ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ -೨

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ -೨

ಶ್ರಾದ್ಧ ಕರ್ಮಗಳ ಕುರಿತ ಸಾಹಿತ್ಯ
      ಶ್ರಾದ್ಧ ಕರ್ಮಗಳ ಕುರಿತ ಸಾಹಿತ್ಯವು ಬಹಳ ವಿಪುಲವಾಗಿದೆ. ಅನಾದಿಕಾಲದಿಂದಲೂ ಪ್ರಚಲಿತದಲ್ಲಿರುವ ವೈದಿಕ ಸಂಹಿತೆಗಳನ್ನು ಹೊರತುಪಡಿಸಿ, ಶ್ರಾದ್ಧವು ಪುರಾತನ ಸ್ಮೃತಿಗಳಾದ ಮನು ಮತ್ತು ಯಾಜ್ಞವಲ್ಕ್ಯರ ಸ್ಮೃತಿಗಳಲ್ಲಿ ಹಾಗು ಆಪಸ್ತಂಭ ಮತ್ತು ಅಶ್ವಲಾಯನ ಗೃಹ್ಯಸೂತ್ರಗಳಲ್ಲಿ ಜಾಗ ಪಡೆದಿದೆ. ಬೌಧಾಯನ ಧರ್ಮಸೂತ್ರಗಳು ಸಹ ಶ್ರಾದ್ಧದ ಕುರಿತಾಗಿ ಚರ್ಚಿಸುತ್ತವೆ. 
          ಕೆಲವೊಂದು ಪುರಾಣಗಳೂ ಸಹ ಸಾಕಷ್ಟು ವ್ಯಾಪಕವಾಗಿಯೇ ಶ್ರಾದ್ಧದ ಕುರಿತು ಚರ್ಚಿಸುತ್ತವೆ. ಆ ಪುರಾಣಗಳೆಂದರೆ, ಅಗ್ನಿಪುರಾಣ, ಬ್ರಹ್ಮಪುರಾಣ, ಗರುಡಪುರಾಣ, ಕೂರ್ಮಪುರಾಣ, ಮಾರ್ಕಂಡೇಯಪುರಾಣ, ಮತ್ಸ್ಯಪುರಾಣ, ವಿಷ್ಣುಧರ್ಮೋತ್ತರ-ಪುರಾಣ ಮತ್ತು ವಿಷ್ಣು ಪುರಾಣ. 
ಮೇಲೆ ತಿಳಿಸಿರುವ ಕೃತಿಗಳಲ್ಲದೇ ಕೆಲವೊಂದು ಸಂಗ್ರಹ ಗ್ರಂಥಗಳೂ ಸಹ ಈ ವಿಷಯವನ್ನು ಸಮಗ್ರವಾಗಿ  ಚರ್ಚಿಸುತ್ತವೆ. ಅದರಲ್ಲಿ ಕೆಲವೊಂದು ಕೃತಿಗಳು ಹೀಗಿವೆ - ಲಕ್ಷ್ಮೀಧರನ ಕೃತ್ಯಕಲ್ಪತರು, ಶುಕದೇವಮಿತ್ರನ ಸ್ಮೃತಿಚಂದ್ರಿಕಾ, ನೀಲಕಂಠಾಚಾರ್ಯರ ಸ್ಮೃತ್ಯಾರ್ಥಸಾರ, ರುದ್ರಧರನ ಶ್ರಾದ್ಧಚಂದ್ರಿಕ, ನಂದಪಂಡಿತನ ಶ್ರಾದ್ಧಕಲ್ಪಲತ, ಗೋವಿಂದನಂದನನ ಶ್ರಾದ್ಧಕ್ರಿಯಾಕೌಮುದಿ, ನೀಲಕಂಠನ ಶ್ರಾದ್ಧಮಯೂಖ, ರಘುನಂದನನ ಶ್ರಾದ್ಧತತ್ತ್ವ ಮತ್ತು ಶೂಲಪಾಣಿಯ ಶ್ರಾದ್ಧವಿವೇಕ. 
        ಕೆಲವೊಂದು ಕೃತಿಕಾರರ ಸರಿಸುಮಾರು ಕಾಲಮಾನವು ಈ ಕೆಳಕಂಡಂತಿದೆ: ಆಪಸ್ತಂಭ - ಕ್ರಿ.ಪೂ ೪೫೦.;  ಬೌಧಾಯನ - ಕ್ರಿ.ಪೂ ೫೦೦; ಗೋವಿಂದನಂದ - ಕ್ರಿ.ಶ. ೧೫೦೦ರಿಂದ ೧೫೪೦; ಮನು (ಪ್ರಚಲಿತವಿರುವ ಮನುಸ್ಮೃತಿ) - ಕ್ರಿ.ಪೂ ೨೦೦; ರಘುನಂದನ - ಕ್ರಿ.ಶ. ೧೫೧೦ರಿಂದ ೧೫೮೦; ರುದ್ರಧರ - ಕ್ರಿ.ಶ. ೧೩೬೦ರಿಂದ ೧೪೦೦; ಶೂಲಪಾಣಿ - ಕ್ರಿ.ಶ. ೧೩೬೫ರಿಂದ ೧೪೪೫. ಮತ್ತು ಯಾಜ್ಞವಲ್ಕ್ಯ (ಪ್ರಚಲಿತದಲ್ಲಿರುವ ಯಾಜ್ಞವಲ್ಕ್ಯ ಸ್ಮೃತಿ) - ಕ್ರಿ.ಪೂ. ೧೦೦.  ಉಳಿದ ಕೃತಿಕಾರರ ಕಾಲಮಾನವು ಸ್ಥೂಲವಾಗಿಯೂ ಸಹ ತಿಳಿದುಬಂದಿಲ್ಲ. 
 
