"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೪)

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೪)

    ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೩)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%E0%B2%A4-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AE-%E0%B3%A9/26/05/2012/36824

ಬಾದರಾಯಣನ ತತ್ವ ಸಿದ್ಧಾಂತ

    ಬಾದರಾಯಣನು ಉಪನಿಷತ್ತುಗಳಲ್ಲಿ ಅಡಕವಾಗಿದ ಬೋಧನೆಗಳನ್ನು ಕ್ರಮಬದ್ಧೀಕರಣಗೊಳಿಸಿ ಅವನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಬ್ರಹ್ಮಸೂತ್ರಗಳನ್ನು ರಚಿಸಿದನು. ಆದರೆ ಸೂತ್ರಗಳು ಸಂಕ್ಷಿಪ್ತವಾಗಿ ಮತ್ತು ಬಿಗುವಿನಿಂದ ಕೂಡಿರುವುದರಿಂದ, ಬಾದರಾಯಣನು ತನ್ನ ಕೃತಿಯಲ್ಲಿ ಏನು ಹೇಳಹೊರಟಿದ್ದಾನೆನ್ನುವುದನ್ನು ಸರಿಯಾಗಿ ಅರ್ಥೈಸಿಕೊಳ್ಳುವುದು ಬಹು ಪ್ರಯಾಸದ ಕೆಲಸ. ಒಂದು ಸಮಾಧಾನಕರ ಅಂಶವೆಂದರೆ ಇದರಲ್ಲಿರುವ  ಸೂತ್ರಗಳು ಬೇರೆ ಕೃತಿಗಳಲ್ಲಿ ಕಂಡುಬರುವ ಸೂತ್ರಗಳಿಗಿಂತ ಕಡಿಮೆ ದ್ವಂದ್ವತೆಯಿಂದ ಕೂಡಿವೆ; ಈಗ ಅವುಗಳ ಸ್ಪಷ್ಟ ಚಿತ್ರಣವನ್ನು ಅರಿಯಲು ಒಂದು ಪ್ರಯತ್ನ ಮಾಡೋಣ.

    ಬಾದರಾಯಣನು ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವಲ್ಲಿ ಒಪ್ಪಿಕೊಳ್ಳುವ ಏಕೈಕ ಪ್ರಮಾಣವೆಂದರೆ ಶ್ರುತಿ ಅಥವಾ ವೇದಗಳು; ಅದರಲ್ಲಿಯೂ ವಿಶೇಷವಾಗಿ ಅದರಲ್ಲಿರುವ ಜ್ಞಾನಕಾಂಡ ಅಂದರೆ ಉಪನಿಷತ್ತುಗಳು. ಅವನು ವೇದಗಳಲ್ಲಿ ಹೇಳಲ್ಪಟ್ಟಿರುವ ವಾಕ್ಯಗಳು ನಿತ್ಯ ಅಥವಾ ಸರ್ವಕಾಲಿಕವೆಂದು ಭಾವಿಸುತ್ತಾನೆ. ಏಕೆಂದರೆ, ತರ್ಕ ಮತ್ತು ಕಾರಣಗಳಿಂದ ಮೊದಲು ಪ್ರತಿಪಾದಿಸಿದ ವಿಷಯವು ಹೊಸದಾದ ತರ್ಕ ಅಥವಾ ಕಾರಣವು ದೊರಕಿದಾಗ ಇತ್ಯರ್ಥವಾಗದೇ ಉಳಿದು ಬಿಡುತ್ತದೆ; ಆದ್ದರಿಂದ ಇವುಗಳನ್ನು ಅವಲಂಭಿಸಿ ಜಗತ್ತಿನ ಅಂತಿಮ ಕಾರಣವಾದ ಅತ್ಯುನ್ನತವಾದ ಸತ್ಯಗಳನ್ನು ಕಂಡುಕೊಳ್ಳುವುದು ಸಾಧ್ಯವಿಲ್ಲ.  ಸ್ಮೃತಿ ಅಥವಾ ಎರಡನೆಯ ಸಾಲಿನ ಶಾಸ್ತ್ರಗ್ರಂಥಗಳಾದ, ಮನುಸ್ಮೃತಿ, ಮಹಾಭಾರತ ಅಥವಾ ಭಗವದ್ಗೀತೆ ಮೊದಲಾದವುಗಳು ಕೂಡ  ಶ್ರುತಿಗಳೊಂದಿಗೆ ವಿಭೇದಿಸದಿದ್ದಾಗ ಮಾತ್ರ ಅವುಗಳ ಮೇಲೆ ಆಧಾರ ಪಡಬಹುದು.

