ವ್ಯಕ್ತಿ ಪರಿಚಯ : ತಪಸ್ಸು ಹಾಗು ಹರಿಪ್ರಸಾದ್ ನಾಡಿಗ್
ತಪಸ್ಸು ಅನ್ನುವ ಪದಕ್ಕೆ ಅರ್ಥ ಯೋಚಿಸುತ್ತ ಹೊರಟರೆ ಹೊಳೆಯುವುದು, ನಾವು ಒಂದು ವಸ್ತು ಅಥವ ಶಕ್ತಿ ಕುರಿತು ಚಿಂತಿಸುತ್ತ , ಸದಾ ಅದರ ಬಗ್ಗೆಯೆ ದ್ಯಾನಿಸುತ್ತ, ಆ ಸಾಧನೆಗಾಗಿ ತನ್ನೆಲ್ಲ ಸುಖ ಸಂತೋಷಗಳನ್ನು ನಿರಾಕರಿಸುತ್ತ, ಅದನ್ನು ಸೇರುವುದು ಒಂದೆ ಗುರಿ ಎಂಬ ಜೀವನ ಛಲದೊಂದಿಗೆ ಸಾಗುವ ಮಾರ್ಗ. ತಾವು ಹಿಡಿದ ಗುರಿ ಒಂದನ್ನು ಸಾಧಿಸಲು ಜೀವನದ ಉಳಿದೆಲ್ಲವನ್ನು ತ್ಯಜಿಸಲು ಸಿದ್ದವಾಗಿರುವುದನ್ನು ತಪಸ್ಸು ಅನ್ನುವರೇನೊ. ಮೇರಿಕ್ಯೂರಿ ಜೀವನ ಚರಿತ್ರೆ ಓದುವಾಗ ಒಂದು ಸಾಲು ಓದಿದ ನೆನಪಿದೆ, ರಸಾಯನ ವಿಜ್ಞಾನದಲ್ಲಿ ಸಾಧನೆ ಆಕೆಗೆ ತಪಸ್ಸಾಗಿತ್ತು.
ಕೆಲವೊಮ್ಮೆ ಕೇಳಿರುತ್ತೇವೆ ’ಸಾಹಿತ್ಯರಚನೆ ಅವರಿಗೆ ಒಂದು ತಪಸ್ಸಿನಂತೆ’.
ಭಾರತಕ್ಕೆ ಅಂತರ್ಜಾಲ, ಕಂಪ್ಯೂಟರ್ ಎಲ್ಲವು ಕಾಲಿಟ್ಟ ಕಾಲ. ಆದರೆ ಅಲ್ಲಿ ಅಂಗ್ಲದಲ್ಲಿಯೆ ವ್ಯವಹರಿಸ ಬೇಕಾದ ಅನಿವಾರ್ಯತೆ. ಆದರೂ ಕನ್ನಡ ದಲ್ಲಿ ದಾಖಲಿಸುವ ತುಡಿತದಲ್ಲಿ , ಕೆಲವೊಮ್ಮೆ ಕಂಗ್ಲೀಶ್ ಅನ್ನು ಬಳಕೆ ಮಾಡಿತ್ತಿದ್ದರು. ಅಂದರೆ ಕನ್ನಡ ವಾಕ್ಯಗಳನ್ನೆ ಅಂಗ್ಲ ಅಕ್ಷರದಲ್ಲಿ ಬರೆಯುವುದು!. ಆ ಸಮಯದಲ್ಲಿ ತಮ್ಮ ಕೆಲವು ಗೆಳೆಯರೊಡನೆ ಕುತೂಹಲ, ಕನ್ನಡದ ಮೇಲಿನ ಪ್ರೇಮ ಇವೆಲ್ಲ ಸೇರಿ ಕನ್ನಡಕ್ಕೆ ಹೊಸದಾಗಿದ್ದ ವೆಬ್ ಪೋರ್ಟರ್ ಅನ್ನು ಪರಿಚಯಿಸುವ ಪ್ರಯತ್ನದ ಅಂಗವಾಗಿ ಹರಿಪ್ರಸಾದ್ ನಾಡಿಗರು, ಪ್ರಾರಂಬಿಸಿದ್ದು ’ಸಂಪದ’ ಎಂಬ ಕನ್ನಡ ಸಮುದಾಯ ತಾಣ ಅದು ಸುಮಾರು 2005 ರಲ್ಲಿ.
ಆಗ ಪ್ರಾರಂಭವಾದ ಸಂಪದ , ಅಲಂಕರಿಸಿಕೊಳ್ಳುತ್ತ , ಬಣ್ಣ ಬದಲಿಸುತ್ತ, ಹೊಸ ಬಟ್ಟೆ ಧರಿಸುತ್ತ , ಸತತವಾಗಿ ಹೊಸ ಸದಸ್ಯರು ಸೇರುತ್ತ ಹಳಬರು ಕಣ್ಮರೆಯಾಗುತ್ತ. 36000 ಕ್ಕಿಂತ ಅಧಿಕ ಲೇಖನ, 1,73,000 ರಷ್ಟು ದೊಡ್ಡ ಪ್ರಮಾಣದ ಪ್ರತಿಕ್ರಿಯೆಗಳನ್ನು ತುಂಬಿಕೊಳ್ಳುತ್ತ, 2013 ನೇ ವರ್ಷಕ್ಕೆ ಕಾಲಿಡುತ್ತಿದೆ ಎಂದರೆ ಆ ಸಾಧನೆಯ ಹಿಂದಿರುವ ಏಕೈಕ ವ್ಯಕ್ತಿ ಹರಿಪ್ರಸಾದ್ ನಾಡಿಗರು, ಹಾಗೆ ತಮ್ಮ ಪತಿಗೆ ಸಹಕಾರ ಕೊಡುತ್ತ ಅದೆ ಕನ್ನಡ ಪ್ರೇಮವನ್ನು ಮನದಲ್ಲಿ ತುಂಬಿಕೊಂಡು ನಿಂತಿರುವವರು ಶ್ರೀಮತಿ ಸುಮಾ ಹರಿಪ್ರಸಾದ ನಾಡಿಗರು.