ಶ್ರಾದ್ಧ ಪದದ ಅರ್ಥ
       ’ಶ್ರಾದ್ಧ’ ಶಬ್ದವು ’ಶ್ರದ್ಧಾ’ ಅಥವಾ ನಂಬಿಕೆ ಎನ್ನುವ ಮೂಲ ಪದದಿಂದ ವ್ಯುತ್ಪನ್ನವಾಗಿದೆ. ಆದ್ದರಿಂದ ಯಾವುದು ಶ್ರದ್ಧೆಯಿಂದ ಅರ್ಪಿಸಲ್ಪಡುವುದೋ ಅದು ಶ್ರಾದ್ಧವಾಗುತ್ತದೆ. ಆದರೆ ಪಾರಿಭಾಷಿಕವಾಗಿ ಈ ಶಬ್ದದ ಬಳಕೆಯು ಮರಣದ ನಂತರ ಕೈಗೊಳ್ಳುವ ಮತ್ತು ತದನಂತರ ಆಚರಿಸುವ ಧಾರ್ಮಿಕ ಕಾರ್ಯಗಳಿಗೆ ಪರಿಮಿತವಾಗಿದೆ. ಶ್ರಾದ್ಧ ಶಬ್ದದ ವಿವಿಧ ವ್ಯಾಖ್ಯಾನಗಳನ್ನು ಕ್ರೋಢೀಕರಿಸಿ ಅದರ ಸಾರಾಂಶವನ್ನು ಒಟ್ಟಾರೆಯಾಗಿ ಈ ಕೆಳಕಂಡಂತೆ ವಿವರಿಸಬಹುದು.

  1.  ಇದನ್ನು ಸತ್ತ ವ್ಯಕ್ತಿಯ ಅರ್ಹನಾದ ವಂಶಿಕನು ಶ್ರದ್ಧೆಯಿಂದ ಕೈಗೊಳ್ಳುತ್ತಾನೆ.
  2.  ಇದನ್ನು ಮೂರು ತಲೆಮಾರಿನ ಪಿತೃಗಳ ಒಳಿತಿಗಾಗಿ ಕೈಗೊಳ್ಳಲಾಗುತ್ತದೆ. ಅವೆಂದರೆ ತಂದೆ, ತಾತ ಮತ್ತು ಮುತ್ತಾತ. 
  3.  ಅದನ್ನು ಶಾಸ್ತ್ರಬದ್ಧವಾಗಿ ಮತ್ತು ವಂಶಾಚಾರದಂತೆ ಸೂಕ್ತವಾದ ಸಮಯ ಮತ್ತು ಸ್ಥಳಗಳಲ್ಲಿ ಆಚರಿಸಬೇಕು. 
  4.  ಇದರೊಂದಿಗೆ ಸಿದ್ಧಪಡಿಸಿದ ಆಹಾರ ಅಥವಾ ಆಹಾರ ಸಾಮಗ್ರಿಗಳನ್ನು ಅಥವಾ ಧನ-ಕನಕಗಳನ್ನು ಯೋಗ್ಯನಾದ ಬ್ರಾಹ್ಮಣರಿಗೆ ಕೊಡಬಹುದು. 

