ಶಾರದೆಯ ಮದುವೆ ಮತ್ತು ದೆವ್ವ - ೨
ಮನೆಯ ಒಳಗಡಿಯಿಡುತ್ತಲೆ ನರಸಿಂಹ ಮೂರ್ತಿಗಳು,
- ಲಲ್ತ.... ಲಲ್ತ.....!? ಏನಾಯ್ತು...!!!??. ಶಾರದ ಎಲ್ಲಿ.? ಈಗ ಹೇಗಿದ್ದಾಳೆ...???? -
- ದೇವರ ಮನೆ ಪಕ್ಕದ ಕೊಠಡಿಯಲ್ಲಿ ಮಲಗಿಸಿದ್ದೇನೆ, ಸ್ವಲ್ಪ ಸುಸ್ತಾಗಿದ್ದಾಳೆ, ಗಾಬ್ರಿ ಮಾಡ್ಕೋಬೇಡಿ. ಕಾಫ಼ಿ ಬಿಸಿಗೆ ಇಟ್ಟಿದ್ದೇನೆ ಅವಳಿಗೂ ಕೊಡೋಣ ಅಂತ. -
- ಇದೇನು ಗ್ರಹಚಾರ್ವೆ...??!!??. ನಾನು ಹೋಗುವಾಗ ಎಲ್ಲ ಚೆನ್ನಾಗಿತ್ತಲ್ಲ....? ಏನಾಯ್ತು ಇದ್ದಕಿದ್ದಹಾಗೆ.? -
- ಅಲ್ಲ ಆ ಹನುಮಂತ ಶಾಸ್ತ್ರಿಗಳಿಗೆ ಬರೋಕ್ಕೆ ಹೇಳ್ಬೇಕಾಗಿತ್ತು. -
- ಇಲ್ಲ ಲಲ್ತ ನಾರಾಯಣನ ಗಾಬ್ರಿ ನೋಡೆ ಅವ್ನು ಗ್ರಹಿಸಿಬಿಟ್ರು, ಎರಡು ನಿಮಿಷ ಕಣ್ಣು ಮುಚ್ಚಿ ಕುಳಿತು, ನಂತರ, `ಏನೂ ಹೆದ್ರಬೇಡ ನರಸಿಂಹ ಮೂರ್ತಿ, ವೀರಾಂಜನೇಯ ಸ್ವಾಮಿ ಇದ್ದಾನೆ ಎಲ್ಲ ಸರಿಹೋಗುತ್ತೆ. ಅಂತ ಹೇಳಿ ಈ ವಿಭೂತಿ ಮಂತ್ರಿಸಿ ಕೊಟ್ಟಿದ್ದಾನೆ. ಅವಳ ಹಣೆಗೆ ಹಚ್ಚಿ, ನಾಳೆ ಗುರುವಾರ ದೇವಸ್ಥಾನದ ಪೂಜೆ ಮುಗಿಸಿ ಮನೆಗೆ ಬರ್ತೀನಿ, ಅಲ್ಲಿವರೆಗೂ ಶಾರದಳನ್ನು ಮನೆಯಿಂದ ಹೊರಗೆ ಕಳುಹಿಸಬೇಡ` ಅಂತ ಹೇಳಿದ್ದಾನೆ, ತಗೋ ಈ ವಿಭೂತಿ ಅವ್ಳಿಗೆ ಹಚ್ಚು. -
*************************************
ಹನುಮಂತ ಶಾಸ್ತ್ರಿಗಳದ್ದು ಘನ ವ್ಯಕ್ತಿತ್ವ. ಮದುವೆಯಾಗದೆ, ಬ್ರಹ್ಮಚಾರಿಗಳಾಗಿದ್ದು, ನಿತ್ಯವೂ, ಅನವರತ ವೀರಾಂಜನೇಯ ಸ್ವಾಮಿಯ ಔಪಾಸನೆ ಮಾಡುತ್ತಾ,ಸಾಧಿಸಿ ಸಿದ್ದಿ ಪಡೆದು, ಸುತ್ತಾ ಮುತ್ತಾ ಹತ್ತೆಂಟು ಊರುಗಳಲ್ಲಿ ಯಾರಿಗೆ ಯಾವರೀತಿಯ ಗ್ರಹ ಭಾದೆ, ಜಾತಕ ದೋಷ ನಿವಾರಣೆ, ದೆವ್ವ ಚೇಷ್ಟೆ.. ಹೀಗೆ ಹತ್ತು ಹಲವಾರು ತೊಂದರೆಗಳಿದ್ದರೂ ನಿವಾರಣೆ ಮಾಡುತ್ತಾ, ಅಹಂಕಾರಕ್ಕೆ ಒಳ ಪಡದಿರುವ ಜ್ಞಾನಿ. ಆಜಾನುಬಾಹು ಶರೀರ. ದಪ್ಪ ಮಣಿಯ ರುದ್ರಾಕ್ಷಿ ಮಾಲೆಯ ಜೊತೆಗೆ ಕರಿದಾರದಲ್ಲಿ ಪೋಣಿಸಿದ ಆಂಜನೇಯ ಸ್ವಾಮಿಯ ಪುಟ್ಟ ವಿಗ್ರಹ ಕೊರಳಲ್ಲಿ. ಹಣೆಯಮೇಲೆ ಭಸ್ಮ ಮಧ್ಯದಲ್ಲಿ ಅಗಲವಾದ ಗಂಧ ಅದರ ಮೇಲೆ ಕುಂಕುಮ. ಕಚ್ಚೆ ಪಂಚೆಯ ಜೊತೆಗೆ ಎದೆಯ ಭಾಗದ ಶರೀರವನ್ನು ಪೂರ್ತಿಯಾಗಿ ಮುಚ್ಚುವ ಉದ್ದನೆಯ ಉತ್ತರೀಯ. ದೃಡವಾದ ಮತ್ತು ವಿವೇಚನೆಯ ತೂಕದ ಮಾತು. ಎದುರಿಗೆ ಎಂಥಹ ದೃಷ್ಟ ಶಕ್ತಿ ಬಂದರೂ ಹುಟ್ಟಡಗಿಸುವ ಮನೋಸ್ಥೈರ್ಯ. ಅಷ್ಟೆ ಅಲ್ಲದೆ ಅನೇಕ ಪುಸ್ತಕಗಳನ್ನು ಓದಿ ಮನಸ್ಸಿನ ವಿಕಾರಗಳು, ಸುಪ್ತ ಮನಸ್ಸಿನ ಆಲೋಚನೆಗಳು, ಭ್ರಮಾಧೀನ ಮನಸ್ಸಿನ ಸ್ಥಿತಿಯ ಬಗ್ಗೆ ಕೂಡ ಅರಿವುಳ್ಳವರು. ದಾರಿಯಲ್ಲಿ ಅವರು ನಡೆದು ಬರುತ್ತಿದ್ದರೆ ಕುಳಿತಿದ್ದವರು ಎದ್ದು ನಿಲ್ಲುವಂತೆ ಪ್ರೇರೇಪಣೆಗೆ ಒಳಗಾಗುತ್ತಿದ್ದರು. ಅಲ್ಲಿನ ಜನರೆಲ್ಲ ಅವರನ್ನು ಹನುಮಂತ ಶಾಸ್ತ್ರಿಗಳು ಅನ್ನುವುದಕ್ಕಿಂತ ನಡೆದಾಡುವ ``ವೀರಾಂಜನೇಯ ಸ್ವಾಮಿ`` ಎಂದೆ ಭಾವಿಸಿದ್ದರು. ಹಾಗಾಗೆ ಅವರನ್ನು `ಸ್ವಾಮಿಗಳೆ` ಎಂದು ಸಂಭೋದಿಸುತ್ತಿದ್ದರು.