ಯಾವುದೆ ಒಂದು ದೊಡ್ಡ ಕೆಲಸವನ್ನು ಪ್ರಾರಂಬಿಸುವುದು ಸ್ವಲ್ಪ ಸುಲಭ, ಆದರೆ ಅದನ್ನು ನಂತರ ಮುಂದುವರೆಸಿಕೊಂಡು ಹೋಗುವ ಸವಾಲು ಬಂದಾಗ, ಅದು ಬರೀ ಆರಂಭದ ಅತಿ ಉತ್ಸಾಹವನ್ನಷ್ಟೆ ಅಲ್ಲ, ಅತ್ಯಂತ ತಾಳ್ಮೆ, ಜವಾಬ್ದಾರಿ, ಹಾಗು ಸಂಕಲ್ಪವನ್ನು ಬೇಡುತ್ತದೆ. ೨೦೦೫ರಲ್ಲಿ ನಾಡಿಗರು ಸಂಪದ ಎನ್ನುವ ಸುಂದರ ತಾಣವನ್ನು ಹುಟ್ಟು ಹಾಕಿದರು. ಕೇವಲ ಹದಿನೈದು ಇಪ್ಪತ್ತು ದಿನದಲ್ಲಿ ಎಲ್ಲವು ಸರಿಯಾಗಿ ನಂತರ ಅದರ ಪಾಡಿಗೆ ಅದು ನಡೆಯುತ್ತ ಹೋಗುತ್ತದೆ ಎನ್ನುವ ಮನಸ್ಸು. ಆದರೆ ಅದು ಅವರ ನಿರೀಕ್ಷೆಯನ್ನು ಮೀರಿ ಎಲ್ಲ ಅಯಾಮಗಳಲ್ಲಿ ಬೆಳೆಯಲು ಪ್ರಾರಂಭಿಸಿತು. ಸಂಪದ ಎನ್ನುವ ಈ ಅನ್ಲೈನ್ ಸಮುದಾಯ ಕನ್ನಡದಲ್ಲಿ ಪ್ರಥಮ ಪ್ರಯೋಗವಾಗಿತ್ತು, ಅದು ಎಲ್ಲ ಜನರಿಗೆ ಇಷ್ಟವಾಗುತ್ತ ಹೋದಂತೆ ಅದರ ಗಾತ್ರ ಹೆಚ್ಚುತ್ತ ಹೋಯಿತು, ಅದರಲ್ಲಿ ಭಾಗವಹಿಸಿ ಬರೆಯುವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಮೊದಲಿಗೆ ಹೊರನಾಡಿನ ಸರ್ವರ್ ಒಂದರಲ್ಲಿ ಬಾಡಿಗೆಗೆ ಸ್ವಲ್ಪ ಜಾಗವನ್ನು ಪಡೆದು ಪ್ರಾರಂಭಿಸಿದ ಸಂಪದ ಅರಬರ ಒಂಟೆಯಂತೆ ಕೈಕಾಲು ಚಾಚುತ್ತ ಹೋದಂತೆ ಅಲ್ಲಿ ಜಾಗ ಸಾಲದಾಯಿತು. ಅಲ್ಲಿಯ ಮೂಲ ಸೌಲಭ್ಯಗಳು ಸಹ ಸಾಲದಾಯಿತು, ಹೀಗಾಗಿ ಸಂಪದ ತನ್ನದೆ ಆದ ಒಂದು ಸರ್ವರ್ ಹೊಂದುವುದು ಅವಶ್ಯವಾಯಿತು. ಹೀಗೆ ಬೆಳೆದಂತೆ ಅದರ ಸವಾಲುಗಳು ಬೇರೆ ಬೇರೆ ಆಯಾಮ ಪಡೆಯಿತು. ಸಂಪದ ನಡೆಸುವದಕ್ಕಾಗಿ ಬೇಕಾಗಿದ್ದ ಹಣಕಾಸಿನ ಸೌಲಭ್ಯ, ಅಲ್ಲಿ ತೋರಿಬರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಬೇಕಾದ ತಾಂತ್ರಿಕರ ಸಹಾಯ, ಅನುದಿನವು ಹರಿದು ಬರುವ ನೂರಾರು ಬರಹಗಳನ್ನು ಫಾರ್ಮೆಟ್ ಸರಿಪಡಿಸುವುದು ಪರಿಶೀಲಿಸುವುದು ಮುಂತಾದ ಹತ್ತು ಹಲವು ಆಯಾಮಗಳು. ಇವನ್ನೆಲ್ಲ ನಿಭಾಯಿಸುವುದು ಸುಲಭ ಸಾದ್ಯವಾಗಿರಲಿಲ್ಲ.
ಸಂಪದದಲ್ಲಿ ಪ್ರಾರಂಭದಿಂದಲು ಬರಹಗಳನ್ನು ಬರೆಯುತ್ತ, ಇಲ್ಲಿಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತ ದೊಡ್ಡ ಬರಹಗಾರರಾಗಿ ಬೆಳೆದವರು ಬಹಳಷ್ಟು ಜನ, ಆರಂಭದ ಉತ್ಸಾಹದಲ್ಲಿ ಜೊತೆಯಾದ ಗೆಳೆಯರು ಬಹಳಷ್ಟು ಜನ, ಆದರೆ ಪ್ರಾರಂಭದಿಂದ ಇಲ್ಲಿಯವರೆಗು ಬಹಳಷ್ಟು ಒಂಟಿಯಾಗಿಯೆ ಸಂಪದದ ರಥವನ್ನು ಎಳೆಯುತ್ತ ಬಂದವರು ಹರಿಪ್ರಸಾದ ನಾಡಿಗರು.
