ಶಿವನಿಗೇ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ೧
ಶಿವನಿಗೇ ಸಡ್ಡು ಹೊಡೆದ ಕೆಚ್ಚೆದೆಯ ಕನ್ನಡಿಗ - ಭಾಗ ೧
ದಕ್ಷಿಣಾದಿ ಸಂಗೀತಕ್ಕೆ ಕರ್ನಾಟಕ ಸಂಗೀತವೆಂದು ಹೆಸರು ಬರಲು, ಭಾರತೀಯ ಸಂಗೀತ ಎರಡಾಗಿ ಕವಲಾದಾಗ ದಕ್ಷಿಣದ ಕವಲನ್ನು ರೂಢಿಸುವುದರಲ್ಲಿ ಕರ್ನಾಟಕದವರು ಹಲವರು ಲಾಕ್ಷಣಿಕರು ಕೆಲಸ ಮಾಡಿದ್ದೂ ಕೂಡ ಪ್ರಮುಖ ಕಾರಣಗಳಲ್ಲೊಂದು. ಯಾವುದೇ ಕಲೆ, ನಿಂತ ನೀರಲ್ಲ. ಬದಲಾಗುತ್ತ ಹೋಗುತ್ತಿರುತ್ತದೆ. ಆದರೆ, ಈ ಬದಲಾವಣೆಗಳು ಮೂಲವನ್ನೇ ಹಾಳುಗೆಡೆಯುವಂತಿರಬಾರದಲ್ಲ! ಇಂತಹ ಸಂದರ್ಭದಲೇ ಲಾಕ್ಷಣಿಕರು ಬಹಳ ಪ್ರಮುಖರಾಗುತ್ತಾರೆ. ನಾನು ಹಿಂದೆಯೇ ಒಮ್ಮೆ ಹೇಳಿದ್ದೆ - ಸಂಗೀತದಲ್ಲಿ ಲಕ್ಷ್ಯ (practice) ಮತ್ತು ಲಕ್ಷಣ (theory) ಎಂಬವು ಎರಡೂ ಮುಖ್ಯವಾದುವು. ಲಕ್ಷ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ, ಅವುಗಳನ್ನು ಲಕ್ಷಣದ ಚೌಕಟ್ಟಿಗೆ ಹೊಂದಿಸುವನು, ಮತ್ತು ಹೇಗೆ ಲಕ್ಷ್ಯ ಬದಲಾಗುತ್ತಿದ್ದಂತೆ, ಲಕ್ಷಣವು ಈ ಬದಲಾವಣೆಗಳನ್ನು ದಾಖಲೆ ಮಾಡುವುದು ಬಹಳ ಬಲು ಜವಾಬ್ದಾರಿಯ ಕೆಲಸ. ಇಂತಹ ಹಲವು ಕನ್ನಡಿಗ ಲಕ್ಷಣಕಾರರು ನಮ್ಮಲ್ಲಿ ಆಗಿಹೋಗಿದ್ದಾರೆ.
ವಿಜಯನಗರ ಸಾಮ್ರಾಜ್ಯ ಸ್ಹಾಪನಾಚಾರ್ಯ ಎಂಬ ಬಿರುದು ಹೊತ್ತ ಮಾಧವ ವಿದ್ಯಾರಣ್ಯರು ಸಂಗೀತ ಸಾರ ಎಂಬ ಪುಸ್ತಕವನ್ನು ರಚಿಸಿದ್ದರೆಂದು ತಿಳಿದುಬರುತ್ತದೆ. ಹೇಗೆ ಜೀವಶಾಸ್ತ್ರಕ್ಕೆ Taxonomy ಮುಖ್ಯವಾಗುತ್ತೋ, ಹೇಗೆ ರಸಾಯನ ಶಾಸ್ತ್ರಜ್ಞರು periodic table ಅನ್ನು ಅಭ್ಯಾಸ ಮಾಡುತ್ತಾರೋ, ಅದೇ ರೀತಿ ಸಂಗೀತಕ್ಕೂ ರಾಗ-ತಾಳಗಳ ಪದ್ಧತಿಗೆ ಒಂದು ವಿಂಗಡಣೆಯೆ ಕ್ರಮ ಬೇಕು. ಹಿಂದಿನಿಂದಲೂ ರಾಗಗಳನ್ನು ಮೇಳಗಳನ್ನೂ, ಜನ್ಯಗಳನ್ನೂ ಆಗಿ ವಿಂಗಡಿಸುವ ಪದ್ಧತಿಯಿದೆ. ಇದನ್ನು ಬಹಳ ಸರಳ ಮಾಡಿ ಹೇಳುವುದಾದರೆ, ಸ್ವಲ್ಪ ಒಂದಕ್ಕೊಂದು ಹೋಲುವ ರಾಗಗಳೆಲ್ಲವನ್ನೂ ಒಂದು ಮೇಳಕ್ಕೆ ಸೇರಿಸಬಹುದು. ಈಗ ಹುಲಿ, ಸಿಂಹ, ಬೆಕ್ಕು ಗಳೆಲ್ಲ ಬೆಕ್ಕಿನ genus (Felis) ಸೇರುವುದಿಲ್ಲವೇ? ಹಾಗೆ ಅನ್ನಬಹುದು.
