"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೭)

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೭)

    ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೬)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ.
http://sampada.net/blog/%E0%B2%B5%E0%B3%87%E0%B2%A6%E0%B2%BE%E0%B2%82%E0%B2%A4-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AE-%E0%B3%AC/18/06/2012/37106

ವಲ್ಲಭ

    ವಲ್ಲಭರ ತತ್ವವು ಶುದ್ಧಾದ್ವೈತವೆಂದು ಕರೆಯಲ್ಪಟ್ಟಿದೆ. ಅವರು ಬ್ರಹ್ಮಸೂತ್ರಗಳಿಗೆ ಎರಡು ಭಾಷ್ಯಗಳನ್ನು - ಬೃಹದ್ಭಾಷ್ಯ ಮತ್ತು ಅನುಭಾಷ್ಯಗಳನ್ನು ಬರೆದಿರುವರೆಂದು ಪ್ರತೀತಿ; ಅವುಗಳಲ್ಲಿ ಬೃಹದ್ಭಾಷ್ಯವು ಈಗ ಲಭ್ಯವಿಲ್ಲ. ಎರಡನೆಯದಾದ ಅನುಭಾಷ್ಯವು ಮೂರನೆಯ ಅಧ್ಯಾಯದ, ಎರಡನೇ ಪಾದದ ೩೩ನೇ ಸೂತ್ರದ (೩.೨.೩೩)ವರೆಗೆ ಮಾತ್ರ ಲಭ್ಯವಿದೆ. ಈ ಪುಸ್ತಕವು ಅವನ ಪುತ್ರನಾದ ವಿಠ್ಠಲನಾಥನಿಂದ ಪೂರ್ಣಗೊಳಿಸಲ್ಪಟ್ಟಿತ್ತು. ಪ್ರಸ್ಥಾನತ್ರಯಗಳೊಂದಿಗೆ ವಲ್ಲಭರು ಭಾಗವತವನ್ನೂ ಕೂಡ ಅತ್ಯುಚ್ಛ ಸ್ಥಾನದಲ್ಲಿ ಎತ್ತಿ ಹಿಡಿದಿದ್ದಾರೆ. ಅವರು ಭಾಗವತಕ್ಕೂ ಕೂಡ ಸುಬೋಧಿನಿ ಎಂಬ ವ್ಯಾಖ್ಯಾನವನ್ನು ಬರೆದಿದ್ದಾರೆ; ಅದೂ ಕೂಡ ಪೂರ್ಣವಾಗಲಿಲ್ಲ.

    ವಲ್ಲಭರಿಗೆ, ನಿಶ್ಚಿತನಾದ ಭಗವಂತನು ಕೃಷ್ಣನೇ; ಅವನನ್ನೇ ಉಪನಿಷತ್ತುಗಳು ಬ್ರಹ್ಮವೆಂದು ಕರೆದಿವೆ. ಅವನು ಅದ್ವಿತೀಯನು ಮತ್ತು 'ಸತ್-ಚಿತ್-ಆನಂದ'ನು(ಇರುವವನು-ಚೇತನಾರೂಪನು-ಆನಂದಸ್ವರೂಪನು). ಅವನಿಗೆ ಮೂರು ರೂಪಗಳಿವೆ; 'ಪರಬ್ರಹ್ಮ'-ಪುರುಷೋತ್ತಮ ಅಥವಾ ಶ್ರೀಕೃಷ್ಣ; 'ಅಂತರ್ಯಾಮಿ' - ಎಲ್ಲಾ ಜೀವಿಗಳಲ್ಲೂ ಅಂತರ್ಗತ ಚೇತನನಾಗಿರುವವನು; ಮತ್ತು 'ಅಕ್ಷರಬ್ರಹ್ಮ' - ಇದು ಧ್ಯಾನಿಸಬೇಕಾದ ಲಕ್ಷ್ಯ ಮತ್ತು ಕೃಷ್ಣನ ಆವಾಸ ಸ್ಥಾನ. ಈ ಅಕ್ಷರವೇ 'ಪ್ರಕೃತಿ'ಯಾಗಿ (ಜಡ ಪ್ರಕೃತಿ - ಸೃಷ್ಟಿಸಲ್ಪಟ್ಟ ಎಲ್ಲಾ ವಸ್ತುಗಳ ಸಂಕೀರ್ಣ) ಮತ್ತು ಪುರುಷ (ಚೇತನಾರೂಪಿಯಾದ ಜೀವಿ) ಆವಿರ್ಭಾವ ಹೊಂದುತ್ತದೆ ಆದರೆ ಇವೆರಡಕ್ಕೂ ಅತೀತವಾಗಿರುತ್ತದೆ. ಪುರುಷೋತ್ತಮನು ಅತ್ಯುನ್ನತವಾದ ಸ್ವರೂಪವಾಗಿದ್ದರೆ, ಅಕ್ಷರವು ಅದರ ಮತ್ತೊಂದು ರೂಪವಾಗಿದೆ.