*************************************
ಮಾರನೆಯ ದಿನ ಶಾಸ್ತ್ರಿಗಳು, ದೇವಸ್ಥಾನದ ಬಾಗಿಲು ಮುಚ್ಚಿದವರೆ, ಸೀದಾ ನರಸಿಂಹ ಮೂರ್ತಿಗಳ ಮನೆಗೆ ಬಂದರು. ಶಾಸ್ತ್ರಿಗಳು ಮನೆಯ ಹೊಸಿಲಿಂದ ಒಳಗಡಿಯಿಟ್ಟಿದ್ದೆ ತಡ, ರೂಮಿನಲ್ಲಿ ಮಂಚದ ಮೇಲೆ ಮಲಗಿದ್ದ ಶಾರದ ದಡ್ಡನೆ ಎದ್ದು ಕುಳಿತಳು. ಹತ್ತಿರದಲ್ಲೆ ಕುಳಿತ್ತಿದ್ದ ಲಲಿತಮ್ಮನವರು ಒಮ್ಮೆಗೆ ಎದ್ದ ಮಗಳನ್ನು ಕುರಿತು,
- ಏಕಮ್ಮ ಏನಾಯ್ತು...!!?!!, ಏನಾದ್ರೂ ಕನಸು ಬಿತ್ತಾ..? - ಅಂದ್ರು.
ಶಾರದ ಏನೂ ಮಾತನಾಡದೆ, ಭಯ ಮಿಶ್ರಿತ ಕಣ್ಣುಗಳಿಂದ, ಕೊಠಡಿಯ ಆಚೆಗಿನ ಹಜಾರದ ಕಡೆಗೆ ನೋಡಿದಳು. ಅತ್ತ ಹಜಾರದಲ್ಲಿ ಹನುಮಂತ ಶಾಸ್ತ್ರಿಗಳ ದ್ವನಿ ಕೇಳಿದ್ದೆ ತಡ, ಲಲಿತಮ್ಮನವರು ರೂಂನಿಂದ ಹೊರಬಂದು, ತನ್ನ ಯಜಮಾನರೊಡನೆ ಕುಳಿತಿದ್ದ ಶಾಸ್ತ್ರಿಗಳಿಗೆ ನಮಸ್ಕರಿಸಿ ಪಕ್ಕಕ್ಕೆ ನಿಂತರು.
ಶಾಸ್ತ್ರಿಗಳದ್ದು, ನರಸಿಂಹ ಮೂರ್ತಿಗಳದ್ದು ಬಾಲ್ಯದ ಗೆಳೆತನ, ಹಾಗಾಗಿ ಇಬ್ಬರಲ್ಲೂ ಅನ್ಯೋನ್ಯತೆ ಇತ್ತು.
- ನೋಡಯ್ಯ ಹನುಮಂತು, ಮೊನ್ನೆ ತಾನೆ ಗಂಡಿನವರು ಬಂದು ನೋಡಿ, ಹುಡುಗಿ ನಮಗೆ ಒಪ್ಪಿಗೆ ಅಂತ ತಿಳಿಸಿದ್ದಾರೆ. ಇಷ್ಟು ದಿನ ಚೆನ್ನಾಗೆ ಇದ್ದವಳು, ಈಗ ಇದ್ದಕ್ಕಿದ್ದ ಹಾಗೆ, ಇದೇನೋ ತೊಂದರೆ, ನನಗೆ ಏನೂ ತೋಚ್ತಾ ಇಲ್ಲ ಕಣಯ್ಯ. ಇದೇನು ಗ್ರಹಚಾರವೋ ಕಾಣದಾಗಿದೆ. -
- ಚಿಂತಿಸ ಬೇಡ ಮೂರ್ತಿ. ಬೆಳಿಗ್ಗೆ ದೇವಸ್ಥಾನದಲ್ಲಿ ವೀರಾಂಜನೇಯ ಸ್ವಾಮಿಯನ್ನು ಪ್ರಶ್ನೆ ಹಾಕಿ ಕೇಳಿದ್ದೇನೆ. ಮದುವೆಗೆ ಮಹೂರ್ತ ನಿಗದಿ ಮಾಡಲು ಅಪ್ಪಣೆ ಕೊಟ್ಟಿದ್ದಾನೆ.
