ಶಂಖದ ಹುಳು
SHANKADA HULU |
ಮಲೆನಾಡಿನ ಮಳೆಗಾಲದಲ್ಲಿ ಹುಟ್ಟಿ ಸಾಯುವ, ನಾನಾ ತರಹದ ಹುಳು ಹುಪ್ಪಡಿಗಳನ್ನು ಗಿಡ ಬಳ್ಳಿಗಳನ್ನು ನೋಡಬಹುದು. ಕ್ರಿಕೆಟ್ ಟಿ ವಿ ಗಳಿಲ್ಲದ ಬಾಲ್ಯದ ದಿನಗಳಲ್ಲಿ ಇವುಗಳೇ ನಮಗ ಸಮಯ ಕೊಲ್ಲುವ ಸಾಹಸ ಮಾಡುವ ಅವಕಾಶಗಳನ್ನು ಒದಗಿಸುತ್ತಿತ್ತು.
ಈಗ ನೆನಪಿಗೆ ಬಂದದ್ದು ಚೊರಾಟೆ. ಕ್ಷಮಿಸಿ ಇದು ಚಿರೋಟಿಯಲ್ಲ!- ಚಕ್ಕುಲಿ!! ಇದಕ್ಕೆ ಪಠ್ಯ ಪುಸ್ಥಕದಲ್ಲಿ ಶತಪದಿ ಎಂದು ಕರೆಯುತ್ತಾರೆ. ನಮಗೆ ಅದು ಚಕ್ಕುಲಿ ಅಥವಾ ಚೊರಾಟೆ ಆಗಿತ್ತು. ಮಲೆನಾಡಿನ ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಛತ್ರಿ ಇಲ್ಲದೇ ಹೊರಗೆ ಬೀಳುವವ ಮಹಾಮೂರ್ಖ. ಹೀಗಾಗಿ ಮಳೆಗಾಲದ ಆ ದಿನಗಳಲ್ಲಿ ಛತ್ರಿ ಸದಾ ನಂಮ್ಮ ಸಂಗಾತಿ. ಮಳೆ ಬರದಿದ್ದಾಗ್ಯೂ ಕೊಡೆ ಬಿಡಿಸಲು ನಾವು ಮಹಾರಾಜರೇ? ಮಳೆ ಬೀಳದಿರುವ ಸಮಯದಲ್ಲಿ ಛತ್ರಿ ಊರು ಗೋಲಾಗಿರುತ್ತಿತ್ತು. ಅದರಲ್ಲಿ ನಾನಾ ಚೇಷ್ಟೆಗಳನ್ನೂ ಮಾಡುತ್ತಿದ್ದೆವು. ಅವುಗಳಲ್ಲಿ ಮುಖ್ಯವಾದವು ಎಂದರೆ ಛತ್ರಿ ತುದಿಯಿಂದ ಶತಪದಿಯನ್ನು ಮುಟ್ಟುವುದು. ಹಾಗೆ ಅಥವಾ ಹೇಗೂ ಮುಟ್ಟಿದರೂ ಅದು ಚಕ್ಕುಲಿಯಂತೆ ಸುರುಳಿಸುತ್ತಿಕೊಳ್ಳುತ್ತಿತ್ತು. ನಮಗೆ ದಾರಿಯಲ್ಲಿ ಇದೇ ಕೆಲಸ. ಅದೇ ಆಟ. ಅದೇ ಮಜ. ನಾನು ಇಷ್ಟು ಚೆಕ್ಕಲಿ ಸುತ್ತಿದೆ, ನಾನು ಇಷ್ಟು ಚೆಕ್ಕುಲು ಸುತ್ತಿದೆ, ಎಂದು ಜಂಬಕೊಚ್ಚಿಕೊಳ್ಳುತ್ತಿದ್ದೆವು (ಕ್ರಿಕೆಟ್ ನಲ್ಲಿ ಸ್ಕೋರ್ ಹೇಳಿದರೀತಿ) ಚೊರಾಟೆಗೆ ನಾವು ಪೆನ್ನು ಎಂದೂ ಹೇಳುತ್ತಿದ್ದೆವು. ಏಕೆಂದರೆ ಅದು ನಾವು ಅಂದು ಉಪಯೋಗಿಸುವ ಇಂಕ ಪೆನ್ ಮಾದರಿಯಲ್ಲೇ ಇರುತ್ತಿತ್ತು. ಎಷ್ಟೋ ಸಾರೆ ಚೊರಾಟೆಯನ್ನೇ ಪೆನ್ನು ಎಂದು ಎತ್ತಿಕೊಂಡದ್ದೂ ಇದೆ! ನಿಜವಾದ ಪೆನ್ನನ್ನು ಚೊರಾಟೆ ಎಂದು ನಿರ್ಲಕ್ಷಿಸಿದ್ದೂ ಇದೆ!!