    ಈ ಅಕ್ಷರವು ಮತ್ತೂ ಮೂರು ರೀತಿಯಲ್ಲಿ ವ್ಯಕ್ತವಾಗುತ್ತದೆ; ಕಾಲ (ಸಮಯ), ಕರ್ಮ (ಕ್ರಿಯೆ) ಮತ್ತು ಸ್ವಭಾವ (ನೈಜ ಧೋರಣೆ).

    ಕಾಲವು ಗ್ರಹಿಕೆಗೆ ಅತೀತವಾಗಿದ್ದು ಅದರ ಪರಿಣಾಮದಿಂದ ಅದು ತಿಳಿಯಲ್ಪಡುತ್ತದೆ. ಅದು ಸರ್ವಾಂತರಯಾಮಿಯಾಗಿದ್ದು ಅದು ಎಲ್ಲಾ ಜೀವಿಗಳಿಗೆ ಆಧಾರವಾಗಿದೆ. ಕರ್ಮ ಅಥವಾ ಕ್ರಿಯೆಯು ಕೂಡ ಸಾರ್ವತ್ರಿಕವಾದದ್ದು. ಸ್ವಭಾವ ಅಥವಾ ಸಹಜ ಧೋರಣೆಯು ಯಾವುದು ಪರಿಣಾಮ ಅಥವಾ ಬದಲಾವಣೆಯನ್ನುಂಟು ಮಾಡುತ್ತದೆಯೋ ಅದು.

    ಭಗವಂತನು ಸುಗುಣನು ಮತ್ತು ನಿರ್ಗುಣನು ಎರಡೂ ಆಗಿದ್ದಾನೆ. ಕೇವಲ ಅವನ ಕೃಪೆಯಿಂದಲ್ಲದೆ ಅವನನ್ನು ತಿಳಿಯಲಾಗದು. ಅವನ ಮಾಯಾ ಶಕ್ತಿಯಿಂದ ಯಾವುದೇ ರೂಪವಾಗಲಿ, ಯಾವುದೇ ಕ್ಷಣದಲ್ಲಾಗಲಿ ಬಯಸಿದ್ದೆಲ್ಲನ್ನೂ ಭಗವಂತನು ಹೊಂದಬಹುದು. ಅವನು ಈ ಜಗತ್ತಿನ ನಿಮಿತ್ತ ಕಾರಣನು ಮತ್ತು ಉಪಾಧಾನ ಕಾರಣನು. ಅವನು ಈ ಜಗತ್ತನ್ನು ಅವನ ಸ್ವಭಾವಕ್ಕನುಗುಣವಾಗಿ ಸೃಷ್ಟಿಸುವುದರಿಂದ ಅವನು 'ಸಮವಾಯಿ-ಕಾರಣ'ನು; ಅದರ ಅಂತರ್ಗತ ಕಾರಣನು. ಅವನು ತನ್ನ ತ್ರಿಗುಣಿತ ಸ್ವಭಾವದಿಂದಾಗಿ; ಇರುವವನು, ಚೇತನನು ಮತ್ತು ಆನಂದನು ಆಗಿದ್ದರೂ ಕೂಡ ಈ ಮೂರು ಗುಣಗಳ ಆವಿರ್ಭಾವವು ಅವನಿಂದ ರಚಿಸಲ್ಪಟ್ಟ ಈ ಸೃಷ್ಟಿಯಲ್ಲಿ ರೂಪಾಂತರಗೊಳ್ಳುತ್ತವೆ. ಭೌತವಸ್ತುವು ಕೇವಲ ಅವನ ಇರುವಿಕೆ('ಸತ್')ಯನ್ನು ಪ್ರತಿಬಿಂಬಿಸುತ್ತವೆ; ಮತ್ತು ಜೀವಿಗಳು/ಆತ್ಮಗಳು ಅವನ ಚೇತನಾರೂಪವನ್ನು (ಚಿತ್) ಬಿಂಬಿಸುತ್ತವೆ; ಆದರೆ ಬ್ರಹ್ಮವು ಅವನ ಮೂರೂ ಗುಣಗಳಾದ, 'ಸತ್-ಚಿತ್-ಆನಂದ'ವನ್ನು ಸಂಪೂರ್ಣವಾಗಿ ಬಿಂಬಿಸುತ್ತದೆ.

