ವೈದ್ಯನಾರಾಯಣಕಥೆ
’ನಿಮ್ಮನ್ನು ನೋಡಿದ್ರೆ ಇನ್ನೂ ಕಾಲೇಜ್ ವಿದ್ಯಾರ್ಥಿ ಹಾಗೆ ಕಾಣ್ತೀರಿ ’ ಅಂತ ನನ್ನ ಮುಂದೆ ಕೂತ ೨೮ ವರ್ಷದ ಜವಾನ್ತಿ(ಯುವತಿ) ಹೇಳಿದಾಗ ನಾಕನೇ ದಶಕ ಓಡುತ್ತಿರುವ ನನ್ಗೆ (ನಾನೇನೂ ೪೦+ ಅಲ್ಲ ಮಾರಾಯ್ರೇ..ಬರೀ ೩೦+…ಅಷ್ಟೇ ಅಲ್ಲ..೩೦ ರ ನಂತರ ವಯಸ್ಸು ಓಡ್ಲಿಕ್ಕೆ ಶುರು ಆಗ್ತದೆ ಮಾರಾಯ್ರೆ) ಒಂದುಸಲ ಭಯಂಕರ ಖುಷಿ ಆಗಿ ಪುಗ್ಗದ ಹಾಗೆ ಹಿಗ್ಗಿದ ನಾನು ಕೂಡ್ಲೇ ಟುಸ್ಸ್…ಅಂತ ಮುಖ ಸಣ್ಣದು ಮಾಡಿಕೊಂಡೆ. ಯಾಕೆ ಹೀಗೆ ಆಯ್ತು?..ಕಥೆ ಕೇಳಿ..
ಕರ್ಮಸಿದ್ಧಾಂತದ ಪ್ರಕಾರ ಹೇಳ್ಬೇಕಾದ್ರೆ ಘನಘೋರ ಪಾಪ ಮಾಡಿದ ನರಮಾನಿ (ಮನುಷ್ಯ) ಮರುಜನ್ಮದಲ್ಲಿ ಡಾಕ್ಟರಾಗುವುದು ಖಂಡಿತ. ಇಲ್ಲಸಲ್ಲದ ಸಮಯದಲ್ಲಿ ಫೋನ್ ಬರುವುದು, ಊಟಮಾಡುವಾಗಲೇ ಕರೆಗಂಟೆ ಬಾರಿಸುವುದು, ನೆಂಟರು ಬಂದ ದಿನವೇ ಎಮರ್ಜೆನ್ಸಿ ಕೇಸ್ ಬರುವುದು, ಡಯೇರಿಯಾ ಕೇಸ್ ನೋಡಿದ ಮೇಲೆ ಹಲಸಿನಹಣ್ಣಿನ ಪಾಯಸದ ಮೇಲೂ ಗುಮಾನಿ ಬರುವುದು..ಇದೆಲ್ಲ ಎಲ್ರಿಗೂ ಗೊತ್ತುಂಟು. ಆದ್ರೆ ಇಲ್ಲಿ ಕಥೆಯೇ ಬೇರೆ.. ವೈದ್ಯೋನಾರಾಯಣೋ ಹರಿಃ ಅನ್ನುವುದನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ನಾರಾಯಣನೇ ವೈದ್ಯನೆಂದು ಅಥವಾ ವೈದ್ಯನೇ ನಾರಾಯಣನೆಂದೂ ಅರ್ಥಮಾಡಿಕೊಳ್ಳುವ ಚಾಲಾಕ್ ರೋಗಿಗಳು ಇನ್ನು ಕೆಲವು ವಿಷಯಗಳಲ್ಲಿ ಸ್ವಲ್ಪ confused ಇರ್ತಾರೆ. ಮುಖ್ಯವಾಗಿ ಎಲ್ರಿಗೂ ಡಾಕ್ಟರೆಂಬ ಪ್ರಾಣಿಯೂ ತಮ್ಮ ಹಾಗೇ ಮನುಷ್ಯ ಜಾತಿಯಲ್ಲಿ ಬರುತ್ತದೆ, ಅದಕ್ಕೂತಮ್ಮ ಹಾಗೆ ೨ ಕಣ್ಣು , ೨ ಕಿವಿ, ೧ ಮೂಗು (ಹೋಗ್ಲಿ ಬಿಡಿ, ನಿಮಗೆ ಎಷ್ಟು ಮಾಂಸಖಂಡ, ಎಲುಬು, ನರಗಳು ಅಂತ ಹೇಳಲಿಕ್ಕೆ ಇದೇನು ಅನಾಟಮಿ ಕ್ಲಾಸಲ್ಲವಲ್ಲ..)ಮಾತ್ರವಲ್ಲ , ಒಂದು ಮನಸ್ಸೂ ಇರ್ತದೆ ಅಂತ ನೆನಪಿರುವುದಿಲ್ಲ. ಹೀಗಾಗಿ ಈ ವಿಚಿತ್ರ ಪ್ರಾಣಿಯ ಬಗ್ಗೆ ಒಂಥರ ಪೂರ್ವಾಗ್ರಹಪೀಡಿತ ಅಭಿಪ್ರಾಯ ಇಟ್ಟುಕೊಂಡಿರುವುದು ಪಂಜುರ್ಲಿ ,ಗುಳಿಗ ,ರಕ್ತೇಶ್ವರಿಯ ಆಣೆಗೂ ಸತ್ಯ. ಇವು ತಮ್ಮ ಡಾಕ್ಟರ್ ಎಷ್ಟು ಅನುಭವಿಗಳು ಅಂತ ತೀರ್ಮಾನಿಸಲು ಇರುವ ಕ್ರೈಟೀರಿಯ ಅಂತಲೂ ಹೇಳಬಹುದು.
