ಶ್ರೀನಿವಾಸ ವೈದ್ಯ ಅವರ ' ಹಳ್ಳ ಬಂತು ಹಳ್ಳ' ಮತ್ತು ಎನ್ಕೆ ಅವರ 'ಅಶ್ವತ್ಥಮರ'

ಶ್ರೀನಿವಾಸ ವೈದ್ಯ ಅವರ ' ಹಳ್ಳ ಬಂತು ಹಳ್ಳ' ಮತ್ತು ಎನ್ಕೆ ಅವರ 'ಅಶ್ವತ್ಥಮರ'

ಶ್ರೀನಿವಾಸ ವೈದ್ಯ ಅವರ ' ಹಳ್ಳ ಬಂತು ಹಳ್ಳ' ಮತ್ತು ಎನ್ಕೆ ಅವರ 'ಅಶ್ವತ್ಥಮರ'

ಶ್ರೀಯುತ ಶ್ರೀನಿವಾಸ ವೈದ್ಯ ಅವರ ಬರವಣಿಗೆ ಮೊದಲು ಕಸ್ತೂರಿಯಲ್ಲಿ ಪ್ರಕಟವಾದ ಎರಡು ಮೂರು ಸರಸಮಯ ಹೃದಯಸ್ಪರ್ಶಿ ಪ್ರಬಂಧಗಳಿಂದ ಗಮನಕ್ಕೆ ಬಂದಿತು. ಅಲ್ಲಿ 'ಮನಸುಖರಾಯನ ಮನಸು' ಪುಸ್ತಕದಿಂದ ಎಂದು ಹೇಳಿದ್ದರಿಂದ ಧಾರವಾಡದ ಪುಸ್ತಕದ ಅಂಗಡಿಗಳಿಗೆ ಹೋದಾಗಲೆಲ್ಲ ಆ ಪುಸ್ತಕವನ್ನು ಕೇಳುತ್ತಿದ್ದೆ. ಅದು ಇರುತ್ತಿರಲಿಲ್ಲ ; ಅವರ ಬೇರೆ ಪುಸ್ತಕಗಳನ್ನು ತೋರಿಸುತ್ತಿದ್ದರು . ಅದೂ ಒಳ್ಳೆಯದೇ ಆಯಿತು . ಹೀಗಾಗಿ ನನಗೆ 'ತಲೆಗೊಂದು ತರತರ' , ' ರುಚಿಹುಳಿಯೊಗರು' ಮತ್ತು 'ಹಳ್ಳ ಬಂತು ಹಳ್ಳ' ಸಿಕ್ಕವು . ಮನಸುಖರಾಯನ ಮನಸು ಕೂಡ ಇತ್ತೀಚೆ ಬೆಂಗಳೂರಿಗೆ ಹೋದಾಗ ಅನಿರಿಕ್ಷಿತವಾಗಿ ಸಪ್ನಾ ಮಳಿಗೆಯಲ್ಲಿ ಸಿಕ್ಕಿತು ( ಬಹುಶ: ಎರಡೇ ಪ್ರತಿ ಉಳಿದಿದ್ದವು) .

'ತಲೆಗೊಂದು ತರತರ' , ' ರುಚಿಹುಳಿಯೊಗರು' ಮತ್ತು 'ಮನಸುಖರಾಯನ ಮನಸು' ಇವು ಶ್ರೇಷ್ಠ ತರಗತಿಯ ಹಾಸ್ಯ ಲೇಖನಗಳ ಪುಸ್ತಕಗಳು . ಇವನ್ನು ನಾನು ಎಲ್ಲರಿಗೂ ಶಿಫಾರಸು ಮಾಡುತ್ತೇನೆ . ಮತ್ತೆ ಮತ್ತೆ ಓದಬೇಕೆನಿಸುವ ಹಾಗೆ ಇದೆ. ಚೆನ್ನಾಗಿವೆ ಮತ್ತು ನನಗೆ ಬಹಳ ಸೇರಿದವು , ನೀವೂ ಓದಿರಿ ಎಂಬುದಕ್ಕಿಂತ ಹೆಚ್ಚೇನು ಹೇಳಲಿ?