    ಅವನ ಮೂಲಸ್ವರೂಪದಲ್ಲಿ ಅವನು ರೂಪಾಂತರ ಹೊಂದದವನು ಮತ್ತು ತಿಳಿಯಲಾರದವಾಗಿದ್ದರೂ (ಅತೀತನಾಗಿದ್ದರೂ) ಕೂಡ, ಅವನು ತನ್ನಿಚ್ಛೆಯಂತೆ ಈ ಜಗತ್ತನ್ನು ಸೃಷ್ಟಿಸುವುದರಿಂದ ಅವನು ರೂಪಾಂತರ ಹೊಂದುತ್ತಾನೆ ಮತ್ತು ಗ್ರಾಹ್ಯ(ತಿಳಿಯಲು ಅನುವಾದನು)ನಾಗುತ್ತಾನೆ. ಈ ಪ್ರಪಂಚವು ಬ್ರಹ್ಮನಿಂದ ಆವಿರ್ಭಾವಗೊಂಡಿದ್ದರಿಂದ ಇದು ಎಂದಿಗೂ ನಾಶವಾಗುವುದಿಲ್ಲ ಆದರೆ ಅವನಿಚ್ಛೆಯಂತೆ ಅವನೊಳಗೆ ಸೆಳೆದುಕೊಳ್ಳಲ್ಪಡುತ್ತದೆ.

    ಜೀವಿಗಳು ಅಥವಾ ಆತ್ಮಗಳು ಅಕ್ಷರ ಬ್ರಹ್ಮನಿಂದ ಬೆಂಕಿಯಿಂದ ಹೊಮ್ಮುವ ಕಿಡಿಗಳಂತೆ ಹೊರಹೊಮ್ಮುತ್ತಾರೆ. ಅವುಗಳು ಬ್ರಹ್ಮನ ನಿತ್ಯ ಭಾಗಗಳಾಗಿದ್ದು ಅವುಗಳು ಅಣುವಿನ ಗಾತ್ರದಲ್ಲಿರುತ್ತವೆ. ಅವುಗಳು ಮೂರು ವರ್ಗಕ್ಕೆ ಸೇರಿದವಾಗಿರುತ್ತವೆ; ಪುಷ್ಟಿ, ಮರ್ಯಾದಾ ಮತ್ತು ಪ್ರವಾಹ. ಮೊದಲನೆಯ ವರ್ಗವು ಆಯ್ಕೆ ಮಾಡಲ್ಪಟ್ಟವುಗಳಾಗಿದ್ದು ಅವರು ದೇವರ ಅನುಗ್ರಹವನ್ನು ಅನುಭವಿಸುತ್ತಾರೆ ಮತ್ತು ಅವರು ದೇವರ ಬಗ್ಗೆ ಅನನ್ಯವಾದ ಭಕ್ತಿಯನ್ನಿರಿಸಿಕೊಂಡಿರುತ್ತಾರೆ. ಎರಡನೆಯ ವರ್ಗವು ಶಾಸ್ತ್ರಾಧ್ಯಯನವನ್ನು ಕೈಗೊಂಡು, ಅದರಲ್ಲಿ ವಿಧಿಸಲ್ಪಟ್ಟಿರುವ ಕರ್ಮಗಳನ್ನು ಆಚರಿಸುವುದಲ್ಲದೆ, ದೇವರ ಬಗ್ಗೆ ಭಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಅವುಗಳು ಕಾಲಕ್ರಮೇಣ ದೇವರನ್ನು ಹೊಂದುತ್ತವೆ. ಮೂರನೆಯ ವರ್ಗವು ಕೇವಲ ಐಹಿಕ ಸುಖಭೋಗಗಳಲ್ಲಿ ಲುಪ್ತವಾಗಿದ್ದು ನಿರಂತರ ಹುಟ್ಟು ಸಾವುಗಳ ಚಕ್ರವನ್ನು ಹಾದು ಹೋಗುತ್ತವೆ. ಅವುಗಳಲ್ಲಿ ಕೆಲವು ಸತ್ಸಂಗ ಅಥವಾ ಧಾರ್ಮಿಕರೊಂದಿಗಿನ ಒಡನಾಟದಿಂದ ದೇವರನ್ನು ಹೊಂದಿದರೂ ಹೊಂದಬಹುದು.

