ಶರತ್ಕಾಲ

ಶರತ್ಕಾಲ

ಚಿತ್ರ

ಕೆಲವು ದಿನಗಳ ಹಿಂದೆ ಫ್ರಿಮಾಂಟ್ ನ ಕೊಯೊಟಿ ಹಿಲ್ಸ್ ಪಾರ್ಕ್ ಗೆ ಹೋದಾಗ ತೆಗೆದ ಚಿತ್ರವೊಂದು ಕಣ್ಣಿಗೆ ಬಿತ್ತು. ಹೊಸ ಚಿತ್ರಕ್ಕೆ ಹಳೆ ಧಾಟಿಯಲ್ಲಿ, ಅಂದರೆ ಭಾಮಿನಿ ಷಟ್ಪದಿಯಲ್ಲಿ ಪದ್ಯ ಬರೆದರೆ ಹೇಗಿರುತ್ತೆ ನೋಡೋಣ ಅಂತ ಒಂದು ಪ್ರಯತ್ನ -  ಕ್ಷೇತ್ರ  ಮುದ್ರೆಯ ಸಹಿತ :)

ಕೊಲ್ಲಿ ಬಲಬದಿಯಲ್ಲಿ ಕಯೊಟೀ
ಹಿಲ್ಲಿನಾ ಸುತ್ತಣದ ಚೆಲುವಿನ
ಹುಲ್ಲುಗಾವಲಿನಲ್ಲಿ ಉಸುರಿಹುದೆನಗೆ ಚೆಲ್ವ ತೆನೆ
ಮೆಲ್ಲ ದನಿಯಲಿ ಪ್ರಶ್ನಿಸುತ್ತಿಹು
ದಿಲ್ಲಿ ನಿಲ್ವುವೆ ಬಿಸಿಲ ದಿನಗಳು?
ಸಲ್ಲದಾಸೆಯ ತೊರೆಯುತಣಿಯಾಗಿನ್ನು ಶಿಶಿರಕ್ಕೆ!

-ಹಂಸಾನಂದಿ

ಕೊ: ವಾಗ್ಗೇಯಕಾರರು ತಮ್ಮ ರಚನೆಗಳಲ್ಲಿ ತಮ್ಮ ಹೆಸರನ್ನು ಸೂಚಿಸುವುದು ವಾಡಿಕೆ. ಇದರಲ್ಲಿ ಸ್ವನಾಮ ಮುದ್ರೆ ( ತ್ಯಾಗರಾಜ ಪುರಂದರ ದಾಸ, ಮೈಸೂರು ವಾಸುದೇವಾಚಾರ್ಯ ಮೊದಲಾದವರು ), ಇಷ್ಟದೇವತಾ ಮುದ್ರೆ (ಗುರುಗುಹ - ಮುದ್ದುಸ್ವಾಮಿ ದೀಕ್ಷಿತ, ಶ್ರೀಕೃಷ್ಣ - ವ್ಯಾಸರಾಯ , ಕಾಗಿನೆಲೆಯಾದಿಕೇಶವ - ಕನಕದಾಸ ಇತ್ಯಾದಿ) ಇವು ಹೆಚ್ಚು  ಎಲ್ಲರಿಗೂ ತಿಳಿದಿರುವಂತಹದ್ದೇ, ಹಾಗೇ ಎಷ್ಟೋ ರಚನೆಗಳಲ್ಲಿ ರಾಗದ ಹೆಸರು ಬರುವಂತೆ ಇರುವ ರಾಗಮುದ್ರೆ ( ಮೋಹನ ರಾಮ- ಮೋಹನ ರಾಗ, ಆನಂದಾಮೃತಕರ್ಷಿಣಿ ಅಮೃತವರ್ಷಿಣಿ - ಅಮೃತವರ್ಷಿಣಿ ರಾಗ ಮೊದಲಾದುವು) ಕೂಡ ಪರಿಚಿತವಾಗಿರುವಂತಹದ್ದೇ. ಜೊತೆಗೆ ಕೆಲವು ಸಂಗೀತ ರಚನೆಗಳಲ್ಲಿ ಅದನ್ನು ಎಲ್ಲಿ ರಚಿಸಲಾಯಿತು, ಅಥವಾ ಎಲ್ಲಿಯ ದೇವಾಲಯದ ದೇವ ದೇವಿಯರ ಬಗ್ಗೆ ರಚಿಸಲಾಯಿತು ಎನ್ನುವ ಸೂಚನೆಯೂ ಇರುತ್ತದೆ. ಇದಕ್ಕೆ ಕ್ಷೇತ್ರ ಮುದ್ರೆ ಎಂದು ಹೆಸರು. ಉದಾಹರಣೆಗೆ  ಗದುಗಿನ ವೀರನಾರಯಣನ ಹೆಸರನ್ನು ತೆಗೆದುಕೊಳ್ಳುವ ಕುಮಾರವ್ಯಾಸ, ಅಥವಾ ತಿರುಪತಿ ವೆಂಕಟ ರಮಣಾ, ನಿನಗೇತಕೆ ಬಾರದೊ ಕರುಣಾ ಎಂದು ಹಾಡುವ ಪುರಂದರ ದಾಸರು ಅಥವಾ ಗುರುಪವನಪುರಾಧೀಶಂ ಲೋಕೇಶಂ ಎಂದು ಹಾಡಿದ ಮುತ್ತುಸ್ವಾಮಿ ದೀಕ್ಷಿತರ ( ಶ್ರೀ ಕೃಷ್ಣಂ ಭಜ ಮಾನಸ ಕೃತಿ - ಗುರುವಾಯೂರಿನಲ್ಲಿ) ರಚನೆಗಳನ್ನ ನೆನೆಸಿಕೊಳ್ಳ ಬಹುದು.

ಕೊ.ಕೊ: ಫ್ರಿಮಾಂಟ್ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಆಗ್ನೇಯಕ್ಕಿರುವ ನಗರ. ಇದರ ಪಶ್ಚಿಮದ ಮಗ್ಗುಲಿಗೆ, ಕೊಲ್ಲಿಯ ಬಲಕ್ಕೇ (ದಕ್ಷಿಣ ಭಾಗದಿಂದ ಹೋದ ನನ್ನ ದೃಷ್ಟಿಯಲ್ಲಿ) ಇರುವ ಕಯೋಟಿ ಹಿಲ್ಸ್  ರೀಜನಲ್  ಪಾರ್ಕ್ (Coyote Hills Regional Park)  ಆರೋಗ್ಯಕರ ಜೀವನಶೈಲಿಗೆಂದು ನಡೆಯುವವರ, ಓಡುವವರ ಮೆಚ್ಚಿನ ತಾಣ. ಕ್ಷೇತ್ರ ಮುದ್ರೆಯಾಗಿ ನಾನು   'ಕಯೋಟಿ  ಹಿಲ್’ ಎಂಬ ಹೆಸರನ್ನೇ ಬಳಸಿದ್ದೇನೆ.

ಚಿತ್ರ ಕೃಪೆ: ನನ್ನ ಮಡದಿ ಪೂರ್ಣಿಮಾಳ ಕೈಚಳಕ 

Rating
No votes yet