ಇಂತಹ ಒಂದು ಕನ್ನಡ ಸಮುದಾಯವನ್ನು ಕಟ್ಟಿ ಬೆಳೆಸಲು ಒಬ್ಬನೆ ಮನುಷ್ಯನಲ್ಲಿ ತಾಂತ್ರಿಕ ಜ್ಞಾನ ಹಾಗು ಕನ್ನಡ ಪ್ರೇಮ ಎರಡು ಒಟ್ಟಿಗೆ ಇದ್ದರೆ ಮಾತ್ರ ಸಾದ್ಯ. ನಮ್ಮಲ್ಲಿ ಬಹಳಷ್ಟು ಕನ್ನಡ ಪ್ರೇಮಿಗಳು ಇರಬಹುದು, ಹತ್ತು ಹಲವು ಬಗೆಯ ಸಾಹಿತ್ಯ ಜ್ಞಾನವಿದ್ದು, ಕನ್ನಡದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಶಕ್ತಿ ಇರಬಹುದು ಆದರೆ ಅದೆ ಕನ್ನಡವನ್ನು ಕಂಪ್ಯೂಟರ್ ನಲ್ಲಿ , ಅಂತರ್ಜಾಲದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಲು ಬೇಕಾದ ತಾಂತ್ರಿಕ ಜ್ಞಾನ ಅವರಲ್ಲಿ ಇರಲಾರದು. ಹಾಗೆಯೆ ಕಂಪ್ಯೂಟರ್ ಅಂತರ್ಜಾಲ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ ವ್ಯಕ್ತಿಯಾಗಿದ್ದರು ಅವನಲ್ಲಿ ಕನ್ನಡದ ಬಗ್ಗೆ ಸೆಳೆತ ಇರಲಾರದು, ಈ ಎರಡು ಬಗೆಯ ಕೌಶಲ್ಯ ಒಟ್ಟಿಗೆ ಸೇರಿರುವ ವ್ಯಕ್ತಿ ನಾಡಿಗರು.
ಅವರ ಮಾತುಗಳನ್ನು ಕೇಳುತ್ತಿದ್ದರೆ, ಏಳು ಎಂಟು ವರ್ಷಗಳಲ್ಲಿ ಅವರು ಈ ಸಂಪದ ಸಮುದಾಯಕ್ಕಾಗಿ ಅವರ ಅರ್ಪಣಾ ಮನೋಭಾವದಿಂದ ಮಾಡಿರುವ ಕೆಲಸದ ಪೂರ್ಣ ಕಲ್ಪನೆ ಬರುತ್ತದೆ, ಅವರ ಮಾತುಗಳಲ್ಲಿ ಮಾಡಿರುವೆ ಎಂಬ ಅಹಂ ಇಲ್ಲ, ಕನ್ನಡಕ್ಕಾಗಿ ದುಡಿದಿರುವ ಹೆಮ್ಮೆ ಇದೆ, ಮತ್ತು ಅದೇಕೊ ಸ್ವಲ್ಪ ಬೇಸರವು ಇದೆ ಅನ್ನಿಸುತ್ತೆ. ಅವರ ಬೇಸರ ಸಕಾರಣವಾಗಿದೆ ಅನ್ನಿಸುತ್ತೆ. ಕನ್ನಡದಲ್ಲಿ ದುಡಿಯುವರಿಗೆ ಸರಿಯಾದ ಪ್ರೋತ್ಸಾಹವಿಲ್ಲ, ಗುರುತಿಸಿವಿಕೆಯಂತು ಇಲ್ಲವೆ ಇಲ್ಲ. ತಮಿಳಿನಲ್ಲಿ ಎಂಟು ಹತ್ತು ಫಾಂಟ್ ಗಳಿದ್ದರೆ, ಕನ್ನಡದಲ್ಲಿ ನಾವು ಅಷ್ಟು ಫಾಂಟ್ ಗಳನ್ನು ಕಟ್ಟಲು ಏಕೆ ಆಗಿಲ್ಲ ಎಂದು ಚಿಂತಿಸುತ್ತಾರೆ, ಆ ದಿಕ್ಕಿನಲ್ಲಿ ದುಡಿದಿದ್ದಾರೆ. ಎಲ್ಲರು ತಮ್ಮ ಉದ್ಯೋಗದ ಕೆಲಸ ಮುಗಿದ ನಂತರ ಸಂಜೆ ಗಾಂಧಿಬಜಾರಿಗೊ ಮಾಲ್ ಗಳಿಗೊ ಹೋಗಿ ಸಂತಸ ಪಡುವ ವಿರಾಮದ ಸಮಯದಲ್ಲಿ ಅವರು ತಮ್ಮ ಆಫೀಸಿನ ಕೆಲಸ ಮುಗಿಸಿ , ಸಂಪದ ಕೆಲಸಕ್ಕಾಗಿ ಕುಳಿತುಕೊಳ್ಳುತ್ತಾರೆ. ಸಂಪದಕ್ಕಾಗಿಯೆ ಒಂದು ತಾಂತ್ರಿಕ, ಆಡಳಿತ ತಂಡ ಕಟ್ಟಲು ಬೇಕಾದ ಮೂಲಸೌಲಭ್ಯಗಳು ಇಲ್ಲ. ಹೀಗಾಗಿ ಅವರದು ಏಕಾಂಗಿ ಹೋರಾಟ. ಸಂಪದ ಹ್ಯಾಕರ್ ಗಳಿಂದಲೊ ಅಥವ ಟ್ರಾಫಿಕ್ ಸಮಸ್ಯೆ ಯಿಂದಲೊ ನಿಧಾನವಾದಾಗ ಅರ್ಧರಾತ್ರಿಯಾದರು ಸರಿಯೆ ಅದರ ಕಡೆಗೆ ಗಮನ ಕೊಡಲೆ ಬೇಕು.
