ಶುದ್ಧ ಹರಟೆ - ನಿರಾಸಕ್ತಿ

ಶುದ್ಧ ಹರಟೆ - ನಿರಾಸಕ್ತಿ

ಅದೇಕೋ ಶುದ್ಧ ನಿರಾಸಕ್ತಿ.. ಹೊಸತೇನೂ ಇಲ್ಲವೆಂಬ ನಿರಾಸಕ್ತಿ.. ದಿವ್ಯ ವೈರಾಗ್ಯದ ನಿರ್ಲಿಪ್ತತೆ. ನಿಂತಲ್ಲೆ ನಿಂತು ಕರಗಿ ಹೋಗಲು ಹಪಹಪಿಸುವ ತಮಸ್ಸು..ಮುಂದಕ್ಕೆ ಸಾಗಲೊಲ್ಲುವ ಮನಸ್ಸಿನ ಕುದುರೆಗಳು..
ಅದ್ವೈತ, ಶೂನ್ಯ ಸಿದ್ಧಾಂತ, ಮಾಯಾವಾದಗಳ ಬಹು ಆಸಕ್ತಿಯಿಂದ ಉಂಟಾದ ನಿರಾಸಕ್ತಿಯೇ ಇದು ? ಮತ್ತೆ ಕಾರಣ ಹುಡುಕಲೂ ನಿರಾಸಕ್ತಿ. ಹುಡುಕಿ ಏನೂ ಮಾಡಲಾಗದೆಂಬ ಸಮಜಾಯಿಷಿ. ಸ್ಥಿತಿ ತಲುಪಿದ್ದಾಗಿದೆ. ಇನ್ನು ಅದನ್ನು ಹೊಂದಿದ ಕ್ರಮದ ಬಗೆಗಿನ ಚರ್ಚೆ ಅಪ್ರಸ್ತುತ.

ಆದರೂ ಇದನ್ನು ಬರೆಯುವ ಹಂಬಲ.

ಥೂ.. ಬರವಣಿಗೆಯಲ್ಲಿರುವ ಹಂಬಲವಲ್ಲ ಅದು.. ಬರೆದದ್ದನ್ನು ಇತರರು ಓದುವರೆಂಬ ಹಂಬಲ... ಓದಿ ಶ್ಲಾಘಿಸುವರೆಂಬ ಹಂಬಲವೇನಿಲ್ಲ. ಆದರೂ ನನ್ನ ಹುಚ್ಚು ಮನಸ್ಸಿನ ಹತ್ತು ವಿಚಾರಗಳು ಅವರಿಗೂ ತಿಳಿಯುತ್ತದೆಂಬ ವಿಲಕ್ಷಣ ತೃಪ್ತಿ...
ನಿಜ.. ಬಚ್ಚಿಟ್ಟು, ತಾನೆಂಬ ಭದ್ರ ಕೋಟೆಯ ದಾಟದ ಹಾಗೆ ಕಾಪಾಡಿದ ವಿಚಾರಗಳ ಬಗೆಗೇ ಮನಸ್ಸಿಗೆ ಹೆಮ್ಮೆ..! ಆದರೂ ಅದೊಮ್ಮೆ, ತನ್ನ ನಿಲುವುಗಳನ್ನು ಇತರರಿಗೆ ಬಹಿರಂಗ ಪಡಿಸಿ, ಅವರ ಪ್ರತಿಕ್ರಿಯೆ ತಿಳಿಯುವ ವಿಲಕ್ಷಣ ಕುತೂಹಲ ಆವರಿಸಿಬಿಡುತ್ತದೆ...

ಎಲ್ಲ ತತ್ತ್ವಗಳೂ ಈ ಮನಸ್ಸಿಗೆ ತಿಳಿದಿವೆ... ಎಲ್ಲ ನೀತಿಪಾಠಗಳ ಸಂಸ್ಕಾರವೂ ಆಗಿದೆ ಈ ಮನಕ್ಕೆ.. ಆದರೂ ಅದೇಕೋ ಈ ಲಾಲಸೆ ಹೋಗಲಾರದು...
ಥೂ.. ಇದೊಂದು ಸೋಗು..! ಬುದ್ಧಿಪೂರಕವಾಗಿ ತಾನು ಗೈದ ಕಾರ್ಯಗಳಿಗೆ, ಮನಸ್ಸು ದುರ್ಬಲವೆಂದು ಅದನ್ನು ಹೀಗಳೆಯುವುದು.. ಏನಾದರೇನು ? ದುರ್ಬಲತೆಗೆ ಯಾವುದೋ ಒಂದು ಕಾರಣವಷ್ಟೆ.. ಮನುಷ್ಯನೆಂದಿಗೂ ಈ ದುರ್ಬಲತೆಗಳನ್ನು ಮೀರಿ ಬೆಳೆಯಲಾರನೆ..? 'ಮನುಷ್ಯ' ನೆಂದದ್ದು ತೀರ ಧಾರ್ಷ್ಟ್ಯವಾಯಿತೇನೋ .. 'ನಾನು' ಎನ್ನಬೇಕಾಗಿತ್ತೇನೋ..

Rating
No votes yet