ಶ್ರೀನಿವಾಸ
ಮಾಸ್ತಿಯವರ ಸಣ್ಣ ಕತೆಗಳೆಂದರೆ ನನಗೆ ಮೊದಲಿಗೆ ನೆನಪಾಗುವದು ಅವರ 'ವೆಂಕಟಿಗನ ಹೆಂಡತಿ' ಕತೆ. ಆ ಕತೆಯನ್ನ ಮೊದಲ ಬಾರಿಗೆ ಯಾವಾಗ ಓದಿದ್ದೆ ನೆನಪಿಲ್ಲ. ಬಹುಷಃ ಅದರ ಬಗ್ಗೆ ಬರೆದ ಲೇಖನವನ್ನು ಮೊದಲು ಓದಿ, ನಂತರ ಆ ಕತೆ ಓದಿದೆ ಅನಿಸುತ್ತದೆ. ಕತೆಯ ಪೂರ್ತಿ ವಿವರಗಳು ನೆನಪಿನಲ್ಲಿರದಿದ್ದರೂ, ಸಾಮಾನ್ಯ ಕೂಲಿಯಾಳಾದ ತನ್ನನ್ನು ಬಿಟ್ಟು ಸಿರಿವಂತನೊಬ್ಬನ ಹಿಂದೆ ಹೋದ ಹೆಂಡತಿ ಮರಳಿ ತನ್ನ ಬಳಿಗೇ ಬಂದಾಗ, "ಏನೂ ತಿಳಿಯದ ಹೆಣ್ಣು ಪಾಪ, ತಿಳಿಯದೇ ತಪ್ಪು ಮಾಡಿದಳು" ಎಂದಷ್ಟೇ ಹೇಳಿ ಅವಳನ್ನ ಸ್ವೀಕರಿಸಿದ ವೆಂಕಟಿಗ ನೆನಪಿನಲ್ಲುಳಿದಿದ್ದ.
ಕೆಲವು ವರ್ಷಗಳ ಹಿಂದೆ ಮಾಸ್ತಿಯವರ ಸಣ್ಣ ಕತೆಗಳ ಸಂಗ್ರಹ ೨ ಮತ್ತು ೩ ನ್ನು ಅಂಕಿತ ಪುಸ್ತಕದಿಂದ ಕೊಂಡು ತಂದು ಓದಿದ್ದೆ. ಮನೆಯಲ್ಲಿ ಪುಸ್ತಕಗಳು ಹೆಚ್ಚುತ್ತ ಹೋದಂತೆ ಕೆಲವನ್ನು ಎತ್ತಿಡಬೇಕಾದಾಗ ಈ ಪುಸ್ತಕಗಳೂ ರಟ್ಟಿನ ಪೆಟ್ಟಿಗೆಯೊಳಗೆ ಸೇರಿ ಸ್ಟೋರೇಜ್ ರೂಮ್ ಹೊಕ್ಕಿದ್ದವು. ನಿನ್ನೆ ಮತ್ತೆ ಕೈಗೆ ಸಿಕ್ಕವು. ಈಗ ಓದದೇ ಇಟ್ಟಿರುವ ಒಂದಷ್ಟು ಪುಸ್ತಕಗಳನ್ನ ಆ ರಟ್ಟಿನ ಡಬ್ಬಕ್ಕೆ ಸೇರಿಸಿ, ಈ ಪುಸ್ತಕಗಳನ್ನ ಹೊರ ತೆಗೆದೆ. ನಿನ್ನೆಯಿಂದಾರಂಭಿಸಿ ಇಲ್ಲಿಯವರೆಗೆ ಮತ್ತೆ ಓದಿದ ಕತೆಗಳು,
- ರಂಗನ ಹಳ್ಳಿಯ ರಾಮ
- ವೆಂಕಟಿಗನ ಹೆಂಡತಿ
- ಸಾವಿಯಬ್ಬೆ
- ಬಿಳಿಗಿರಿ ರಂಗ
- ಹೇಮಕೂಟದಿಂದ ಬಂದ ಮೇಲೆ
- ನಳಿನಿಯ ತಂದೆ
- ಮೊಸರಿನ ಮಂಗಮ್ಮ
ನಿಜಗಲ್ಲಿನ ರಾಣಿ ಕತೆಯನ್ನ ಓದಬೇಕು ಅನಿಸಿದರೂ, ಅದರ ದುರಂತಮಯ ಕೊನೆಯ ನೆನಪಾಗಿ ಸದ್ಯಕ್ಕೆ ಇರಲಿ ಎಂದು ಪಕ್ಕಕ್ಕಿಟ್ಟೆ.