ಹಾಗೆಂದು ಸಂಪದ ಸಮುದಾಯವೆಂದರೆ ಬರಿ ಕಷ್ಟಗಳೆಂದೆ ಅಲ್ಲ, ಕೆಲವು ಸುಂದರ ಅನುಭೂತಿಯನ್ನು ಅವರಲ್ಲಿ ಮೂಡಿಸಿದೆ. ದೂರದ ಯಾವುದೊ ನಗರದ ಏರ್ ಪೋರ್ಟಿನಲ್ಲಿ ಹರಿಪ್ರಸಾದ ನಾಡಿಗರೆಂದು ಹೆಸರು ಹೇಳಿದೊಡನೆ ಸಂಪದದ ಸ್ಥಾಪಕರು ಎಂದು ಗುರುತಿಸಿ ಮಾತನಾಡಿಸಿರುವ ಪ್ರಸಂಗಗಳು, ಅದೆ ರೀತಿಯ ಘಟನೆಗಳು ಅವರಲ್ಲಿ ಹುರುಪು ಸಂತಸ ತುಂಬಿರುವುದು ಇದೆ.
ಅವರ ಕನ್ನಡದ ಮೇಲಿನ ಪ್ರೀತಿಯು ಅಧಿಕ. ಅವರು ತಮ್ಮ ಸಂಪದ ಸಮುದಾಯ ಒಂದೆ ಇರಬೇಕೆಂದು ಇಚ್ಚಿಸುವರಲ್ಲ, ಸಂಪದ ರೀತಿಯ ಹತ್ತಾರು , ನೂರಾರು ಸಮುದಾಯಗಳು ಅಂತರ್ಜಾಲದಲ್ಲಿ ಸ್ಥಾಪಿತವಾಗಿ , ಅಂತರ್ಜಾಲದಲ್ಲಿ ಕನ್ನಡದ ಬಾವುಟ ಎತ್ತರಕ್ಕೆ ಹಾರಬೇಕೆಂದು, ಕನ್ನಡ ಅಕ್ಷರಗಳು ಎಲ್ಲರಿಗು ಕಾಣಿಸುವಂತಾಗಬೇಕೆಂದು ಅವರ ನಿಸ್ವಾರ್ಥ ಬಯಕೆ. ಕರ್ನಾಟಕ ಸರ್ಕಾರ ಇಂತಹ ಕನ್ನಡ ಬಲ್ಲ ಹಾಗು ಕಂಪ್ಯೂಟರ್ ಜ್ಞಾನವು ಇರುವ ಪರಿಣಿತರನ್ನು ಬಳಸಿಕೊಂಡಲ್ಲಿ ಕನ್ನಡ ಬಾಷೆ ನಿಜಕ್ಕು ಬೆಳೆಯುವುದು ಸತ್ಯ.. ಬಹುಷಃ ’ಎಲೆ ಮರೆಯ ಕಾಯಿ ’ ಎನ್ನುವ ಆಡುಮಾತಿನ ಹೋಲಿಗೆ ಹರಿಪ್ರಸಾದ ನಾಡಿಗರಿಗೆ ಖಂಡಿತ ಸಲ್ಲುತ್ತದೆ, ಯಾವುದೆ ಅಪೇಕ್ಷೆಗಳಿಲ್ಲದೆ, ಕನ್ನಡದ ಮೇಲಿನ ಪ್ರೀತಿ ಮಾತ್ರವನ್ನು ಹೃದಯದಲ್ಲಿ ತುಂಬಿಕೊಂಡು , ನಿಶ್ಯಬ್ಧವಾಗಿ ತಮ್ಮ ಕೆಲಸ ಮುಂದುವರೆಸಿಕೊಂಡು ಹೋಗುತ್ತಿರುವ ಇವರ ಸೇವೆ ಖಂಡಿತ ಮಾನವೀಯ.
ಈಗ ಅದೇ ಸಂಪದ ಸಮುದಾಯವನ್ನು ಮತ್ತೆ ಮುಂದಕ್ಕೆ ಬೆಳೆಸುತ್ತ, ಅದನ್ನು ಮುಂದುವರೆಸುತ್ತ ಹೋಗುವ ಸವಾಲು ಅವರ ಮೇಲಿದೆ, ಆದರೆ ಅದನ್ನು ಯಶಸ್ವಿಯಾಗಿ ಆ ಕಾರ್ಯ ಅವರು ನೆರೆವೇರಿಸುತ್ತಾರೆ ಅನ್ನುವ ನಂಭಿಕೆ ನನ್ನದು . ಏಕೆಂದರೆ ಸಂಪದ ಸಮುದಾಯವನ್ನು ಮುಂದೆ ಮುಂದೆ ನಡೆಸಿಕೊಂಡು ಹೋಗಲು ಬೇಕಾದ ಧೀಶಕ್ತಿ, ಛಲ , ಹಾಗಾಗಿ ತಪಸ್ಸಿನ ಶಕ್ತಿ ಅವರಿಗೆ ಖಂಡೀತ ಇದೆ.