    ವಲ್ಲಭನು, ಭಕ್ತಿ ಮಾತ್ರವೇ ಮುಕ್ತಿಗೆ ಏಕೈಕ ಮಾರ್ಗವೆಂದು ಭಾವಿಸುತ್ತಾನೆ. ಇದರಿಂದ ಜೀವನು ಜನನ ಮರಣಗಳ ಚಕ್ರದಿಂದ ಬಿಡುಗಡೆ ಹೊಂದಿ ಅವನು ಸರ್ವರೀತಿಯಿಂದಲೂ ಭಗವದಾನಂದವನ್ನು ಪಡೆಯುತ್ತಾನೆ.

    ವಲ್ಲಭನು ಎತ್ತಿಹಿಡಿಯುವುದೇನೆಂದರೆ, ಬ್ರಹ್ಮಜ್ಞಾನಿಯು (ಬ್ರಹ್ಮನನ್ನು ಅರಿತವನು) ಅಕ್ಷರಬ್ರಹ್ಮನಲ್ಲಿ ಲೀನವಾಗುತ್ತಾನೆ ಆದರೆ ಪುರುಷೋತ್ತಮನಲ್ಲಲ್ಲ. ಆದರೆ ಭಕ್ತಿಯೊಂದರಿಂದ ಮಾತ್ರವೇ ಆತ್ಮನು ಉನ್ನತವಾದ ಪುರುಷೋತ್ತಮನನ್ನು ಹೊಂದಬಹುದು ಎನ್ನುತ್ತಾನೆ.

    ಅವನು ಎರಡು ವಿಧವಾದ ಭಕ್ತಿಯನ್ನು ಪ್ರತಿಪಾದಿಸುತ್ತಾನೆ; ಮರ್ಯಾದಾ ಭಕ್ತಿ ಮತ್ತು ಪುಷ್ಟಿ ಭಕ್ತಿ. ಮೊದಲನೆಯದು ಶಾಸ್ತ್ರಗಳಲ್ಲಿ ಸೂಚಿಸಲ್ಪಟ್ಟ ಪದ್ಧತಿಯಂತೆ   ಭಕ್ತಿಯನ್ನು ಅಭ್ಯಾಸ ಮಾಡುವುದು ಮತ್ತು ಅದನ್ನು ಸ್ವಯಂಕೃಷಿಯಿಂದ ಹೆಚ್ಚಿಸಿಕೊಳ್ಳುವುದು. ಎರಡನೆಯದಾದ ಪುಷ್ಠಿ ಭಕ್ತಿಯು ದೈವ ಕೃಪೆಯಿಂದ ಮಾತ್ರವೇ ಹೊಂದಬಹುದು; ಇದು ಯಾವುದೇ ಕಷ್ಟವಿಲ್ಲದೆ ಹೊಂದುವಂತಹುದು. ಪುಷ್ಠಿ ಎನ್ನುವುದು ಭೌತಿಕ (ದೈಹಿಕ) ಪೋಷಣೆಯಾಗಿರದೆ ಅದು ದೈವ ಕೃಪೆಯಿಂದ ದೊರೆಯುವ ಆಧ್ಯಾತ್ಮಿಕ ಪೋಷಣೆಯಾಗಿದೆ. ಆದ್ದರಿಂದ ಅದನ್ನು 'ಪುಷ್ಠಿ ಭಕ್ತಿ' ಎನ್ನಲಾಗಿದೆ; ಇದನ್ನನುಸರಿಸಿ ವಲ್ಲಭನ ಪದ್ಧತಿಯನ್ನು 'ಪುಷ್ಠಿಮಾರ್ಗ'ವೆನ್ನಲಾಗಿದೆ. ವಲ್ಲಭನ  ಸಾಧನಾ ಪಥದಲ್ಲಿ  ಬಾಲಕೃಷ್ಣನ ಪೂಜೆಗೆ  ಒತ್ತುಕೊಡಲಾಗಿದೆಯಲ್ಲದೆ ಅವನಿಗೆ ಸೇವೆ ಸಲ್ಲಿಸುವುದಕ್ಕೆ ಒಂದು ಮಹತ್ವದ ಸ್ಥಾನವನ್ನು ಕೊಡಲಾಗಿದೆ.