ಮುಖ್ಯ ಕ್ರೈಟೀರಿಯಾ
೧) ಡಾಕ್ಟರ್ ನೋಡಲು ತೋರ[ ದಪ್ಪ]ವಾಗಿರಬೇಕು..
ದೊಡ್ಡ ಹೊಟ್ಟೆಯೂ ಇದ್ದರೆ ಕೇಕ್ ಮೇಲೆ ಚೆರಿ ಇದ್ದಹಾಗೆ, ಅಥವಾ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಹಾಗೆ. ಅರ್ಥ ಏನಂದ್ರೆ ಡಾಕ್ಟರ್ ಹೊಟ್ಟೆಅಳತೆ ಡೈರೆಕ್ಟ್ಲೀ ಪ್ರಪೋರ್ಷನಲ್ ಟು ಡಾಕ್ಟರ ನೈಪುಣ್ಯ. ಇದರ ವಿಷಯದಲ್ಲಿ ಜ್ಞಾನೋದಯವಾದ ಸುದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ನಾಲ್ಕು ವರ್ಷದ ಹಿಂದೆ ನನ್ನ ಗಂಡನ ಕಸಿನ್ ಮನೆಗೆ ಹೋದಾಗ ಅವನು ”ನೀವೆಂಥ ಡಾಕ್ಟರ್ ಅತ್ತಿಗೆ? ಅಣ್ಣ ಆದ್ರೆ ಹೌದು,ಒಳ್ಳೆ ಡಾ…ಕ್ಟರ್ ಥರ ಕಾಣ್ತಾನೆ” ಅಂತ ನನ್ನನ್ನು ಹೀಯಾಳಿಸಿದ್ದಲ್ಲದೆ, ಅವನಣ್ಣನನ್ನೂ, ಅವರ ಹೊಟ್ಟೆಯನ್ನೂ ಗೌರವಪೂರ್ಣವಾಗಿ ನೋಡಿದ. ಸಮಾಧಾನದ ವಿಷಯವೆಂದರೆ ಈ ೪ ವರ್ಷಗಳಲ್ಲಿ ನನ್ನ ಗಂಡ ಇನ್ನೂ ದೊಡ್ಡ ಡಾಕ್ಟರಾದ್ದಲ್ಲದೇ, ನಾನೇನೂ ಕಮ್ಮಿಯಿಲ್ಲ.
೨) ಕನ್ನಡಕ ಬೇಕೇಬೇಕು…
ಇದು ಬಹಳ ಸಾಮಾನ್ಯವಾದ ಸಾಮಾನ್ಯಜ್ಞಾನ. ಸಣ್ಣ ಚಿಳ್ಳೆಪಿಳ್ಳೆಗಳೂ ಕನ್ನಡಕ ಹಾಕಿ ’ನಾನು ಡಾಕ್ಟರ್ ’ ಎನ್ನುವುದು ಮಾಮೂಲು. ಓದಿ ಓದಿ ಕಣ್ಣುಗಳು ಹಾಳಾದವು ಅಂತ ಇದರರ್ಥ. ಇಲ್ಲಿ ಗಾಜಿನ ದಪ್ಪ α ಬುದ್ಧಿವಂತಿಕೆ. ಕಣ್ಣು ಸರಿಯಾಗಿರುವವರು ಪವರ್ ಇಲ್ಲದ ಕನ್ನಡಕ ಹಾಕಿಕೊಳ್ಳಬಹುದು.
೩) ಮಾತು ಕಡಿಮೆ….