Rating
Comments
ನಾಡಿಗರ ಕುರಿತು ಒಳ್ಳೆಯ ಬರಹ
ನಾಡಿಗರ ಕುರಿತು ಒಳ್ಳೆಯ ಬರಹ ಬರೆದಿದ್ದೀರಿ ಸಾರ್, ಧನ್ಯವಾದ. ಸಂಪದದ ಹರಿಕಾರ, ಹರಿಪ್ರಸಾದ್ ನಾಡಿಗ್ ಕುರಿತು ಎಷ್ಟು ಬರೆದರೂ ಕಡಿಮೆ ಎನಿಸುತ್ತದೆ ಎಂದರೆ ಕ್ಲೀಷೆ ಆದೀತು. ಈ ರೀತಿಯ ಒಂದು ಅಂತರ್ಜಾಲ ತಾಣವನ್ನು ಅವರು ಹುಟ್ಟು ಹಾಕಿ, ಕನ್ನಡಿಗರಿಗೆ, ಕನ್ನಡದಲ್ಲಿ ಬರೆಯುವವರಿಗೆ ಮಾಡಿದ ಉಪಕಾರವನ್ನು ಪದಗಳಲ್ಲಿ ಹಿಡಿದಿಡುವುದು ನಿಜಕ್ಕೂ ಕಷ್ಟ. ಬರೆಯುವ ಉತ್ಸಾಹವಿರುವವರಿಗೆ ಬರೆಯಲು ಅನುಕೂಲವೊಂದೆಡೆಯಾದರೆ, ಕಂಪ್ಯೂಟರ್ ಮೂಲಕ ಅಂತರ್ಜಾಲದಲ್ಲಿ ಅಪಲೋಡ್ ಮಾಡುವ ವಿಶೇಷ ಅವಕಾಶ ಇನ್ನೊಂದೆಡೆ; ಆ ರೀತಿ ನಾವು ಬರೆದು ಪ್ರಕಟಿಸಿದ್ದನ್ನು,ಆ ಕ್ಷಣದಲ್ಲಿ ವಿಶ್ವದ ಯಾವುದೇ ಜಾಗದಲ್ಲಾದರೂ ಕುಳಿತು ಓದುವ ಅವಕಾಶ ಮತ್ತೊಂದೆಡೆ. ಹೊಸದಾಗಿ ಬರೆಯಲು ಪ್ರಾರಂಭಿಸಿದವರಿಗೆ ಪ್ರೋತ್ಸಾಹ ದೊರೆಯುವುದು ಒಂದೆಡೆಯಾದರೆ, ಈಗಾಗಲೇ ಸಾಕಷ್ಟು ಬರೆದು ಪಳಗಿದವರಿಗೆ ಈ ತಾಣದ ಮೂಲಕ ಹೊಸ ಪ್ರಯೋಗಗಳನ್ನು ಮಾಡುತ್ತಾ, ದೂರದ ಅದ್ಯಾವುದೋ ಊರಿನಲ್ಲಿ ಕನ್ನಡ ಬರಹಗಳನ್ನು ಓದುವವರನ್ನು ತಲುಪುವ ಸದವಕಾಶ ಇನ್ನೊಂದೆಡೆ. ಹೊಸದಾಗಿ ಕಾದಂಬರಿಯನ್ನು ಬರೆಯಬಯಸುವವರು, ಪ್ರತಿದಿನವೂ ನಾಲ್ಕಾರು ಪುಟಗಳನ್ನು ಬರೆಯುತ್ತಲೇ, ಸಂಪದದ ಮೂಲಕ ಕಾದಂಬರಿಯನ್ನು ಪೂರ್ತಿಮಾಡಲು ಅವಕಾಶವಿರುವ ಸಣ್ಣ ಉದಾಹರಣೆಯನ್ನೇ ತೆಗೆದುಕೊಂಡರೆ, ಸಂಪದವು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ, ನೀಡುತ್ತಿರುವ ಮಹತ್ (ಬೃಹತ್) ಕೊಡುಗೆಯ ಅರಿವಾದೀತು. ಮತ್ತೆ, ಈ ರೀತಿಯೇ ಇನ್ನೂ ತುಂಬಾ ಸಾಲುಗಳನ್ನು ಬರೆದು, ನಾಡಿಗರ ಕೊಡುಗೆಯನ್ನು ಗುರುತಿಸಬಹುದಾದದರೂ, ಈ ಅನಿಸಿಕೆಗೆ ಮಿತಿಯನ್ನು ಹಾಕಿಕೊಳ್ಳಬೇಕಾದ್ದರಿಂದ, . . . . ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು, ನಾಡಿಗರಿಗೆ ಮತ್ತು ಅವರ ಕುರಿತು ಬರೆದ ನಿಮಗೆ. -ಶಶಿಧರ ಹಾಲಾಡಿ.
In reply to ನಾಡಿಗರ ಕುರಿತು ಒಳ್ಳೆಯ ಬರಹ by sasi.hebbar
ವ್ಯಕ್ತಿ ಪರಿಚಯ : ಹರಿಪ್ರಸಾದ್
ವ್ಯಕ್ತಿ ಪರಿಚಯ : ಹರಿಪ್ರಸಾದ್ ನಾಡಿಗ್ >> ಶಶಿಧರ ಹಾಲಾಡಿಯವರೆ ನಿಮ್ಮ ಮಾತು ನಿಜ , ನಾಡಿಗರದು ದೊಡ್ಡ ಕೊಡುಗೆ ಅದನ್ನು ಸರಿಯಾಗಿ ಬಳಸಿಕ್ಕೊಳ್ಳುವುದು ಎಲ್ಲರ ಕರ್ತ್ಯವ್ಯ , ವಂದನೆಗಳು
ಗುರುಗಳೇ -ನಾಡಿಗರ ಬಗ್ಗೆ (ನಾಡಿಗ
ಗುರುಗಳೇ -ನಾಡಿಗರ ಬಗ್ಗೆ (ನಾಡಿಗ ದಂಪತಿಗಳು) ಅಷ್ಟಾಗಿ ಗೊತ್ತಿರಲಿಲ್ಲ..ಈಗ ನಿಮ್ಮ ಬರಹದ ಮೂಲಕ ಅವರ ಬಗ್ಗೆ ಹಲವು ವಿಷಯಗಳು ತಿಳಿಯಿತು..