ಅಂದಹಾಗೆ ಶಾರದ ಎಲ್ಲಿ..? -
ಏನೂ ಮಾತನಾಡದೆ ಶಾರದಳಿದ್ದ ರೂಂನೆಡೆಗೆ ಕೈ ಮಾಡಿ ತೋರಿಸಿದರು, ನರಸಿಂಹ ಮೂರ್ತಿಗಳು. ಎರಡು ನಿಮಿಷ ಮೌನವಾಗಿದ್ದ ಶಾಸ್ತ್ರಿಗಳು, ತಾವು ಕುಳಿತಿದ್ದ ಕುರ್ಚಿಯಿಂದ ಮೇಲೆದ್ದು, ಲಲಿತಮ್ಮನವರನ್ನು ನೋಡಿ,
- ಏನಮ್ಮ ಲಲಿತಮ್ಮ, ಈ ಅನುಭವ ಆಗಿದ್ದು ಯಾವ ಜಾಗದಲ್ಲಿ..? -
- ಮೇಲೆ ಮಹಡಿಯಲ್ಲಿನ ಶಾರದಳ ರೂಂನಲ್ಲೆ ಶಾಸ್ತ್ರಿಗಳೆ. -
- ಸರಿ, ನರಸಿಂಹ ಮೂರ್ತಿ ನೀನು ಅರಿಸಿನ ಕುಂಕುಮದ ತಟ್ಟೆ ಮತ್ತು ಪಂಚ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಮೇಲೆ ಬಾ.. -
ಎಂದವರೆ ಮಹಡಿಯ ಮೆಟ್ಟಲು ಹತ್ತಲು ಅತ್ತ ಹೊರಟರು, ಮೆಟ್ಟಲಿನ ಮೇಲೆ ಹೆಜ್ಜೆ ಇಡುವ ಮುಂಚೆ, ಹಿಂದೆ ತಿರುಗಿ,
- ಹಾ....... ನೋಡು ಲಲಿತಮ್ಮ ಯಾವುದೆ ಕಾರಣಕ್ಕೂ ನಾನು ಕರೆಯುವವರೆಗು ನೀನು ಮೇಲೆ ಬರಬಾರದು, ನಾರಾಯಣನನ್ನೂ ಮೇಲೆ ಕಳುಹಿಸ ಬೇಡ. ಎಚ್ಚರ -
ಎಂದು ಎಚ್ಚರಿಸುತ್ತಾ ಮಹಡಿಯನ್ನು ಏರಿ ಶಾರದೆಯ ಕೊಠಡಿಯನ್ನು ಪ್ರವೇಶಿಸುವಮುನ್ನ ಬಾಗಿಲ ಬಳಿ ಒಮ್ಮೆ ನಿಂತು, ಕಣ್ಣುಮುಚ್ಚಿ ವೀರಾಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ ಬಲಗಾಲನ್ನು ಮುಂದಡಿ ಇಟ್ಟು ಒಳಗೆ ಬಂದರು. ಅಲ್ಲೆ ಇದ್ದ ಚಾಪೆಯನ್ನು ಹಾಸಿ ತಮ್ಮ ಕೈಚೀಲದಿಂದ ಪೂಜಾ ಪರಿಕರಗಳನ್ನು ಹೊರ ತೆಗೆದು ಜೋಡಿಸಿ ಕೊಳ್ಳುವ ಹೊತ್ತಿಗೆ, ನರಸಿಂಹ ಮೂರ್ತಿಗಳು ರೂಂನೊಳಕ್ಕೆ ಬರುತ್ತಾ ಹೆದರಿಕೆಯಿಂದಲೆ ಅತ್ತ ಇತ್ತ ನೋಡುತ್ತಿದ್ದರು. ಭಯದಲ್ಲಿದ್ದ ಮೂರ್ತಿಗಳನ್ನು ನೋಡಿ, ಮನಸ್ಸಿನಲ್ಲೆ ನಗುತ್ತಾ ಶಾಸ್ತ್ರಿಗಳು, ಅರಿಶಿನ ಕುಂಕುಮದಿಂದ, ಹಾಸಿದ್ದ ಚಾಪೆಯ ಎದುರು, ಓಂ ಕಾರವನ್ನು ಬರೆದು ಸಣ್ಣ ಮಂಡಲವನ್ನು ರಚಿಸಿ, ತಮ್ಮ ಎಡಭಾಗದಲ್ಲಿ ತಾವು ತಂದಿದ್ದ ಸಣ್ಣ ಮಂದಾಸನವನ್ನಿಟ್ಟು ಅದರಮೇಲೆ ಯಾವಾಗಲು ಅವರ ಜೊತೆಯಲ್ಲೆ ಒಯ್ಯುವ ವೀರಾಂಜನೇಯ ಸ್ವಾಮಿಯ ಚಿಕ್ಕ ಮೂರ್ತಿಯನ್ನಿಟ್ಟು, ಪದ್ಮಾಸನದಲ್ಲಿ ಚಾಪೆಯಮೇಲೆ ಆಸೀನರಾಗಿ, ನಗುನಗುತ್ತಾ ಮೂರ್ತಿಗಳನ್ನು ನೋಡಿ,
- ಕುಳಿತುಕೊ ಮೂರ್ತಿ, ಹೆದರಬೇಡ, ಇದೆಲ್ಲಾ ಯಾವುದೋ ಆಧಾರವಿಲ್ಲದ ಶಕ್ತಿಯ, ಸಣ್ಣ ಚೇಷ್ಟೆ ಅಷ್ಟೆ. ನೋಡ್ತಾ ಇರು ನನ್ನ ಸ್ವಾಮಿ ಈಗ ನಿನ್ನೆದುರೆ ಅದರ ಬಾಯಿ ಬಿಡಿಸುತ್ತಾನೆ. ದೈರ್ಯವಾಗಿರು. -
ಇಷ್ಟು ಹೇಳಿದವರೆ, ತಮ್ಮ ಎರಡೂ ಕೈಗಳ ಹಸ್ತಗಳನ್ನು ಜೊತೆ ಸೇರಿಸಿ ಬೆರಳುಗಳನ್ನು ಹೆಣೆದು ಬಂಧಿಸಿ, ಹಸ್ತ ಮುದ್ರೆಯನ್ನು ಎದೆಯ ಮಟ್ಟಕ್ಕೆ ಹಿಡಿದು ಕಣ್ಣುಮುಚ್ಚಿ ಮಂದ್ರ ಸ್ವರದಲ್ಲಿ ` ಓಂ ಕ್ಲೀಂ ಯೋಗಿನಿ ಯೋಗಿನಿ ಯೋಗೀಶ್ವರಿ ಯೋಗ ಭಯಂಕರಿ ಸಕಲ...........`
ಉಚ್ಚಾಟನ ಮಂತ್ರವನ್ನು ಪಠಿಸ ತೊಡಗಿದರು. ನಿಧಾನವಾಗಿ ಮಂತ್ರ ಗತಿ ಮುಂದುವರೆಯುತ್ತಿದ್ದಂತೆ, ಕೊಠಡಿಯಲ್ಲಿ ವಿಚಿತ್ರ ಅನುಭವದ ವಾತಾವರಣ ಸೃಷ್ಠಿಯಾಗುತ್ತಿರುವುದು ನರಸಿಂಹ ಮೂರ್ತಿಗಳ ಅನುಭವಕ್ಕೆ ಬರುತ್ತಿತ್ತು. ಮಂತ್ರ ಪಠನೆ ಕೆಳಗಿದ್ದ ಲಲಿತಮ್ಮನವರಿಗೂ ಕೇಳುತ್ತಿತ್ತು. ಮುಂದೇನಾಗುವುದೋ ಎಂದು ಗಾಬರಿಯಲ್ಲೆ ಶಾರದೆಯ ಕೋಣೆಯ ಕಡೆ ನೋಡುತ್ತಿದ್ದರು. ನಾರಯಣನಂತು ಅಮ್ಮನ ಹಿಂದೆ ಅಡಗಿ ನಿಂತಿದ್ದ.
ಸ್ವಲ್ಪ ಸಮಯ ಕಳೆಯುತ್ತಿದ್ದಂತೆ, ಶಾರದೆಯು ನಿಧಾನವಾಗಿ ತಾನಿದ್ದ ಕೋಣೆಯಿಂದ ಹೊರಬಂದವಳೆ ಕೈಗಳನ್ನು ಹೆಚ್ಚು ಆಡಿಸದೆ, ಮುಷ್ಟಿಯನ್ನು ಗಟ್ಟಿಯಾಗಿ ಹಿಡಿದು, ಒಂದೊಂದೆ ಹೆಜ್ಜೆಗಳನ್ನಿಡುತ್ತಾ ಮುಂದುವರೆದು ಮಹಡಿಯ ಮೆಟ್ಟಲುಗಳ ಬಳಿಸಾರಿ ಮೇಲೆ ಹತ್ತ ತೊಡಗಿದಳು. ಹಜಾರದಲ್ಲಿ ನಿಂತಿದ್ದ ತನ್ನ ಅಮ್ಮನಾಗಲಿ ತಮ್ಮನಾಗಲಿ ಅವಳ ಗಮನಕ್ಕೆ ಬರಲೇ ಇಲ್ಲ. ತಾಯಿಯ ಹಿಂದೆ ನಿಂತು ಬಗ್ಗಿ ನೋಡುತ್ತಿದ್ದ ನಾರಾಯಣನಂತು ಕಣ್ಣು ಮುಚ್ಚಿ ತಾಯಿಯನ್ನು ಗಟ್ಟಿಯಾಗಿ ಅಪ್ಪಿ ಆಕೆಯ ಬೆನ್ನಿಗೆ ತನ್ನ ಮುಖವನ್ನು ಒತ್ತಿ ಹಿಡಿದನೆ ಹೊರತು, ಯಾವ ಕಾರಣಕ್ಕೂ ತನ್ನ ಅಕ್ಕನನ್ನು ನೋಡುವ ದೈರ್ಯ ಮಾಡಲಿಲ್ಲ.
