ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ -೧

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ -೧

ಶ್ರಾದ್ಧ
(ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು)
ಲೇಖಕರು : ಸ್ವಾಮಿ ಹರ್ಷಾನಂದ
ಪ್ರಕಟಣೆ: ಶ್ರೀ ನಿತ್ಯಾನಂದ ಪ್ರಿಂಟರ್ಸ್, ಬೆಂಗಳೂರು - ೫೬೦ ೦೫೦
ಪ್ರಥಮ ಮುದ್ರಣ - ೧೯೯೭ ಡಿಸೆಂಬರ್.
******
ಶ್ರಾದ್ಧ
          ಅನಾದಿಕಾಲದ ಕೆಲವೊಂದು ಧಾರ್ಮಿಕ ಆಚರಣೆಗಳು ಇನ್ನೂ ಪ್ರಚಲಿತವಾಗಿರುವುದಕ್ಕೆ ಹಿಂದೂ ಸಮಾಜವು ಅಭಿನಂದನಾರ್ಹವಾಗಿದೆ. ಆದರೆ ಅವು ಬಹುತೇಕ ಯಾಂತ್ರಿಕವಾಗಿವೆ ಹಾಗು ಅವುಗಳಲ್ಲಿ ಜೀವಂತಿಕೆಯು ಕಂಡು ಬರುವುದಿಲ್ಲ. ಇದಕ್ಕೆ ಎರಡು ಪ್ರಧಾನ ಕಾರಣಗಳನ್ನು ಕೊಡಬಹುದು. ಮೊದಲನೆಯದಾಗಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಪ್ರಭಾವಿತವಾದ ಚಿಂತನೆಗಳು ನಮ್ಮ ಪುರಾತನ ಧಾರ್ಮಿಕ ಆಚರಣೆಗಳ ಮೇಲಿನ ನಂಬಿಕೆಯನ್ನು ಸಡಿಲಗೊಳಿಸಿವೆ ಮತ್ತು ಎರಡನೆಯದಾಗಿ ಆ ಧಾರ್ಮಿಕ ಆಚರಣೆಗಳ ಮಹತ್ವ ಹಾಗು ಅದರಿಂದುಂಟಾಗುವ ಒಳಿತುಗಳ ಕುರಿತ ಸರಿಯಾದ ಮಾಹಿತಿಯನ್ನು ಒದಗಿಸುವವರು ಇಲ್ಲದಿರುವುದು.
ಈ ಕಿರು ಪುಸ್ತಕದ ಉದ್ದೇಶವು ಶ್ರದ್ಧಾವಂತರ ನಂಬಿಕೆಯನ್ನು ದೃಢಪಡಿಸುವುದರೊಂದಿಗೆ ಅವರು ಧಾರ್ಮಿಕ ಆಚರಣೆಗಳ ಹಿನ್ನಲೆಯಲ್ಲಿ ಹೊಂದಬೇಕಾಗಿರುವ ಸಾಮಾನ್ಯವಾದ ಆದರೆ ಪ್ರಮುಖವಾದ ತಿಳುವಳಿಕೆಯನ್ನು ಹೆಚ್ಚಿಸುವುದಾಗಿದೆ.
ಈ ಪುಸ್ತಕವನ್ನು ಹೊರತರಲು ಮುಂದೆ ಬಂದ ನಿತ್ಯಾನಂದ ಪ್ರಿಂಟರ್ಸಿನ ಶ್ರೀಯುತ ಬಿ.ಎನ್. ನಟರಾಜ್ ಅವರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.
          ಓದುಗರು ಎಂದಿನಂತೆಯೇ ಈ ಕಿರುಹೊತ್ತುಗೆಯನ್ನೂ ಸ್ವಾಗತಿಸುವರೆಂದು ಆಶಿಸುತ್ತೇವೆ.
                                                                                                                                                                                                                            -ಸ್ವಾಮಿ ಹರ್ಷಾನಂದ.