ಸಂಪದ ಹಿಂದಿನ-ಮುಂದಿನ ಗುರಿ-ಕಾರ್ಯ ವ್ಯಾಪ್ತಿ-ಚಟುವಟಿಕೆ -ಇದರ ವಿಸ್ತಾರ -ಉಪಯುಕ್ತತೆ-ಸಂಪದ ಕಾರಣವಾಗಿ ಅವರಿಗೆ ಆದ ಖುಷಿ-ಪ್ರೋತ್ಸಾಹದ (ಸರಕಾರ ಮತ್ತು ಅಧಿಕಾರಿ ವರ್ಗ -ಜನ ಸಾಮಾನ್ಯರೂ)ಕೊರತೆ ,ಎಲ್ಲದರ ಅರಿವು ಆಯ್ತು..
ಅಸಂಖ್ಯಾತ ಓದುಗರು-ಬರಹಗಾರರು-ಇರುವ ಈ ಜಾಲತಾಣ ಹೇಗೆ ವಿಭಿನ್ನ -ವಿಶಿಸ್ಟ- ಆಪ್ತ ಉಪಯೋಗಕಾರಿ ಎಂದು ಎಲ್ಲರಿಗೂ ಗೊತ್ತು..
ಇಂತಿಪ್ಪ ಈ ಜಾಲತಾಣವನ್ನು ಏಕಾಂಗಿಯಾಗಿ ಅದರ ಭಾರ ಹೊರುವ ನಾಡಿಗ ದಂಪತಿಗಳು ಮತ್ತು ತಂತ್ರಜ್ಞ ತಂಡಕ್ಕೆ ಪ್ರೋತ್ಸಾಹದ ಅಗತ್ಯತೆ ಇದೆ..
ಮುಂದೊಮ್ಮೆ (ಶೀಘ್ರದಲ್ಲಿ..!!) ಸಂಪದ ಸಮ್ಮಿಲನ ನಡೆದಾಗ ಈ ಬಗ್ಗೆ ವಿಶೇಷ ಚರ್ಚೆ ನಡೆಸುವ ಅಗತ್ಯ ಇದೆ...
ನಾಡಿಗ ದಂಪತಿಗಳಿಗೆ -ತಂತ್ರಜ್ನರ ತಂಡಕ್ಕೆ ನಾವು ಅಭಾರಿ.
ಸಂಪದ ಬಳಗ ಹೆಚ್ಚಾಗಲಿ-ಸಂಪನ್ಮೂಲಗಳು ಹರಿದು ಬಂದು ಸಂಪದ್ಭರಿತವಾಗಲಿ ಎಂದು ಹಾರೈಸುವೆ...
ನಾಡಿಗ ದಂಪತಿಗಳ -ಸಂಪದ ಹಿಂದಿನ ಶಕ್ತಿ-ವ್ಯಕ್ತಿಗಳ ಬಗ್ಗೆ ಪರಿಚಯಾತ್ಮಕ ಚುಟುಕು ಬರಹಕ್ಕಾಗಿ ನಿಮಗೆ ನನ್ನಿ ...
ಶುಭವಾಗಲಿ..
\|
In reply to ಗುರುಗಳೇ -ನಾಡಿಗರ ಬಗ್ಗೆ (ನಾಡಿಗ by venkatb83
ವ್ಯಕ್ತಿ ಪರಿಚಯ : ತಪಸ್ಸು ಹಾಗು
ವ್ಯಕ್ತಿ ಪರಿಚಯ : ತಪಸ್ಸು ಹಾಗು ಹರಿಪ್ರಸಾದ್ ನಾಡಿಗ್ >> ಸಪ್ತಗಿರಿಯವರೆ , ನಿಮ್ಮ ಮಾತು ನಿಜ ಹಲವರು ನಾಡಿಗರನ್ನು ಎದುರಿಗೆ ನೋಡಿರುವದಿಲ್ಲ, ವಿಡಿಯೋ ಲಿಂಕ್ ಸಹ ಕೆಲವರು ನೋಡಿರುವದಿಲ್ಲ, ಹಾಗಾಗಿ ಈ ಪರಿಚಯದ ಲೇಖನ ಎಲ್ಲರಿಗು ಇಷ್ಟವಾಗಬಹುದೆಂದೆ ಬರೆದೆ.
ವಂದನೆಗಳು
ನಾಡಿಗರೇ, ಹ್ಯಾಟ್ಸ್ ಆಫ್!!
ನಾಡಿಗರೇ, ಹ್ಯಾಟ್ಸ್ ಆಫ್!! ನಿಜಕ್ಕೂ ಅನುಪಮ ಸಾಧನೆ ನಿಮ್ಮದು. ನಿಮಗೆ ಶುಭವಾಗಲಿ.
ಪರಿಚಯ ಲೇಖನ ಬರೆದ ಪಾರ್ಥರಿಗೆ ಅಭಿನಂದನೆಗಳು.
ಕುತೂಹಲ: ಹ್ಯಾಟ್ಸ್ ಆಫ್ ಅನ್ನು ಕನ್ನಡದಲ್ಲಿ ಟೋಪಿ ತೆಗೆಯುವೆ ಎಂದು ಬರೆದರೆ ಸರಿಯಾಗುವುದಿಲ್ಲ. ಸೂಕ್ತ ಪರ್ಯಾಯ ಪದವಿದೆಯೇ? ಆಂಗ್ಲರು ಸಾಮಾನ್ಯವಾಗಿ ಟೋಪಿ ಹಾಕುವವರು, ಅದಕ್ಕೇ ತೆಗೆಯುತ್ತಾರೆ. ಟೋಪಿ ಹಾಕದವರೇನು ಮಾಡಬೇಕು?
In reply to ನಾಡಿಗರೇ, ಹ್ಯಾಟ್ಸ್ ಆಫ್!! by kavinagaraj
ವ್ಯಕ್ತಿ ಪರಿಚಯ : ತಪಸ್ಸು ಹಾಗು
ವ್ಯಕ್ತಿ ಪರಿಚಯ : ತಪಸ್ಸು ಹಾಗು ಹರಿಪ್ರಸಾದ್ ನಾಡಿಗ್ >> ಕವಿ ನಾಗರಾಜರೆ ವಂದನೆಗಳು.
