ಶುಕ್ರವಾರ, ಹದಿಮೂರನೇ ತೇದಿ...

ಶುಕ್ರವಾರ, ಹದಿಮೂರನೇ ತೇದಿ...

ಇವತ್ತು ಬೆಳಗ್ಗೆ ಕೆಲಸಕ್ಕೆ ಬರ್ತಾ ರೇಡಿಯೋ ಕೇಳೋ ತನಕ ನನಗೆ ಇದು ನೆನಪಾಗಿರಲಿಲ್ಲ. ಇವತ್ತು ಹದಿಮೂರನೇ ತಾರೀಕು, ಶುಕ್ರವಾರ! ಪಶ್ಚಿಮಾರ್ಧ ಗೋಳದಲ್ಲಿ ಶುಕ್ರವಾರ ಒಳ್ಳೆಯದಿನವಲ್ಲವೆಂದೂ (ಯೇಸುವನ್ನು ಶಿಲುಬೆಗೇರಿಸಿದ್ದು ಶುಕ್ರವಾರವೇ) ಮತ್ತು ಹದಿಮೂರು ಅನ್ನೋದು ಒಳ್ಳೇ ಸಂಖ್ಯೆ ಅಲ್ಲ ( ಯಾಕಂದ್ರೆ, ಯೇಸು ಕೊನೆಯ ಸಲ ಊಟ ಮಾಡ್ದಾಗ ಅವನ ಜೊತೆ ಹನ್ನೆರಡು ಜನ ಶಿಷ್ಯರಿದ್ದರು - ಅಂದ್ರೆ, ಊಟಕ್ಕೆ ಕೂತವರು ಹದಿಮೂರು ಮಂದಿ) ಅನ್ನೋ ನಂಬಿಕೆ ಇದೆ. ಇನ್ನು ಎರಡೂ ಒಟ್ಟಿಗೆ ಸೇರಿದ್ರೆ ಕೇಳ್ಬೇಕಾ? ಡಬಲ್ ಟ್ರಬಲ್ ಅಲ್ವೇ?

ಇವತ್ತು ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿ ಇರುವ ಎ಼ಕ಼್ಪ್ಲೊರೆಟೋರಿಯಮ್ ನಲ್ಲಿ ಇದರ ಮೇಲೆ ಒಂದು ಹೊಸ ಎಕ್ಸಿಬಿಟ್ ಶುರುವಾಗ್ತಿದೆಯಂತೆ. ನೋಡಲು ಹೋದವರು ಅಲ್ಲಿ ಏಣಿ ಅಡಿಯಲ್ಲಿ ನಡೀಬೇಕಾಗ್ಬಹುದಂತೆ, ಕನ್ನಡಿ ಒಡೀಬಹುದಂತೆ - ಒಟ್ಟ್ಟಿನಲ್ಲ್ಲಿ ಕೆಟ್ಟ ಅದೃಷ್ಟ ತರತ್ತೆ ಅಂತ ನಂಬಿಕೆ ಇರೋ ಒಟ್ಟು ಹದಿಮೂರು (!)ಕೆಲಸಗಳನ್ನ ಅಲ್ಲಿ ಮಾಡ್ಬೋದಂತೆ. ಈ ನಂಬಿಕೆಗಳಿಗೆ ಸರಿಯಾದ ಕಾರಣಗಳು ಇಲ್ಲ ಅನ್ನೋದನ್ನ ಮನದಟ್ಟು ಮಾಡೋಕ್ಕೇ ಇದನ್ನ ಮಾಡಿದಾರಂತೆ. ಇನ್ನು ಅದರ ಶುಭಾರಂಭ :) ಮಾಡೋದಕ್ಕೆ, ಹದಿಮೂರನೇ ತಾರೀಖು, ಶುಕ್ರವಾರವನ್ನ ಆಯ್ಕೆ ಮಾಡ್ಕೊಂಡಿರೋದು ತಕ್ದಾಗೇ ಇದೆ ಅನ್ನಿಸ್ತು ನಂಗೆ.