ಅದು ತತ್ ಕ್ಷಣಕ್ಕೆ ಬಿಡಿಸಿಕೊಳ್ಳುತ್ತಿರಲಿಲ್ಲ. ಅದನ್ನು ಅದರಷ್ಠಕ್ಕೆ ಬಿಟ್ಟು ನಾವು ನಮ್ಮದಾರಿ ಹಿಡಿಯುತ್ತಿದ್ದೆವು. ಬೇರೇನೂ ಕೆಲಸವಿಲ್ಲದ ಸಮಯದಲ್ಲಿ ಅದರ ಪಕ್ಕದಲ್ಲೇ ಕುಳಿತು ಅದು ಬಿಡಿಸಿಕೊಳ್ಳುವ ಪರಿಯನ್ನು ನೋಡುತ್ತಿದ್ದವು. ಹೊರಡುವಾಗ ಹಾಗೇ ಹೋಗುತ್ತಿರಲಿಲ್ಲ. ಕಡ್ಡಿ ಆಡಿಸಿ ಅದು ಮತ್ತೆ ಸುರುಳಿ ಸುತ್ತಿಕೊಳ್ಳುವಂತೆ ಮಾಡುತ್ತಿದ್ದೆವು.
ತುಂಗಾ ನದಿ ತುಂಬಿ ಹರಿಯುತ್ತಿದೆ. ಅದನ್ನು ಕಣ್ಣಿನಲ್ಲಿ ತುಂಬಿಕೊಳ್ಳಲು ಮೊನ್ನೆ ಹೋಗಿದ್ದೆ. ನದಿದಂಡೆಯ ಗೋಡೆಗಳ ಮೇಲೆ ಜಾಗ ಇಲ್ಲದಷ್ಟು ಶಂಕದ ಹುಳುಗಳು ಮಳೆಗಾಲದ ದಿನಗಳಲ್ಲಿ ಶಿವಮೊಗ್ಗೆಯಲ್ಲಿ ಕಂಡುಬರುತ್ತಿದೆ. ಸುಮಾರು ಮುಷ್ಟಿಗಾತ್ರದ ಹತ್ತು ಹನ್ನೆರಡು ಸೆಂಟೀ ಮೀಟರುಗಳಿಗೂ ದೊಡ್ಡದಾದ ಇಂತಹ ಹುಳವನ್ನು ನಾನು ಎಲ್ಲಿಯೂ ನೋಡಿಲ್ಲ! ಮಳೆಗಾಲದ ನಂತರ ಇಲ್ಲಿಯೂ ಅವುಗಳನ್ನು ನೋಡಿಲ್ಲ!! ಮಳೆಗಾಲದಲ್ಲಿ ಹುಟ್ಟಿ ಸಾಯುವ ಇವುಗಳು ಯಾವುದನು ಆಹಾರ ಮಾಡಿಕೊಳ್ಳುತ್ತದೆಯೋ ಯಾವುದಕ್ಕೆ ಆಹಾರವಾಗುತ್ತದೆಯೋ ಗೊತ್ತಿಲ್ಲ. ನೈಸರ್ಗಿಕ ಚಕ್ರದಲ್ಲಿ ಇದೂ ಒಂದು ಚಿಕ್ಕ ಕೊಂಡಿ.
ಗೋಡೆಯನ್ನು ಕಚ್ಚಿ ಹಿಡಿದ ಒಂದು ಹುಳವನ್ನು ದೂಡಿದೆ. ಸರಿಯಲಿಲ್ಲ. ಸ್ವಲ್ಪ ಶಕ್ತಿ ಹಾಕಿದೆ. ಉರುಳಿ ಬಿತ್ತು. ಸಮಯ ಸಾಕಷ್ಟು ಇತ್ತು. ನೆಲದ ಮೇಲಿರುವ ಇನ್ನೊಂದು ಹುಳವನ್ನು ಕೆಡವಿದೆ. ನಿಶ್ಚೇಷ್ಟಿತವಾಗಿ ಬಿದ್ದದ್ದನ್ನು ನೋಡಿ ಅದು ಸತ್ತಿರಬಹುದೆಂದುಕೊಂಡೆ. ಕೆಲವು ನಿಮಿಷಗಳ ನಂತರ ಶಂಖವು ಸ್ವಲ್ಪ ಅಲ್ಲಾಡಿತು. ಗಾಳಿಗೆ ಇರಬಹುದೆಂದುಕೊಂಡೆ. ಮುಂದೆ ಕೆಲವು ನಿಮಿಷಗಳಲ್ಲಿ ಶಂಖದಿಂದ ಏನೋ ಹೊರಗೆ ಬರುವುತ್ತಿರುವುದು ಕಾಣಿಸಿತು. ಶೂರ್ಪನಿಖಿಯ ತುಟಿಯಂತಃ? ಅಸಹ್ಯ ಹುಟ್ಟಿಸುವಂತಃ ಒಂದು ಭಾಗವು ಹೊರಬರತೊಡಗಿತು.