    ಶ್ರುತಿಗಳು ಬ್ರಹ್ಮನು ಜಗತ್ತಿನ ಮೂಲ ಕಾರಣ ಮಾತ್ರನಲ್ಲದೆ ಅವನು 'ಪರಮ ಸತ್ಯ' ಎಂದು ಸಾರುತ್ತವೆ. ವಾಸ್ತವವಾಗಿ, "ಜನ್ಮಾದ್ಯಸ್ಯ ಯತಃ" (ವೇದಾಂತ ದರ್ಶನ ೧.೧.೨) ಎನ್ನುವ ವಾಕ್ಯವೇ 'ಜಗತ್ತಿನ ಇರುವಿಕೆ ಮತ್ತು ಅನಾವರಣಕ್ಕೆ ಭೂಮಿಕೆಯಾಗಿರುವ ಕಾರಣಾತೀತನಾದ ಕಾರಣನು' ಎಂದು ಘೋಷಿಸುತ್ತದೆ. ಅವನು ಜಗತ್ತಿನ ಉಗಮಕ್ಕೆ ಉಪಾದಾನ ಕಾರಣನು ಮತ್ತು ನಿಮಿತ್ತ ಕಾರಣನೂ ಕೂಡ. (ಅವನು ಸೃಷ್ಟಿಗೆ ಬೇಕಾಗುವ ವಸ್ತುಗಳನ್ನು ಒದಗಿಸುವುದಲ್ಲದೆ ಅವನ್ನು ಸಂಯೋಜಿಸುತ್ತಾನೆ). ಅವನಿಗೆ ಬಾಹ್ಯವಾದ ಯಾವುದೇ ಉಪಕರಣ ಅಥವಾ ಸಹಾಯವು ಬೇಕಿಲ್ಲ. ಅವನು ಹಾಲು ಅದರ ಉತ್ಪನ್ನಗಳಾಗಿ ಮಾರ್ಪಾಡುಗೊಳ್ಳುವಂತೆ ತನ್ನಷ್ಟಕ್ಕೆ ತಾನೇ ರೂಪಾಂತರಗೊಳ್ಳುತ್ತಾನೆ.

    ಅವನು ಕೇವಲ ತನ್ನ ಇಚ್ಛೆಯಂತೆ ಆಕಾಶ (ಮೂಲ ವಸ್ತು), ವಾಯು (ಗಾಳಿ) ಮೊದಲಾದ ವಸ್ತುಗಳಾಗಿ ರೂಪಾಂತರ ಹೊಂದುತ್ತಾನೆ; ಅವನು ಸೃಷ್ಟಿ ಕ್ರಿಯೆಯ ಪ್ರತಿಹಂತದಲ್ಲಿಯೂ, ಕಡೆಯವರೆಗೂ ಸಹಯೋಗವನ್ನು ಹೊಂದಿದ್ದಾನೆ.

    ಈ ಸೃಷ್ಟಿಯು ಬ್ರಹ್ಮನಿಂದಲೇ ಉಂಟಾದ್ದರಿಂದ, ಈ ಪ್ರಪಂಚವು ಅವನಿಂದ ಬೇರೆಯಲ್ಲ; ಹೇಗೆ ಹರಡಿದ ಬಟ್ಟೆಯು ಪೂರ್ವದಲ್ಲಿ ಮಡಿಚಿದ ಬಟ್ಟೆಯಿಂದ ಬೇರೆಯಲ್ಲವೋ ಹಾಗೆ.

