ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..

ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..

ಕೆಲವೊಮ್ಮೆ ಶಾಲಾಮಕ್ಕಳನ್ನು ನೋಡುವಾಗ ಹಾಗನ್ನಿಸುತ್ತದೆ. ಸುಡು ಬಿಸಿಲಿರುತ್ತದೆ. ಆಹೊತ್ತಿನಲ್ಲೂ ನೀಲಿಬಣ್ಣದ ಕೋಟು, ಕಪ್ಪು ಬೂಟಿನೊಳಕ್ಕೆ ತಮ್ಮನ್ನು ತುರುಕಿಕೊಂಡು, ೭-೮ ಕೆ.ಜಿ. ಭಾರವಿರುವ ಭ್ಯಾಗ್ ಗಳನ್ನು ಹೊತ್ತುಕೊಂಡು ಟ್ರಾಫಿಕ್ ಸಿಗ್ನಲ್ಗಳು, ಸಿಟಿ ಬಸ್ ಗಳಲ್ಲಿ ಪ್ರಯಾಣ ಮಾಡುವ ಮಕ್ಕಳನ್ನು ನೋಡಿದಾಗ ಇವರು ಶಾಲೆಗೆ ಹೋಗುತ್ತಿದ್ದಾರಾ ಅಥವಾ ಯುದ್ಧಕ್ಕೆ ಹೊರಟಿದ್ದಾರಾ ಅನ್ನಿಸುತ್ತದೆ. ಇನ್ನು ಕೆಲಹುಡುಗರನ್ನು ಕುರಿತುಂಬಿದಂತೆ ಮಾರುತಿವ್ಯಾನಿನೊಳಕ್ಕೆ ದಬ್ಬಿ ಕಳಿಸಲಾಗುತ್ತದೆ. ಸಾಲದ್ದಕ್ಕೆ ಕೆಟ್ಟ ಕಾಂಪಿಟಿಶನ್ ಬೇರೆ. ಕೆಲ ತಿಂಗಳುಗಳಹಿಂದೆ ಒಬ್ಬರಮನೆಗೆ ಹೋಗಿದ್ದಾಗ ಎಸ್ಸೆಲ್ಸಿ ಪಾಸಾದ ಆ ಹುಡುಗ ಗೊಳೋ ಅಂತ ಅಳುತ್ತಾ ಕುಳಿತಿದ್ದ. ಯಾಕೆ ಅಂತ ಕೇಳಿದ್ದಕ್ಕೆ ನನಗೆ ಇಂಗ್ಲೀಷ್ ನಲ್ಲಿ ಬರೀ ೮೪ ಅಂಕಗಳು ಬಂದಿವೆ. ಅದೇ ನನ್ನ ಸ್ನೇಹಿತ, ಎಲ್ಲ ಟೆಸ್ಟುಗಳಲ್ಲಿ, ಅರ್ಧವಾರ್ಶಿಕದಲ್ಲಿ ಕಡಿಮೆ ಅಂಕ ತಗೊಂಡರೂ ಅವನಿಗೆ ೯೦ ಬಂದಿದೆ..ಇದು ಅನ್ಯಾಯ ಅಂತ ಭೋರಿಡುತ್ತಿದ್ದ. ತಂದೆ ತಾಯಿಯರದ್ದೂ ಅದೇಗೋಳು. ಅಯ್ಯೋ ಈ ಬಾರಿ ಕಡಿಮೆ ಅಂಕ ತಗೊಂಡಿದ್ದಾನೆ ನೋಡಿ ಎಲ್ಲಿ ಸೀಟು ಸಿಗುತ್ತೋ ಏನು ಕತೆಯೋ ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದರು.
ಒಮ್ಮೆ ಅನಂತಮೂರ್ತಿಯವರು ಈ ಮಾತು ಹೇಳಿದ್ದರು. ಆಯಾ ಬಡಾವಣೆಯ ಶಾಲೆಗಳಲ್ಲಿಯಮಕ್ಕಳು ಅಲ್ಲಿಗೆ ಹತ್ತಿರವಿರುವ ಶಾಲೆಗಳಲ್ಲೇ ಕಲಿಯಬೇಕು. ಇದು ಕಡ್ಡಾಯವಾಗಬೇಕು. ಹಾಗಾದಾಗ ಎಲ್ಲ ಬಡ/ಶ್ರೀಮಂತ/ದಡ್ದ/ಬುದ್ಧಿವಂತ ಮಕ್ಕಳು ಒಂದೆಡೆ ಸೇರಿ ಆರೋಗ್ಯಕರ ವಾತಾವರಣ/ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಅಂತ. ಶಿಕ್ಷಣದವಿಷಯದಲ್ಲಿ ಅನಂತ್ ಉತ್ತಮ ಸಲಹೆ ಕೊಡುತ್ತಾರೆ. ಆದರೆ ಯಾರೂ ಅದರಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅದೇ ಬೇಜಾರು. ಹೀಗೆ ಮನೆಗೆ ಹತ್ತಿರವಿರುವ ಶಾಲೆಗೆಕಳಿಸುವುದು, ಸರಳ ಯೂನಿಫಾರಂ ನಿಗಧಿಪಡಿಸುವುದು, ಬೆಳಗ್ಗೆ ೧೦ ರಿಂದ ಮಧ್ಯಾನ್ಹ ೩.೩೦ ರವರೆಗೆ ಶಾಲೆ ನಡೆಸುವುದು, ನಂತರ ೫ ಗಂಟೆಯವರೆಗೆ ಶಾಲಾ ಆವರಣದಲ್ಲಿ ಮಕ್ಕಳನ್ನು ಆಟವಾಡಿಸುವುದು ಒಳ್ಳೆಯದಲ್ಲವೇ? ಬಹಳಷ್ಟು ಶಾಲೆಗಳಲ್ಲಿ ವಿಶಾಲವಾದ ಮೈದಾನಗಳೇ ಇರುವುದಿಲ್ಲ. ಬರೀ ವ್ಯಾನು, ಸ್ಕೂಲು, ಟ್ಯೂಷನ್ ಅಂದುಕೊಂಡು ಆಟ-ಚಟುವಟಿಕೆಗಳಿಲ್ಲದೆ ಮಕ್ಕಳು ಬಾಲ್ಯವನ್ನು ಕಳೆಯಬೇಕೆ. ಚಿಕ್ಕ ಚಿಕ್ಕ ಊರಿನ ಥರ ಸಂಜೆಯಾದನಂತರ ಬೀದಿಯ ಹುಡುಗರೆಲ್ಲಾ ಸೇರಿ ಆಟವಾಡುವುದು ಇವೆಲ್ಲಾ ಈಗ ಮರೆಯಾಗಿದೆ. ಈಗ ಏನಿದ್ದರೂ ಮನೆಯೊಳಗೆ ಆಡಿಕೊಳ್ಳಬೇಕು. ಎಲ್ಲೋ ಒಂದುಕಡೆ ಮಕ್ಕಳನ್ನು ಇಶ್ಟೆಲ್ಲಾ ಬಂಧನಗಳನ್ನು ಮಾಡಿ ಉಸಿರುಗಟ್ಟಿಸುತ್ತಿದ್ದೇವೆ ಎನ್ನಿಸುವುದಿಲ್ಲವೇ?

Rating
No votes yet

Comments