ಹ್ಯಾಟ್ಸ್ ಆಫ್ ನನ್ನ ಸಂಪ್ರದಾಯವಲ್ಲ ಹಾಗಾಗಿ ಸರಿಸಮಾನವಾದ ಪದವಿಲ್ಲ , ಇಂಗ್ಲೆಂಡಿನ ಅರಸರ ಎದುರಿಗೆ ಯಾರು ಟೋಪಿ ಧರಿಸಿ ನಮಸ್ಕರಿಸುವಂತಿಲ್ಲ ಅವರಿಗೆ ಅವಮಾನ ಮಾಡಿದಂತೆ, ಹಾಗಾಗಿ ಟೋಪಿ ತೆಗೆದು ಕೈಯಲ್ಲಿ ಹಿಡಿದು ತಲೆಬಗ್ಗಿಸುವ ಸಂಪ್ರದಾಯ ಅನ್ನಿಸುತ್ತೆ. ಕನ್ನಡದಲ್ಲಿ ಬೇಕಾದರೆ ’ನಾಡಿಗರಿಗೆ ಅಭಿನಂದನೆ’ ಎನ್ನಬಹುದು, ಪ್ರಣಾಮ ಎನ್ನಬಹುದೆನೊ ,
ಕ.ಕೊ. ಟೋಪಿ ಹಾಕದವರು ಅಂಗಡಿಗೆ ಹೋಗಿ ಟೋಪಿ ತಂದು ಧರಿಸಿ, ನಂತರ ತೆಗೆದು ನಮಸ್ಕರಿಸುವ ಧ್ರಾವಿಡ ಪ್ರಾಣಯಾಮ ಮಾಡಬಹುದು ಅನ್ನಿಸುತ್ತೆ, ಅಂದ ಹಾಗೆ ದ್ರಾವಿಡ ಪ್ರಾಣಯಾಮ ಎಂದರೆ ಎನು ?? :-)
In reply to ವ್ಯಕ್ತಿ ಪರಿಚಯ : ತಪಸ್ಸು ಹಾಗು by partha1059
:)) ಧನ್ಯವಾದ, ಪಾರ್ಥರೇ. ನಾಡಿಗ
:)) ಧನ್ಯವಾದ, ಪಾರ್ಥರೇ. ನಾಡಿಗ ದಂಪತಿ ಮತ್ತು ನಿರ್ವಹಣಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನನ್ನ ತಮಾಷೆಯ ಮೆಚ್ಚುಗೆಯೂ ಹ್ಯಾಟ್ಸಾಫಿನಲ್ಲಿತ್ತು!! ಸರಸ-ವಿನೋದಗಳೂ ಮುದ ನೀಡುತ್ತವೆ - ಅದು ದ್ರಾವಿಡ ಪ್ರಾಣಾಯಾಮವಾದರೂ ಆಗಲಿ, ಬೇರೇನಾದರೂ ಆಗಲಿ! ಈಗ ಆರ್ಯ-ದ್ರಾವಿಡ ಚರ್ಚೆ ಪ್ರಾರಂಭವಾಗಿದರಲಿ!! :))
In reply to :)) ಧನ್ಯವಾದ, ಪಾರ್ಥರೇ. ನಾಡಿಗ by kavinagaraj
ನಾಗರಾಜ ಸರ್ ಹೆದರಬೇಡಿ, ಯಾವ
ನಾಗರಾಜ ಸರ್ ಹೆದರಬೇಡಿ, ಯಾವ ಚರ್ಚೆಯು ಆಗುವದಿಲ್ಲ, ಹಾಗೆ ಪ್ರಾರಂಬವಾದರೆ ಮತ್ತೆ ನಾಡಿಗರಿಗೆ ತಲೆನೋವು ಟ್ರಾಫಿಕ್ ನದು,
ತಮ್ಮ ಮೆಚ್ಚುಗೆಗೆ ಹಾಗು ವಿನೋದ ಖಂಡೀತ ನಾಡಿಗ ದಂಪತಿಗಳಿಗೆ ಸೇರಿರುತ್ತದೆ
In reply to ನಾಡಿಗರೇ, ಹ್ಯಾಟ್ಸ್ ಆಫ್!! by kavinagaraj
>>ಟೋಪಿ ಹಾಕದವರೇನು ಮಾಡಬೇಕು?
>>ಟೋಪಿ ಹಾಕದವರೇನು ಮಾಡಬೇಕು?<<
ಬೇರೆಯವರ ಹತ್ತಿರ ಟೋಪಿ ಹಾಕಿಸಿಕೊ0ಡು, ನ0ತರ ಟೋಪಿ ತೆಗೆದು ವ0ದನೆ ಸಲ್ಲಿಸಿದರೆ ಆಯ್ತು.
ಧನ್ಯವಾದಗಳು ನಾಗರಾಜ್ ಸಾರ್,
ರಾಮೋ.
