ಶಂಖದ ತೀರ್ಥ ಸ್ಲಮ್ ಡಾಗು ಮತ್ತು ಮೆಕಾಲೆಯ ಮಿನಿಟ್ಟು !!!

ಶಂಖದ ತೀರ್ಥ ಸ್ಲಮ್ ಡಾಗು ಮತ್ತು ಮೆಕಾಲೆಯ ಮಿನಿಟ್ಟು !!!

ಕೆಲಸಕ್ಕೆ ಬಾರದ ಸಿನಿಮಾ ಬಗ್ಗೆ ಬರೆಯುತ್ತಾ ಸಮಯ ಹಾಳು ಮಾಡಿಕೊಳ್ಳುವುದು ಬೇಡವೆಂದುಕೊಂಡಿದ್ದೆ. ಆದರೆ ಕೈ ತುರಿಕೆ ತಡೆಯಲಾಗದೇ ಬರೆಯುತ್ತಿದ್ದೇನೆ. ಸ್ಲಂ ಡಾಗ್ ನಲ್ಲಿ ಒಂದು ದೃಶ್ಯದ ಬಗ್ಗೆ ನನಗೆ ಅಸಹನೆಯಿದೆ. ನಾಯಕ ಜಮಾಲ್ ಅಮೆರಿಕನ್ನರನ್ನು ಧೊಬಿ ಘಾಟ್ ನೋಡಲು ಕರೆದುಕೊಂಡು ಹೋಗಿರುತ್ತಾನೆ. ಧೊಬಿಘಾಟ್ ನೋಡಿಕೊಂಡು ವಾಪಸು ಬರುವಷ್ಟರಲ್ಲಿ ಅವರ ವಾಹನದ ಬಿಡಿಭಾಗಗಳನ್ನು ಕದ್ದೊಯ್ದಿರುತ್ತಾರೆ. ಜಮಾಲ್ ಹೇಳುತ್ತಾನೆ "ನೀವು ರಿಯಲ್ ಇಂಡಿಯಾ ನೋಡಬೆಕೆಂದಿರಲ್ಲವೇ ? ಇದೇ ರಿಯಲ್ ಇಂಡಿಯಾ!". ಆಗ ಪ್ರವಾಸಿಗರು ಅವನಿಗೆ ಡಾಲರ್ ನೋಟನ್ನು ಕೊಟ್ಟು "ಇದೇ ರಿಯಲ್ ಅಮೇರಿಕಾ" ಎನ್ನುತ್ತಾರೆ. ಈ ದೃಶ್ಯ ತೋರಿಸಿದರೆ ಏನೂ ಅನ್ನಿಸುತ್ತಿರಲಿಲ್ಲವೇನೊ; ಆದರೆ ಕೊನೆಗೆ ಇದೇ ರಿಯಲ್ ಇಂಡಿಯಾ ಎಂಬ ಶರಾ ಏಕೆ ಬೇಕಿತ್ತು? ಇದು ಕರ್ತೃ ಬರೆದಿದ್ದೊ ಅಥವಾ ಬಾಯ್ಲ್ ಮಹಾಶಯನ ವಿಕೃತಿಯೋ ತಿಳಿಯದು. ಇದನ್ನು ಮೂಲ ಕರ್ತೃವೇ ಬರೆದಿದ್ದರೆ ಅದು ಅಕ್ಷಮ್ಯ! ಬಾಯ್ಲ ಸೇರಿಸಿದ್ದರೆ ಅಮೇರಿಕನ್ನರ ವಿಕೃತ ಮನಸ್ಸಿನ ಉದಾಹರಣೆ ಎನ್ನಬಹುದು.

