ಶಿವ ಶಿವೆಯರ ಸರಸ
ಚಂದಿರನು ಬೂದಿಚದುರಿದ ಜಟೆಯೊಳಹೊಗುವ
ಚಂದದಲಿ ಹೆಡೆಯಿಳಿಸಿ ಹಾವು ಭುಜದಲಿ ಜಾರೆ
ನಂದಿ ನೆಪಹೂಡಿ ಗೊರಸಿನಲಿ ಕಣ್ಣೊರೆಸುತಿಹ-
ನಂದು ಗಿರಿಜೆಯ ಮೊಗಕೆ ಮುತ್ತನಿಡುತಿರೆ ಶಂಭು!
ಸಂಸ್ಕೃತ ಮೂಲ : (ವಿದ್ಯಾಕರನ ಸುಭಾಷಿತ ರತ್ನ ಕೋಶ, ಪದ್ಯ ೬೨)
ಜಟಾಗುಲ್ಮೋತ್ಸಂಗಂ ಪ್ರವಿಶತಿ ಶಶೀ ಭಸ್ಮಗಹನಂ
ಫಣೀಂದ್ರೋಽಪಿ ಸ್ಕಂಧಾದ್ ಅವತರತಿ ಲೀಲಾಂಚಿತಫಣಃ |
ವೃಷಃ ಶಾಠ್ಯಂ ಕೃತ್ವಾ ವಿಲಿಖತಿ ಖುರಾಗ್ರೇಣ ನಯನಂ
ಯದಾ ಶಂಭುಶ್ಚುಂಬತ್ಯಚಲದುಹಿತುರ್ವಕ್ತ್ರ ಕಮಲಂ ||
जटा-गुल्मोत्सङ्गं प्रविशति शशी भस्म-गहनं
फणीन्द्रोऽपि स्कन्धाद् अवतरति लीलाञ्चित-फणः ।
वृषः शाठ्यं कृत्वा विलिखति खुराग्रेण नयनं
यदा शम्भुश् चुम्बत्यचलदुहितुर् वक्त्र-कमलम् ॥
- ಹಂಸಾನಂದಿ
ಕೊ: ಸಂಸ್ಕೃತ ಪದ್ಯದಲ್ಲಿ ಇರುವ ಲಾಲಿತ್ಯವನ್ನು ಅನುವಾದದಲ್ಲಿ ತರಲು ಕಷ್ಟಸಾಧ್ಯ!
ಕೊ.ಕೊ: ಮೂಲವು ಶಿಖರಿಣೀ ಎಂಬ ವೃತ್ತದಲ್ಲಿದೆ. ಇದರ ಪ್ರತಿ ಸಾಲುಗಳೂ, "ನನಾನಾನಾನಾನಾ ನನನನನನಾ ನಾನನನನಾ" ಎಂಬಂತೆ ಕೇಳುತ್ತೆ. ನನ್ನ ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಆದರೆ ಸಾಮಾನ್ಯವಾಗಿ ಈ ಛಂದಸ್ಸಿನಲ್ಲಿ ಇರುವಂತೆ ಎರಡನೇ ಮತ್ತೆ ನಾಲ್ಕನೆ ಸಾಲುಗಳಲ್ಲಿ ಕೊನೆಯಲ್ಲಿ ಕಡಿಮೆ ಅಕ್ಷರವಿಲ್ಲದೆ, ಎಲ್ಲ ಸಾಲುಗಳೂ ಒಂದೇ ಸಮನಾಗಿದೆ.
ಕೊ.ಕೊ.ಕೊ. ಚಿತ್ರ - ಉಮಾ ಮಹೇಶ್ವರ , ೧೦ ನೆಯ ಶತಮಾನದ ಶಿಲ್ಪಿ, ಈಗ ರಾಯಪುರ ವಸ್ತು ಸಂಗ್ರಹಾಲಯದಲ್ಲಿದೆ. (Image source: https://anushankarn.blogspot.in/ )