ಶ್ರಾದ್ಧ
ಪರಿಚಯ
        ಹುಟ್ಟು ಮತ್ತು ಸಾವುಗಳು ಮನುಷ್ಯನಿಗೆ ಯಾವಾಗಲೂ ನಿಗೂಢ ರಹಸ್ಯವಾಗಿಯೇ ಉಳಿದಿವೆ. ಹುಟ್ಟಿನ ವಿಷಯಕ್ಕೆ ಮನುಜನು ಸಂಭ್ರಮಿಸಿದರೆ, ಸಾವಿನ ವಿಷಯ ಬಂದಾಗ ಒಂದೋ ಅದಕ್ಕೆ ಹೆದರುತ್ತಾನೆ ಇಲ್ಲಾ ಅದರಿಂದ ದೂರವುಳಿಯ ಬಯಸುತ್ತಾನೆ. ಯಾರು ಸಾವನ್ನು ಜೀವನದ ಮತ್ತು ವ್ಯಕ್ತಿತ್ವದ ಅಂತ್ಯ ಎಂದು ಭಾವಿಸುತ್ತಾರೆಯೋ ಅವರಿಗೆ ಸಾವು ಭಯಾನಕವಾದ ಮತ್ತು ಜೀವವನ್ನು ಬಲಿ ತೆಗೆದುಕೊಳ್ಳುವ ಕ್ರಿಯೆಯಾಗಿ ಗೋಚರಿಸುತ್ತದೆ. ದೇವರನ್ನೇ ಸರ್ವಸ್ವವೆಂದುಕೊಂಡವರು ಸಾವನ್ನು ನೋಡುತ್ತಲೇ ಏಕಾಏಕಿ ಭಗವಂತನೆಂಬುದೆಲ್ಲಾ ಸುಳ್ಳು, ಅವನಿದ್ದರೆ ಹೀಗೇಕೆ ಮಾಡುತ್ತಿದ್ದ ಎಂದು ವಾದಿಸುವ ನಿರೀಶ್ವರವಾದಿಗಳಾಗುತ್ತಾರೆ. ಆದರೆ ಯಾರು ಭಗವಂತನಲ್ಲಿ ನಿಜವಾದ ನಂಬಿಕೆಯನ್ನಿರುಸುತ್ತಾರೋ ಅವರು ಭಗವಂತನು ನಮ್ಮ ಜೀವಿತಕಾಲದಲ್ಲಿ ನಮ್ಮೊಂದಿಗಿರುವುದಲ್ಲದೆ ನಾವು ಮರಣ ಹೊಂದಿದ ನಂತರವೂ ಅವನು ನಮ್ಮ ಜೊತೆಗಿರುತ್ತಾನೆ ಎಂದು ವಿಶ್ವಸಿಸುತ್ತಾರೆ.