    ಸೃಷ್ಟಿ ಕ್ರಿಯೆಯು ಬ್ರಹ್ಮನಿಗೆ ಒಂದು ಸುಲಭವಾದ ಆಟ ಅಥವಾ ಲೀಲೆ. ಆದರೆ ಈ ಸೃಷ್ಟಿಯು ಬದ್ಧಜೀವಿಗಳ ಕರ್ಮಕ್ಕನುಸಾರವಾಗಿ ರಚಿಸಲ್ಪಡುವುದರಿಂದ; ಈ ಪ್ರಪಂಚದಲ್ಲಿ ಕಂಡು ಬರುವ ಒಳ್ಳೆಯ ಮತ್ತು ಕೆಟ್ಟ ಸಂಗತಿಗಳನ್ನು ನೋಡಿ ಬ್ರಹ್ಮನ ಮೇಲೆ ಪಕ್ಷಪಾತ ಅಥವಾ ಕ್ರೂರತ್ವ ಇವುಗಳನ್ನು ಆರೋಪಿಸಬಾರದು.

    ಜೀವಿಯ ಅಥವಾ ಪ್ರತ್ಯೇಕ ಆತ್ಮದ ಕುರಿತಾಗಿ ಹೇಳುವಾಗ ಬಾದರಾಯಣನು ಅವನನ್ನು 'ಜ್ಞಾ' ಅಂದರೆ ಜ್ಞಾನಿ ಅಥವಾ ಚೈತನ್ಯದಿಂದ ಕೂಡಿರುವವನು ಎಂದು ವಿವರಣೆ ನೀಡುತ್ತಾನೆ. ಅವನಿಗೆ ಜನನ ಅಥವಾ ಮರಣಗಳಿಲ್ಲ. ಅವನು ನಿತ್ಯನಾಗಿದ್ದು ಅವನು ಅಣುವಿನ ಗಾತ್ರದಲ್ಲಿದ್ದಾನೆ.  ಜೀವಿಯು ಬ್ರಹ್ಮನ 'ಅಂಶ'(ಭಾಗ)ವೇ ಅಥವಾ ಅವನ 'ಅಭಾಸ'(ಪ್ರತಿಬಿಂಬ)ವೇ ಎನ್ನುವ ವಿಷಯದಲ್ಲಿ ಇತರ ವೇದಾಂತಿಗಳಾದ ಆಶ್ಮರಾಥ್ಯ, ಔದುಲೋಮಿ ಮತ್ತು ಕಾಶಕೃತ್ಸ್ನ ಇವರ ಅಭಿಪ್ರಾಯಗಳನ್ನು ಬಾದರಾಯಣನು ತಿಳಿಸಿದರೂ ಕೂಡಾ  ತನ್ನ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸುವುದಿಲ್ಲ. 

    ಬ್ರಹ್ಮ ಮತ್ತು ಜೀವಾತ್ಮನ ಸಂಭಂದದ ಕುರಿತಾಗಿ ಹೇಳುವಾಗ ಅದನ್ನು, "ಹಾವು ಮತ್ತು ಸುರುಳಿಯಾಗಿ ಸುತ್ತಿಕೊಂಡ ಅದರ ಸ್ಥಿತಿ" ಅಥವಾ "ಬೆಳಕು ಮತ್ತು ಅದರ ಮೂಲ" ಎನ್ನುವುದರ ಮೂಲಕ ಪ್ರತಿಪಾದಿಸಲಾಗಿದೆ. ಆದ್ದರಿಂದ ಅವೆರಡೂ ಒಂದೆಯೋ ಅಥವಾ ಬೇರೆ ಬೇರೆಯೇ ಎನ್ನುವ ಪ್ರಶ್ನೆಯನ್ನು ಉತ್ತರಿಸದೆ ಹಾಗೆಯೇ ಬಿಡಲಾಗಿದೆ.