ಬಲದೇವ

    ಶ್ರೀಕೃಷ್ಣ ಚೈತನ್ಯ(ಕ್ರಿ.ಶ. ೧೪೮೫ - ೧೫೩೩)ರು ಪ್ರತಿಪಾದಿಸಿದ ವಂಗದೇಶದ ವೈಷ್ಣವ ಪದ್ಧತಿಯಲ್ಲಿ ಬಲದೇವನು ಒಬ್ಬ ಪ್ರಮುಖನಾದ ಬೋಧಕನಾಗಿದ್ದಾನೆ. ಈ ಶಾಖೆಯ ಸಿದ್ಧಾಂತವನ್ನು 'ಅಚಿಂತ್ಯ-ಭೇದಾಭೇದ'ವೆಂದು ಕರೆಯಲಾಗಿದೆ. ಗೋವಿಂದ ಭಾಷ್ಯವು ಬಲದೇವನಿಂದ ಬ್ರಹ್ಮಸೂತ್ರಗಳಿಗೆ ರಚಿತವಾದ ವ್ಯಾಖ್ಯಾನ ಗ್ರಂಥವಾಗಿದೆ ಮತ್ತು ಸಿದ್ಧಾಂತರತ್ನವು ಅವನ ಸಿದ್ಧಾಂತವನ್ನು ಪ್ರತಿಪಾದಿಸುವ ಮತ್ತೊಂದು ಕೃತಿಯಾಗಿದೆ. ಈ ಪದ್ಧತಿಯು ಮಧ್ವರ ದ್ವೈತ ಪದ್ಧತಿಗೆ ಋಣಿಯಾಗಿದ್ದರೂ ಕೂಡ ಅದರಿಂದ ಪ್ರತ್ಯೇಕವಾಗಿದೆ.

    ಈ ಸಿದ್ಧಾಂತದ ಪ್ರಕಾರ, ಬ್ರಹ್ಮನು ಅತ್ಯುನ್ನತವಾದ ಸತ್ಯವಾಗಿದ್ದು ಅದು ಕೃಷ್ಣ, ವಿಷ್ಣು ಅಥವಾ ಹರಿಯಾಗಿದೆ. ಅವನು ವ್ಯಕ್ತಿಗತ ಭಗವಂತನಾಗಿದ್ದು ಅವನು ಅಗಣಿತ ಸುಗುಣಗಳ ಗಣಿಯಾಗಿದ್ದಾನೆ; ಮತ್ತು ಈ ಗುಣಗಳು ಆಚಿಂತ್ಯ ಅಥವಾ ನಮ್ಮ ಗ್ರಹಿಕೆಗೆ ಅತೀತವಾಗಿವೆ. ಅವನು ನಿರ್ಗುಣನು ಅಂದರೆ, ತ್ರಿಗುಣಗಳಾದ ಸತ್ವ, ರಜೋ ಮತ್ತು ತಮೋ ಗುಣಗಳಿಗೆ ಅವನು ಅತೀತನಾಗಿದ್ದಾನೆ. ಶ್ರುತಿಗಳು ಅಥವಾ ಶಾಸ್ತ್ರಗ್ರಂಥಗಳು ಮಾತ್ರವೇ ಅವನ ಸ್ವರೂಪವನ್ನು ತೋರಿಸಬಲ್ಲವು.

    ಭಗವಂತನಿಗೆ ಮೂರು ವಿಧವಾದ ಶಕ್ತಿಗಳಿವೆ; ಪರಾಶಕ್ತಿ (ಉನ್ನತವಾದ ಶಕ್ತಿ), ಅಪರಾಶಕ್ತಿ (ಕೆಳಸ್ತರದ ಶಕ್ತಿ) ಮತ್ತು ಅವಿದ್ಯಾಶಕ್ತಿ (ಜಡ ಶಕ್ತಿ). ಮೊದಲನೆಯದರ ಮೂಲಕ ಅವನು ನಿಮಿತ್ತ ಕಾರಣ(ಸಂಯೋಜಕ)ನಾಗುತ್ತಾನೆ; ಉಳಿದೆರಡು ಶಕ್ತಿಗಳಿಂದ ಅವನು ಉಪಾಧಾನ (ವಸ್ತುತಃ) ಕಾರಣನಾಗುತ್ತಾನೆ. ಅಪರಾಶಕ್ತಿ ಮತ್ತು ಅವಿದ್ಯಾಶಕ್ತಿಗಳು ಸ್ಥೂಲ ರೂಪದಲ್ಲಿ ಆವಿರ್ಭಾವಗೊಂಡಾಗ, ಆತ್ಮ ಮತ್ತು ಭೌತಿಕ ವಸ್ತುಗಳಿಂದ ಕೂಡಿದ ವಿಶ್ವದ ಉಗಮವು ಪ್ರಾರಂಭವಾಗುತ್ತದೆ.