ನಿಧಾನವಾಗಿ ಮೆಟ್ಟಲುಗಳನ್ನು ಏರಿದ ಶಾರದ, ಅದೆ ಗತಿಯಲ್ಲಿ ಮಹಡಿಯ ತನ್ನ ಕೋಣೆಗೆ ಬಂದು ಶಾಸ್ತ್ರಿಗಳು ಹಾಕಿದ್ದ ಮಂಡಲದ ಮಧ್ಯೆ ಆಸೀನಳಾಗಿ ಒಮ್ಮೆಗೆ ತನ್ನ ಕತ್ತನ್ನು ಮೇಲೆತ್ತಿ,
- ಏ... ಹೆಹೆ..... ಹೆ..ಹೆಹೆಹೆ.... ಮ್ಹು....ಮ್ಹುಮ್ಹು... - ವಿಚಿತ್ರವಾಗಿ ಕಣ್ಣುಗಳನ್ನು ತಿರುಗಿಸುತ್ತಾ, ಒಡಕು ಗಂಟಲಿನಿಂದ ಕೂಡಿದ ಸ್ವರದೊಂದಿಗೆ ನಗತೊಡಗಿದಳು ಶಾರದ.
ಸೌಮ್ಯ ಸ್ವಭಾವದ ತನ್ನ ಮಗಳನ್ನು ಯಾವತ್ತೂ ಈ ರೂಪದಲ್ಲಿ ನೋಡಿರಲಿಲ್ಲ ನರಸಿಂಹ ಮೂರ್ತಿಗಳು. ಅವಳ ವಿಚಿತ್ರ ವರ್ತನೆಯಿಂದ ಭಯಗೊಂಡು ವಿಚಲಿತರಾದರೂ, ಶಾಸ್ತ್ರಿಗಳು ಮೊದಲೆ ತಿಳಿದಂತೆ ವೀರಾಂಜನೇಯ ಸ್ವಾಮಿಯನ್ನು ನೆನೆದು ದೈರ್ಯ ತಂದು ಕೊಂಡರು. ತಮ್ಮ ಮಗಳ ಈ ಪರಿಸ್ಥಿಯನ್ನು ಕಂಡು ಮನಸ್ಸಿನಲ್ಲಿ ಬಹಳ ನೊಂದು ಕಣ್ಣಂಚಿನಿಂದ ಎರಡು ಹನಿ ಜಾರಿ ಕೆಳಗೆ ಬಿತ್ತು. ನರಸಿಂಹ ಮೂರ್ತಿಗಳ ಭುಜದ ಮೇಲೆ ಕೈಇಟ್ಟು ಎಚ್ಚರಿಸಿದ ಶಾಸ್ತ್ರಿಗಳನ್ನು ಅರ್ಥ ಮಾಡಿ ಕೊಂಡ ಮೂರ್ತಿಗಳು ಸಾವರಿಸಿಕೊಂಡು ಕುಳಿತರು.
ತಮ್ಮ ಬಲಬಾಗದಲ್ಲಿ ಸಿದ್ದ ಪಡಿಸಿಕೊಂಡು ಇಟ್ಟಿದ್ದ ಸಣ್ಣ ಬಾರು ಕೋಲನ್ನ ಕೈಗೆ ತೆಗೆದುಕೊಂಡ ಹನುಮಂತ ಶಾಸ್ತ್ರಿಗಳು, ತೀಕ್ಷ್ಣವಾದ ಕಣ್ಣುಗಳನ್ನು ಬಿಡುತ್ತಾ, ಶಾರದಳನ್ನು ನೋಡಿ, ಎತ್ತರದ ದ್ವನಿಯಲ್ಲಿ ಕೇಳಿದರು.
- ಹೇಳು ಯಾರು ನೀನು..??? -
- ಹೆ...... ಹೆಹೆಹೆ...... ಹ್ಹಹಹ್...ಹ.... -
ಬರಿ ನಗುವೆ ಉತ್ತರವಾಯ್ತೆ ಹೊರ್ತು ಶಾರದ ಮಾತನಾಡಲಿಲ್ಲ.
- ಹ್ಮು ಹೇಳು ಯಾರು ನೀನು..? ಹೇಳ್ತಿಯ ಇಲ್ಲ...??? -
ಮತ್ತಷ್ಟು ಉಡಾಫ಼ೆಯ ನಗು ಶಾರದಳಿಂದ.
- ಓ..ಹೋ.... ಈ ವರಸೆಯ..? ಹಾಗಾದರೆ ತಗೋ.. - ಎಂದವರೆ ತಮ್ಮ ಕೈಲಿದ್ದ ಕೋಲಿನಿಂದ ಒಮ್ಮೆ ನಿಧಾನಕ್ಕೆ ನೆಲಕ್ಕೆ ಬಡಿದರು ಶಾಸ್ತ್ರಿಗಳು.
- ಅಯ್ಯೊ.. ಬೇಡ... ಬೇಡ ಹೊಡಿಬೇಡಿ .....!!??!! -
- ಮತ್ತೆ ವರಸೆ ತೋರ್ಸ್ತಿಯಾ...?? ಹ್ಮು.... ಹೇಳು ಯಾರು ನೀನು..? ಆಜ್ಞೆ ಮಾಡಿದಂತಿತ್ತು ಶಾಸ್ತ್ರಿಗಳ ದ್ವನಿ.