    ಆತ್ಮ/ಬ್ರಹ್ಮದ ಕುರಿತಾಗಿ ಉಪಾಸನೆ ಮಾಡುವುದರಿಂದ ಅದರ ಬಗ್ಗೆ ಜ್ಞಾನವುಂಟಾಗುತ್ತದೆ ಅಥವಾ ಅದರ ಸಾಕ್ಷಾತ್ಕಾರವಾಗುತ್ತದೆ, ಆಗ ಜೀವಿಯು ಮುಕ್ತಿಯನ್ನು ಹೊಂದುತ್ತಾನೆ. ಶಾಸ್ತ್ರದ ಪ್ರಕಾರ ಕೈಕೊಗೊಳ್ಳಬೇಕಾದ ಕರ್ಮಗಳನ್ನು ಆಧ್ಯಾತ್ಮಿಕ ಸಾಧಕನೂ ಕೂಡ ತನ್ನ ಆಶ್ರಮಕ್ಕನುಗುಣವಾಗಿ ವಿಧಿಸಲ್ಪಟ್ಟಿರುವಂತಹವುಗಳನ್ನು ಕೈಗೊಳ್ಳುವುದು ಅಥವಾ ಆ ಕರ್ಮದ ಬಗ್ಗೆ ತ್ಯಾಗ/ವೈರಾಗ್ಯ ಭಾವನೆಯನ್ನು ಹೊಂದುವುದು ಈ ಎರಡಕ್ಕೂ ಶ್ರುತಿಯು ಸಮಾನವಾದ ಮಹತ್ವವನ್ನು ಕೊಡುತ್ತದೆ.  ವಿವಿಧ ರೀತಿಯ ಉಪಾಸನೆಗಳು ಅಥವಾ ಧ್ಯಾನದ ಪದ್ಧತಿಗಳನ್ನು ಜೀವಿಯು ಕೈಗೊಂಡಾಗ ಅದರ ಫಲವನ್ನು ಈಶ್ವರ ಅಥವಾ ಈ ಸೃಷ್ಟಿಯ ಜಗನ್ನಿಯಾಮಕನು ಒದಗಿಸುತ್ತಾನೆ.

    ಒಮ್ಮೆ ಬ್ರಹ್ಮನ ಬಗ್ಗೆ ಜ್ಞಾನವುಂಟಾದರೆ, ಜೀವಿಯ ಎಲ್ಲಾ ಸಂಚಿತ ಕರ್ಮ (ಜನ್ಮಾಂತರಗಳಿಂದ ಶೇಖರಗೊಂಡ) ಕರ್ಮವು ನಾಶವಾಗುತ್ತದೆ. ಅವನ 'ಪ್ರಾರಬ್ಧ ಕರ್ಮವು' (ಈ ಜನ್ಮಕ್ಕೆ ಕಾರಣವಾದ ಕರ್ಮ) ಕಳೆಯುವವರೆಗೆ ಅವನು ಜೀವಿಸಿರುತ್ತಾನೆ. ಬ್ರಹ್ಮಜ್ಞಾನವನ್ನು ಹೊಂದಿದ ನಂತರ ಮಾಡಿದ ಕರ್ಮವು ಅವನ ಮೇಲೆ ಯಾವುದೇ ಪರಿಣಾಮವನ್ನು ಉಂಟು ಮಾಡುವುದಿಲ್ಲ.

    ಯಾವನು ಬದುಕಿರುವಾಗಲೇ ಧ್ಯಾನದ ಪರಮೋಚ್ಛ ಸ್ಥಿತಿಯನ್ನು ಹೊಂದುತ್ತಾನೋ ಆ ಜೀವಿಯು ಮರಣಾನಂತರ ಅರ್ಚಿರಾದಿಮಾರ್ಗ ಅಥವಾ ದೇವಯಾನ (ಬೆಳಕಿನ ಅಥವಾ ದೇವತೆಗಳ ಪಥ)ದ ಮೂಲಕ ಬ್ರಹ್ಮಲೋಕವನ್ನು ಸೇರುತ್ತಾನೆ ಮತ್ತು ಅಲ್ಲಿಂದ ಈ ಪ್ರಪಂಚಕ್ಕೆ ಹಿಂತಿರುಗಿ ಬರುವುದಿಲ್ಲ. ಅಲ್ಲಿ ಅವನು ಬ್ರಹ್ಮನೊಂದಿಗೆ ಒಂದಾಗಿ ತನ್ನ ಪ್ರತ್ಯೇಕ ಅಸ್ಥಿತ್ವವನ್ನು ಇಲ್ಲವಾಗಿಸಿಕೊಳ್ಳುತ್ತಾನೆ. ಬ್ರಹ್ಮನಿಗೆ ಆರೋಪಿಸಲ್ಪಟ್ಟಿರುವ ವಿವಿಧ ಗುಣಗಳು ಆಗ ಜೀವಿಯಲ್ಲಿ ಅನಾವರಣಗೊಳ್ಳುತ್ತವೆ. ಅವನ ಗುಣವಾದ ಚೈತನ್ಯ ಅಥವಾ ಪ್ರಜ್ಞೆಯು ಅಲ್ಲಿ ಅವಿಚ್ಛಿನ್ನವಾಗಿ ಇರುತ್ತದೆ.