ಸ್ಲಂ ಡಾಗ್ ಗಿಂತ ಹೆಚ್ಚಿನ ರಿಯಾಲಿಟಿಯನ್ನು ಮಧುರ್ ಭಂಡಾರ್‌ಕರ್ ಮತ್ತು ತಮಿಳಿನ ಬಾಲಾ ತಮ್ಮ ಚಿತ್ರಗಳಲ್ಲಿ ತೋರಿಸಿದ್ದಾರೆ. ಆದರೆ ಅವಕ್ಕೆ ಪ್ರಶಸ್ತಿ ಬರುವುದಿಲ್ಲ ಏಕೆಂದರೆ ಅವು ಹಾಲಿವುಡ್ ಚಿತ್ರಗಳಲ್ಲವಲ್ಲ! ಇವರಾದರೂ ಹಸಿ ಹಸಿ ಯಾಗಿ ರಿಯಾಲಿಟಿಗಳನ್ನು ಹೇಳುತ್ತಾರೆಯೇ ಹೊರತು ನಿಜವಾದ ಭಾರತವೆಂದರೆ ಇದೇ ಎಂದು ಘೋಷಣೆ ಮಾಡುವುದಿಲ್ಲ. ಕೆಲವು ಕೆಡಕುಗಳು ಸಮಾಜದ ಭಾಗವಾಗಿರುತ್ತವೆ. ಅದರೆ ಅವೇ ನಿಜವಾದ ಸಮಾಜ ಎನ್ನಲಾಗುತ್ತದೆಯೆ?

ನಮ್ಮ ಮಾಧ್ಯಮಗಳಿಗೆ ಎಥಿಕ್ಸ್ ಇಲ್ಲ ಎಂಬುದು ಗೊತ್ತಿತ್ತು. ಆದರೆ ಅವು ಮೂರ್ಖತನಕ್ಕೆ ಮತ್ತೊಂದು ಹೆಸರು ಎಂಬುದು ಈ ವಿಷಯದಲ್ಲಿ ಬೆಳಕಿಗೆ ಬಂತು. ಬಹುತೇಕ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲಿ, ಟಿವಿ ವಾರ್ತೆಗಳಲ್ಲಿ "ಭಾರತಿಯ ಚಿತ್ರಕ್ಕೆ ಆಸ್ಕರ್ ಬಂತು" ಎಂದು ಘೊಷಿಸಿದವು. ಸ್ಲಮ್ ಡಾಗ್ ಹಾಲಿವುಡ್ ಚಿತ್ರ. ಭಾರತದ ಬಗ್ಗೆ ಚಿತ್ರಿಸಿದ್ದು! ಭಾರತಿಯ ಚಿತ್ರವಲ್ಲ. ಕೆಲ ಭಾರತಿಯ ನಟರು ತಂತ್ರಜ್ಞರು ಕೆಲಸ ಮಾಡಿದ್ದಾರೆ ಅಷ್ಟೆ! ಅತ್ಯುತ್ತಮ ವಿದೇಶಿ ಚಿತ್ರ ಎಂಬ ವಿಭಾಗದಲ್ಲಿ ಆಸ್ಕರ್ ಬಂದಿದ್ದರೆ ಇದನ್ನು ಭಾರತೀಯ ಚಿತ್ರ ಎಂದು ಒಪ್ಪಬಹುದಿತ್ತೇನೋ! ನಮ್ಮ ರೆಹಮಾನ್, ಪೂಕುಟ್ಟಿ ಹಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ಇದು ಸಂತೋಷದ ವಿಚಾರ. "ಜೈ ಹೋ" ರೆಹಮಾನ್‍ನ ಬೆಸ್ಟ್ ಅಲ್ಲ. ಇದಕ್ಕಿಂತಲೂ ಅತ್ಯುತ್ತಮ ಸಂಗೀತ ರೆಹಮಾನ್ ಬತ್ತಳಿಕೆಯಿಂದ ಬಂದಿವೆ. ಇದು ಹಾಲಿವುಡ್ ಚಿತ್ರವಾದ್ದರಿಂದ ರೆಹಮಾನ್ ಪ್ರಶಸ್ತಿಗೆ ಭಾಜನನಾದ. ರೆಹಮಾನ್ ಬಗ್ಗೆ ಸಂತೋಷ ಪಡಬಹುದು.

ಪತ್ರಕರ್ತ (??) ಕರಣ್ ಥಾಪರ್ ಭಾರತಿಯರಿಗೆ ಚಡ್ಡಿ ತಯಾರಿಸುವ ಯೋಗ್ಯತೆಯೂ ಇಲ್ಲ ಎಂದು ಜರಿದು ವಿದೇಶದಿಂದ ಖರೀದಿಸಿ ಅಂಡರ್‌ವೇರ್ ತೊಡುತ್ತಾನಂತೆ. ದೇಶದ ಬಗ್ಗೆ ಇಂತಹ ಕಾಮೆಂಟುಗಳನ್ನು ಕೇಳಿದರೆ ನನ್ನ ಮೈ ಉರಿದು ಹೋಗುತ್ತದೆ. "ರಿಯಲ್ ಇಂಡಿಯಾ" ಸಂಭಾಷಣೆಯನ್ನು ಕೇಳಿದಾಗಲೂ ನಂಗೆ ಆಗಿದ್ದು ಅದೇ. ಇವರಿಗೇನು ಯೋಗ್ಯತೆ ಇದೆ ದೇಶದ ಬಗ್ಗೆ ಹೇಳಲಿಕ್ಕೆ ? ಇವರೇನು ಕೊಡುಗೆ ನೀಡಿದ್ದಾರೆ ದೇಶಕ್ಕೆ ಅಂತ ಈ ಮಾತುಗಳನ್ನಾಡಬೇಕು ?

ಇದೇ ರೀತಿಯ ಕೀಳರಿಮೆಯನ್ನು ಹೊಂದಿದ್ದ ಡಾಕ್ಟರೊಬ್ಬರು ನನ್ನೆದುರಿಗೆ ವಟಗುಟ್ಟುತ್ತಿದ್ದರು " ನಮ್ಮ ದೇಶಕ್ಕೆ ಬ್ರಿಟಿಷರು ಬಂದಿದ್ದಕ್ಕೆ ನಾವು ಉದ್ಧಾರ ಆದ್ವಿ. ಮೆಕಾಲೆ ಹೊಸ ಶಿಕ್ಷಣ ಪದ್ಧತಿ ತಂದದ್ದರಿಂದ ನಾವು ಮುಂದೆ ಬರಲು ಸಾಧ್ಯವಾಯಿತು. ಇಲ್ಲಾ ಅಂದರೆ ವಿಜ್ಞಾನ ತಂತ್ರಜ್ಞಾನದಲ್ಲಿ ನಾವು ಹಿಂದೆ ಉಳಿದು ಬಿಡುತ್ತಿದ್ವಿ. ಮೆಕಾಲೆ ತನ್ನ ಮಿನಿಟ್ಸಿನಲ್ಲಿ ಭಾರತವನ್ನು ಶಿಕ್ಷಣದ ಮೂಲಕ ಉದ್ಧಾರ ಮಾಡುವುದಾಗಿ ಹೇಳುತ್ತಾನೆ; ಮತ್ತು ಮುಂದೆ ಅದನ್ನು ಸಾಧಿಸುತ್ತಾನೆ!". ಎಂದಿನಂತೆ ನನಗೆ ನಖಶಿಖಾಂತ ಕೋಪ ಬಂತು. ಮರುದಿನವೇ ಅವರಿಗೆ ಇತಿಹಾಸ ತಜ್ಞ ಧರ್ಮಪಾಲ್ ರ ""the beautiful tree" ಮತ್ತು " Indian Science and Technology" ಎಂಬ ಎರಡು ಪುಸ್ತಕಗಳನ್ನು ಮೇಲ್ ಮಾಡಿದೆ. ಎರಡೂ ಪುಸ್ತಕಗಳಲ್ಲಿ ತಲಾ ಸುಮಾರು ಐನೂರು ಪುಟಗಳಷ್ಟಿರುವ ಬ್ರಿಟಿಷ್ ಮತ್ತು ಭಾರತೀಯ ದಾಖಲೆಗಳಿವೆ. ದಾಖಲೆಗಳನ್ನು ಯಥಾವತ್ತಾಗಿ ಹೊಸ ಇಂಗ್ಲೀಷಿಗೆ ಇಳಿಸಿದ್ದಾರೆ ಧರ್ಮಪಾಲ್ ಜಿ! ಎರಡು ವರ್ಷದ ಹಿಂದೆ ತಮ್ಮ ೮೪ ನೆಯ ವಯಸ್ಸಿನಲ್ಲಿ ಧರ್ಮಪಾಲರು ಸ್ವರ್ಗವಾಸಿಗಳಾದರು. ಗಾಂಧಿಜಿಯ ಸೇವಾಗ್ರಾಮ ಆಶ್ರಮದಲ್ಲಿ ಕೊನೆಯವರೆಗೂ ಇವರ ವಾಸ. ದಯವಿಟ್ಟು ಇವೆರಡೂ ಪುಸ್ತಕಗಳನ್ನು ಓದಿ. ಸುಮ್ಮನೆ ಮನಮೋಹನ್ ಸಿಂಗ್ ಥರ ಮಾತಾಡಬೇಡಿ ಎಂದು ಸಲ್ಪ ಖಾರವಾಗಿಯೇ ಮೇಲ್ ಬರೆದಿದ್ದೆ. ಅಂದಹಾಗೆ " the beautiful tree " ನಮ್ಮ ಹಳೆಯ ಶಿಕ್ಷಣ ಪದ್ಧತಿಯ ಬಗ್ಗೆ ಇರುವ ದಾಖಲೆಗಳ ಸಮುಚ್ಛಯ.