ಮಾಸ್ತಿಯವರ ಕತೆಗಳಲ್ಲಿ ಕತೆಗಾರ ಎಷ್ಟೋ ಕಡೆ ತಾನೂ ಕತೆಯ ಭಾಗವಾಗಿ, ಕತೆಯ ಓಟಕ್ಕೆ ಪೂರಕವಾಗಿ ಬರುತ್ತಾನೆ. ಅಲ್ಲಿ ಕತೆ ಕಟ್ಟುವ ಕ್ರಿಯೆಗಿಂತ ಕತೆ ಹೇಳುವ ಕ್ರಿಯೆಯೇ ಹೆಚ್ಚು. ಕತೆಯ ಪಾತ್ರಗಳ ಸಹಜ ಸ್ವಭಾವದ ಅನಾವರಣಕ್ಕೆ ಅನುಕೂಲ ಒದಗಿಸಿಕೊಡುವ ಕೆಲಸವನ್ನಷ್ಟೇ ಕತೆಗಾರ ಮಾಡುತ್ತಾನೆ. ಪಾತ್ರಗಳ ದನಿಯಾಗುತ್ತಾನೆ. ಪಾತ್ರಗಳ ಒಳತೋಟಿಯನ್ನು ಬಿಡಿಸಿಡುವಾಗ ಯಾವುದೇ ಒಂದು ಕಡೆ ವಾಲುವದಿಲ್ಲ. ಮೊಸರಿನ ಮಂಗಮ್ಮ ಕತೆಯ ಗೃಹಿಣಿಗೆ ಮಂಗಮ್ಮನ ಮಾತುಗಳು ಸರಿಯೆನಿಸಿದಂತೆಯೇ ಮಂಗಮ್ಮನ ಸೊಸೆಯ ಮಾತುಗಳೂ ಸರಿ ಎನಿಸುತ್ತವೆ. ಸರಿ ತಪ್ಪುಗಳ ನಿರ್ಧಾರದ ಗೊಡವೆಗೆ ಹೋಗುವದಿಲ್ಲ ಕತೆಗಾರ. ನಡೆದದ್ದನ್ನ ಹೇಳುವೆ ಎನ್ನುವದೊಂದೇ ಉದ್ದೇಶವಿದೆ ಅಲ್ಲಿ ಎನಿಸುತ್ತದೆ. ಮಾಸ್ತಿಯವರ ಕತೆಗಳ ಈ ಪರಿ ಬಹಳ ಇಷ್ಟವಾಗುತ್ತದೆ. ಅವರ ಕತೆಗಳ ಈ ವೈಶಿಷ್ಟ್ಯ ನೆನಪಿನಲ್ಲಿತ್ತು. ಆದರೆ ಅವರ ಕತೆಗಳಲ್ಲಿಯ ವಿವರಣೆ, ಅವರು ಬಳಸುವ ಭಾಷೆಯ ಸೊಗಡು, ಆ ಸಣ್ಣ ಸಣ್ಣ ವಾಕ್ಯಗಳು ಮತ್ತು ಅವುಗಳು ಹೊಮ್ಮಿಸುವ ಅರ್ಥ ಮುಂತಾದ ವಿವರಗಳು ನೆನಪಿನಿಂದ ಮರೆಯಾಗಿದ್ದವು. ಕತೆಯ ಓಟದಲ್ಲಿಯೂ ಪಾತ್ರಗಳ ಸಹಜ ಸ್ವಭಾವನ್ನ, ಅವುಗಳ ಸೂಕ್ಷ್ಮವನ್ನ ಗಮನಿಸಿ ಅವನ್ನ ತಿಳಿಸುವದನ್ನ ಎಷ್ಟು ಸೊಗಸಾಗಿ ಮಾಡುತ್ತಾರಲ್ಲ ಇವರು ಎನ್ನುವ ಉದ್ಗಾರ ತಾನೇ ತಾನಾಗಿ ಬಂದಿತು.