ಎಷ್ಟು ಕಡಿಮೆ, ಮೆಲ್ಲನೆ ಹಾಗೂ ಅರ್ಥವಾಗದಂತೆ ಮಾಥನಾಡುತ್ತಾರೋ ಅಷ್ಟು ಅವರ ಮೇಲೆ ಭಯ ಭಕ್ತ ಜಾಸ್ತಿ. ’ಮಾತಾಡ್ಲಿಕ್ಕೂ ಟೈಮಿಲ್ಲ, ಅಷ್ಟೂ ಬ್ಯುಸಿ ’ ಅಂತ ಹೇಳುವ ಪೇಷೆಂಟ್ ಗೆ ತಾನು ಸರಿಯಾದ ವೈದ್ಯನ ಹತ್ತಿರವೇ ಬಂದಿದ್ದೇನೆಂಬ ಅನಿರ್ವಚನೀಯವಾದ ಆನಂದ. ಇದರ ಪರಿಹಾರವೆಂದರೆ ಸರಿಯಾಗಿ ಮಾತನಾಡುವವರು ಸ್ಪೀಚ್ ಥೆರಪಿಯಂತಹದೇನಾದರೂ ಪಡೆದುಕೊಳ್ಳಬಹುದು.
೪) ಸಣ್ಣ ಪ್ರಾಯದ ಡಾಕ್ಟರಿಗೆ ಜ್ಞಾನ ಕಡಿಮೆ…
ವೈದ್ಯಕೀಯ ಜಗತ್ತಿನ ಇತ್ತೀಚಿನ ಬೆಳವಣಿಗೆಗಳನ್ನು ಓದಿ ತಾಜಾ ಮಾಹಿತಿ ಪಡೆದಿರುವವರಿಗೆ ಇದು ನುಂಗಲಾರದ ತುತ್ತು. ಈ ಶಾಪವಿಮೋಚನೆಗೆ ಒಂದೇ ಉಪಾಯ. ಒಂದಾನೊಂದು ಕಾಲದಲ್ಲಿ ದೂರದರ್ಶನದಲ್ಲಿ ಬರುತ್ತಿದ್ದ ’ಸಂಸಾರ್’ ’ ಎಂಬ ಧಾರಾವಾಹಿಯಲ್ಲಿ ಎಲ್ಲ ಪಾತ್ರಗಳು ತಮ್ಮ ಕೂದಲಿಗೆ ಬಿಳಿಬಣ್ಣದ ಪಟ್ಟೆಗಳನ್ನು ಬಳಿದುಕೊಂದಂತೆ ನಾವೂ ಪ್ರಯತ್ನಿಸಬಹುದು. ಇದನ್ನು reverse cosmetic camouflage ಅಂತಲೂ ಹೇಳಬಹುದು
೫) ಅಕ್ಷರಗಳು ರಣರಂಗದಲ್ಲಿ ಖಡ್ಗಗಳಂತೆ ಎಲ್ಲಾ ದಿಕ್ಕುಗಳಲ್ಲೂ ಅಡ್ಡಾದಿಡ್ಡಿಯಾಗಿದ್ದು ಓದಲು ಅಸಾಧ್ಯವಾಗಿರಬೇಕು.(ಇದರ ಹಿಂದಿನ logic ಏನಿರಬಹುದೆಂದು ಊಹಿಸಲು ಅಸಮರ್ಥಳಾಗಿದ್ದೇನೆ).
ನೋಡಿದರೆ ಇಂಗ್ಲಿಷ್ ಎಂದಷ್ಟೇ ತಿಳಿಯಬೇಕು. ಇದರಲ್ಲಿ ಮುಖ್ಯ ಜಾಗ್ರತೆ ವಹಿಸಬೇಕಾದ್ದೇನೆಂದರೆ ಅಕ್ಷರಗಳು ಉರುಟಾಗಿರಬಾರದು. ಎಲ್ಲಿಯಾದರೂ ತಪ್ಪಿ ಪೇಷೆಂಟ್ ಅದು ಕನ್ನಡ ಅಂತ ಎಣಿಸಿ ಮಾನ ಹೋಗಬಹುದು. ಚಂದದ ಅಕ್ಷರದ ಡಾಕ್ಟ್ರಿಗೆ ಇದಕ್ಕೆ ಪಂಜುರ್ಲಿಗೆ ಕೋಲ ಹೇಳಿಕೊಡರೂ ಪರಿಹಾರ ಸಿಗುವುದು ಕಷ್ಟ .