         ಋಗ್ವೇದದ ಪ್ರಕಾರ ಅದರ ಅನುಯಾಯಿಗಳು ಯೋಗ್ಯರಾದ ಬ್ರಾಹ್ಮಣರಿಗೆ ಆಹಾರ ಸಾಮಗ್ರಿಗಳನ್ನು  ಅಥವಾ ದನಕನಕಾದಿಗಳನ್ನು ಕೊಟ್ಟು ಸತ್ಕರಿಸಿದರೆ ಶ್ರಾದ್ಧವನ್ನು ಆಚರಿಸಿದಂತಾಗುತ್ತದೆ. ಯರ್ಜುವೇದದ ಅನುಯಾಯಿಗಳು ಪಿತೃಗಳಿಗೆ ಕೇವಲ ಪಿಂಡಪ್ರಧಾನ ಮಾಡಿದರೆ ಸಾಕು ಶ್ರಾದ್ಧವು ಪೂರ್ಣಗೊಂಡಂತೆ. ಆದರೆ ಸಾಮವೇದದ ಅನುಯಾಯಿಗಳು ಯೋಗ್ಯ ಬ್ರಾಹ್ಮಣರನ್ನು ಸತ್ಕರಿಸುವುದರೊಂದಿಗೆ ಪಿಂಡಪ್ರಧಾನವನ್ನೂ ಮಾಡಬೇಕೆನ್ನುವುದು ಅದರ ಆಶಯ. 
 
ಶ್ರಾದ್ಧ ಕರ್ತಾ (ಶ್ರಾದ್ಧವನ್ನು ಕೈಗೊಳ್ಳುವವನು)
       ಒಬ್ಬ ವ್ಯಕ್ತಿಯು ಮರಣಿಸಿದಾಗ ಅವನ ಅಂತ್ಯೇಷ್ಠಿ (ಅಂತಿಮ ಕರ್ಮಗಳನ್ನು) ಮತ್ತು ಶ್ರಾದ್ಧವನ್ನು ಅವನ ಹಿರಿಯ ಮಗ ಮಾಡಬೇಕು. (ಧರ್ಮಶಾಸ್ತ್ರಗಳು ಶೂದ್ರರೂ ಸಹ ಶ್ರಾದ್ಧಾದಿ ಕರ್ಮಗಳನ್ನು ಆಚರಿಸಬಹುದು ಆದರೆ ಅದನ್ನವರು ಯೋಗ್ಯ ಬ್ರಾಹ್ಮಣನ ಮೂಲಕವಷ್ಟೇ ಮಾಡಿಸಬಹುದು ಎಂದು ಹೇಳುತ್ತವೆ). ಮೃತನಿಗೆ ಒಂದಕ್ಕಿಂತ ಹೆಚ್ಚು ಗಂಡುಮಕ್ಕಳಿದ್ದು ಅವರೆಲ್ಲರೂ ಜೀವಂತವಾಗಿದ್ದು ಪ್ರತ್ಯೇಕವಾಗಿದ್ದಾಗ ಪ್ರತಿಯೊಬ್ಬರಿಗೂ ಸಹ ಶ್ರಾದ್ಧವನ್ನು ಮಾಡುವ ಅರ್ಹತೆಯಿರುತ್ತದೆ ಮತ್ತು ಅದನ್ನವರು ಕಡ್ಡಾಯವಾಗಿ ಮಾಡಬೇಕೆಂದೂ ಹೇಳಿದೆ. 
           ಒಂದು ವೇಳೆ ಮೃತನಿಗೆ ಗಂಡು ಸಂತಾನವಿಲ್ಲದಿದ್ದರೆ, ಅವನ ಸಮೀಪ ಬಂಧುಗಳು (ಪುರುಷ) ಉದಾಹರಣೆಗೆ ಸಹೋದರ, ದತ್ತುಪುತ್ರ, ಅಳಿಯ ಅಥವಾ ಮೊಮ್ಮಗ ಸಹ ಅವನ ಶ್ರಾದ್ಧವನ್ನು ಮಾಡಬಹುದು. 
           ಒಂದು ವೇಳೆ ಮೃತನ ಮಗನು ತುಂಬಾ ಚಿಕ್ಕವನಾಗಿದ್ದು ಅವನಿಗೆ ಉಪನಯನವಾಗಿಲ್ಲದಿದ್ದರೆ, ಮೃತನ ಹೆಂಡತಿಯು ಪುರೋಹಿತರ ಮೂಲಕ ಶ್ರಾದ್ಧವನ್ನು ಮಾಡಿಸಬಹುದು. 
 