ರಂಗನ ಹಳ್ಳಿಯ ರಾಮನ ಕತೆಯಲ್ಲಿ 'ಕಣ್ಣಾ ಮುಚ್ಚೆ ಕಾಡೇ ಗೂಡೆ' ಹಾಡಿನಲ್ಲಿನ ನಿಗೂಢತೆಯನ್ನ ಭೇದಿಸುವ ಫರ್ಕುವರನ ಕನಸನ್ನ ಹೇಳುವಾಗ ಅವನು ಹೇಳುತ್ತಾನೆ, "ಎಚ್ಚರದ ಸ್ಥಿತಿಯಲ್ಲಿ ಮೂರ್ತಿ ಪೂಜೆ ಸರಿ ಎನ್ನಲಾರೆ, ಆದರೆ ಅವತ್ತು ಕಂಡ ದರ್ಶನದಲ್ಲಿ ಕಂಡ ನಯನ ಮನೋಹರವಾದ ರಾಮ, ಸೀತಾ, ಲಕ್ಷ್ಮಣ ಮತ್ತು ಹನುಮಂತರ ಮೂರ್ತಿಗಳನ್ನ ಅಪ್ಪಿಕೊಳ್ಳಬೇಕು ಅನಿಸಿತು. ಮೂರ್ತಿ ಪೂಜೆ ಸರಿ ಎನ್ನುವ ದಾರಿಯಲ್ಲಿ ಅರ್ಧ ದಾರಿಯನ್ನ ಕ್ರಮಿಸಿದ್ದೆ ಅವತ್ತು" ಅಂತ. ಕತೆಯಲ್ಲಿ ಕೊನೆಯಲ್ಲಿ ಎಮಿಲಿಯ ಬಗ್ಗೆ ಹೇಳುವ ಮಾತುಗಳನ್ನ ನೋಡಿ, "ಅವಳ ವ್ಯಕ್ತಿತ್ವ ದೊಡ್ಡದು. ಹೀಗಾಗಿ ಅವಳ ಮಾತುಗಳೂ ಹಿರಿದಾಗುತ್ತವೆ. ಹಳಿಯುವ ನಮ್ಮ ಮಾತಿಗೂ, ಸಹಿಸುವ ಅವಳ ಮಾತಿಗೂ ಇಷ್ಟೇ ವ್ಯತ್ಯಾಸ, ಅವಳ ಮಾತಿನ ತಪ್ಪು ದೊಡ್ಡತನದಿಂದ ಬಂದಿರುತ್ತದೆ. ನಮ್ಮ ಮಾತಿನ ತಪ್ಪು ನಮ್ಮ ಚಿಕ್ಕತನದಿಂದ ಬಂದಿರುತ್ತದೆ."