- ನಾನು.... ಚೆನ್ನಯ್ಯನ ಮಗಳು...... ಮಾಧವಿ.. -
- ಮಾಧವಿ ಇಲ್ಲಿಗೆ ಏಕೆ ಬಂದೆ...? ಏನು ಕೆಲ್ಸ ಇತ್ತು...??.. ಹೇಳು..? -
- ಮತ್ತೆ ನನ್ನ ಫ಼್ರೆಂಡ್... ಮದುವೆ ಮಾಡಿದ್ರೆ..... ಬಿಡ್ತೀನಾ..??.. ಅವ್ಳು ಚೆನ್ನಾಗಿರ್ಬೇಕು..? ಅದಕ್ಕೆ ಬಂದೆ... ಅವ್ಳನ್ನ ಕಾಪಾಡೋಕ್ಕೆ.. ಹ್ಮು..... ಏನೀಗ..?? -
- ಹ್ಮು... ಸದ್ದು... ಫ಼್ರೆಂಡ್ ಅಂನ್ತೀಯ.... ಅವಳು ಚೆನ್ನಾಗಿರ್ಬೇಕು ಅಂತೀಯ... ಮದ್ವೆ ಮಾಡಿದ್ರೆ ಬಿಡ್ತೀನಾ ಅಂತಾನೂ ಕೇಳ್ತೀಯ...? ಏನಿದು ನಿನ್ನ ಚೇಷ್ಟೆ. ನಿನ್ನ ಫ಼್ರೆಂಡ್ ಮದುವೆ ಆಗಿ ಸುಖವಾಗಿರೋದು ನಿನಗೆ ಬೇಡ್ವಾ...? -
- ಹ್ಮು.... ಹ್ಮು.... ಅವಳು ಸುಖ್ವಾಗಿರ್ಬೇಕು.... ಮದ್ವೆ ಆಗ್ಬೇಕು....ಅವ್ಳ ಬಾಳು ನನ್ನ ಹಾಗೆ ಆಗಬಾರ್ದು..... ಅದಕ್ಕೆ....ಅದಕ್ಕೆ... ಅವಳ ಮದ್ವೆ ಆಗ್ಬಾರ್ದು.. -
- ಅವಳು ಮದುವೆಗೆ ಒಪ್ಪಿದಮೇಲೆ ಮದುವೆ ನಡೆಯುತ್ತಿರುವುದು..... ನೀನು ಇಲ್ಲಿಂದ ಹೊರಡು... -
- ಹೋಗೋಲ್ಲ... ನಾನು... ಮದುವೆ ಮಾಡ್ಸಿ ಹೋಗ್ತೀನಿ..... ಹ್ಮು.... ಹೋಗೋಲ್ಲ.... -
- ಹೋಗ್ತಿಯೋ ಇಲ್ಲ... - ಹನುಮಂತ ಶಾಸ್ತ್ರಿಗಳು ತಮ್ಮ ಬೆತ್ತವನ್ನು ಮತ್ತೆ ಎತ್ತಿದರು.
- ಬೇಡ.... ಹೊಡಿಬೇಡಿ... ಹೊಡೀ ಬೇಡಿ ಹೋಗ್ತಿನಿ... ಹೋ.....ಗ್....ತಿನಿ.....-
ಶಾರದ ಹಾಗಿ ನಿಧಾನವಾಗಿ ಪಕ್ಕಕ್ಕೆ ವಾಲಿ ನೆಲದ ಮೇಲೆ ಮಲಗಿ ಬಿಟ್ಟಳು. ಮತ್ತೆ ಸ್ವಲ್ಪ ಹೊತ್ತು ಮನಸ್ಸಿನಲ್ಲೆ ಮಂತ್ರ ಪಠಿಸುತ್ತಾ ಕಣ್ಣುಮುಚ್ಚಿದ್ದ ಶಾಸ್ತ್ರಿಗಳು, ನಿಧಾನವಾಗಿ ಕಣ್ಣ ತೆರೆದು, ಪಂಚ ಪಾತ್ರೆಯಲ್ಲಿದ್ದ ನೀರನ್ನು ಬಲಗೈ ಅಂಗೈಮೇಲೆ ತುಂಬಿಕೊಂಡು ಮಲಗಿದ್ದ ಶಾರದಳ ಮುಖದ ಮೇಲೆ ಚುಮಿಕಿಸಿದರು. ಎಚ್ಚರಗೊಂಡ ಶಾರದಳನ್ನು ನಗುತ್ತಾ ನೋಡಿದ ಶಾಸ್ತ್ರಿಗಳು,
- ಹೇಗಿದ್ದೀಯ ತಾಯಿ..? -
- ಸುಸ್ತಾಗುತ್ತಿದೆ ... -
- ಹೆದರಬೇಡಮ್ಮ ಎಲ್ಲ ಸರಿಹೋಗುತ್ತದೆ -
ಆಂಜನೇಯ ಸ್ವಾಮಿ ವಿಗ್ರಹದ ಮುಂದಿದ್ದ ತಾಯತವನ್ನು ಹೊರ್ಅ ತೆಗೆದ ಶಾಸ್ತ್ರಿಗಳು ಅದನ್ನು ಶಾರದಳ ಬಲ ತೋಳಿಗೆ ಕಟ್ಟುತ್ತಾ,
- ಯಾವುದೆ ಕಾರಣಕ್ಕೂ ಇನ್ನೊಂದು ಮೂರು ತಿಂಗಳು ಈ ತಾಯತವನ್ನು ಬಿಚ್ಚಬೇಡಿ. ಆ ವೀರಂಜನೇಯ ಸ್ವಾಮಿ ಎಲ್ಲವನ್ನು ನೋಡಿಕೊಳ್ಳುತ್ತಾನೆ. ನರಸಿಂಹ ಮೂರ್ತಿ ನೀನು ಶಾರದಳನ್ನು ಕೆಳಗೆ ಕರೆದುಕೊಂಡು ಹೋಗು. ನಾನು ದಿಗ್ಭಂದನೆ ಮಾಡಿ ಬರುತ್ತೇನೆ. -
ತನ್ನ ಮಗಳ ಕೈ ಹಿಡಿದು ಕೆಳ ನಡೆಸಿ ಕೊಂಡು ಬಂದ ನರಸಿಂಹ ಮೂರ್ತಿಗಳು ಹಜಾರದಲ್ಲಿ ಕೂಡಿಸಿದರು. ಬಳಿ ಬಂದ ತಾಯಿಯನ್ನು ನೋಡಿ ಶಾರದ ಕಣ್ಣಿರಿಟ್ಟಳು. ಸಮಾಧಾನ ಮಾಡಿದ ಲಲಿತಮ್ಮ ನವರು,
- ಹೆದರ ಬೇಡ ಮಗಳೆ ದೇವರಿದ್ದಾನೆ ಎಲ್ಲ ಸರಿ ಹೋಗುತ್ತೆ. - ಎಂದು ಸಮಾಧಾನ ಮಾಡಿದರು.
ಅಷ್ಟರಲ್ಲಿ ಹತ್ತಿರ ಬಂದ ನಾರಾಯಣ ತನ್ನ ಅಕ್ಕನ ತೊಡೆಯಮೇಲೆ ತಲೆ ಇಟ್ಟು ಅವಳ ಕೈ ಹಿಡಿದು ಅಕ್ಕ ಅಕ್ಕ ಎಂದು ಅಳುತ್ತಿದ್ದ. ಸ್ವಲ್ಪ ಸಮಯದ ಬಳಿಕ ಶಾಸ್ತ್ರಿಗಳು ಕೆಳಗಿಳಿದು ಬರುತ್ತಿರುವ ಸೂಚನೆ ಕಂಡು ಎಲ್ಲ ಅತ್ತ ತಿರುಗಿದರು.