ಯಾವುದೊ ಚಾಟ್‍ನಲ್ಲಿ ಉಗಾಂಡದ ವಿದ್ಯಾರ್ಥಿಯೊಬ್ಬ ಸಿಕ್ಕಿದ್ದ. ನಾನಾಗ ಇನ್ನೂ ಮೊದಲನೆಯ ವರ್ಷದ ಡಿಗ್ರೀ ಓದುತ್ತಿದ್ದೆ. ಆ ಹುಡುಗ "ನನ್ನ ದೇಶ ಚೆನ್ನಾಗಿಲ್ಲ ಐ ಹೇಟ್ ಮೈ ಕಂಟ್ರಿ" ಎಂದ. ನಾನು ಯಾಕೆ ಆ ಸಮಯದಲ್ಲಿ ಹಾಗೆ ಹೇಳಿದೆನೊ ಇಂತಹ ವಾಕ್ಯಗಳು ಹೇಗೆ ಬಂದವೋ ಗೊತ್ತಿಲ್ಲ. "ನೀನು ನಿನ್ನ ದೇಶವನ್ನು ಹೇಗಿದ್ದರೂ ಪ್ರೀತಿಸಬೇಕು. ಅದು ನಿನ್ನ ಕರ್ತವ್ಯ. ನೀನು ಯಾರನ್ನು ಪ್ರೀತಿಸುತ್ತೀಯೊ ಅವರ ಉನ್ನತಿಗೆ ಹಾರೈಸುತ್ತೀ. ಅವರಿಗೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತೀ. ಹಾಗೆಯೇ ನೀನು ನಿನ್ನ ದೇಶವನ್ನು ಪ್ರೀತಿಸಿದರೆ ಅದನ್ನು ಸುಂದರವಾಗಿ ಮಾಡಲು ಪ್ರಯತ್ನಿಸುತ್ತೀ. ನಿನ್ನ ದೇಶ ಸುಂದರವಾದಷ್ಟೂ ಅದರ ಬಗ್ಗೆ ನಿನ್ನ ಪ್ರೀತಿ ವರ್ಧಿಸುತ್ತದೆ. ಮತ್ತೆ ಇನ್ನೂ ಸುಂದರ ಮಾಡಲು ಪ್ರಯತ್ನಿಸುತ್ತೀ. ಒಂದು ಧನಾತ್ಮಕ ಒಳಸುಳಿಗೆ ಒಳಗಾಗಿ ನಿನ್ನ ದೇಶ ಸುಂದರವಾಗುತ್ತಾ ಹೋಗುತ್ತದೆ." !!!

ಯಾವನೋ ಬೇಕೂಫ಼ ಬಂದು "ನಿಮ್ಮ ದೇಶ ಹಿಂಗಿದೆ" ಎಂದು ನಮಗೆ ತೋರಿಸುವ ಅಗತ್ಯವಿಲ್ಲ. ಯಾರು ಏನೆ ಅಂದರೂ "ಮೇರಾ ಭಾರತ್ ಮಹಾನ್"!!! ಕೆಲವು ತೊಂದರೆಗಳಿಂದ ಇನ್ನೂ ಮಹಾನ್ ಆಗಿಲ್ಲ ಎಂದರೆ ಮಹಾನ್ ಮಾಡೋಣ!!!

Rating
No votes yet

Comments