ಶಾಪ

ಶಾಪ

                                          ಶಾಪ

ಬಲಿದಾನ ತ್ಯಾಗಗಳ ಸೊಗಸಾದ ಕಥೆಹೇಳಿ
ಮಲಗಿದ್ದ ಎಳೆಗಂದರೆಳೆದೆಳೆದು ಕಿವಿಗೂದಿ
ನೋಡವರು ಶತ್ರುಗಳು ನಾವೆಲ್ಲಾ ಬಂಧುಗಳು
ಬನ್ನಿರೆಲ್ಲರು ನಮ್ಮ ನಂಬಿ ಹಿಂದುಗಳು
ಎಂದು ಹೇಳಿದ ಮಂದಿ ಇಂದು ನಾಯಕರು
ಹಿಂದುಳಿದ ಹಿಂದುಗಳನೇರಿ ಬೆಳೆದವರು

ರೈತಪರ ನಾಡಪರ ಹಿಂದುಳಿದ ಜನರ ಪರ
ಮಾಡಿರುವುದೆಲ್ಲ ಬರಿ ಅಪರಾ ತಪರಾ
ನಾಯಕನ ಮೈ ಬಣ್ಣ ಎಷ್ಟು ಕೆಂಪಾಗಿದೆ.
ಮೊದಲು ಹೀಗಿರಲಿಲ್ಲ ಆ ಕಪ್ಪು ಹೋಗಿದೆ
ಮತ್ತೊಬ್ಬ ನಾಯಕನ ಹೊಟ್ಟೆ ದಪ್ಪವ ನೋಡು
ಹತ್ತು ವರ್ಷಕೆ ಹತ್ತು ಪಟ್ಟು ಬೆಳೆದಿಹುದು
ಇನ್ನೊಬ್ಬ ಮುತ್ಸದ್ದಿ ಮಾತನಾಡುವುದಿಲ್ಲ
ಮೊದಲಿದ್ದ ಬೇಗುದಿಯ ಕಾಳಜಿಗಳುಳಿದಿಲ್ಲ
ಶಾಸಕರ ಮೆರೆದಾಟ ಮಂತ್ರಿಪುತ್ರರ ಕಾಟ
ತಪ್ಪಿದರೆ ಊರೆಲ್ಲ ಮರಿಗಣಗಳೋಡಾಟ
ವಿಶ್ವಾಸಘಾತಕರು ಅಗ್ರ ಪಂಕ್ತಿಯಲಿಹರು
ಕೊಳ್ಳೆಹೊಡೆಯುವ ಮಂದಿ ಪದವಿಗೇರಿಹರು

ಇಟ್ಟಿಗೆಯ ತನ್ನಿರಿ ತಾಳ ಜಾಗಟೆ ತನ್ನಿ
ಪ್ರಾಣ ಕೊಡಿ ರಾಮನನು ಉಳಿಸುವೆವು ಬನ್ನಿ
ಎಂದು ಕರೆ ಕೊಟ್ಟವರು ಇಂದು ಅಡಗಿಹರೆಲ್ಲಿ
ತಂತಮ್ಮ ಧನಕನಕ ಸಂಗ್ರಹಣೆಯಲ್ಲಿ

ಸತ್ಯವೇ ಉಳಿಯುವುದು ಮಿಕ್ಕೆಲ್ಲ ಅಳಿಯುವುದು
ಅನ್ರುತವು ಸಂಕಟವ ನೀಡದೆ ಬಿಡದು
ಆತ್ಮ ಘಾತಕರಾಗಿ ಮುಗುದರನು ವಂಚಿಸಿದ
ಪಾಪ ತಟ್ಟದೆ ಬಿಡದು ಇದು ನಿಮಗೆ ಶಾಪ

                                                                                                  - ಸದಾನಂದ
Rating
No votes yet

Comments