ಗೆಲುವಿನ ನಗು ಮುಖದೊಂದಿಗೆ ಕೆಳಗಿಳಿದು ಬರುತ್ತಿದ್ದ ಶಾಸ್ತ್ರಿಗಳು, ಶಾರದಳನ್ನು ನೋಡಿ,
- ಈಗ ಹೇಗನ್ನಿಸುತ್ತಿದೆಯಮ್ಮ ಶಾರದ..? -
- ಪರವಾಗಿಲ್ಲ, ಒಂದು ರೀತಿ ಆರಾಮವಾಗಿದೆ, ಮನಸ್ಸೆಲ್ಲ ಹಗುರವೆನಿಸುತ್ತಿದೆ -
- ಹ್ಮು.... ಎಲ್ಲ ವೀರಾಂಜನೇಯ ಸ್ವಾಮಿ ಚಿತ್ತ. ದೈರ್ಯವಾಗಿರಿ ಇನ್ನು ಯಾವ ಭಯವೂ ಇಲ್ಲ. ನರಸಿಂಹ ಮೂರ್ತಿ ನಾಳೆ ದೇವಸ್ಥಾನದ ಬಳಿ ಬಾ, ಬರುವಾಗ ಹುಡುಗ ಹುಡುಗಿ ಇಬ್ಬರ ಜಾತಕವನ್ನೂ ತೆಗೆದುಕೊಂಡು ಬಾ. ಸ್ವಾಮಿಯ ಅಪ್ಪಣೆ ಕೇಳಿ ಪ್ರಶಸ್ತ ಲಗ್ನ ಕಟ್ಟುತ್ತೇನೆ. ಸರಿ ನಾನಿನ್ನು ಬರುತ್ತೇನೆ. ಯಾವುದೆ ಕಾರಣಕ್ಕೂ ತಾಯತ ಬಿಚ್ಚದ ಹಾಗೆ ನೋಡಿಕೊಳ್ಳಿ, ಎಚ್ಚರ -
ಎಂದವರೆ ಮನೆಯಿಂದ ಹೊರಟುಬಿಟ್ಟರು.
****************************************************
ಶಾಸ್ತ್ರಿಗಳು ಅಂದು ದಿಗ್ಭಂದನ ಹಾಕಿದ ಕ್ಷಣದಿಂದ ಆ ರೀತಿಯ ಯಾವುದೇ ತೊಂದರೆ ಮತ್ತೆ ಬರಲಿಲ್ಲ. ದಿನಗಳ ಅಂತರದಲ್ಲಿ ಮತ್ತು ಮದುವೆ ಸಿದ್ದತೆಯ ಸಂಭ್ರಮದಲ್ಲಿ, ನರಸಿಂಹ ಮೂರ್ತಿ ದಂಪತಿಗಳು ತಮ್ಮ ಮಗಳಿಗಾದ ತೊಂದರೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದರು. ಮದುವೆಯ ಸಿದ್ದತೆಯೆಲ್ಲ ಸುಸೂತ್ರವಾಗಿ ನಡೆದು, ಮದುವೆಯ ದಿನ ಬಂದೆಬಿಟ್ಟಿತು.
ನರಸಿಂಹ ಮೂರ್ತಿಗಳಿಗೆ ತಮ್ಮ ಮಗಳ ಮದುವೆಯನ್ನು ಬೆಂಗಳೂರಿನಲ್ಲೇ ದಾಂದೂಂ ಅಂತ ಮಾಡುವ ಆಸೆ ಇದ್ದರೂ, ಅಲ್ಲಿನ ಜನಸಾಗರದ ದೊಂಬಿಯ ನಡುವೆ ಮದುವೆ ಮಾಡುವುದಕ್ಕಿಂತ ನಿಮ್ಮ ಹಳ್ಳಿಯಲ್ಲೆ ಮದುವೆ ಮಾಡೋಣ ಎಂಬ ಗಂಡಿನ ಮನೆಯವರ ಅಪೇಕ್ಷೆಯಂತೆ, ಊರಿನಲ್ಲೆ ಇದ್ದ ಒಂದೆ ಒಂದು ಛತ್ರ, ತೋಟದಪ್ಪನ ಛತ್ರ ಗೊತ್ತು ಪಡಿಸಿದ್ದರು. ತಮ್ಮ ಊರಿನ ಮೇಷ್ಟ್ರ ಮಗಳ ಮದುವೆ ಎಂಬ ಅಭಿಮಾನದಿಂದ, ಊರಿನ ಜನರೆಲ್ಲ ಸೇರಿ ಛತ್ರವನ್ನು ಸೊಗಸಾಗಿ ಶೃಂಗರಿಸಿದ್ದರು.
ಮದುವೆಯ ಮಂಟಪದಲ್ಲಿ ಗಂಡು ಹೆಣ್ಣು ಪಕ್ಕದಲ್ಲಿ ಕುಳಿತ್ತಿದ್ದಾರೆ. ಜೋಡಿ ವಾಲಗದವರು
ಭಿಲಹರಿ ರಾಗದಲ್ಲಿ ಶ್ರ್ಈ ಚಾಮುಂಡೇಶ್ವರಿ... ಕೃತಿಯನ್ನು ಸುಶ್ರಾವ್ಯವಾಗಿ ನುಡಿಸುತ್ತಿದ್ದಾರೆ. ಸೇರಿರುವ ಜನರೆಲ್ಲ ಸಡಗರದಲ್ಲಿ ಮುಳುಗಿ ಮಾತನಾಡುತ್ತಿದ್ದಾರೆ.
ಮಂಟಪದಲ್ಲಿ ಕುಳಿತಿರುವ ಪುರೋಹಿತರು, ವಾದ್ಯದವರ ಕಡೆ ನಿಲ್ಲಿಸುವಂತೆ ಕೈ ಸನ್ನೆ ಮಾಡಿ, ಹುಡುಗನಿಗೆ ತಾಳಿಯನ್ನು ಕೈಗೆ ತೆಗೆದುಕೊಳ್ಳುವಂತೆ ಹೇಳಿ, ತಮ್ಮ ಘನವಾದ ಕಂಠದಲ್ಲಿ,
- ಸುಲಗ್ನ.... ಸಾವಧಾನ...., ಸುಮಹೂರ್ತ.. ಸಾವಧಾನ......,, ಶ್ರೀ ಲಕ್ಷ್ಮೀನಾರಾಯಣ ಧ್ಯಾನ ಸಾವಧಾನ.....
ಮಾಂಗಲ್ಯಂ.. ತಂತು ನಾನೇನ... ಮಮ ಜೀವನ......., -
ದೀರ್ಘವಾದ ಘಂಟಾಘೋಷದೊಂದಿಗೆ ಮಂತ್ರೋಚ್ಚಾರಣೆ ನಡೆಯುತ್ತಿದೆ. ನರಸಿಂಹ ಮೂರ್ತಿ ದಂಪತಿಗಳು, ಅಂತು ತಮ್ಮ ಮಗಳ ಮದುವೆ ನೆರವೇರುತ್ತಿದೆ, ತಮ್ಮ ಕನ್ಯಾದಾನದ ಕರ್ತವ್ಯ ಮುಗಿಯುತ್ತಿದೆ ಎಂಬ ಸಂತಸದ ಕಣ್ಣಿರಿಡುತ್ತಿದ್ದಾರೆ.