ಜೆ ಸಿ ಬಿ, ಟಿಪ್ಪರ್, ಕ್ರೇನ್ ಇತ್ಯಾದಿಗಳು ಕೆಲಸ ಮಾಡುವ ಪರಿಯನ್ನು ನೋಡಿರಬಹುದು. ಜೆ ಸಿ ಬಿಯ ಕೈಗಳೇ ಅದರ ಕಾಲುಗಳೂ ಆಗಿ ಅದು ಎದ್ದು ನಿಂತು ಜಾಗ ಬದಲಿಸುತ್ತದೆ. ಟಿಪ್ಪರ್ ನಲ್ಲಿ ಟೆಲಿಸ್ಕೋಪ್ ಮಾದರಿಯ ದೂಡು ಕೊಳವೆಯು ಒಳ ಹೊರಗೆ ಸರಿಯುವುದರ ಮೂಲಕ ಟಿಪ್ಪರಿನಲ್ಲಿರುವ ಜೆಲ್ಲಿ ಮರಳನ್ನು ಕೆಳಗೆ ಸುರಿಯುತ್ತದೆ. ಈ ಶಂಖು ಹುಳದ ಕಾರ್ಯಾಚರಣೆಯನ್ನು ಇವುಗಳಿಗೆ ಹೋಲಿಸಬಹುದು.
ಶಂಖದಿಂದ ಹೊರ ಬಂದ ಭಾಗವು ತಲೆಯೂ ಸೇರಿ ಹುಳದ ಹೊಟ್ಟೆ ಭಾಗವಾಗಿತ್ತು. ಅದು ದೊಡ್ಡದಾದರೂ ನೆಲವನ್ನು ಮುಟ್ಟುತ್ತಿರಲಿಲ್ಲ. ಏಕೆಂದರೆ ಅದು ಭೂಮಿಗೆ ಅಡ್ಡವಾಗಿ ಉರುಳಿ ಬಿದ್ದಿತ್ತು. ಕೃಮೇಣ ಹೊರಬಂದ ಶರೀರದ ತುದಿಯ ಅರ್ಧಭಾಗವು ಮಾತ್ರ ನೆಲದೆಡೆಗೆ ಬಾಗತೊಡಗಿತು. ಕೃಮೇಣ ನೆಲವನ್ನು ಕಚ್ಚಿಹಿಡಿಯಿತು. ವ್ಯಾಕ್ಯೂಂ ಗೊಳಿಸಿದ ರಬ್ಬರ ಮುಚ್ಚಳ ಗಾಜನ್ನು ಹಿಡಿದುಕೊಳ್ಳುವಂತೆ. ಗೋಡೆಯಮೇಲೆ ಹಲ್ಲಿಯು ತನ್ನ ಕಾಲನ್ನು ಊರುವಂತೆ, ಶಂಖದ ಹುಳು ನೆಲವನ್ನು ಕಚ್ಚಿ ಹಿಡಿಯಿತು. ಅನಂತರ ಹುಳು ಶಂಖವನ್ನು ತನ್ನೆಡೆಗೆ ಸೆಳೆದು ಕೊಳ್ಳತೊಡಗಿತು ಎನ್ನುವುದಕ್ಕಿಂತ, ಉಬ್ಬಿದ ಹುಳು ತನ್ನ ಶರೀರವನ್ನು ಕುಗ್ಗಿಸಿತು ಎಂಬುದೇ ಸರಿ. ಶಂಖವು ಕೃಮೇಣ ಮೇಲೇರುತ್ತಾ ಬಂದು ಹುಳುವನ್ನು ಆವರಿಸಿಕೊಂಡಿತು. ಇಲ್ಲಿ ದುಂಬಿಹುಳದಂತೆ ಒದ್ದಾಟ ಗುದ್ದಾಟಗಳಿಲ್ಲ ಸೈಲೆಂಟ್ ಕಾರ್ಯಾಚರಣೆ. ಸ್ಲೋ ಮೋಷನ್. ಒಂದರ್ಧ ಗಂಟೆಯಲ್ಲಿ ಹುಳು ಮೊದಲಿನ ಸ್ಥಿತಿಗೇ ತಲುಪಿತು.
ಇದರ ಕಾರ್ಯಾಚರಣೆಯ ಪ್ರತಿ ಹಂತವೂ ಸಂಗ್ರಹ ಯೋಗ್ಯವಾಗಿತ್ತು. ಆದರೆ ನನ್ನ ದುರ್ದೈವ ಕ್ಯಾಮರಾದ ಬ್ಯಾಟರಿ ಮುಗಿದಿತ್ತು!
Comments
ಉ: ಶಂಖದ ಹುಳು