In reply to >>ಟೋಪಿ ಹಾಕದವರೇನು ಮಾಡಬೇಕು? by RAMAMOHANA
ಟೋಪಿ ಹಾಕಿಕೊಂಡು ನಂತರ ತೆಗೆದು
ಟೋಪಿ ಹಾಕಿಕೊಂಡು ನಂತರ ತೆಗೆದು ಕೈಯಲ್ಲಿ ಹಿಡಿದು ನಡುಬಗ್ಗಿಸಿ ವಂದಿಸಬೇಕು
In reply to ನಾಡಿಗರೇ, ಹ್ಯಾಟ್ಸ್ ಆಫ್!! by kavinagaraj
ಕವಿಯವರೇ
ಕವಿಯವರೇ
ಹೇಳಲೇ ಬೇಕೆಂದರೆ
ತೆರೆದ ಟೋಪಿಯ ನಮನ ಹೇಳಿ
ಒಳ್ಳೆಯ ಲೇಖನ ನಿಜವಾಗಲು
ಒಳ್ಳೆಯ ಲೇಖನ ನಿಜವಾಗಲು ಹರಿಪ್ರಸಾದ್ ನಾಡಿಗರದು ತಪಸ್ಸೆ ಈ ತಪಸ್ಸಿಗೆ " ಸಂಪದ " ದೇವರು ಅವರಿಗೆ ನೀಡಿರುವ "ವರ" ಈ "ವರ" ವನ್ನು ಎಲ್ಲರಿಗೂ ಹಂಚುತ್ತಿರುವ ಅವರಿಗೆ ಹೃದಯ ಪೂರ್ವಕ ವಂದನೆಗಳು
....ಸತೀಶ್
In reply to ಒಳ್ಳೆಯ ಲೇಖನ ನಿಜವಾಗಲು by sathishnasa
ನಿಜ ಅವರು ತಮಗೆ ಸಿಕ್ಕಿದ ವರವನ್ನು
ನಿಜ ಅವರು ತಮಗೆ ಸಿಕ್ಕಿದ ವರವನ್ನು ಹಂಚುತ್ತಿರುವರು
"ತುಂಬಿಕೊಳ್ಳುತ್ತ, 2013 ನೇ
"ತುಂಬಿಕೊಳ್ಳುತ್ತ, 2013 ನೇ ವರ್ಷಕ್ಕೆ ಕಾಲಿಡುತ್ತಿದೆ"
ಪಾರ್ಥರೇ ನಿಮ್ಮ ಲೇಖನ ಸಕಾಲಿಕ, ಸತ್ಯ
ಆದರೆ "ವರ್ಷ" ಅಲ್ಲ " ಇಸವಿ " ಆಗಬೇಕಿತ್ತಾ ಅಂತ.
In reply to "ತುಂಬಿಕೊಳ್ಳುತ್ತ, 2013 ನೇ by gopinatha
ಗೋಪಿನಾಥ ಸರ್ ಇಸವಿ ಎಂದು
ಗೋಪಿನಾಥ ಸರ್ ಇಸವಿ ಎಂದು ಬಳಸಬಹುದು ! ಆದರೆ ೨೦೧೩ ನೆ ವರ್ಷವೆಂದು ಬಳಸಿದರು ತಪ್ಪೇನು ಇಲ್ಲ ಅನ್ನಿಸುತ್ತೆ , ಹಲವು ಕಡೆ ಆ ಪ್ರಯೋಗ ನೋಡಿರುವೆ ! ನಿಮ್ಮ ಮೆಚ್ಚುಗೆಗೆ ವಂದನೆಗಳು
ನಿಜಕ್ಕೂ ಹರಿಪ್ರಸಾದ್ ನಾಡಿಗ್
ನಿಜಕ್ಕೂ ಹರಿಪ್ರಸಾದ್ ನಾಡಿಗ್ ಒಬ್ಬ ತಪಸ್ವಿಯೇ. ಅತ್ಯುತ್ತಮ ಲೇಖನವಿದು. ಯಾವಾಗಲೋ ಹರಿಪ್ರಸಾದ್ ನಾಡಿಗ್ ಅವರ ಅದ್ಭುತ ಕೆಲಸವನ್ನು ಗುರುತಿಸುವ ಕೆಲಸವಾಗಬೇಕಿತ್ತು. ಆದರೆ ಸದ್ದಿಲ್ಲದೆ ತಮ್ಮಷ್ಟಕ್ಕೆ ತಾವು ಕ್ರಿಯಾಶೀಲವಾಗಿ ತೊಡಗಿಕೊಂಡಿರುವ ನಾಡಿಗ್ ಇವತ್ತಿಗೂ ಎಲೆಮರೆಯ ಕಾಯಿಯಾಗೇ ಉಳಿದಿದ್ದಾರೆ. ವಿಕೀಪೀಡಿಯಾದ ಸಂಬಂಧದಲ್ಲಿ, ಪರಿಸರದ ಸಂಬಂಧದಲ್ಲಿ, ಅಂತರ್ಜಾಲ ತಂತ್ರಜ್ಞಾನದ ವಿಚಾರವಾಗಿ ಮತ್ತು ಕನ್ನಡದ ಸಂದರ್ಭದಲ್ಲಿ ನಾಡಿಗ್ ತುಂಬ ಕೆಲಸ ಮಾಡಿದ್ದಾರೆ. ಪ್ರಚಾರದಿಂದ, ಗಿಮ್ಮಿಕ್ಕುಗಳಿಂದ ಮತ್ತು ದೊಡ್ಡಸ್ತಿಕೆಯಿಂದ ದೂರವುಳಿದು ಸ್ನೇಹಶೀಲರೂ ವಿನಯವಂತರೂ ಆಗಿ ದುಡಿದಿದ್ದಾರೆ. ಅವರ ಬಗ್ಗೆ ನನಗೆ ಅತೀವ ಅಭಿಮಾನ. ಚಿಕ್ಕವಯಸ್ಸಿನಲ್ಲೇ ಪ್ರಬುದ್ಧವಾಗಿ ಯೋಚಿಸಿ ಕ್ರಿಯಾಶೀಲತೆಯಿಂದ ಸಾಧನೆಯ ಹಾದಿ ಹಿಡಿದ ಅಪರೂಪದ ವ್ಯಕ್ತಿ ಹರಿಪ್ರಸಾದ್ ನಾಡಿಗ್. ಅವರಿಗೂ, ಈ ಲೇಖನ ಬರೆದವರಿಗೂ ಅಭಿನಂದನೆಗಳು.