'ಹಳ್ಳ ಬಂತು ಹಳ್ಳ' ಮಾತ್ರ ಈ ವರ್ಗಕ್ಕೆ ಸೇರದ ಪುಸ್ತಕ . ಗಂಭೀರ ವಿಷಯದ ಕಾದಂಬರಿ. ಸುಮಾರು ೧೫೦ ವರ್ಷದ ಹರಹುಳ್ಳ ಒಂದು ಮನೆತನದ ಕಥೆ. ೧೮೫೭ರ ಸುಮಾರಿನ ಬ್ರಿಟಿಷರ ವಿರುದ್ಧದ ಬಂಡಾಯದ ಸಮಯದಲ್ಲಿ ಉತ್ತರದಿಂದ ನರಗುಂದದ ಬಾಬಾಸಾಹೇಬನಿಗೊಂದು ರಾಜಕೀಯ ಸಂದೇಶ ತಂದ ತರುಣ ನವಲಗುಂದದಲ್ಲಿಯೇ ನೆಲೆಯಾಗಬೇಕಾಗುತ್ತಾನೆ. ಅಲ್ಲಿಂದ ಆ ಮನೆಯ ಜನರ ಜೀವನದ ಏರಿಳಿತಗಳು ಸುತ್ತಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ತೊರೆಯ ನೀರಿನ ಹರಿವಿನ ಹಾಗೆ ಚಿತ್ರಿತವಾಗಿವೆ. ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಕಾದಂಬರಿಯ ಇನ್ನೊಂದು ವಿಶೇಷವೇನೆಂದರೆ ಧಾರವಾಡ ಜಿಲ್ಲೆಯ ನರಗುಂದ , ನವಲಗುಂದ ಪ್ರದೇಶದ ಆಡುಮಾತು ಹಾಗೂ ಸಂಸ್ಕೃತಿಯನ್ನು ಬಳಸಿಕೊಂಡಿದೆ. ಈ ಕಾದಂಬರಿಯನ್ನು ನಾನು ಓದಿದ್ದು ಹೋದವರುಷ.

ಇತ್ತೀಚೆಗೆ ಎನ್ಕೆ ಅವರ ಒಂದು ಕಾದಂಬರಿ 'ಅಶ್ವತ್ಥಮರ' ಕಣ್ಣಿಗೆ ಬಿದ್ದು , ಧಾರವಾಡದ ಆಡುಮಾತಿಗಾಗಿ ಮತ್ತು ಹಿಂದಿನ ದಿನಗಳ ಕುರಿತಾದ ಕುತೂಹಲಕ್ಕಾಗಿ ತೆಗೆದುಕೊಂಡೆ. ಆಶ್ಚರ್ಯವೆಂದರೆ ಇದಕ್ಕೂ , 'ಹಳ್ಳ ಬಂತು ಹಳ್ಳ'ಕ್ಕೂ ಅನೇಕ ಸಾಮ್ಯತೆಗಳು! ಅಲ್ಲಿ ನೀರಿನ ಹಳ್ಳ ಅದರ ಹರಿವು , ಇಲ್ಲಿ ಅಶ್ವತ್ಥಮರ ಮತ್ತು ಅದರ ಟಿಸಿಲುಗಳು ! . ಅಲ್ಲಿ ನವಲಗುಂದದಿಂದ ಕಥೆ ಆರಂಭವಾದರೆ , ಇಲ್ಲಿ ಗದಗಿನಲ್ಲಿ , ಎರಡೂ ಬ್ರ್‍ಆಹ್ಮಣ ಮನೆತನದ ಕಥೆಗಳೇ , ಎರಡಕ್ಕೂ ಹಿನ್ನೆಲೆಯಾಗಿ ೧೮೫೭ ರಿಂದ ಸ್ವಾತಂತ್ರೋತ್ತರ ಭಾರತದ ಸಾಮಾಜಿಕ ಘಟನೆಗಳ ಹಿನ್ನೆಲೆಯಿದೆ . ಎರಡೂ ಸ್ಥಳೀಯ ಆಡುಭಾಷೆಯನ್ನು ಬಳಸಿಕೊಂಡಿವೆ . 'ಹಳ್ಳ...' ಗಾತ್ರದಲ್ಲಿ '..ಮರ'ಕ್ಕಿಂತ ದೊಡ್ಡದು ಮತ್ತು ವಿವರಗಳಲ್ಲಿ ವಿಸ್ತ್ರತವಾದದ್ದು. '...ಮರ' ೧೯೯೫ರಲ್ಲಿ ಮುದ್ರಿತವಾದದ್ದು , 'ಹಳ್ಳ ...' ಇತ್ತೀಚೆಗೆ .

ನಾನು ಈಗ 'ಹಳ್ಳ ಬಂತು ಹಳ್ಳ'ವನ್ನು ಮತ್ತೊಮ್ಮೆ ಓದಬೇಕಿದೆ.

Rating
No votes yet