ಸರಿಯಾಗಿ ಗಟ್ಟಿ ಕಾರಣಗಳನ್ನು ಹೇಳಲಾಗದ ಇಂತಹ ನಂಬಿಕೆ ಗಳನ್ನ ಕುರುಡು ನಂಬಿಕೆ ಅನ್ನೋದೇ ರೂಢಿ. ಈ ನಂಬಿಕೆಗಳಲ್ಲಿ ಮನಸ್ಸಿನ ವ್ಯಾಪಾರವೇ ಹೆಚ್ಚಿಗೆ ನಡೆಯತ್ತೆ. ಅದ್ರಿಂದ್ಲೇ ಹಲವು ಆಟಗಾರರು ಲಕಿ ಟೋಪಿ, ಸಂಗೀತಗಾರ್ತಿಯರ ಲಕಿ ಒಡವೆ ಅಂತೆಲ್ಲ ಇಟ್ಕೊಂಡಿರೋರು ಅಂತೆಲ್ಲ ವಿಶ್ಲೇಷಣೆ ಮಾಡ್ತಿದ್ರು ರೇಡಿಯೋದಲ್ಲಿ. ಅಂದ್ರೇನರ್ಥ? ಇವತ್ತು ಒಳ್ಳೇದಾಗತ್ತೆ ಅಂತ ನಾವು ಅಂದ್ಕೊಂಡ್ರೆ, ಅದಕ್ಕೆ ತಕ್ಕ ಪ್ರಯತ್ನ ಮಾಡ್ತೀವೆ. ಎಲ್ಲಾ ಚೆನ್ನಾಗೇ ನಡೆಯತ್ತೆ. ಇವತ್ತು ತೊಂದ್ರೆ ಆಗತ್ತೆ ಅಂತ ಅಂದ್ಕೋತಿದ್ರೆ, ಹೆಜ್ಜೆ ಹೆಜ್ಜೆಗೂ ಎಡವ್ತೀವೆ. ಮನಸ್ಸು ಎಲ್ಲೋ ಇದ್ರೆ, ಮಾಡ್ಬೇಕಾದ್ದರ ಮೇಲೆ ಎಲ್ಲಿರತ್ತೆ ಧ್ಯಾನ? ಅಂತಹ ಸಮಯದಲ್ಲಿ ಒಳ್ಳೇ ಫಲಿತಾಂಶ ಬರೋದು ಹೇಗೆ ಸಾಧ್ಯ? ಅಲ್ವಾ?

ಇದನ್ನೇ ಪುರಂದರದಾಸರು ತೀರಾ ನೇರವಾಗಿ, ಸುಲಭವಾಗಿ ಒಂದು ಉಗಾಭೋಗದಲ್ಲಿ ಹೇಳಿದಾರೆ:

ಇಂದಿನ ದಿನವೇ ಶುಭದಿನವು

ಇಂದಿನ ವಾರ ಶುಭವಾರ

ಇಂದಿನ ತಾರೆ ಶುಭತಾರೆ

ಇಂದಿನ ಯೋಗ ಶುಭಯೋಗ

ಇಂದಿನ ಕರಣ ಶುಭ ಕರಣ

ಇಂದು ಪುರಂದರ ವಿಟ್ಠಲ ರಾಯನ

ಸಂದರ್ಶನ ಫಲವೆಮಗಾಯಿತು!

 

ಅಂದ್ರೆ, ಗೊತ್ತಾಯ್ತಲ್ಲ? ನಮ್ಮ ಕೆಲಸ, ನಮ್ಮ ಪ್ರಯತ್ನ ಮಹತ್ವದ್ದು ಅಂತ?

-ಹಂಸಾನಂದಿ

 

 

 

Rating
No votes yet