      ವಿಶ್ವದ ಬಹುತೇಕ ಧರ್ಮಗಳು ಮರಣದ ನಂತರ ಯಾವುದೋ ಒಂದು ವಿಧವಾದ ಜೀವಿತವು ಇರುತ್ತದೆ ಎಂದು ನಂಬಿದರೆ, ಹಿಂದೂಗಳು ಮರಣವನ್ನು ಒಂದು ಜನ್ಮದ ನಂತರ ಮತ್ತೊಂದು ಜನ್ಮದ ಮಧ್ಯದಲ್ಲಿ ಬರುವ ದೇಹಾಂತರದ ಒಂದು ಸ್ಥಿತಿ ಎಂದು ಭಾವಿಸುತ್ತಾರೆ. ಆದ್ದರಿಂದ ಹಿಂದೂಗಳ ಪ್ರಕಾರ ಶರೀರವನ್ನು ಬಿಟ್ಟು ಹೊರಟ ಆತ್ಮಕ್ಕೆ ರಕ್ಷಣೆ ಮತ್ತು ಸಹಾಯದ ಅವಶ್ಯಕತೆಯುಂಟಾಗಿ ಅದು ತನ್ನ ವಂಶಜರಿಂದ ಅದನ್ನು ನಿರೀಕ್ಷಿಸುತ್ತದೆ. ಈ ಸಹಾಯವು ಭೌತಿಕ ಶರೀರವನ್ನು ತ್ಯಜಿಸಿ ಮರಣಿಸಿದ ನಂತರ ಮತ್ತು ಅದು ಇತರೇ ಲೋಕಗಳಲ್ಲಿ ಪಯಣಿಸಬೇಕಾದ ಕಾಲಕ್ಕೂ ಬೇಕಾಗುತ್ತದೆ. ಈ ಹಂತದಲ್ಲಿಯೇ ವಿವಿಧ ರೀತಿಯ ಆಚರಣೆಗಳ ಅವಶ್ಯಕತೆಯುಂಟಾಗುತ್ತದೆ; ಇವು ವ್ಯಕ್ತಿಯು ಮರಣಿಸಿದ ಕೂಡಲೇ ಆಚರಿಸುವ ವಿಧಿಗಳು, ತದನಂತರ ತಿಂಗಳಿಗೊಂದಾವರ್ತಿ ಆಚರಿಸುವ ಮತ್ತು ವರ್ಷಕ್ಕೊಂದಾವರ್ತಿ ಆಚರಿಸುವ ವಿಧಿಗಳನ್ನೂ ಸಹ ಒಳಗೊಂಡಿವೆ. ಈ ಎಲ್ಲಾ ವಿಧಿಗಳನ್ನು ’ಶ್ರಾದ್ಧ’ ಎನ್ನುವ ಸಾಮಾನ್ಯ ಹೆಸರಿನಿಂದ ಕರೆಯಲಾಗುತ್ತದೆ.
       ಮರಣದ ನಂತರ ಪೂರ್ವಿಕರನ್ನು ’ಅಂತ್ಯೇಷ್ಠಿ’ ಮತ್ತು ’ಶ್ರಾದ್ಧ’ಗಳ ಮೂಲಕ ಆರಾಧಿಸುವುದು ಬಹಳ ಹಿಂದಿನ ಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದಿರುವಂತೆ ಕಾಣುತ್ತದೆ. ಖುಗ್ವೇದದ ಹಲವು ಪಂಕ್ತಿಗಳಲ್ಲಿ ಪಿತೃಗಳ ಉಲ್ಲೇಖವು ಬರುತ್ತದೆ. ಪಿತೃಗಳನ್ನು ಕೆಲವೊಂದು ಕಡೆ ’ಸಪ್ತ ಋಷಯಃ’ ಅಂದರೆ ಸಪ್ತ ಋಷಿಗಳಾದ ನವಗ್ವ*ರು ಅಥವಾ ದಶಗ್ವರೊಂದಿಗೆ ಗುರಿತಿಸಲಾಗಿದ್ದರೆ. ಕೆಲವೊಂದು ಕಡೆ ಅವರನ್ನು ಹಲವಾರು ಗುಂಪುಗಳಲ್ಲಿ ವಿಭಜಿಸಲಾಗಿದೆ. ಉದಾಹರಣೆಗೆ, ಪಿತರಃ ಸೋಮವಂತಃ (ಸೋಮಯಾಗವನ್ನು ಕೈಗೊಂಡವರು) ಅಥವಾ ಪಿತರಃ ಬರ್ಹಿಷಡಃ (ಪಾಕಯಜ್ಞ ಅಥವಾ ಬೇಯಿಸಿದ ಆಹಾರದ ಮೂಲಕ ಯಜ್ಞ ಮಾಡಿದವರು). ಕೆಲವೊಮ್ಮೆ ಇವರುಗಳು ತಮ್ಮದೇ ಆದ ಬೇರೆ ಲೋಕದಲ್ಲಿ - ಪಿತೃ ಲೋಕದಲ್ಲಿ ನಿವಸಿಸುತ್ತಾರೆ ಎಂದೂ ವಿವಿರಿಸಲಾಗಿದೆ. ಪಿಂಡಪಿತೃಯಜ್ಞ ಮತ್ತು ಮಹಾಪಿತೃಯಜ್ಞಗಳನ್ನು ’ಆಹಿತಾಗ್ನಿ’ಗಳು (ಪವಿತ್ರವಾದ ವೈದಿಕ ಅಗ್ನಿಗಳನ್ನು ಯಾರು ವಿಧಿವತ್ತಾಗಿ ಪ್ರತಿಷ್ಠಾಪಿಸಿರುತ್ತಾರೋ ಅವರು) ಕಡ್ಡಾಯವಾಗಿ ಮಾಡಲೇ ಬೇಕೆಂದು ವಿಧಿಸಲಾಗಿದೆ. ಈ ವಿಧವಾದ ಆಚರಣೆಗಳು ಮುಂದೆ ಆರಂಭವಾದ ಶ್ರಾದ್ಧವಿಧಿಗೆ ಬುನಾದಿಯಾಗಿಬಹುದು.