ಇನ್ನೇನು ಮದುವೆ ಗಂಡು ಶ್ರೀಧರ ತಾಳಿಯನ್ನು ಶಾರದಳಿಗೆ ಕಟ್ಟಲು ಮುಂದಾಗಿ ತನ್ನೆರಡು ಕೈಯಲ್ಲಿ ತಾಳಿಯನ್ನು ಹಿಡಿದು ಶಾರದೆಯ ಕೊರಳ ಬಳಿ ಒಯ್ದದ್ದೆ ತಡ.
- ಏ.... ಏ.... ಹ್ಮು....ಹ್ಮುಉಉ.... ಹೆಹೆ.. ಹೆಹೆಹೆ........ಹ್ಮು.... -
ಒಮ್ಮೆಗೆ ಶಾರದ ರೌದ್ರವಾಗಿ ಬಿಟ್ಟಳು, ತನ್ನ ಹಲ್ಲುಗಳನ್ನು ಕಟ ಕಟ ಕಡಿಯುತ್ತಾ, ವಕ್ರವಾಗಿ ಕತ್ತನ್ನು ಬಲಕ್ಕೆ ಬಗ್ಗಿಸಿ, ದೊಡ್ಡದಾಗಿ ಕಣ್ಣನ್ನು ಬಿಡುತ್ತಾ, ಶ್ರೀಧರನನ್ನು ನೋಡಿ,
- ಏನೋ ...... ಮದ್ವೆ..... ಬೇ..ಕಾ..... ನಿಂಗೆ.... ಮದ್ವೆ... ಸುಮ್ನೆ... ಜಾ..ಗ.. ಖಾಲಿ... ಮಾ...ಡು. ಇಲ್ಲಾಂದ್ರೆ ನೆ..ಟ್ಗಿರ..ಕಿಲ್ಲಾ.... ಹ್ಮು..... ಸು..ಮ್ಕೆ ಬಿ...ಡ್ತಿ...ನಿ.. ಬದುಕ್ಕೋ... ಹೋಗು...!!... ಹ್ಮು....!! ಮದ್ವೆ.. ಮಾಡ್ತರಂತೆ ಮದ್ವೆ....!!! -
ಹತ್ತಿರದಲ್ಲೆ ಇದ್ದ ಹನುಮಂತ ಶಾಸ್ತ್ರಿಗಳು ಆಗಲೆ ತಮ್ಮ ಕೆಲಸ ಪ್ರಾರಂಭಿಸಿಯಾಗಿತ್ತು,
-ಓಂ ಹ್ರೀಂ ಮರ್ಕಟಮರ್ಕಟಾಯ ವಂ ವಂ ವಂ ವಂ ವಂ ವಷಟ್ ಸ್ವಾಹಾ.... ಓಂ ಹ್ರೀಂ ಮರ್ಕಟಮರ್ಕಟಾಯ ಫ಼ಂ ಫ಼ಂ ಫ಼ಂ ಫ಼ಂ ಫ಼ಂ ಫ಼ಟ್ ಸ್ವಾಹ... ಓಂ ಹ್ರೀಂ ಮರ್ಕಟಮರ್ಕಟಾಯ......... -
ಇಲ್ಲದಿದ್ದರೆ ಮತ್ತಷ್ಟು ಅನಾಹುತವಾಗುತ್ತಿತ್ತೋ ಏನೊ, ಶಾಸ್ತ್ರಿಗಳು ಮಂತ್ರ ಗತಿಯನ್ನು ಮುಂದುವರೆಸಿದಂತೆ ಬಳಲಿದಂತೆ ಕಂಡ ಶಾರದ ನಿಧಾನವಾಗಿ ಪಕ್ಕಕ್ಕೆ ವಾಲುತ್ತಾ,
ಹಾಗೆಯೆ ಹಿಂದಕ್ಕೆ ಮಲಗಿ ಬಿಟ್ಟಳು.
ತಾಳಿ ಕಟ್ಟಲು ಸಿದ್ದವಾಗಿದ್ದ ಮದುವೆ ಗಂಡು ಗಾಬರಿಯಿಂದ ಬೆವರುತ್ತಾ, ಆಗಲೆ ತನ್ನ ತಂದೆ ತಾಯಿಯ ಜೊತೆ ಮಂಟಪದಿಂದ ಆಚೆ ನಿಂತಿದ್ದ.
ಶಾಸ್ತ್ರಿಗಳು ಮತ್ತೇನೋ ಮಂತ್ರಗಳನ್ನು ಉಚ್ಚರಸಿ, ನಿಧಾನವಾಗಿ ಕಣ್ಣು ಬಿಟ್ಟು, ಹತ್ತಿರದಲ್ಲಿದ್ದ ನೀರನ್ನು ಶಾರದೆಯ ಮೇಲೆ ಚುಮಿಕಿಸಿದರು. ಹಾಗೆಯೆ ಅವಳ ಬಲ ತೋಳಿನಲ್ಲಿ ತಾವು ಕಟ್ಟಿದ್ದ ತಾಯತ ಮಾಯವಾಗಿರುವುದನ್ನು ಗಮನಿಸಿ, ಕಣ್ಣ ಸನ್ನೆಯಲ್ಲೆ ನರಸಿಂಹ ಮೂರ್ತಿಗಳನ್ನು ಅದರ ಬಗ್ಗೆ ಕೇಳಿದರು. ತಮಗೆ ಗೊತ್ತಿಲ್ಲವೆಂದ ಮೂರ್ತಿಗಳು ಅದೆ ಭಾಷೆಯಲ್ಲಿ ತಮ್ಮ ಪತ್ನಿಯನ್ನು ಕೇಳಿದರು. ಆಕೆಯಿಂದಲೂ ನಕಾರಾತ್ಮಕ ಉತ್ತರ. ಏನಾಯ್ತೆಂದು ಯಾರಿಗೂ ತಿಳಿಯಲಿಲ್ಲ. ಅಷ್ಟರಲ್ಲಿ ಸೇರಿದ್ದ ಜನರಲ್ಲಿ ಗುಸು ಗುಸು ಪ್ರಾರಂಭವಾಯ್ತು.