ವಿದ್ಯಾರಣ್ಯರು ಅವರ ಕಾಲದಲ್ಲಿ ಬಳಕೆಯಲ್ಲಿದ್ದ ೫೦ ರಾಗಗಳನ್ನು ೧೫ ಮೇಳಗಳಲ್ಲಿ ವಿಂಗಡಿಸಿ ಹೇಳಿದ್ದರು. ಅವರ ಸಂಗೀತಸಾರದ ಯಾವ ಹಸ್ತಪ್ರತಿಗಳೂ ದೊರೆತಿಲ್ಲ. ನಂತರ ಬಂದ ಕೆಲವು ಸಂಗೀತಗ್ರಂಥಗಳಲ್ಲಿ ಪುನರುಕ್ತವಾಗಿರುವ ಭಾಗಗಳಿಂದಷ್ಟೇ ಇದನ್ನು ಅರಿಯಬಹುದು.
ವಿದ್ಯಾರಣ್ಯರು ೧೫ ಮೇಳಗಳನ್ನು ಹೇಳಿದ್ದರು ಎಂದೆನಲ್ಲ - ಈ ಮೇಳಗಳ ಸಂಖ್ಯೆ ಯಾವಾಗಲೂ ಒಂದೇ ಇರಲಿಲ್ಲ. ಸಂಗೀತ ಪರಂಪರೆಯಲ್ಲಿ, ಕೆಲವು ಜನಪ್ರಿಯ ರಾಗಗಳುಹಿನ್ನೆಲೆಗೆ ಸರಿಯುವುದೂ, ಅಪರೂಪ ರಾಗಗಳು ಮುಂಚೂಣಿಗೆ ಬರುವುದೂ ಆಗಿರುವ ಸಂಗತಿ. ಯಾವುದೇ ಕಾಲದಲ್ಲಿ ಸುಮಾರು ೫೦-೧೦೦ ರಾಗಗಳು ಪ್ರಚಲಿತದಲ್ಲಿರಬಹುದನ್ನು ಕಾಣಬಹುದು. ವಿದ್ಯಾರಣ್ಯರಿಗಿಂತ ೨೦೦-೨೫೦ ವರ್ಷಗಳ ಮೊದುಲೇ ಬಂದುಹೋದ ಬಸವಣ್ಣನವರ ಕಾಲದಿಂದಲೇ ೩೨ ರಾಗಗಳು ಪ್ರಖ್ಯಾತವಾಗಿದ್ದವು ಎಂದು ಅವರ ಒಂದು ವಚನದಿಂದ ತಿಳಿದುಬರುತ್ತದೆ.
ಎನ್ನ ಕಾಯವ ದಂಡಿಗೆಯ ಮಾಡಯ್ಯ
ಎನ್ನ ಶಿರವ ಸೋರೆಯ ಮಾಡಯ್ಯ
ಎನ್ನ ನರಗಳ ತಂತಿಯ ಮಾಡಯ್ಯ
ಬತ್ತೀಸ ರಾಗವ ಹಾಡಯ್ಯ
ಕೂಡಲ ಸಂಗಮ ದೇವ!