__________________________________________________________________________________________________________________________________________
*ಸತ್ರಯಾಗಗಳನ್ನು ಕೈಗೊಂಡ ಋಷಿಗಳು ಒಂಬತ್ತು ದಿನಗಳಲ್ಲಿ ಫಲಗಳನ್ನು ಪಡೆದುಕೊಂಡಿದ್ದರೆ ಅವರನ್ನು ನವಗ್ವರೆಂದೂ ಮತ್ತು ಅದೇ ಯಜ್ಞಗಳಿಗೆ ಫಲಗಳನ್ನು ಹತ್ತು ದಿನಗಳಲ್ಲಿ ಪಡೆದಿದ್ದರೆ ಅವರನ್ನು ದಶಗ್ವರೆಂದೂ ಕರೆಯಲಾಗಿದೆ. ಇವರು ಸಪ್ತರ್ಷಿಗಳಲ್ಲಿ ಒಬ್ಬರಾಗಿರುವ ಋಷಿ ಅಂಗೀರಸನ ವಂಶಜರು. ಕೆಲವೊಮ್ಮೆ ಈ ನವಗ್ವ ಮತ್ತು ದಶಗ್ವರನ್ನೇ ಸಪ್ತರ್ಷಿಗಳೆಂದು ಕರೆಯಲಾಗಿದೆ.
ಪುನರ್ಜನ್ಮ ಹಾಗು ಕರ್ಮಸಿದ್ಧಾಂತಕ್ಕೆ ಪ್ರತಿಯಾಗಿ ಶ್ರಾದ್ಧ
      ಹಿಂದೂಗಳು ಬಹುವಾಗಿ ನಂಬುವ ಮತ್ತು ಪ್ರಚಾರದಲ್ಲಿರುವ ಪುನರ್ಜನ್ಮ ಮತ್ತು ಕರ್ಮಸಿದ್ಧಾಂತದ ಪ್ರಕಾರ ಯಾರು ಭೂಲೋಕದಲ್ಲಿ ಮರಣ ಹೊಂದುತ್ತಾರೆಯೋ ಅವರು ಮತ್ತೆ ಹುಟ್ಟುತ್ತಾರೆ. ಅವರವರ ಕರ್ಮಕ್ಕನುಸಾರವಾಗಿ ಒಬ್ಬರ ಹುಟ್ಟು ಇದೇ ಲೋಕದಲ್ಲಿರಬಹುದು ಅಥವಾ ಇತರೇ ಲೋಕಗಳಲ್ಲಿರಬಹುದು.  ಆಧ್ಯಾತ್ಮಿಕ ಜ್ಞಾನವನ್ನು ಪಡೆದು ಅಂತಿಮವಾಗಿ ಒಬ್ಬರು ಜನನ-ಮರಣಗಳ ಚಕ್ರದಿಂದ ಬಿಡುಗಡೆ ಹೊಂದುವವರೆಗೆ ಅಥವಾ ಮೋಕ್ಷವನ್ನು ಪಡೆಯುವವರೆಗೆ ಈ ವಿಧವಾದ ಹುಟ್ಟು ಸಾವುಗಳು ಸಂಭವಿಸುತ್ತಲೇ ಇರುತ್ತವೆ. ನಾವು ಯಾವ ಪೂರ್ವಜರನ್ನು ಉದ್ದೇಶಿಸಿ ಶ್ರಾದ್ಧದ ವಿಧಿಗಳನ್ನು ಕೈಗೊಂಡು ಆ ವ್ಯಕ್ತಿಗೆ ಪಿಂಡ ಅಥವಾ ಅನ್ನದ ಉಂಡೆಗಳನ್ನು ಅರ್ಪಿಸುತ್ತೆವೆಯೋ ಅದರ ಸಾರವು ಅವರಿಗೆ ತಲುಪುತ್ತದೆನ್ನುವ ನಂಬಿಕೆಯೇನು? ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈ ಪ್ರಶ್ನೆಯನ್ನು ಸ್ಮತಿ ಹಾಗು ಶ್ರುತಿಗಳಲ್ಲಿ ಹಲವಾರು ಬಾರಿ ಎತ್ತಲಾಗಿದ್ದು ಆ ವಿಷಯದ ಕುರಿತ ಚರ್ಚೆಯೂ ವಿಪುಲವಾಗಿ ನಡೆದಿದೆ. ಆದರೆ ಎಲ್ಲ ಕೃತಿಗಳಲ್ಲೂ ಇದಕ್ಕೆ ನಮಗೆ ಸಿಗುವ ಪ್ರಧಾನವಾದ ಉತ್ತರವು ಇಂತಹ ವಿಷಯಗಳು ಇಂದ್ರಿಯಗ್ರಾಹ್ಯವಲ್ಲದ್ದರಿಂದ ಅವುಗಳಲ್ಲಿ ನಾವು ನಂಬಿಕೆಯನ್ನಿರಿಸಬೇಕು ಮತ್ತು ವೇದೋಪನಿಷತ್ತುಗಳು ಹೇಳಿರುವ ಆದೇಶಗಳನ್ನು ನಾವು ಪಾಲಿಸಬೇಕಷ್ಟೆ. ವೇದೋಪನಿಷತ್ತುಗಳ ಪ್ರಕಾರ, ಪಿತೃಗಳನ್ನು ಕಾಪಾಡುವ ವಿಶೇಷ ವರ್ಗಕ್ಕೆ ಸೇರಿದ ದೇವತೆಗಳಾದ -  ವಸುಗಳು, ರುದ್ರರು ಮತ್ತು ಆದಿತ್ಯರೆನ್ನುವವರು ನಾವು ಅರ್ಪಿಸುವ ಪಿಂಡಗಳನ್ನು ಸ್ವೀಕರಿಸಿ ಅದರ ಸಾರವನ್ನು ಪಿತೃಗಳಿಗೆ ವರ್ಗಾಯಿಸುತ್ತಾರೆ. ಪಿತೃಗಳು ತಮ್ಮ ಯೋಗ್ಯತೆಗೆ ಅನುಸಾರವಾಗಿ ಸ್ವರ್ಗ ಅಥವಾ ನರಕಗಳಲ್ಲಿ ಯಾವುದಾದರೊಂದು ಲೋಕದಲ್ಲಿರಬಹದು ಮತ್ತು ಅವರು ಮಾನವ ಅಥವಾ ಉಪಮಾನವರ ರೂಪದಲ್ಲಿದ್ದರೂ ಸಹ ಅವರಿಗೆ ಪಿಂಡ ಸಾರವನ್ನು ಪಿತೃದೇವತೆಗಳಾದ ವಸುಗಳು, ರುದ್ರರು ಮತ್ತು ಆದಿತ್ಯರು ತಲುಪಿಸುತ್ತಾರೆ. ಯಾರ ವಂಶಜರು ಶ್ರಾದ್ಧಾದಿ ಕರ್ಮಗಳನ್ನು ಆಚರಿಸುವುದರ ಮೂಲಕ ತಮ್ಮ ಪಿತೃಗಳನ್ನು ಸಂತೃಪ್ತಿ ಪಡಿಸುತ್ತಾರೋ ಅವರಿಗೆ ಸೂಕ್ತವಾದ ವರಗಳನ್ನು ಪಿತೃಗಳು ದಯಪಾಲಿಸುತ್ತಾರೆ. 