    ಒಟ್ಟಾರೆಯಾಗಿ, ಬಾದರಾಯಣನು ಈ ಸೂತ್ರಗಳಲ್ಲಿ ತನ್ನದೇ ಆದ ಅದ್ವೈತವನ್ನು (ಬ್ರಹ್ಮಾದ್ವೈತ?) ಬೋಧಿಸುತ್ತಾನೆಂದು ದೃಢವಾಗಿ ಹೇಳಬಹುದು. ಅವನು ಈ ಜೀವರು ಅಥವಾ ಪ್ರಪಂಚವು ಬ್ರಹ್ಮದಿಂದ ಪ್ರತ್ಯೇಕವೆಂದು ಒಪ್ಪಿಕೊಳ್ಳುವುದಿಲ್ಲ. ಬಾದರಿ ಮೊದಲಾದ ಇತರ ದಾರ್ಶನಿಕರಂತೆ ಉಪನಿಷತ್ತುಗಳನ್ನು ಅಂತಿಮ ಪ್ರಮಾಣವೆಂದು ಬಾದರಾಯಣನು ಒಪ್ಪಿಕೊಳ್ಳುವುದರಿಂದ ಅವನು ಅವರ ಅಭಿಪ್ರಾಯಗಳನ್ನು ಅಲ್ಲಗಳೆದಂತಾಗುವುದಿಲ್ಲ. ಅವನಿಗೆ ಬ್ರಹ್ಮನ ಸ್ವರೂಪಗಳಾದ, "ನಿರ್ವಿಶೇಷ-ಚಿನ್ಮಾತ್ರ-ಸ್ವರೂಪ" (ನಿರ್ಗುಣನಾದ ಶುದ್ಧ ಚೈತನ್ಯನು) ಮತ್ತು 'ಸವಿಶೇಷ' - 'ಸಗುಣನಾದ ಬ್ರಹ್ಮ' ಎರಡೂ ಒಪ್ಪಿಗೆಯಾದಂತೆ ತೋರುತ್ತದೆ. ಆದ್ದರಿಂದ ಅವನು ಮೇಲ್ನೋಟಕ್ಕೆ ವಿರೋಧಾಭಾಸಗಳಿಂದ ಕೂಡಿದ ಉಪನಿಷತ್ತುಗಳ ವಾಕ್ಯಗಳನ್ನು ಸಮನ್ವಯಗೊಳಿಸಿ ಏಕರೂಪವಾದ ಅಭಿಪ್ರಾಯವನ್ನು ಕ್ರೋಢೀಕರಿಸಲು ಪ್ರಯತ್ನ ಪಟ್ಟಿದ್ದಾನೆಯೇ ಹೊರತು ತನ್ನದೇ ಆದ ಸಿದ್ಧಾಂತವನ್ನು ಮಂಡಿಸಲು ಯತ್ನಿಸಿಲ್ಲ.