ಇನ್ನು ಮುಂದೆ, ವಿದ್ಯಾರಣ್ಯರಿಗಿಂತ ೧೫೦ ವರ್ಷಗಳ ನಂತರ ಬಂದ ಪುರಂದರದಾಸರೂ ತಮ್ಮ ಒಂದು ದೇವರನಾಮದಲ್ಲಿ ತುತ್ತುರು ತೂರೆಂದು ಬತ್ತಿಸರಾಗಗಳನ್ನು ಚಿತ್ತಜಜನಕ ತನ್ನ ಕೊಳಲಿನೂದಿದನು ಎಂದು ಹೇಳಿದ್ದಾರೆ; ಅಷ್ಟೇ ಅಲ್ಲದೆ, ಈ ರಚನೆ ಮತ್ತು, ಇನ್ನೂ ಕೆಲವು ರಚನೆಗಳಲ್ಲಿ ಕೆಲವು ರಾಗಗಳನ್ನು ಹೆಸರಿಸಿಯೂ ಇದ್ದಾರೆ. (ಅವೆಲ್ಲ ಸೇರಿ, ಮೂವತ್ತೆರಡು ರಾಗಗಳೂ ಆಗುವುದು ಉಲ್ಲೇಖನೀಯವಾದ ಸಂಗತಿ). ಆದರೆ ವಿದ್ಯಾರಣ್ಯರು ಹೇಳಿರುವ ರಾಗಗಳಲ್ಲಿ ಕೆಲವು ಪುರಂದರ ದಾಸರ ಪಟ್ಟಿಯಲ್ಲಿದ್ದರೆ, ಕೆಲವು ಹೊಸವು. ಇದೇಕೆಂದು ಹೇಳಿದೆನೆಂದರೆ, ರಾಗಗಳು ಬದಲಾಗುತ್ತ ಹೋಗುತ್ತವೆ ಎಂಬ ವಿಷಯವನ್ನು ತಿಳಿಯಪಡಿದುವುದಕ್ಕೆ, ಅಷ್ಟೆ!
ಪುರಂದರದಾಸರ ಸಮಕಾಲೀನರಾದ ಇನ್ನೊಬ್ಬ ಪ್ರಮುಖ ಲಕ್ಷಣಕಾರ ರಾಮಾಮಾತ್ಯ. ಇವನ ಸ್ವರಮೇಳಕಲಾನಿಧಿ ಎಂಬ ಪುಸ್ತಕ ದೊರೆತಿದೆ. ಇದರಲ್ಲಿ, ತನ್ನ ಕಾಲದ ರಾಗಗಳನ್ನು ೨೦ ಮೇಳಗಳಲ್ಲಿ ಹಂಚಿ, ಅವುಗಳ ಲಕ್ಷಣಗಳನ್ನು ವಿವರಿಸುತ್ತಾತೆ ಈತ. ರಾಮಾಮಾತ್ಯ, ವಿಜಯನಗರದ ಕೊನೆಯ ದೊರೆ ಅಳಿಯ ರಾಮರಾಯನಿಗೆ ಮಂತ್ರಿಯಾಗಿದ್ದವನು. ಅಂತೂ, ವಿಜಯನಗರದ ಮೊದಲರಸನ ಕಾಲದಲ್ಲಿ ಒಂದು, ಕೊನೆಯರಸನ ಕಾಲದಲ್ಲಿ ಒಂದು ಪ್ರಮುಖ ಸಂಗೀತ ಶಾಸ್ತ್ರಗ್ರಂಥ ರಚನೆ ಆಗಿರುವುದು ಕಾಕತಾಳೀಯ ಆಗಿರಬಸುದಾದರೂ, ಗಮನಿಸಬಹುದಾದ ಸಂಗತಿ.
೧೫೬೫ರಲ್ಲಿ ವಿಜಯನಗರ ಮಣ್ಣುಮುಕ್ಕಿತು. ಉಳಿದುಪಳಿದವರು ಪೆನುಕೊಂಡೆಗೂ, ಚಂದ್ರಗಿರಿಗೂ ಓಡಿಹೋದರು. ಆದರೆ, ಆ ರಾಜ್ಯಗಳು ವಿಜಯನಗರದ ಸಾಂಸ್ಕೃತಿಕ ವೈಭವಕ್ಕೆ ಎಂದೂ ಸರಿಸಾಟಿಯಾಗಲಿಲ್ಲ.ಇದರ ನಂತರ, ದಕ್ಷಿಣದಲ್ಲಿ ೧೭ನೇ-೧೮ನೇ ಶತಮಾನಗಳಲ್ಲಿ ಕಲೆಗಳಿಗೆ ಆಶ್ರಯವಿತ್ತವರಲ್ಲು ಮೊದಲಿನವರು ತಂಜಾವೂರಿನ ನಾಯಕರು. ನಂತರ ಮೈಸೂರಿನ ಒಡೆಯರು.
ಶಿವನ ಜೊತೆಗೇ ಪಣತೊಡಲು ಸಿದ್ಧವಾದ ಕನ್ನಡಿಗ ಸಂಗೀತ ಶಾಸ್ತ್ರಜ್ಞ ಇದ್ದದ್ದು ಈ ಎರಡು ರಾಜ್ಯಗಳಲ್ಲಿ ಎಲ್ಲಿ ಆಗಿರಬಹುದು ಎಂದು ಊಹಿಸಬಲ್ಲಿರಾ?
(ಎರಡನೇ ಕಂತಿನಲ್ಲಿ ಮುಂದುವರೆಯುವುದು)
Rating