     ಈ ಪ್ರಪಂಚದ ಸೃಷ್ಟಿಯು ಭಗವಂತನಿಗೆ ಸ್ವಯಂಪ್ರೇರಿತ ಕ್ರಿಯೆಯಾಗಿದೆ. ಆದರೆ ಜೀವಿಗಳ ಕರ್ಮಕ್ಕನುಸಾರವಾಗಿ ಭಗವಂತನು ಈ ಸೃಷ್ಟಿಯ ಕಾರ್ಯವನ್ನು ಕೈಗೊಳ್ಳುತ್ತಾನೆ.

    ಪ್ರತ್ಯೇಕನಾದ ಆತ್ಮನು ನಿತ್ಯನು. ಅವನು ಸ್ವತಂತ್ರನಾಗಿರದಿದ್ದರೂ; ಜ್ಞಾನ (ತಿಳುವಳಿಕೆ) ಮತ್ತು ಜ್ಞಾತೃ (ತಿಳಿಯುವವನು), ಭೋಕ್ತೃ(ಅನುಭವಿಸುವವನು) ಮತ್ತು ಸಕ್ರಿಯತೆಯ ರೂವಾರಿ (ಕ್ರಿಯೆಯನ್ನು ಕೈಗೊಳ್ಳುವವನು - ಕರ್ತೃ). ಮತ್ತು ಆತ್ಮನು ಅಣುವಿನ ಗಾತ್ರದವನು.

    ಭಕ್ತಿಯು ಮುಕ್ತಿಗೆ ಏಕೈಕ ಮತ್ತು ಪ್ರತ್ಯಕ್ಷ ಸಾಧನ. ಧ್ಯಾನ ಅಥವಾ ಉಪಾಸನೆ (ತಪಸ್ಸು) ಕೂಡ ಒಂದು ರೀತಿಯಾದ ಭಕ್ತಿ, ಆದರೆ 'ಪ್ರೇಮಾಭಕ್ತಿ' (ಉತ್ಕಟವಾದ ಭಕ್ತಿ)ಯಿಂದ ಮಾತ್ರವೇ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬಹುದು. ವಿಧಿಸಿದ ಕ್ರಿಯೆಗಳನ್ನು ಮಾಡುವುದರಿಂದ ಮನಸ್ಸು ಪರಿಶುದ್ಧವಾಗುತ್ತದೆ. ಶ್ರುತಿಗಳ ಅಧ್ಯಯನವು ಸಾಧಾನಾ ಪಥದಲ್ಲಿ ನಮಗೆ ಊರುಗೋಲು. ಆದರೂ ಕೂಡ ಅಂತಿಮವಾಗಿ ಭಗವತ್ಕೃಪೆಯಿಂದ ಮಾತ್ರವೇ ಅವನ ಸಾಕ್ಷಾತ್ಕಾರವಾಗುವುದು ಮತ್ತು ಮುಕ್ತಿಯು ದೊರೆಯುವುದು. ಹೀಗೆ ಮುಕ್ತವಾದ ಜೀವಿಯು ಭಗವಂತನ ಸಾನಿಧ್ಯದಲ್ಲಿ ಸ್ಥಾಪಿಸಲ್ಪಟ್ಟು ಅವನ ಗುಣ ಸ್ವಭಾವಗಳನ್ನು ಹೊಂದುತ್ತದೆ. ಆದರೂ ಕೂಡ ಅದು ತನ್ನ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ.

    ಬಲದೇವನು ಜೀವನ್ಮುಕ್ತಿ ಅಥವಾ ದೇಹದಲ್ಲಿರುವಾಗಲೇ ಹೊಂದುವ ಮುಕ್ತಿಯನ್ನು ಒಪ್ಪುವುದಿಲ್ಲ.
ಮುಂದುವರೆಯುವುದು.................
=================================================================================================

ವಿ.ಸೂ.: ಇದು ಸ್ವಾಮಿ ಹರ್ಷಾನಂದ ವಿರಚಿತ "The six systems of Hindu Philosophy - A Primer"ಯಲ್ಲಿಯ Vedanta Darshanaನದ ೧೦೫ ರಿಂದ ೧೧೦ನೆಯ ಪುಟದ ಅನುವಾದದ ಭಾಗ.
=======================================================================================
 

Rating
No votes yet

Comments