ವ್ಯಾಖ್ಯಾನಕಾರರು ಮತ್ತು ಅವರ ಕೃತಿಗಳು

    ಸಹಸ್ರಮಾನಗಳ ಕಾಲದಿಂದ ವೇದಗಳು ಹಿಂದೂ ಧರ್ಮದ ಆಧಾರ ಸ್ತಂಭಗಳಾಗಿವೆ. ಉಪನಿಷತ್ತುಗಳ ಮೇಲೆ ಆಧಾರಿತವಾಗಿರುವ ವೇದಾಂತ ತತ್ವವು ಹಲವಾರು ಶತಮಾನಗಳಿಂದ ಮೇಧಾವಿಗಳ ಮೇಲೆ ತನ್ನ ಪ್ರಭಾವವನ್ನು ಬೀರಿದೆ. ಆದ್ದರಿಂದ ಸಹಜವಾಗಿಯೇ ಬಾದರಾಯಣನು ರಚಿಸಿದ ಬ್ರಹ್ಮಸೂತ್ರಗಳು ವಿದ್ವಾಂಸರ ಗಮನವನ್ನು ಸೆಳೆದಿರುವುದಲ್ಲದೇ ಅವರಿಂದ ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ಹೊರಹೊಮ್ಮುವಂತೆ ಮಾಡಿ ವೇದಾಂತದ ಬಗೆಗಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಈ ಎಲ್ಲಾ ವ್ಯಾಖ್ಯಾನಕಾರರೂ ಕೂಡ ಬಾದರಾಯಣ ಮತ್ತು ಅವನ ಮೇರು ಸದೃಶ ಕೃತಿಯಾದ ಬ್ರಹ್ಮಸೂತ್ರಗಳಿಗೆ ಮಹತ್ತರವಾದ ಗೌರವವನ್ನು ಕೊಟ್ಟಿದ್ದಾರೆ. ಅವರುಗಳು ತಮ್ಮ ಕಾಲದಲ್ಲಿ ಪ್ರಚಲಿತವಿದ್ದ ಎಲ್ಲಾ ಶಾಖೆಗಳ (ಮತಗಳ) ಸಿದ್ಧಾಂತಗಳನ್ನು ಕೂಲಂಕುಷವಾಗಿ ಅಭ್ಯಸಿಸಿ ಅವೆಲ್ಲವುಗಳಿಗಿಂತಲೂ ವೇದಾಂತವು ಮಹತ್ತರವಾದುದು ಎಂದು ತೋರಿಸಲು ಪ್ರಯತ್ನಿಸಿದ್ದಾರೆ. ಅದರೊಂದಿಗೆ ತಮ್ಮ ಶಾಖೆಗಳ ಸಿದ್ಧಾಂತವನ್ನೂ ಸ್ಥಾಪಿಸಬೇಕೆನ್ನುವ ಉದ್ದೇಶವನ್ನು ಕೂಡ  ಹೊಂದಿದ್ದರೆನ್ನುವುದು ಬೇರೆ ವಿಷಯ.

    ನಮಗೆ ಇಂದು ಲಭ್ಯವಿರುವ ಹಲವಾರು ಭಾಷ್ಯ ಅಥವಾ ವ್ಯಾಖ್ಯಾನಗಳಲ್ಲಿ, ಶಂಕರರು ರಚಿಸಿದ ಭಾಷ್ಯವೇ ಪ್ರಾಚೀನವಾದುದು. ಅದಕ್ಕೂ ಮುಂಚೆ ಹಲವಾರು ಭಾಷ್ಯಕಾರರಿಂದ ರಚಿಸಲ್ಪಟ್ಟ ವ್ಯಾಖ್ಯಾನ ಗ್ರಂಥಗಳು ಇದ್ದರೂ ಇರಬಹುದು. ಏಕೆಂದರೆ, ಶಂಕರರು ತಮ್ಮ ಭಾಷ್ಯದಲ್ಲಿ (೧.೩.೨೮ ಮತ್ತು ೩.೩.೫೩) ಉಲ್ಲೇಖಿಸಿರುವ ಉಪವರ್ಷನು ಇಂಥಹವರಲ್ಲಿ ಒಬ್ಬನು ಎಂದು ಖಂಡಿತವಾಗಿ ಹೇಳಬಹುದು. ರಾಮಾನುಜರು ಉಲ್ಲೇಖಿಸಿರುವ ಬೋಧಾಯನನೆಂಬ ಇನ್ನೊಬ್ಬ ವೃತ್ತಿಕಾರನ ಹೆಸರಿನೊಂದಿಗೆ ಈ ಉಪವರ್ಷನನ್ನು ಒಂದೇ ಎಂದು ತಾಳೆಹಾಕಲಾಗಿದೆಯಾದರೂ ಅವರಿಬ್ಬರೂ ಒಂದೇ ಎನ್ನುವುದರಲ್ಲಿ ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ.

    ಈ ಕೆಳಗಿನ ಪಟ್ಟಿಯಲ್ಲಿರುವ ವ್ಯಾಖ್ಯಾನಕಾರರು ಬ್ರಹ್ಮಸೂತ್ರಗಳ ಮೇಲೆ ನೇರವಾಗಿ ಭಾಷ್ಯಗಳನ್ನು ಬರೆದಿಟ್ಟು ಹೋಗಿದ್ದಾರೆ; ಅವರ ಬಗೆಗಿನ ತಿಳುವಳಿಕೆಯು ವೇದಾಂತ ತತ್ವವನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಉಪಯೋಗಕ್ಕೆ ಬರಬಹುದು.