ಹೇಮಕೂಟದಿಂದ ಬಂದ ಮೇಲೆ ಕತೆಯಲ್ಲಿಯ ಕುಮಾರ ಭರತ ತಾನು ತನ್ನ ದೊಡ್ಡಮ್ಮಂದಿರನ್ನ ಹೇಗೆ ಗುರುತಿಸಿದೆ ಎಂದು ಹೇಳುತ್ತಲೇ ಬಾಲ ಸಹಜವಾಗಿ ಹಾದಿಯ ಕಲ್ಲೊಂದನ್ನ ಒದೆಯುತ್ತಾನೆ. ತೇಜಸ್ವಿಯಾದ ಬಾಲಕ ಭರತನನ್ನು ಶುಕ್ಲಪಕ್ಷದ ಸಪ್ತಮೀ ಚಂದ್ರನಿಗೆ ಹೋಲಿಸುತ್ತ, ಅವನು ಇನ್ನೂ ಏರಲಿರುವ ಎತ್ತರವನ್ನು ಸೂಚಿಸುತ್ತಾರೆ. ಆ ಶಕುಂತಲೆಯಾದರೂ, ಪಡಬಾರದ ಕಷ್ಟಗಳನ್ನೆಲ್ಲ ಅನುಭವಿಸಿದ ಬಳಿಕ ತನಗೆ ಒದಗಿ ಬಂದ ರಾಜ ಮರ್ಯಾದೆಯನ್ನ ಸ್ವೀಕರಿಸಿದ ಭಾವವನ್ನು ನವಿರಾಗಿ ಬಿಡಿಸಿ ತೋರಿಸುತ್ತಾರೆ. ಕಷ್ಟ ಕಳೆದ ನಂತರದ ದಿನಗಳಲ್ಲಿ ತಾನು ಬೆಳೆದ ಆಶ್ರಮ ಸಂದರ್ಶಿಸುವ ಶಕುಂತಲೆ ಜ್ವರವಿಳಿದ ಬಳಿಕ ಬಳಲಿದ ಬಾಲೆ ಸುಖವಾಗಿ ನಿದ್ರಿಸುವಂತೆ ಅಲ್ಲಿ ನಿದ್ರಿಸಿದಳು ಎನ್ನುತ್ತಾರೆ. ಬಹು ದಿನಗಳಿಂದ ಕಾಣದಿದ್ದ ಕನಸುಗಳಿಂದ ಅವಳ ನಿದ್ರೆ ಸುಖಕರವಾಯಿತಂತೆ. ಆಶ್ರಮದಿಂದ ಮರಳಿ ಅರಮನೆಗೆ ಹೊರಟವಳಿಗೆ ಅನಿಸುವದು, ದುಃಖದ ಸಂಪರ್ಕವಿಲ್ಲದ ನಗುವೇ ನಗು ಎಂದು.
ವೆಂಕಟಿಗನ ಹೆಂಡತಿ ಕತೆಯ ವೆಂಕಟಿಗ ಅಪರೂಪದ ವ್ಯಕ್ತಿ. ಹೆಂಡತಿ ತನ್ನನ್ನ ಬಿಟ್ಟು ಹೋಗಿದ್ದಕ್ಕೆ ಸಿಟ್ಟಿಲ್ಲ, ಬೇಸರವಿದೆ ಎನ್ನುತ್ತಾನೆ. ಸಮಾಜ ತನಗೇನೆನ್ನುತ್ತದೆ, ಅವಳಿಗೇನನ್ನುತ್ತದೆ ಎನ್ನುವದನ್ನೆಲ್ಲ ಪಕ್ಕಕ್ಕಿಟ್ಟು, ತಾನು ತನ್ನ ಸಹಜ ಸ್ವಭಾವಕ್ಕನುಗುಣವಾಗಿ ಏನನ್ನು ಮಾಡಬಹುದಿತ್ತೋ ಅದನ್ನು ಮಾಡಿದೆ ಎನ್ನುತ್ತಾನೆ. ಮರಳಿ ಬಂದ ಹೆಂಡತಿ ತನ್ನ ಜೊತೆ ಕರೆತಂದ ಹಸುಗೂಸಿನ ಮುಖದಲ್ಲಿ ಇದೋ ನೋಡು ಇದರ ಕಣ್ಣು, ಹಣೆ ನಿನ್ನಂತೆಯೇ ಇದೆ ಎಂದು ಹೇಳುವಾಗ ಪಾಪ ಅವಳಿಗೇಕೆ ಬೇಸರ ಎಂದು ಸುಮ್ಮನೇ ಹೂ ಅಂದೆ ಎನ್ನುತ್ತಾನೆ. ವೆಂಕಟಿಗನ ಕತೆಯನ್ನ ಕತೆಗಾರನಿಗೆ ಹೇಳುವ ಶ್ರೀರಾಮ್ ಅವರಿಗೆ ಕತೆಯ ಕೊನೆಯಲ್ಲಿ ವೆಂಕಟಿಗನ ಹೆಂಡತಿಯ ಮತ್ತು ಮಗುವಿನ ಭೇಟಿಯಾಗುತ್ತದೆ. ಮಗುವಿನಲ್ಲಿ ವೆಂಕಟಿಗನ ಹೋಲಿಕೆ ಕಾಣುವುದೇ ಎನ್ನುವದನ್ನ ನೋಡುವ ಆಸೆ ಅವರ ಮನಸ್ಸಿನಲ್ಲಿ ಕ್ಷಣ ಮಾತ್ರ ಸುಳಿದದ್ದು ಮತ್ತು ವೆಂಕಟಿಗನೇ ಹುಡುಕಲು ಹೋಗದ್ದನ್ನ ತಾನೇಕೆ ಹುಡುಕಬೇಕು ಎಂದು ಅವರು ತಮ್ಮನ್ನು ತಾವು ಎಚ್ಚರಿಸಿಕೊಂಡದ್ದು ಕೂಡ ದಾಖಲಾಗುತ್ತದೆ. ಓದುಗರ ಮನಸ್ಸಿನ ಸಂಶಯಗಳಿಗೂ ಅದೇ ಉತ್ತರವಾಗುತ್ತದೆ. ಇಡೀ ಕತೆಯ ಮೂಲ ವೆಂಕಟಿಗನ ಹೆಂಡತಿಯ ಅನೈತಿಕ ಸಂಬಂಧವಾದರೂ, ವೆಂಕಟಿಗ ತನ್ನ ವ್ಯಕ್ತಿತ್ವದ ಬಲದಿಂದ ಮತ್ತು ತನ್ನ ದೃಷ್ಟಿಕೋನದಿಂದ ಅವಳ ಸ್ವಭಾವವನ್ನು ನಮಗೆ ತೋರಿಸಿಕೊಡುವ ಮೂಲಕ ಅವಳ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯವನ್ನೇ ಮೂಡಿಸುತ್ತಾನೆ. ಅವಳು ಹಿಂಬಾಲಿಸಿದ ಸಾಹುಕಾರ ಸತ್ತು ಹೋದನೆಂದು ತಿಳಿದ ಮೇಲೆ ಧೃಡವಾಗಿಯೇ ನಿಲ್ಲುತ್ತಾಳೆ. ಆ ಕ್ಷಣದಲ್ಲೂ ಅವಳ ಕಣ್ಣಿನಲ್ಲಿ ಮೂಡಿದ ಹನಿ ನೀರಿಗೆ ವೆಂಕಟಿಗ ಹೇಳುವದು, 'ಹೆಣ್ಣು ಜೀವ, ಹಗೆ ಸತ್ತರೂ ಅಳುವದು'.