೬) ಡಾಕ್ಟರ ಕೈಗುಣ ಚೆನ್ನಾಗಿರಬೇಕು…
ನಮ್ಮ ಗುರುಗಳು ಯಾವಾಗಲೂ ಹೀಗೆ ಹೇಳುವುದಿತ್ತು ”what mind does not know, eyes cannot see”..ಮೆದುಳಿಗೆ ಗೊತ್ತಿಲ್ಲದ, ಕಣ್ಣಿಗೆ ಕಾಣದ ವಿಷಯವನ್ನು ಕೈಗಳು ಬರೆಯುವುದು ಸಾಧ್ಯವೇ? ಆದರೂ, ಬುಧ್ಧಿ ಓಡಿಸಿದ ತಲೆಗೆ ಮರ್ಯಾದೆ ಕೊಡದೆ, ಕೈಯನ್ನು ಹೊಗಳುವ ಜನರನ್ನು ಕ್ಷಮಿಸಿಬಿಡಬಹುದು..ಯಾಕಂದ್ರೆ ಈ ವಿಷಯ ಅಷ್ಟೇನೂ ಸಿಂಪಲ್ಲಾಗಿಲ್ಲ. ಇದು ಕೈಗುಣ ಮತ್ತು ಜನರ ಮನಸ್ಸು ಒಟ್ಟಿಗೆ ಸೇರಿ ಮಾಡಿದ ಕರಾಮತ್ತು..
ಇನ್ನು ಮೈನರ್ ಕ್ರೈಟೀರಿಯಾ:
೧. ಡಾಕ್ಟರ್ ಗೆ ಕಾಯಿಲೆ ಬರಬಾರದು.
೨. ಡಾಕ್ಟರ್ ಮಾತನಾಡುವ ಪ್ರತಿಯೊಂದು ಮಾತೂ politically,socially,ethically ಇತ್ಯಾದಿ ಕಲಿಯುಗದ ಎಲ್ಲಾ ಕಲಿಗಳ ಪ್ರಕಾರ ಸರಿಯಾಗಿರಬೇಕು. ಹಾಗೂ ಆ ಪ್ರೌಢಿಮೆ ಅವನ/ಳಲ್ಲಿ ವೈದ್ಯಕೀಯ ಕಾಲೇಜಿಗೆ ಸೀಟ್ ಸಿಕ್ಕಿದ ದಿನದಿಂದಲೇ ಇರಬೇಕು.
೩. ಜಾಸ್ತಿ ಹಳೆಯದೂ ಅಲ್ಲದ , ಹೊಸದೂ ಅಲ್ಲದ ಫ್ಯಾಷನ್ ಸೆನ್ಸ್ ಇರಬೇಕು.ಈ ಬ್ಯಾಲೆನ್ಸ್ ಅಷ್ಟು ಸುಲಭವೇ?
ಇದಿಷ್ಟು ಕಥೆ..
ಮೊನ್ನೆ ಪೇಷೆಂಟ್ ನನಗೆ ಹಾಗಂದಾಗ ಅದು ಹೊಗಳಿಕೆಯೋ, ತೆಗಳಿಕೆಯೋ ಸರಿಯಾಗಿ ಗೊತ್ತಾಗ್ಲಿಲ್ಲ ಅಂತ ಮಂಡೆ ಕಿಂರ್ಬಿಕೊಳ್ಳುವಾಗ [ತಲೆ ತುರಿಸಿಕೊಳ್ಳುವಾಗ] ಈ ಆಲೋಚನೆಗಳಿಗೆ ಒಂದು ಮುಕ್ತಿಯನ್ನು ಕೊಡುವುದಕ್ಕಾಗಿ ನಿಮ್ಮ ಮಂಡೆಯನ್ನೂ ಸ್ವಲ್ಪ ಕೊರೆಯಬೇಕಾಯಿತು.
ಈ ಕಥೆಯನ್ನು ಓದಿದವರಿಗೆ ,ಕೇಳಿದವರಿಗೆ,ಅಥವಾ ಓದಿ ಇತರರಿಗೆ ಹೇಳಿದವರಿಗೆ ಆ ವೈದ್ಯನಾರಾಯಣನು
• ವೈದ್ಯರಲ್ಲವಾದರೆ ಆಯುರಾರೋಗ್ಯಗಳನ್ನೂ
• ವೈದ್ಯನಾದರೆ ಜತೆಗೆ ಅಪಾರ ಸಂಖ್ಯೆಯಲ್ಲಿ ರೋಗಿಗಳನ್ನೂ ದಯಪಾಲಿಸಲೆಂದುಪ್ರಾರ್ಥನೆ. ಎಲ್ಲರಿಗೂ ಒಳ್ಳೆಯದಾಗಲಿ.
Comments
ಉ: ವೈದ್ಯನಾರಾಯಣಕಥೆ
ಉ: ವೈದ್ಯನಾರಾಯಣಕಥೆ
ಉ: ವೈದ್ಯನಾರಾಯಣಕಥೆ
ಉ: ವೈದ್ಯನಾರಾಯಣಕಥೆ
ಉ: ವೈದ್ಯನಾರಾಯಣಕಥೆ
ಉ: ವೈದ್ಯನಾರಾಯಣಕಥೆ