ಗಂಡಿನ ಮನೆಯ ಕೆಲ ಹಿರಿಯರೊಂದಿಗೆ ಮಾತುಕತೆ ನಡೆಸಿದ ಗಂಡಿನ ತಂದೆ ರಾಮಮೂರ್ತಿಗಳು, ಲಲಿತಮ್ಮ ನರಸಿಂಹ ಮೂರ್ತಿಗಳನ್ನು ಪಕ್ಕಕ್ಕೆ ಕರೆದು,
- ನೋಡಿ ನರಸಿಂಹ ಮೂರ್ತಿಗಳೆ, ನಾವು ಹೀಗೆ ಹೇಳ್ತೀವಿ ಅಂತ ಬೇಸ್ರ ಮಾಡ್ಕೋಬೇಡಿ, ನೀವೇ ಹೇಳಿದ ಹಾಗೆ ಜಾತ್ಕ ತೋರಿಸ್ಬೇಕಿತ್ತು ಅನ್ಸುತ್ತೆ. ಇದೇನೋ ಸರಿ ಹೋಗ್ತಿಲ್ಲ, ಅನ್ಯತಾ ಭಾವಿಸಬೇಡಿ, ನಮಗೆ ಈ ಮದುವೆ ಇಷ್ಟ ಇಲ್ಲ ಸ್ವಾಮಿ. ನನಗೆ ಗೊತ್ತು ತಮಗೆ ನೋವಾಗುತ್ತೆ ಅಂತ, ಆದ್ರೆ ಈ ವಿಷ್ಯದಲ್ಲಿ ನನ್ನ ಮಗ, ಹಾಗು ನನ್ನಾಕೆ ಬಿಲ್ ಕುಲ್ ಒಪ್ತಾಇಲ್ಲ. ದಯಮಾಡಿ ನಮ್ಮನ್ನು ಕ್ಷಮಿಸಿಬಿಡಿ. - ಅಂತ ಕೈ ಮುಗಿದುಬಿಟ್ರು.
- ಅಯ್ಯೊ ದಯವಿಟ್ಟು ಹಾಗೆ ಹೇಳ ಬೇಡಿ, ಒಬ್ಬಳೆ ಮಗಳು, ಅವಳ ಜೀವನ ಹಾಳಾಗಿ ಬಿಡುತ್ತೆ. ಹಸೆಮಣೆ ಏರಿದ ಹೆಣ್ಣು, ಮದುವೆ ಮುಗಿಯದೆ ಹಸೆಮಣೆಯಿಂದ ಕೆಳಗಿಳಿದರೆ ಹೇಗೆ. ಮದುವೆಯಾದರೆ ಅದರಿಂದ ಎಲ್ಲಾ ಸರಿ ಹೋಗುತ್ತದೆ. ದಯಮಾಡಿ ನಮ್ಮ ಮಾತು ಕೇಳಿ, ನಮ್ಮನ್ನು ನಡುನೀರಿನಲ್ಲಿ ಕೈ ಬಿಡಬೇಡಿ, ನಿಮ್ಮ ದಮ್ಮಯ್ಯ. ತಿಳಿದವರು ನೀವು, ದಯವಿಟ್ಟು ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಕರುಣೆ ತೋರಿ, ಮದುವೆಯಾದ್ರೆ ಸರಿಹೋಗುತ್ತೆ... -
ಇನ್ನಿಲ್ಲದಂತೆ ದಂಬಾಲು ಬಿದ್ದು ಬೇಡಿ ಕೊಂಡರು ಶಾರದೆಯ ಅಪ್ಪ ಅಮ್ಮ. ಆದರೆ ಗಂಡಿನ ಕಡೆಯವರ ಮನಸ್ಸು ಕರಗಲೇ ಇಲ್ಲ. ಕತ್ತು ಬಗ್ಗಿಸಿ ನಕಾರಾತ್ಮಕ ಉತ್ತರ ಕೊಟ್ಟರೆ ಹೊರತು ಮದುವೆಗೆ ಸಮ್ಮತಿ ಸೂಚಿಸುವ ಯಾವ ಸೂಚನೆಯನ್ನೂ ಕೊಡಲಿಲ್ಲ.
ಮುಂದುವರೆಯುವುದು...................
ಮೊದಲ ಕಂತಿಗಾಗಿ ಒತ್ತಿರಿ sampada.net/blog/%E0%B2%B6%E0%B2%BE%E0%B2%B0%E0%B2%A6%E0%B3%86%E0%B2%AF-%E0%B2%AE%E0%B2%A6%E0%B3%81%E0%B2%B5%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%A6%E0%B3%86%E0%B2%B5%E0%B3%8D%E0%B2%B5-%E2%80%8D-%E2%80%8D%E2%80%8D-%E0%B3%A7/16/04/2012/36399
ಶಾರದೆಯ ಮದುವೆ ನಿಂತಿದ್ದು, ನನ್ನ ಮನಸ್ಸಿಗೆ ಆಘಾತವಾಗಿದೆ ಸಮಾಧಾನವಾದ ಮೇಲೆ ನಿಮ್ಮೊಡನೆ ಸೇರುತ್ತೇನೆ. ನನಗೆ ಸ್ವಲ್ಪ ಸಮಯ ಬೇಕು ದಯ ಮಾಡಿ ಸಹಕರಿಸಿ.
ತಮ್ಮವ ರಾಮಮೋಹನ.
Comments
ಉ: ಶಾರದೆಯ ಮದುವೆ ಮತ್ತು ದೆವ್ವ - ೨
ಉ: ಶಾರದೆಯ ಮದುವೆ ಮತ್ತು ದೆವ್ವ - ೨
In reply to ಉ: ಶಾರದೆಯ ಮದುವೆ ಮತ್ತು ದೆವ್ವ - ೨ by Jayanth Ramachar
ಉ: ಶಾರದೆಯ ಮದುವೆ ಮತ್ತು ದೆವ್ವ - ೨
ಉ: ಶಾರದೆಯ ಮದುವೆ ಮತ್ತು ದೆವ್ವ - ೨
In reply to ಉ: ಶಾರದೆಯ ಮದುವೆ ಮತ್ತು ದೆವ್ವ - ೨ by kavinagaraj
ಉ: ಶಾರದೆಯ ಮದುವೆ ಮತ್ತು ದೆವ್ವ - ೨
In reply to ಉ: ಶಾರದೆಯ ಮದುವೆ ಮತ್ತು ದೆವ್ವ - ೨ by makara
ಉ: ಶಾರದೆಯ ಮದುವೆ ಮತ್ತು ದೆವ್ವ - ೨
In reply to ಉ: ಶಾರದೆಯ ಮದುವೆ ಮತ್ತು ದೆವ್ವ - ೨ by kavinagaraj
ಉ: ಶಾರದೆಯ ಮದುವೆ ಮತ್ತು ದೆವ್ವ - ೨
ಉ: ಶಾರದೆಯ ಮದುವೆ ಮತ್ತು ದೆವ್ವ - ೨
In reply to ಉ: ಶಾರದೆಯ ಮದುವೆ ಮತ್ತು ದೆವ್ವ - ೨ by Chikku123
ಉ: ಶಾರದೆಯ ಮದುವೆ ಮತ್ತು ದೆವ್ವ - ೨
In reply to ಉ: ಶಾರದೆಯ ಮದುವೆ ಮತ್ತು ದೆವ್ವ - ೨ by RAMAMOHANA
ಉ: ಶಾರದೆಯ ಮದುವೆ ಮತ್ತು ದೆವ್ವ - ೨
ಉ: ಶಾರದೆಯ ಮದುವೆ ಮತ್ತು ದೆವ್ವ - ೨