ಶಾಂತಿನಾಥ ದೇಸಾಯಿ ಅವರ ಕಾದಂಬರಿ - ಬೀಜ

ಶಾಂತಿನಾಥ ದೇಸಾಯಿ ಅವರ ಕಾದಂಬರಿ - ಬೀಜ

ಈಚೆಗೆ ನಾನು ಶಾಂತಿನಾಥ ದೇಸಾಯಿ ಅವರ ಕಾದಂಬರಿ - ಬೀಜ ಓದಿದೆ . ಏನು ಬೀಜ, ಎಂಥ ಬೀಜ ಎಂಬ ಕುತೂಹಲದಿಂದ ಪುಟ ತಿರುವಿದಾಗ ಮುಂಬೈ ಮತ್ತು ಉತ್ತರ ಕರ್ನಾಟಕದ ಮಾತುಗಳು ಇದ್ದವು . ಹಿಂದೆ ಅವರ ಓಂ ಣಮೋ ಎಂಬ ಕಾದಂಬರಿಯನ್ನೂ ಓದಿದ್ದ ಕಾರಣ ಎಪ್ಪತ್ತು ರೂಪಾಯಿಗೆ ಕೊಂಡುಕೊಂಡೆ. ಓದಿಸಿಕೊಂಡು ಹೋಗುತ್ತದೆ . ನಾಯಕ ತಂದೆಯೊಡನೆ ಜಗಳವಾಡಿ , ಪ್ರಿಯತಮೆಯನ್ನು ಕೈಬಿಟ್ಟು ಕೃಷ್ಣಾಪುರ ( ಇದು ಬೆಳಗಾವಿ/ಬಾಗಲಕೋಟೆ ಹತ್ತಿರ ಇರಬಹುದು)ದಿಂದ ಮುಂಬೈಗೆ ಹೋಗಿ , ಅಲ್ಲಿಯೇ ದೊಡ್ಡ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿರುವ ಯಶಸ್ವೀ ಮನುಷ್ಯ . ಕ್ರಿಶ್ಚಿಯನ್ ಒಬ್ಬಳನ್ನು ಮದುವೆಯಾಗಿ ಪ್ರಬುದ್ಧ ಮಗಳನ್ನು ಹೊಂದಿರುವಾತ . ತಂದೆಯೊಂದಿಗೆ ಮತ್ತು ಊರಿನೊಂದಿಗಿನ ಸಂಪರ್ಕ ಕಡಿದುಕೊಂಡಾತ . ಈಗ ಅವನ ಅಪ್ಪ ತೀರಿಕೊಂಡಿದ್ದಾನೆ. ಕ್ರಿಯೆಕರ್ಮಾದಿಗಳಿಗಾಗಿ ಈಗ ಊರಿಗೆ ಬಂದಿದ್ದಾನೆ. ಮನೆಗೆ ಒಬ್ಬನೇ ಮಗನಾದ್ದರಿಂದ ಅಲ್ಲಿಯ ಹೊಲ , ಮನೆ ಇತ್ಯಾದಿಗಳಿಗೊಂದು ವ್ಯವಸ್ಥೆ ಮಾಡಬೇಕು, ತಾಯಿಗೂ ಒಂದು ವ್ಯವಸ್ಥೆ ಮಾಡಬೇಕು. ಹೊಲಮನೆಗಳನ್ನು ನಮಗೆ ನಿರ್ವಹಿಸಲು ಒಪ್ಪಿಸಿಬಿಡಿ / ಅಥವಾ ಮಾರಿಬಿಡಿ ಎನ್ನುವ ಸ್ಥಳೀಯರು , ಸಂಬಂಧಿಗಳು. ಅವನ ಹಳೆಯ ಪ್ರೇಯಸಿಯೂ ಅಲ್ಲಿಯೆ ಇದ್ದಾಳೆ , ವಿಧವೆಯ ಪಟ್ಟ ಹೊತ್ತು . ಊರನ್ನು ಸುಧಾರಿಸುವ , ಅಲ್ಲೇ ಒಂದು ಫ್ಯಾಕ್ಟರಿ ತೆರೆಯುವ ಯೋಚನೆ ಇವನಿಗಿದೆ. ಅದರೆ ಇದಕ್ಕೆಲ್ಲ ಇಲ್ಲೇ ನೆಲೆ ನಿಲ್ಲಬೇಕು , ಹಾಗಾದರೆ ಮುಂಬೈಯ ಇವನ ಉದ್ಯೋಗ , ಸಂಸಾರದ ಗತಿ ? ಅವರು ಮುಂಬೈ ತೊರೆಯಲು ಸಿದ್ಧರಿಲ್ಲ . ತಾಯಿ ಅಲ್ಲಿಗೆ ಬರಲು ಸಿದ್ಧಳಿಲ್ಲ . ಈ ಮದ್ಯೆ ಸ್ಥಳೀಯ ರಾಜಕಾರಣ , ಸಮಾಜಗಳಿಗೂ ಮುಂಬೈಯ ಜೀವನಪದ್ಧತಿಗೂ ಏನು ವ್ಯತ್ಯಾಸ ? ಮುಂಬೈ ಮತ್ತು ಕೃಷ್ನಾಪುರದ ಮಧ್ಯೆ ಸಿಕ್ಕು ಬಿದ್ದು ತೊಳಲಾಡುತ್ತಾ ಇರುವ ಇವನು ಏನು ನಿರ್ಧಾರ ತೆಗೆದುಕೊಳ್ಳುವನು ? (ಅಂದ ಹಾಗೆ ಉತ್ತರ ಕರ್ನಾಟಕದ ಎಲ್ಲ ಕಾದಂಬರಿಗಳಲ್ಲೂ ಮುಂಬೈ ಬಂದೇ ಬರುತ್ತದೆ ಅಂತ ಕಾಣುತ್ತದೆ! ) ಇಲ್ಲಿ ಒಂದು ಕುತೂಹಲಕರ ಪಾತ್ರ ಬಂದು ಹೋಗುತ್ತದೆ . ಕಥಾನಾಯಕನ ಗೆಳೆಯ ಕೈಗೆ ಸಿಕ್ಕಿದ್ದೆಲ್ಲವನ್ನೂ ಓದುತ್ತಿರುತ್ತಾನೆ ; ಎಲ್ಲ ಸಿನಿಮಾ ನೋಡುತ್ತ ಇರುತ್ತಾನೆ . ಆಯ್ದುಕೊಂಡು ನೋಡಬಾರದೇನೋ ಅಂದರೆ ಏನಂತಾನೆ ಗೊತ್ತಾ ? ’ಹಂಗ ಸ್ಟ್ಯಾಂಡರ್ಡ್ ಹೆಚ್ಚು ಮಾಡಿಕೋತ ಹೋದರ ನಮಗೆ ಸಿಗೋದು ಕಡಿಮಿ ಆಕ್ಕೋತ ಹೋಗ್ತದ! , ನಾವು ಅನುಭವಿಸೋದೂ ಕಡಿಮೆ ಆಗ್ತದ!’

Rating
Average: 3 (2 votes)