ಈ ಕತೆಗಳ ಕುರಿತು ಯೋಚಿಸಿದಂತೆಲ್ಲ ಇಲ್ಲಿಯ ಪಾತ್ರಗಳ ಜೀವಂತಿಕೆ ಅವುಗಳ ಚೈತನ್ಯ ಮನದುಂಬುತ್ತದೆ. ಬಾಳಿನ ಎಡರು ತೊಡರುಗಳನ್ನ ಮೀರಿ ನಿಲ್ಲುತ್ತವೆ ಇವೆಲ್ಲ, ಸಹಜವಾಗಿ. ಮೀರುವಿಕೆಯೇ ಒಂದು ಸಾಧನೆಯೆಂಬ ಹೆಮ್ಮೆಯಿಲ್ಲ, ಮೀರುವಿಕೆಯ ತುಡಿತವಿಲ್ಲ, ಅದು ಸಹಜವಾಗಿ, ಪಾತ್ರದ ವ್ಯಕ್ತಿತ್ವದ ಅಂಗವಾಗಿ ವ್ಯಕ್ತವಾಗುತ್ತದೆ.
ಸಾವಿಯಬ್ಬೆಯ ಕತೆಯಂತೂ, ವೀರಗಲ್ಲಿನ ಮೂಲಕ ಅಮರವಾದ ಘಟನೆಯೊಂದರ ಕತೆಯಂತಿದೆ. ವೀರ ವನಿತೆಯಾಗಿ ಬೆಳೆದ ಸಾವಿಯಬ್ಬೆ ರಣ ರಂಗದಲ್ಲಿ ತನ್ನ ಗಂಡನ ಜೊತೆ ಜೊತೆಯಾಗಿಯೇ ಹಗೆಯೊಡನೆ ಕಾದುತ್ತಾಳೆ. ಅವನು ಗಾಯಗೊಂಡು ಬಿದ್ದಾಗ ತಾನೇ ಮುಂದಾಳುವಾಗಿ ನಿಲ್ಲುತ್ತಾಳೆ. ತಾನೂ ಧರೆಗುರುಳುತ್ತಾಳೆ. ಕಡೆಯಲ್ಲಿ ಅವರ ಸೈನ್ಯಕ್ಕೇ ಜಯವಾದರೂ ಪತಿ ಪತ್ನಿಯರು ಮಾತ್ರ ಸಾವಿನಲ್ಲಿ ಜೊತೆಯಾಗಿ ನಿಲ್ಲುತ್ತಾರೆ. ಸಾವಿಯಬ್ಬೆಯ ಸಾಕು ತಂದೆ ಈ ಸಾವಿನ ಸುದ್ದಿಯನ್ನು ಕೇಳುವಾಗಿನ ಮನಸ್ಥಿತಿಯನ್ನ ತಿಳಿಸುವಲ್ಲಿ ಕತೆಗಾರ ಹೇಳುತ್ತಾನೆ, "ಸಾವೇನು, ನೋವೇನು, ಬಾಳೇನು, ಬಗೆಯೇನು, ಎಂದು ಒಂದು ತಿಂಗಳ ಕಾಲ ದಿನವೂ ಗುರುಸನ್ನಿಧಿಯಲ್ಲಿ ಪ್ರಣಿಪಾತ ಪರಿಪ್ರಶ್ನೆಯಿಂದ ಕೇಳಿ ತಿಳಿದಿದ್ದ ತಿಳಿವು ಇಂದು ಸಾರ್ಥಕ ಆಗಬಂದಿತು." ಗೀತೆಯ ನುಡಿಯೊಂದು ಜೀವನದ ನಡೆಯಲ್ಲಿ ನೆನಪಾಗುವ ಬಗೆ ಹೀಗೇ ಅಲ್ಲವೆ?
(ಚಿತ್ರ: ನನ್ನ ಬಳಿಯಿದ್ದ ಪುಸ್ತಕದ ಚಿತ್ರ, ನಾನೇ ತೆಗೆದದ್ದು ನನ್ನ ಫೋನಿನಲ್ಲಿ)
Comments
ಉ: ಶ್ರೀನಿವಾಸ
In reply to ಉ: ಶ್ರೀನಿವಾಸ by sunilkgb
ಉ: ಶ್ರೀನಿವಾಸ