ್ನು ಸಾಧಿಸಲು ಅದಕ್ಕೆ ಪೂರಕವಾಗಿರುವ ಶಾಸ್ತ್ರಗಳು, ಮತ್ತು ಆ ಅಂತಿಮ ಲಕ್ಷ್ಯದ ಸೇರುವಿಕೆಯಲ್ಲಿನ ಅನುಭವ, ಇವು ಉಪನಿಷತ್ತುಗಳಲ್ಲಿ ಬರುವ ವಿಷಯಗಳು.

    ವಾಸ್ತವವಾಗಿ ಈಗ ಪ್ರಚಲಿತದಲ್ಲಿರುವ ಉಪನಿಷತ್ತುಗಳು ಮೇಲೆ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ನೀಡುವುದಿಲ್ಲ. ಪರಂಪರೆ ಮತ್ತು ರೂಢಿಸಮ್ಮತವಾದ ಪದ್ಧತಿಯು ಎಲ್ಲಾ ಉಪನಿಷತ್ತುಗಳನ್ನು ಒಂದೇ ಶಾಸ್ತ್ರದಡಿಯಲ್ಲಿ ತಂದು ಅವನ್ನು ಶ್ರುತಿಯೆಂದದ್ದರಿಂದ; ಉಪನಿಷತ್ತುಗಳ ಸಾರದ ಸ್ಪಷ್ಟ ಚಿತ್ರಣವನ್ನು ಹೊಂದಲು ಅದರಲ್ಲಿರುವ ಬೋಧನೆಗಳನ್ನು ಪರಿಷ್ಕರಿಸಿ ಸಮನ್ವಯಗೊಳಿಸುವುದರ ಅವಶ್ಯಕತೆಯುಂಟಾಯಿತು. ಉಪನಿಷತ್ತುಗಳ ಬೋಧನೆಗಳನ್ನು ಸಮನ್ವಯಗೊಳಿಸುವ ಈ ಕಾರ್ಯವನ್ನೇ ಬಾದರಾಯಣನು ಪ್ರಯತ್ನಿಸಿದ್ದು ಮತ್ತು ಅದರ ಫಲವಾಗಿ ಹೊರಹಿಮ್ಮಿದ್ದೇ 'ಬ್ರಹ್ಮಸೂತ್ರ'ಗಳು.

ಬ್ರಹ್ಮಸೂತ್ರಗಳು

    ಬ್ರಹ್ಮ(ಪರಿಪೂರ್ಣ ಭಗವಂತ)ನಿಗೆ ಸಂಭಂದಪಟ್ಟ ವಿಷಯದ ಕುರಿತಾಗಿ ಸರ್ವ ರೀತಿಯಿಂದಲೂ ಸಂಪೂರ್ಣವಾಗಿ ಚರ್ಚಿಸುವುದರಿಂದ ಈ ಕೃತಿಗೆ ಆ ಹೆಸರು ಬರಲು ಮೂಲ ಕಾರಣ. ಅದನ್ನು ನಾನಾ ವಿಧವಾದ ಹೆಸರುಗಳಿಂದಲೂ ಕರೆಯುತ್ತಾರೆ, ಅವು ಈ ರೀತಿಯಾಗಿ ಇವೆ:
೧) ವೇದಾಂತ ಸೂತ್ರಾ - ಇದು ವೇದಾಂತ ಅಥವಾ ಉಪನಿಷತ್ತಿನ ವಿಷಯಕ್ಕೆ ಸಂಭಂದಿಸಿದ್ದರಿಂದ,
೨) ಶಾರೀರಿಕ ಸೂತ್ರಾ - ಏಕೆಂದರೆ ಇದು ಶರೀರದಲ್ಲಿ ನೆಲೆಸಿರುವ ಆತ್ಮನ ವಿಚಾರವಾಗಿ ಚರ್ಚಿಸುವುದರಿಂದ,
೩) ಉತ್ತರ ಮೀಮಾಂಸ ಸೂತ್ರಾ - ಪೂರ್ವ ಮೀಮಾಂಸಕ್ಕೆ ವಿರುದ್ಧವಾಗಿ; ಏಕೆಂದರೆ ಇದು ವೇದಗಳ ಉತ್ತರ ಅಥವಾ ಅಂತಿಮ ಭಾಗಗಳ ಕುರಿತಾಗಿ ಮೀಮಾಂಸ ಅಥವಾ ಜಿಜ್ಞಾಸೆ ಮಾಡುವುದರಿಂದ.(ಜಿಜ್ಞಾಸೆ ಎಂದರೆ ಸಾಮಾನ್ಯ ಅರ್ಥದಲ್ಲಿ ವಿಚಾರಣೆ),
೪) ಭಿಕ್ಷುಸೂತ್ರಾ - ಏಕೆಂದರೆ ಈ ದರ್ಶನವು ವಿಶೇಷವಾಗಿ ’ಭಿಕ್ಷು’ಗಳು ಅಥವಾ ’ಸನ್ಯಾಸಿ’ಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದರಿಂದ.

ಮುಂದುವರೆಯುವುದು..........................
==================================================================================
ವಿ.ಸೂ.: ಇದು ಸ್ವಾಮಿ ಹರ್ಷಾನಂದ ವಿರಚಿತ "The six systems of Hindu Philosophy - A Primer"ಯಲ್ಲಿಯ Vedanta Darshanaನದ 71 ರಿಂದ 75ನೆಯ ಪುಟದ ಅನುವಾದದ ಭಾಗ.
 ಈ ಸರಣಿಯ ಮುಂದಿನ ಲೇಖನಕ್ಕೆ ಕೆಳಗಿನ ಕೊಂಡಿಯನ್ನು ನೋಡಿ -
http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%E0%B2%A4-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AE-%E0%B3%A8/24/05/2012/36809

Rating
No votes yet

Comments