   ಭಾಷ್ಯಕಾರ                       ಕಾಲ                        ವೇದಾಂತದ ಶಾಖೆ
೧) ಶಂಕರ                     ಕ್ರಿ.ಶ. ೭೮೮-೮೨೦                         ಅದ್ವೈತ
೨) ಭಾಸ್ಕರ                   ಕ್ರಿ.ಶ. ೯೯೬-೧೦೬೧                      ಭೇದಾಭೇದ
೩) ಯಾದವಪ್ರಕಾಶ        ಕ್ರಿ.ಶ. ೧೦೦೦                              ಭೇದಾಭೇದ
೪) ರಾಮಾನುಜ            ಕ್ರಿ.ಶ. ೧೦೧೭-೧೧೨೭                    ವಿಶಿಷ್ಠಾದ್ವೈತ
೫) ಮಧ್ವ                       ಕ್ರಿ.ಶ. ೧೨೩೮-೧೩೧೭                    ದ್ವೈತ
೬) ನಿಂಬಾರ್ಕ                ಕ್ರಿ.ಶ. ೧೩ನೇ ಶತಮಾನದ            ದ್ವೈತಾದ್ವೈತ
                                    ಉತ್ತರಾರ್ಧ
೭) ಶ್ರೀಕಾಂತ                 ಕ್ರಿ.ಶ. ೧೨೭೦                              ಶೈವ-ವಿಶಿಷ್ಠಾದ್ವೈತ
೮) ಶ್ರೀಪತಿ                    ಕ್ರಿ.ಶ. ೧೪೦೦                              ಭೇದಾಭೇದಾತ್ಮಕ-ವಿಶಿಷ್ಠಾದ್ವೈತ
೯) ವಲ್ಲಭ                       ಕ್ರಿ.ಶ. ೧೪೭೯-೧೫೪೪                  ಶುದ್ಧಾದ್ವೈತ
೧೦) ಶುಕ                      ಕ್ರಿ.ಶ. ೧೫೫೦                             ಭೇದವಾದ
೧೧) ವಿಜ್ಞಾನಭಿಕ್ಷು            ಕ್ರಿ.ಶ. ೧೫೫೦                             ಆತ್ಮ-ಬ್ರಹ್ಮೈಕ್ಯ-ಭೇದವಾದ
೧೨) ಬಲದೇವ                 ಕ್ರಿ.ಶ. ೧೭೨೫                             ಅಚಿಂತ್ಯ-ಭೇದಾಭೇದ

    ಇವುಗಳಲ್ಲಿ ಮುಖ್ಯವಾದ ಕೆಲವೊಂದು ಶಾಖೆಗಳ ಸಾರವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳಲು ಒಂದು ಪ್ರಯತ್ನವನ್ನು ಮಾಡಬಹುದೆನಿಸುತ್ತದೆ. ಶಂಕರ, ರಾಮಾನುಜ ಮತ್ತು ಮಧ್ವರು ಪ್ರತಿಪಾದಿಸಿದ ಶಾಖೆಗಳು ಹೆಚ್ಚು ಪ್ರಸಿದ್ಧವಾಗಿರುವುದರಿಂದ ಮತ್ತು ಇತರ ಮತಗಳಿಗಿಂತ ಹೆಚ್ಚು ಪ್ರಾಚುರ್ಯವನ್ನು ಪಡೆದಿರುವುದರಿಂದ ಅವುಗಳನ್ನು ಮೊದಲು ಎತ್ತಿಕೊಳ್ಳೋಣ.
ಮುಂದುವರೆಯುವುದು..........................
=============================================================================================
ವಿ.ಸೂ.:ಇದು ಸ್ವಾಮಿ ಹರ್ಷಾನಂದ ವಿರಚಿತ "The six systems of Hindu Philosophy - A Primer"ಯಲ್ಲಿಯ Vedanta Darshanaನದ ೮೮ ರಿಂದ ೯೪.೫ನೆಯ ಪುಟದ ಅನುವಾದದ ಭಾಗ.

==============================================================================================
 

Rating
No votes yet

Comments