ಯಾರಿಗೆ ಶ್ರಾದ್ಧವು ಮಾಡಲ್ಪಡಬೇಕು?
        ಸಾಮಾನ್ಯವಾಗಿ ಪ್ರಚಲಿತವಿರುವ ನಿಯಮದಂತೆ ಶ್ರಾದ್ಧವನ್ನು ಮರಣ ಹೊಂದಿದ ತಂದೆ(ಪಿತ), ತಂದೆಯ-ತಂದೆ ಅಥವಾ ತಾತ (ಪಿತಾಮಹ) ಮತ್ತು ತಂದೆಯ-ತಂದೆಯ-ತಂದೆ ಅಥವಾ ಮುತ್ತಾತ (ಪ್ರಪಿತಾಮಹ) ಇವರ ಒಳಿತಿಗಾಗಿ ಮಾಡಬೇಕು. ಬೇರೆಯವರಿಗೂ ಸಹ ಶ್ರಾದ್ಧವನ್ನು ಮಾಡಬಹುದು ಒಂದು ವೇಳೆ ಮೃತರು ಸಮೀಪ ಬಂಧುಗಳಾಗಿದ್ದರೆ ಅಥವಾ ಪುರುಷ ಸಂತಾನವಿಲ್ಲದವರಾಗಿದ್ದರೆ. ಸ್ತೀಯರು ಮರಣ ಹೊಂದಿದಾಗ ಆಕೆಯ ಶ್ರಾದ್ಧವನ್ನು ಆಕೆಯ ಹಿರಿಮಗ ಮಾಡಬಹುದು. ಒಂದು ವೇಳೆ ಆಕೆಗೆ ಪುರಷ ಸಂತಾನವಿಲ್ಲದಿದ್ದರೆ ಆಕೆಯ ಮೊಮ್ಮಗನು ಶ್ರಾದ್ಧ ಕಾರ್ಯವನ್ನು ಮಾಡಬಹುದು. ಮೊಮ್ಮಗನೂ ಇಲ್ಲದಿದ್ದರೆ ಆಕೆಯ ಮಗಳು ಬ್ರಾಹ್ಮಣ ಪುರೋಹಿತರ ಮೂಲಕ ಶ್ರಾದ್ಧವನ್ನು ಮಾಡಿಸಬಹುದು. 
          ಅವಿವಾಹಿತ ಸ್ತ್ರೀಯು ಮೃತಪಟ್ಟಲ್ಲಿ, ಆಕೆಯ ಶ್ರಾದ್ಧವನ್ನು ಆಕೆಯ ತಂದೆ ಅಥವಾ ಆಕೆಯ ಹಿರಿಯಣ್ಣ ಅಥವಾ ಹತ್ತಿರದ ಪುರುಷ ಸಂಬಂಧಿಯು ಮಾಡಬಹುದು. 
          ಅಸಹಜ ಮರಣವಾದಾಗ ಉದಾಹರಣೆಗೆ ಆತ್ಮಹತ್ಯೆ ಅಥವಾ ಅಪಘಾತದಲ್ಲಿ ವ್ಯಕ್ತಿಯು ಮೃತಪಟ್ಟಿದ್ದರೆ ಮೊದಲು ನಾರಾಯಣ ಬಲಿಯನ್ನು ಕೈಗೊಳ್ಳಬೇಕು. ಇದಾದ ಒಂದು ವರ್ಷದ ನಂತರ ಶ್ರಾದ್ಧ ಕರ್ಮವನ್ನು ಮಾಡಬಹುದು. 
         ಸಂನ್ಯಾಸಿಗಳಿಗೆ ಯಾವುದೇ ವಿಧವಾದ ಶ್ರಾದ್ಧವನ್ನು ಮಾಡುವುದಿಲ್ಲ, ಏಕೆಂದರೆ ಅವರು ಸಂನ್ಯಾಸವನ್ನು ಸ್ವೀಕರಿಸುವಾಗ ತಮ್ಮ ಶ್ರಾದ್ಧ ಕರ್ಮವನ್ನು ಸ್ವತಃ ತಾವೇ ಆಚರಿಸಿಕೊಂಡಿರುತ್ತಾರೆ. 

                                                                                                                                                                          ಮುಂದುವರೆಯುವುದು.......
 

(ಆಂಗ್ಲ ಮೂಲ: ಸ್ವಾಮಿ ಹರ್ಷಾನಂದರು ರಚಿಸಿರುವ Shraddha (Religious Rites in Honour of Fore Fathers) ಪುಟ ೯- ೧೫ ರ ಅನುವಾದಿತ ಭಾಗ)

ಹಿಂದಿನ ಲೇಖನಕ್ಕೆ ಕೊಂಡಿ - https://sampada.net/blog/%E0%B2%B6%E0%B3%8D%E0%B2%B0%E0%B2%BE%E0%B2%A6%E...
 

 
 

Rating
No votes yet

Comments