ಶಿಕ್ಷೆ ಭೀತಿ : ಪ್ರಾಣಿಗಳಾಗತೊಡಗಿದ ಮಾನವರು

ಶಿಕ್ಷೆ ಭೀತಿ : ಪ್ರಾಣಿಗಳಾಗತೊಡಗಿದ ಮಾನವರು

ಬೊಗಳೂರು, ಡಿ.19- "ಮಾನವೀಯ" ಚೇಷ್ಟೆಗಳಿಂದ ಪ್ರೇರಿತವಾಗಿರುವ ಪಶು ಸಮುದಾಯದಲ್ಲಿ ಕೂಡ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಇದರ ಹಿಂದಿನ ತಥ್ಯ ಶೋಧನೆಗೆ ಹೊರಟಾಗ ಅಮೂಲ್ಯ ಮಾಹಿತಿಗಳು ಬೆಳಕಿಗೆ ಬಂದವು. (bogaleragale.blogspot.com)

ಮಾನವೀಯ ಸಮುದಾಯದಲ್ಲಿ ಇತ್ತೀಚೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗತೊಡಗಿದೆ. ಹಾಗಾಗಿ ಅಮಾನವೀಯರಾಗಿರುವುದೇ ಲೇಸು ಎಂಬ ನಿರ್ಧಾರಕ್ಕೆ ಈ ಕ್ರಿಮಿ-ನಲ್‌ಗಳು ಬಂದಿರುವುದೇ ಕಾರಣ!

ಬಡಪಾಯಿ ಹಸುವೊಂದರ ಮೇಲೆ ಆಸಿಡ್ ದಾಳಿ ನಡೆದ ಸುದ್ದಿ ಇಲ್ಲಿ ವರದಿಯಾಗಿದ್ದು, ಸುದ್ದಿಯ ಬೆಂಬತ್ತಿದ ಬ್ಯುರೋ, ಈ ಅಂಶವನ್ನು ಕಂಡುಕೊಂಡಿದೆ.

ಬೊಗಳೆ ರಗಳೆ ಬ್ಯುರೋ ನಡೆಸಿದ ತನಿಖೆಯ ಪ್ರಕಾರ, ಈ ಹಸುವಿನ ಮೇಲೆ ಆಸಿಡ್ ದಾಳಿ ನಡೆಸಿದ್ದು ಮಾನವರಲ್ಲ, ಅಮಾನವರು ಎಂದು ದೃಢಪಟ್ಟಿದೆ. ಈ ಪಶುವನ್ನು ಆಸಿಡ್‌ಗೆ ಬಲಿಪಶು ಮಾಡಿದ್ದು ಮತ್ತೊಂದು ಪಶುವೇ ಆಗಿದೆ ಎಂದು ಪತ್ತೆಯಾಗಿದ್ದು, ಈ ಪಶುವಿಗಾಗಿ ಶೋಧ ನಡೆಸಲಾಗುತ್ತಿದೆ.

ಮಾನವ ಸಮುದಾಯದಲ್ಲಿ ಇತ್ತೀಚೆಗೆ ನ್ಯಾಯವ್ಯವಸ್ಥೆ ಬಲಗೊಂಡಂತೆ ಕಾಣಿಸುತ್ತಿದೆ. ಹಾಗಾಗಿ ಜೆಸ್ಸಿಕಾ ಲಾಲ್, ಪ್ರಿಯದರ್ಶಿನಿ ಮಟ್ಟೂ ಮುಂತಾದವರನ್ನು ಕೊಲೆ ಮಾಡಿದ ಹಂತಕರಿಗೆ ಶಿಕ್ಷೆಯಾಗುತ್ತಿದೆ. ಭಯೋತ್ಪಾದಕರಿಗೆ ಕೇಂದ್ರ ಸಚಿವ ರಿಗೂ, ಕ್ರಿಕೆಟಿಗರಿಗೂ ಶಿಕ್ಷೆಯಾಗತೊಡಗಿದೆ.

ಹಾಗಾಗಿ ಪ್ರಾಣಿಗಳಾದರೇ ಸಲೀಸು ಎಂಬುದನ್ನರಿತ ಕೆಲವು ಮಾನವ ಕ್ರಿಮಿಗಳು, ಪ್ರಾಣಿಗಳಾಗಿ ಪರಿವರ್ತನೆಗೊಂಡು ಈ ಕೃತ್ಯ ಎಸಗಿವೆ ಎಂಬುದು ಸಂಶೋಧನೆಯ ಸಾರವಾಗಿದೆ.

ಹಾಗಾದರೆ ಈ ಪ್ರಾಣಿಗಳು ಆಸಿಡ್ ಬಳಸುವುದನ್ನು ಹೇಗೆ ಕಲಿತವು ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಅರಿತುಕೊಂಡಿರುವ ನಮ್ಮ ಸಿಬ್ಬಂದಿ ಅದಕ್ಕೆ ಉತ್ತರವನ್ನೂ ತಯಾರಿಸಿದ್ದಾರೆ. ಅದುವೇ ಪೂರ್ವ ಜನ್ಮದ ಸುಕೃತ ಅನುಭವ.

ಇದೇ ಕಾರಣಕ್ಕಾಗಿಯೇ ಈ ಪ್ರಾಣಿಗಳು ಹಿಂದೆ ಮಾನವರಾಗಿದ್ದಾಗ ಎಲ್ಲಾ ಕ್ರಿಮಿನಲ್ ಕೃತ್ಯಗಳನ್ನು ಕರಗತ ಮಾಡಿಕೊಂಡಿದ್ದು, ಮುಂದಕ್ಕೆ ಪ್ರಯೋಜನಕ್ಕೆ ಬರುತ್ತದೆ ಎಂಬ ದೂ(ದು)ರಾಲೋಚನೆ ಹೊಂದಿದ್ದರು. ಹಾಗಾಗಿ ಇದು ಸಾಧ್ಯವಾಗಿದೆ.

Rating
No votes yet

Comments