                                                                                                                                                                                                                                                             ಮುಂದುವರೆಯುವುದು.........

Rating
No votes yet

Comments

Submitted by makara Sun, 08/21/2016 - 13:21

ಆತ್ಮೀಯ ಸಂಪದಗಿರೆ,
ಆಂಧ್ರ ಹಾಗು ತೆಲಂಗಾಣಗಳಲ್ಲಿ ನದಿ ಪುಷ್ಕರಗಳ ಕುರಿತು ಆಸಕ್ತಿ ಹೆಚ್ಚು ಮತ್ತು ಅದರಲ್ಲಿ ಪ್ರತಿಯೊಬ್ಬರೂ ಭಾಗವಹಿಸುತ್ತಾರೆ. ಪುಷ್ಕರ ಕಾಲದಲ್ಲಿ ಪಿತೃಗಳಿಗೆ ಪಿಂಡಪ್ರದಾನ ಮಾಡುವುದನ್ನು ಬಹಳ ಶ್ರೇಯಸ್ಕರವೆಂದು ಪರಿಗಣಿಸಲಾಗುತ್ತದೆ. ಇತ್ತೀಚೆಗೆ ನಮ್ಮ ಮನೆಗೆ ಹಾಲು ಹಾಕುವವನು ಪಿಂಡಪ್ರದಾನ ಹಾಗು ಶ್ರಾದ್ಧಗಳ ಕುರಿತು ಕೆಲವೊಂದು ಪ್ರಶ್ನೆಗಳನ್ನು ಕೇಳಿದ. ಅದರಲ್ಲಿ ಎಲ್ಲರೂ ಶ್ರಾದ್ಧ ಕರ್ಮಗಳನ್ನು ಮಾಡಲೇ ಬೇಕೇ ಮತ್ತು ಎಲ್ಲಾ ವರ್ಣದವರು ಶ್ರಾದ್ಧ ಮಾಡಬಹುದೇ ಎನ್ನುವುದು ಪ್ರಧಾನ ಪ್ರಶ್ನೆಗಳಾಗಿದ್ದವು. ಅವನಿಗೆ ಉತ್ತರಿಸಲು ಸರಿಯಾದ ಮಾಹಿತಿಯನ್ನು ಹುಡುಕುತ್ತಿರಬೇಕಾದರೆ ನನ್ನ ಸಂಗ್ರಹದಲ್ಲಿದ್ದ ಸ್ವಾಮಿ ಹರ್ಷಾನಂದರು ರಚಿಸಿದ ಶ್ರಾದ್ಧ ಎನ್ನುವ ಆಂಗ್ಲ ಆವೃತ್ತಿಯ ಕಿರುಹೊತ್ತುಗೆಯೊಂದು ಕಣ್ಣಿಗೆ ಬಿತ್ತು. ಅದನ್ನು ಕನ್ನಡಕ್ಕೆ ಅನುವಾದಿಸುವ ಒಂದು ಸಣ್ಣ ಸಾಹಸವನ್ನು ಮಾಡಿದ್ದೇನೆ. ಅದನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಇಲ್ಲಿ ಪ್ರಕಟಿಸುತ್ತಿದ್ದೇನೆ. ನಮಸ್ಕಾರಗಳೊಂದಿಗೆ, ಶ್ರೀಧರ್ ಬಂಡ್ರಿ.